ಲೋಕಸಭಾ ಚುನಾವಣೆಯ 4 ಹಂತಗಳು ಮುಗಿದ ನಂತರ ಮರಳಿ ರಾಜಕೀಯ ಪಕ್ಷಗಳು ಮತ್ತು ಮಾಧ್ಯಮಗಳ ದೃಷ್ಟಿಉತ್ತರ ಪ್ರದೇಶದ ಕಡೆ ತಿರುಗಿದ್ದು, ಸದ್ಯ ಎಲ್ಲರೂ ಕೇಳುತ್ತಿರುವ ಪ್ರಶ್ನೆ ಒಂದೇ; ‘ಯುಪಿಯಲ್ಲಿ ಕಳೆದ ಬಾರಿ 73 ಗೆದ್ದಿದ್ದ ಮೋದಿ ಈ ಬಾರಿ ಎಷ್ಟುಉಳಿಸಿಕೊಳ್ಳುತ್ತಾರೆ?’ ಮೋದಿಯವರ ಸೇನಾಧಿಪತಿ ಅಮಿತ್‌ ಶಾ ಅಂತೂ ವಾರಕ್ಕೆ ಒಮ್ಮೆ ಬಿಜೆಪಿ ಸೀಟುಗಳ ಸ್ಥಿತಿಗತಿ ಬಗ್ಗೆ ಸರ್ವೆ ಮಾಡಿಸಿಕೊಂಡು ತಂತ್ರ ಹೆಣೆಯುತ್ತಿದ್ದಾರೆ.

ಬಿಜೆಪಿ ಟೀಕಿಸಿದ್ದ ಕೇಜ್ರಿ ಪತ್ನಿಗೇ ಈಗ ಸಂಕಷ್ಟ!

ಸರ್ವೆ ಏಜೆನ್ಸಿಗಳು ಹೇಳುತ್ತಿರುವ ಪ್ರಕಾರ, ಪಶ್ಚಿಮ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತು ಮಹಾಗಠಬಂಧನ ಹೆಚ್ಚುಕಮ್ಮಿ ಸಮಸಮನಾಗಿ ಇವೆ. ಯಾದವರ ಕೋಟೆ ಮಧ್ಯ ಯುಪಿಯಲ್ಲಿ ಕೂಡ ಬಿಜೆಪಿಗೆ ಬಹಳ ನಿರೀಕ್ಷೆಗಳಿಲ್ಲ. ಆದರೆ ಬಿಜೆಪಿಯ ಕಣ್ಣು ನೆಟ್ಟಿರುವುದು ಪೂರ್ವ ಉತ್ತರ ಪ್ರದೇಶದ ಮೇಲೆ. ಕಳೆದ ಬಾರಿ ಇಲ್ಲಿನ 29 ಕ್ಷೇತ್ರಗಳಲ್ಲಿ 27 ಬಿಜೆಪಿಗೆ ಬಂದಿದ್ದವು.

ಇದೇ ಕಾರಣಕ್ಕೆ ಪೂರ್ವಿ ಉತ್ತರ ಪ್ರದೇಶದ ಕೇಂದ್ರ ಕಾಶಿಯಲ್ಲಿ ಮೋದಿ ಎರಡು ದಿನ ಉಳಿದುಕೊಂಡು ಒಂದು ರೀತಿಯ ಹಿಂದುತ್ವದ ಧ್ರುವೀಕರಣಕ್ಕೆ ಚಾಲನೆ ಕೊಟ್ಟಿದ್ದು. ಮಾಯಾವತಿ, ಅಖಿಲೇಶ್‌ ಹೇಗಾದರೂ ಮಾಡಿ ಯುಪಿಯಲ್ಲಿ 35ರೊಳಗೆ ಮೋದಿ ಅವರನ್ನು ತಡೆಯಬೇಕೆಂದು ಪ್ರಯತ್ನ ಪಡುತ್ತಿದ್ದರೆ, ಮೋದಿ ಮತ್ತು ಅಮಿತ್‌ ಶಾ ಹೇಗಾದರೂ ಮಾಡಿ 50ರ ಗಡಿ ದಾಟಬೇಕೆಂದು ಎಲ್ಲ ಶಕ್ತಿ ಪ್ರಯೋಗಿಸುತ್ತಿದ್ದಾರೆ. ಏನೇ ಆಗಲಿ ಪುನರಪಿ ಯುಪಿ ಫಲಿತಾಂಶ ದಿಲ್ಲಿ ಸರ್ಕಾರದ ಸ್ವರೂಪವನ್ನು ನಿರ್ಧರಿಸೋದಂತೂ ನಿಶ್ಚಿತ.

ಜಾತಿಯ ಗಠಬಂಧನ

ಉತ್ತಪ್ರದೇಶದಲ್ಲಿ ಮೇಲ್ನೋಟಕ್ಕೆ ಎಸ್‌ಪಿ, ಬಿಎಸ್‌ಪಿ ಮತ್ತು ಆರ್‌ಎಲ…ಡಿ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಆದರೆ ಇದು ನಿಜಕ್ಕೂ ಯಾದವ, ಜಾಟವ, ದಲಿತ, ಜಾಟ್‌ ಮತ್ತು ಮುಸ್ಲಿಮರನ್ನು ಒಂದೇ ಕಡೆ ತರುವ ಮೈತ್ರಿ ಅಷ್ಟೇ. ಒಬ್ಬರಿಗೊಬ್ಬರು ಮತ ವರ್ಗಾಯಿಸಿಕೊಳ್ಳಬಲ್ಲರಾ ಎಂಬ ಪ್ರಶ್ನೆ ಇದೆಯಾದರೂ, ಈ 4 ಪ್ರಬಲ ಸಮುದಾಯಗಳು ಒಟ್ಟಿಗೇ ಬಂದರೆ 46 ಪ್ರತಿಶತ ಮತಬ್ಯಾಂಕ್‌ ತಯಾರಾಗುತ್ತದೆ.

ಅಖಿಲೇಶ್‌, ಮಾಯಾವತಿ ಲೆಕ್ಕಾಚಾರದ ಪ್ರಕಾರ 80ರಲ್ಲಿ ಮಾಡಿಕೊಂಡ ಮೈತ್ರಿ 40ರಿಂದ 45 ಕ್ಷೇತ್ರದಲ್ಲಿ ನಡೆದರೂ ಬಿಜೆಪಿಯನ್ನು 35ಕ್ಕೆ ತಡೆಯಬಹುದು. ಒಂದು ಲೆಕ್ಕಾಚಾರದ ಪ್ರಕಾರ, ಅಧಿಕಾರದಿಂದ ದೂರವಿರುವ ಯಾದವ, ದಲಿತರು ಮತ್ತು ಮುಸ್ಲಿಮರು ಒಟ್ಟಾಗಿ ಬಂದರೆ ಅದೇ ಪ್ರಮಾಣದಲ್ಲಿ ಬೇರೆ ಸಮುದಾಯಗಳು ಒಟ್ಟಾಗಿ ಬರಬಹುದು. ಅದೇ ವೋಟ್‌ಬ್ಯಾಂಕ್‌ ಮೇಲೆ ಆಸೆಯಿಟ್ಟು ಬಿಜೆಪಿ ತಂತ್ರ ಹೆಣೆಯುತ್ತಿದೆ.

ಅಲ್ಲಿ ನಷ್ಟವಾದರೆ ಲಾಭ ಎಲ್ಲಿ?

ಯುಪಿಯಲ್ಲಿ ಎಷ್ಟು ನಷ್ಟವಾಗುತ್ತೋ ಗೊತ್ತಿಲ್ಲ. ಆದರೆ ಬಿಜೆಪಿಯ ಆಂತರಿಕ ಲೆಕ್ಕಾಚಾರ ಮತ್ತು ಸರ್ವೆಗಳು ಬೊಟ್ಟು ಮಾಡುತ್ತಿರುವ ಪ್ರಕಾರ ಮಹಾರಾಷ್ಟ್ರದಲ್ಲಿ 7-8, ಗುಜರಾತ್‌ನಲ್ಲಿ 4-5, ಛತ್ತೀಸ್‌ಗಢದಲ್ಲಿ 5-6, ಮಧ್ಯಪ್ರದೇಶದಲ್ಲಿ 6-7, ರಾಜಸ್ಥಾನದಲ್ಲಿ 4-6, ದಿಲ್ಲಿಯಲ್ಲಿ 1-2 ಸ್ಥಾನ ನಷ್ಟವಾಗಬಹುದು. ಆದರೆ ಬಿಜೆಪಿಯ ಸೀಟು ಜಾಸ್ತಿ ಆಗುವ ಸಾಧ್ಯತೆ ಇರುವುದು ಬಿಹಾರದಲ್ಲಿ.

ನಿತೀಶ್‌ ಕಾರಣದಿಂದ 4-6, ಕರ್ನಾಟಕದಲ್ಲಿ 3-4, ಬಂಗಾಳದಲ್ಲಿ 8-10, ಒರಿಸ್ಸಾದಲ್ಲಿ 6-7 ಸೀಟು ಲಾಭ ಆಗಬಹುದು. ತೆಲಂಗಾಣದಲ್ಲಿ ಕಳೆದುಕೊಂಡಿದ್ದು ಕೇರಳದಲ್ಲಿ ಸಿಗಬಹುದು. ಹೀಗಾಗಿಯೇ ಏನೋ, ಮೋದಿ ಮತ್ತು ಅಮಿತ್‌ ಶಾ ಮೂರು ಹಂತ ಮುಗಿದ ಮೇಲೆ ಯುಪಿಯ ಒಂದೊಂದೂ ಸೀಟಿನ ಬೆನ್ನು ಹತ್ತಿದ್ದಾರೆ. ದಿಲ್ಲಿಯ ಪೊಲಿಟಿಕಲ್ ಗಾಡಿ ಯುಪಿ ಮೇಲೆಯೇ ಬರಬೇಕು ಎಂಬುದು ಹಳೆಯ ಮಾತಲ್ಲವೇ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ