ಏನಿದು ಐಎನ್‌ಎಸ್‌ ವಿರಾಟ್‌ ವಿವಾದ?

1988ರ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಅಂದಿನ ಪ್ರಧಾನಿ ರಾಜೀವ್‌ ಗಾಂಧಿ ತಮ್ಮ ಕುಟುಂಬ, ಸ್ನೇಹಿತರು ಹಾಗೂ ಸೋನಿಯಾ ಗಾಂಧಿಯವರ ಇಟಲಿ ಕುಟುಂಬದ ಜೊತೆಗೆ ಲಕ್ಷದ್ವೀಪಕ್ಕೆ ಹೋಗಿದ್ದರು. ಅಲ್ಲಿಗೆ ತೆರಳಲು ಐಎನ್‌ಎಸ್‌ ವಿರಾಟ್‌ ಯುದ್ಧನೌಕೆಯನ್ನು ಬಳಸಿಕೊಂಡಿದ್ದರು. ಇತ್ತೀಚೆಗೆ ಪ್ರಧಾನಿ ಮೋದಿಯವರು ರಾಜೀವ್‌ ಗಾಂಧಿ ಯುದ್ಧನೌಕೆಯನ್ನೇ ಖಾಸಗಿ ಟ್ಯಾಕ್ಸಿಯಂತೆ ಬಳಸಿಕೊಂಡಿದ್ದರು ಎಂದು ಆರೋಪಿಸಿದ್ದು, ಆ ವಿವಾದಕ್ಕೆ ಮರುಜೀವ ನೀಡಿದೆ. 30 ವರ್ಷದ ಹಿಂದೆಯೂ ಇದು ಸಾಕಷ್ಟುಆಕ್ಷೇಪಗಳಿಗೆ ಕಾರಣವಾಗಿತ್ತು. ಯುದ್ಧನೌಕೆಯನ್ನು ಖಾಸಗಿ ಪ್ರವಾಸಕ್ಕೆ ಬಳಸಿಕೊಂಡಿದ್ದು, ದೇಶದ ರಕ್ಷಣೆಗೆ ಸಂಬಂಧಿಸಿದ ನೌಕೆಯಲ್ಲಿ ವಿದೇಶಿಗರನ್ನು ಕರೆದೊಯ್ದಿದ್ದು ಹಾಗೂ ಅರಬ್ಬಿ ಸಮುದ್ರದಲ್ಲಿ ದೇಶದ ಪಹರೆ ಕಾಯುತ್ತಿದ್ದ ಐಎನ್‌ಎಸ್‌ ವಿರಾಟ್‌ ನೌಕೆಯನ್ನು 10 ದಿನಗಳ ಕಾಲ ಅನ್ಯ ಉದ್ದೇಶಕ್ಕೆ ಬಳಸಿಕೊಂಡು ಅಷ್ಟುಸಮಯ ದೇಶದ ಭದ್ರತೆಯ ಜೊತೆಗೆ ರಾಜಿ ಮಾಡಿಕೊಂಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಜೊತೆಗೆ, ಆ ಪ್ರವಾಸಕ್ಕೆ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ರನ್ನು ಕರೆದೊಯ್ದಿದ್ದು ಕೂಡ ವಿವಾದವಾಗಿತ್ತು. ಏಕೆಂದರೆ, ಆಗ ಅಮಿತಾಭ್‌ರ ತಮ್ಮ ಅಜಿತಾಭ್‌ ಬಚ್ಚನ್‌ ಫೆರಾ ಕಾಯ್ದೆ ಉಲ್ಲಂಘಿಸಿ ಸ್ವಿಜರ್‌ಲೆಂಡ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಆಸ್ತಿ ಖರೀದಿಸಿದ್ದುದು ಹಗರಣವಾಗಿತ್ತು. ಆ ಬಗ್ಗೆ ಭಾರತ ಸರ್ಕಾರ ತನಿಖೆ ನಡೆಸುತ್ತಿತ್ತು. ಹಾಗಿರುವಾಗ ಸ್ವತಃ ಪ್ರಧಾನಿಯೇ ಅಮಿತಾಭ್‌ರನ್ನೂ, ಅಜಿತಾಭ್‌ರ ಮಗಳನ್ನೂ ಪ್ರವಾಸಕ್ಕೆ ಕರೆದೊಯ್ದರೆ ತನಿಖಾಧಿಕಾರಿಗಳಿಗೆ ಯಾವ ಸಂದೇಶ ರವಾನಿಸಿದಂತಾಗುತ್ತದೆ ಎಂದು ಪ್ರತಿಪಕ್ಷಗಳು ಪ್ರಶ್ನಿಸಿದ್ದವು.

ಯುದ್ಧ ನೌಕೆಯನ್ನೇ ವೈಯಕ್ತಿಕ ಟ್ಯಾಕ್ಸಿ ಮಾಡಿಕೊಂಡಿದ್ದ ರಾಜೀವ್ ಗಾಂಧಿ!

ಯಾರೆಲ್ಲಾ ಪ್ರವಾಸಕ್ಕೆ ಹೋಗಿದ್ದರು?

ರಾಜೀವ್‌ ಗಾಂಧಿ, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ, ಸೋನಿಯಾ ಗಾಂಧಿಯವರ ತಂಗಿ, ಸೋನಿಯಾರ ಭಾವ ಹಾಗೂ ಮಗಳು, ಸೋನಿಯಾರ ತಾಯಿ ಆರ್‌.ಮೈನೋ, ಸೋನಿಯಾರ ತಾಯಿಯ ಸೋದರ ಹಾಗೂ ಅಂಕಲ್‌, ಅಮಿತಾಭ್‌ ಬಚ್ಚನ್‌, ಜಯಾ ಬಚ್ಚನ್‌, ಅಭಿಷೇಕ್‌ ಬಚ್ಚನ್‌ ಸೇರಿದಂತೆ ಅಮಿತಾಭ್‌ರ ಮೂವರ ಮಕ್ಕಳು, ಅಮಿತಾಭ್‌ರ ತಮ್ಮ ಅಜಿತಾಭ್‌ ಬಚ್ಚನ್‌ರ ಮಗಳು, ಮಾಜಿ ಕೇಂದ್ರ ಸಚಿವ ಅರುಣ್‌ ಸಿಂಗ್‌ರ ಸೋದರ ಬಿಜೇಂದ್ರ ಸಿಂಗ್‌ರ ಪತ್ನಿ ಹಾಗೂ ಪುತ್ರಿ, ಇಬ್ಬರು ಅನಾಮಧೇಯ ವಿದೇಶೀಯರು, ರಾಹುಲ್‌ ಗಾಂಧಿಯ ನಾಲ್ವರು ಸ್ನೇಹಿತರು ಹಾಗೂ ಪ್ರಿಯಾಂಕಾ ಗಾಂಧಿಯ ಕೆಲ ಸ್ನೇಹಿತರು.

ಯತಾ ತಾತ ತಥಾ ಪೌತ್ರ: ಸ್ವಂತಕ್ಕೆ ವಾರ್ ಶಿಪ್ ಬಳ್ಸೋದು ಕಲಿಸಿದ್ದೇ ನೆಹರೂ!

ಮೊದಲು ಹೋಗಿದ್ದು ರಾಹುಲ್‌

ಹೊಸ ವರ್ಷಾಚರಣೆಗೆ ಪ್ರಧಾನಿ ರಾಜೀವ್‌ ಗಾಂಧಿ ಲಕ್ಷದ್ವೀಪಕ್ಕೆ ಹೋಗುತ್ತಾರೆಂಬ ಸುದ್ದಿ ಮೊದಲಿಗೆ ಗುಟ್ಟಾಗಿತ್ತು. ಅದರ ಹಿಂದಿನ ವರ್ಷ ಅವರು ಅಂಡಮಾನ್‌ ದ್ವೀಪಕ್ಕೆ ಹೊಸವರ್ಷಾಚರಣೆಗೆ ಹೋಗಿದ್ದರು. 1988ರ ಹೊಸ ವರ್ಷಕ್ಕೆ ಲಕ್ಷದ್ವೀಪಕ್ಕೆ ಅವರು ಹೋಗುತ್ತಾರೆಂದು ಅವರ ಪುತ್ರ ರಾಹುಲ್‌ ಗಾಂಧಿ ಡಿ.26ರಂದು ನಾಲ್ವರು ಸ್ನೇಹಿತರ ಜೊತೆಗೆ ಲಕ್ಷದ್ವೀಪ ಸರ್ಕಾರದ ಹೆಲಿಕಾಪ್ಟರ್‌ನಲ್ಲಿ ಲಕ್ಷದ್ವೀಪಕ್ಕೆ ಬಂದಿಳಿದಾಗ ಕೆಲವರಿಗೆ ಸುಳಿವು ಸಿಕ್ಕಿತ್ತು. ರಾಜೀವ್‌ರ ಪ್ರವಾಸವನ್ನು ರಹಸ್ಯವಾಗಿಡಲು ಲಕ್ಷದ್ವೀಪ ಸರ್ಕಾರ ಸಾಕಷ್ಟುಶ್ರಮ ವಹಿಸಿತ್ತು. ಮಾಧ್ಯಮಗಳಿಗೆ ಪ್ರವೇಶ ನಿಷೇಧಿಸಲಾಗಿತ್ತು.

744 ರೂ. ಕೊಟ್ಟು IAF ಜೆಟ್‌ಗಳನ್ನು ಟ್ಯಾಕ್ಸಿ ಮಾಡಿದ್ದು ನೀವು: ಕಾಂಗ್ರೆಸ್!

ಲಕ್ಷ ದ್ವೀಪದಲ್ಲಿ ಮೋಜು ಮಸ್ತಿ ಹೇಗಿತ್ತು?

ರಾಜೀವ್‌ ಗಾಂಧಿ ಹಾಗೂ ಇತರರು ಬಂಗಾರಂ ದ್ವೀಪದಲ್ಲಿ ಈಜಾಡುತ್ತ, ಸೂರ್ಯಸ್ನಾನ ಮಾಡುತ್ತ, ಮೀನು ಹಿಡಿಯುತ್ತ ಕಾಲ ಕಳೆದರು. ಬೀಚ್‌ ಪಾರ್ಟಿ ಹಾಗೂ ಸಂಗೀತದ ಅಬ್ಬರವಿತ್ತು. ಸಮೀಪದ ಇನ್ನೆರಡು ಜನವಸತಿರಹಿತ ದ್ವೀಪಗಳಾದ ತಿನ್ನಕರಾ ಹಾಗೂ ಪರಲಿಗೂ ಪಿಕ್‌ನಿಕ್‌ಗೆ ಹೋಗಿದ್ದರು. ರಾಜೀವ್‌, ರಾಹುಲ್‌ ಹಾಗೂ ಪ್ರಿಯಾಂಕಾ ಹೆಚ್ಚು ಕಾಲ ನೀರಿನಲ್ಲೇ ಇರುತ್ತಿದ್ದರು. ಅಸ್ತಮಾ ಸಮಸ್ಯೆಯಿದ್ದ ಸೋನಿಯಾ ಗಾಂಧಿ ಹೆಚ್ಚು ನೀರಿಗಿಳಿಯದೆ, ಜಯಾ ಬಚ್ಚನ್‌ ಹಾಗೂ ತಮ್ಮ ತಾಯಿಯ ಜೊತೆಗೆ ಗಾಜಿನ ತಳದ ಬೋಟ್‌ನಲ್ಲಿ ಕುಳಿತು ಸಮುದ್ರ ವಿಹಾರ ನಡೆಸುತ್ತಾ ಹವಳದ ದಂಡೆಗಳನ್ನು ವೀಕ್ಷಿಸುತ್ತಾ, ತೆಂಗಿನ ಮರದ ನೆರಳಿನಲ್ಲಿ ಕುಳಿತು ಹರಟೆ ಹೊಡೆಯುತ್ತಾ ಕಾಲ ಕಳೆಯುತ್ತಿದ್ದರು. ರಾಜೀವ್‌ ಸಮುದ್ರದ ದಂಡೆಯ ಮೇಲೆ ಗಾಯಗೊಂಡು ಬಿದ್ದಿದ್ದ ತಿಮಿಂಗಿಲವೊಂದನ್ನು ಮರಳಿ ಸಮುದ್ರಕ್ಕೆ ಬಿಟ್ಟುಬರುವ ಸಾಹಸದಲ್ಲೂ ಪಾಲ್ಗೊಂಡಿದ್ದರು.

ಗಾಂಧೀ ಕುಟುಂಬ ಯುದ್ಧನೌಕೆ ಬಳಸಿತ್ತು: ಮೋದಿ ಆರೋಪಕ್ಕೆ ಸಾಕ್ಷಿಯಂತಿವೆ ಈ ಫೋಟೋಗಳು

ಮದ್ಯ, ಆಹಾರ ಪೂರೈಕೆಗೆ ಸೇನಾ ಕಾಪ್ಟರ್‌ಗಳ ಹಾರಾಟ!

ಕರವತ್ತಿಯಿಂದ ವೈನ್‌ ಹಾಗೂ ಮದ್ಯದ ಬಾಕ್ಸ್‌ಗಳು ಬಂಗಾರಂಗೆ ಹೋಗಿದ್ದವು. 100 ಕೋಳಿಗಳನ್ನು ಒಯ್ಯಲಾಗಿತ್ತು. ಪ್ರತಿದಿನ ಫ್ರೆಶ್‌ ಮೀನು, ಹಣ್ಣುಗಳನ್ನು ಒಯ್ಯಲಾಗುತ್ತಿತ್ತು. ಬೆಣ್ಣೆ ಹಾಗೂ 100 ಲೋಫ್‌ ಬ್ರೆಡ್‌ಗಳು, ಕ್ಯಾಡ್‌ಬರಿ ಚಾಕೋಲೆಟ್‌ಗಳು, 40 ಕ್ರೇಟ್ಸ್‌ ತಂಪು ಪಾನೀಯ, 300 ಬಾಟಲಿ ಮಿನರಲ್‌ ವಾಟರ್‌, ಅಮೂಲ್‌ ಚೀಸ್‌, ಗೋಡಂಬಿ, ಸ್ವೀಟ್‌ ಲೈಮ್‌, 20 ಕೇಜಿ ಹಿಟ್ಟು, 105 ಕೇಜಿ ಬಾಸ್ಮತಿ ಅಕ್ಕಿ ಮತ್ತು ತಾಜಾ ತರಕಾರಿಗಳನ್ನು ಪೂರೈಸಲಾಗುತ್ತಿತ್ತು. ಇವುಗಳನ್ನು ಕೊಚ್ಚಿ, ಕರವತ್ತಿ ಹಾಗೂ ಬಂಗಾರಂ ಮಧ್ಯೆ ಸಾಗಿಸಲು ಸೇನಾ ಹೆಲಿಕಾಪ್ಟರ್‌ಗಳು ನಿರಂತರವಾಗಿ ಹಾರಾಡುತ್ತಿದ್ದವು.

ಹೇಗಿದೆ ಬಂಗಾರಂ ದ್ವೀಪ?

ಅರಬ್ಬಿ ಸಮುದ್ರದಲ್ಲಿರುವ ಲಕ್ಷದ್ವೀಪ ಸಮೂಹದಲ್ಲಿ 36 ದ್ವೀಪಗಳಿವೆ. ಒಟ್ಟು ಜನಸಂಖ್ಯೆ 44000. ಇವುಗಳಲ್ಲಿ ಒಂದು ಬಂಗಾರಂ ದ್ವೀಪ. ಇದು ಕೇವಲ 0.5 ಚದರ ಕಿ.ಮೀ. ವಿಸ್ತೀರ್ಣವಿದೆ. ಕೇರಳದ ಕೊಚ್ಚಿಯಿಂದ 465 ಕಿ.ಮೀ. ದೂರ. ಇಲ್ಲಿ ಕೇವಲ ಕಾಡಿದೆ. ಜನವಸತಿ ಇಲ್ಲ. ಭದ್ರತೆಯ ದೃಷ್ಟಿಯಿಂದ ಇದು ಲಕ್ಷದ್ವೀಪದ ಬೇರೆಲ್ಲಾ ದ್ವೀಪಗಳಿಗಿಂತ ಸುರಕ್ಷಿತ. ಇನ್ನು, ವಿದೇಶಿಗರಿಗೆ ನಿಷೇಧವಿಲ್ಲದ ಲಕ್ಷದ್ವೀಪದ ಏಕೈಕ ದ್ವೀಪವಿದು. ಆದ್ದರಿಂದಲೇ ಪ್ರವಾಸಕ್ಕೆ ರಾಜೀವ್‌ ಇದನ್ನೇ ಆಯ್ದುಕೊಂಡಿದ್ದರು.

ಬಿಲ್‌ ಪಾವತಿಸಿದ್ದು ಯಾರು?

ಈ ಪ್ರವಾಸದ ಬಿಲ್ಲನ್ನು ರಾಜೀವ್‌ ತಮ್ಮ ಖಾಸಗಿ ಖಾತೆಯಿಂದ ಪಾವತಿಸಿದರೇ ಅಥವಾ ಸರ್ಕಾರದ ಖರ್ಚಿಗೆ ಹಾಕಿದರೇ ಎಂಬುದು ಸ್ಪಷ್ಟವಿಲ್ಲ. ಮೇಲಾಗಿ ಇದರಲ್ಲಿ ನೌಕಾಪಡೆ, ಐಎನ್‌ಎಸ್‌ ವಿರಾಟ್‌ ಹಡಗು, ಅದರ ಜೊತೆಗೆ ಒಂದು ಸಬ್‌ಮರೀನ್‌, ಹಡಗು ಹಾಗೂ ಸಬ್‌ಮರೀನ್‌ನ ಸಿಬ್ಬಂದಿ, ಲಕ್ಷದ್ವೀಪ ಸರ್ಕಾರ ಹಾಗೂ ನಾನಾ ಏಜೆನ್ಸಿಗಳು ಭಾಗಿಯಾಗಿದ್ದರಿಂದ ಇದರ ಖರ್ಚು ಲೆಕ್ಕ ಹಾಕುವುದು ಕಷ್ಟಎಂದು ಹೇಳಲಾಗಿತ್ತು. ಪಿಕ್‌ನಿಕ್‌ನ ಅಷ್ಟೂದಿನ ಬಂಗಾರಂ ದ್ವೀಪಕ್ಕೆ ಭದ್ರತೆಯ ಕಾರಣದಿಂದ ವಿಶೇಷ ಉಪಗ್ರಹವೊಂದರ ಸಂಪರ್ಕ ನೀಡಲಾಗಿತ್ತು.

'ವಾಯುಪಡೆ ವಿಮಾನಗಳು ಮೋದಿ ಖಾಸಗಿ ಟ್ಯಾಕ್ಸಿ'

ಅಮಿತಾಭ್‌ ಬಚ್ಚನ್‌ ಕ್ಯಾಮೆರಾಗೆ ಸಿಕ್ಕಿದ್ದು ಹೇಗೆ?

ರಾಜೀವ್‌ ಹಾಗೂ ಸೋನಿಯಾ ಡಿ.30ರಂದು ಲಕ್ಷದ್ವೀಪಕ್ಕೆ ಬಂದಿಳಿದಿದ್ದರು. ಜಯಾ ಬಚ್ಚನ್‌ ತಮ್ಮ ಮೂವರು ಮಕ್ಕಳು ಹಾಗೂ ಪ್ರಿಯಾಂಕಾ ಗಾಂಧಿ ಜೊತೆ ನಾಲ್ಕು ದಿನ ಮೊದಲೇ ಲಕ್ಷದ್ವೀಪಕ್ಕೆ ಬಂದಿದ್ದರು. ಅಮಿತಾಭ್‌ ಬಚ್ಚನ್‌ ಡಿ.31ರಂದು ಕರವತ್ತಿಗೆ ವಿಶೇಷ ಹೆಲಿಕಾಪ್ಟರ್‌ನಲ್ಲಿ ಬಂದು, ಅಲ್ಲಿಂದ ಬಂಗಾರಂ ದ್ವೀಪಕ್ಕೆ ತೆರಳಿದರು. ಪಾರ್ಟಿ ಮುಗಿಸಿ ಅವರು ಮರಳುವಾಗ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಇಂಡಿಯನ್‌ ಎಕ್ಸ್‌ಪ್ರೆಸ್‌ನ ಛಾಯಾಗ್ರಾಹಕರ ಕ್ಯಾಮೆರಾಗೆ ಸಿಕ್ಕಿಬಿಟ್ಟರು. ಆಗ ಫೋಟೋ ತೆಗೆಯದಂತೆ ಅಮಿತಾಭ್‌ ಬೈದಿದ್ದರು ಎನ್ನಲಾಗಿದೆ. ಆದರೂ ಛಾಯಾಗ್ರಾಹಕ ತೆಗೆದ ನಾಲ್ಕು ಫೋಟೋಗಳು ಈ ಪಾರ್ಟಿಗೆ ಅಮಿತಾಭ್‌ ಹೋಗಿದ್ದರು ಎಂಬ ವಿಷಯ ಸೋರಿಕೆಯಾಗಲು ಕಾರಣವಾದವು.

'ರಾಜೀವ್ ಗಾಂಧಿ ಪಿಕ್ನಿಕ್ ಅಲ್ಲ, ಸರ್ಕಾರಿ ಕೆಲಸಕ್ಕೆ INS ಬಳಸಿದ್ರು'

10 ದಿನಕ್ಕೆ ಮುಗಿದ ಪ್ರವಾಸ

ಡಿ.26ರಂದು ಆರಂಭಗೊಂಡಿದ್ದ ಪ್ರವಾಸ ಮುಗಿದಿದ್ದು ಜ.6ರಂದು. ಪ್ರಿಯಾಂಕಾ ಗಾಂಧಿ ತನ್ನ ಸ್ನೇಹಿತರ ಜೊತೆಗೆ ಜ.6ರಂದು ಲಕ್ಷದ್ವೀಪದಿಂದ ಗೋವಾಕ್ಕೆ ತೆರಳಿದರು. ನಂತರ ಸೋನಿಯಾರ ಇಟಲಿ ಕುಟುಂಬದವರು ತೆರಳಿದರು. ನಂತರ ಅಮಿತಾಭ್‌ ಹಾಗೂ ಕುಟುಂಬ ತೆರಳಿತು. ಅಂದೇ ರಾಜೀವ್‌ ಹಾಗೂ ರಾಹುಲ್‌ ಗಾಂಧಿ ನೌಕಾಪಡೆಯ ಹೆಲಿಕಾಪ್ಟರ್‌ ಹತ್ತಿ ಹೊರಟರು. ಅವರಿಬ್ಬರನ್ನೂ ಐಎನ್‌ಎಸ್‌ ವಿರಾಟ್‌ ಮೇಲೆ ಹೆಲಿಕಾಪ್ಟರ್‌ ಇಳಿಸಿತು. ಆ ಹಡಗು ಮಂಗಳೂರಿಗೆ ತೆರಳಿತು. ಮಾರ್ಗಮಧ್ಯೆ ಮಾಧ್ಯಮದ ಜೊತೆಗೆ ಮಾತನಾಡಿದ ಪ್ರಧಾನಿ, ‘ರಜಾ ಪ್ರವಾಸ ಅದ್ಭುತವಾಗಿತ್ತು’ ಎಂದರು. ಅವರ ಕೈಲಿ ಸ್ಕೂಬಾ ಡೈವಿಂಗ್‌ ಮಾಡುವವರು ಕಟ್ಟಿಕೊಳ್ಳುವ ದುಬಾರಿ ಕ್ರೋನೋಮೀಟರ್‌ ವಾಚ್‌ ಇತ್ತು.

ರಾಜೀವ್‌ ಜತೆ ಯುದ್ಧನೌಕೆಗೆ ಹೋಗಿದ್ದು ನಿಜ, ಆದರೆ...: ರಾಹುಲ್ ಹೇಳಿದ್ದೇನು?

ಸಂಚಲನ ಮೂಡಿಸಿದ್ದ ಇಂಡಿಯಾ ಟುಡೇ ವರದಿ

ಈ ಪ್ರವಾಸದ ಬಗ್ಗೆ ಇಂಡಿಯಾ ಟುಡೇ ನಿಯತಕಾಲಿಕೆಯ 1988ರ ಜನವರಿ 31ರ ಸಂಚಿಕೆಯಲ್ಲಿ ಅನಿತಾ ಪ್ರತಾಪ್‌ ಎಂಬುವರು ವಿಸ್ತೃತವಾದ ಲೇಖನ ಬರೆದಿದ್ದರು. ಆ ಲೇಖನದಿಂದಾಗಿ ರಾಜೀವ್‌ರ ಪ್ರವಾಸದ ಸುದ್ದಿ ಜಗಜ್ಜಾಹೀರಾಗಿತ್ತು. ಖಾಸಗಿ ಪ್ರವಾಸಕ್ಕೆ ಐಎನ್‌ಎಸ್‌ ವಿರಾಟ್‌ ಯುದ್ಧನೌಕೆ ಬಳಸಿಕೊಂಡಿದ್ದೂ ಸೇರಿದಂತೆ ನಾನಾ ಕಾರಣಗಳಿಗಾಗಿ ಟೀಕೆಗಳು ವ್ಯಕ್ತವಾಗಿದ್ದವು. ಆದರೆ, ಅಷ್ಟರಲ್ಲಿ ರಾಜೀವ್‌ ಗಾಂಧಿಯವರ ಬೋಫೋರ್ಸ್‌ ಹಗರಣ ಬೆಳಕಿಗೆ ಬಂದು ಈ ವಿವಾದ ತಣ್ಣಗಾಗಿತ್ತು. ಲೇಖನ ಬರೆದ ಅನಿತಾ ಪ್ರತಾಪ್‌ ಕೇರಳದವರಾಗಿದ್ದು, ಅದಕ್ಕೂ ಮುನ್ನ ಮೊಟ್ಟಮೊದಲ ಬಾರಿ ಶ್ರೀಲಂಕಾದ ಎಲ್‌ಟಿಟಿಇ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರ್‌ನ ಸಂದರ್ಶನ ಮಾಡಿ ಹೆಸರು ಗಳಿಸಿದ್ದರು. 60 ವರ್ಷದ ಅನಿತಾ ಪ್ರತಾಪ್‌ ಈಗಲೂ ಸ್ವತಂತ್ರ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ.