ನವದೆಹಲಿ[ಮೇ.10]: ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರು ಐಎನ್‌ಎಸ್‌ ವಿರಾಟ್‌ ನೌಕೆ ದುರ್ಬಳಕೆ ಮಾಡಿಕೊಂಡಿದ್ದರು ಎಂಬ ಪ್ರಧಾನಿ ನರೇಂದ್ರ ಮೋದಿ ಆರೋಪವನ್ನು ನಿವೃತ್ತ ವೈಸ್‌ ಅಡ್ಮಿರಲ್‌ ವಿನೋದ್‌ ಪಾಸ್‌ರಿಚಾ ತಳ್ಳಿಹಾಕಿದ್ದಾರೆ.

ಘಟನೆ ನಡೆದಾಗ ಐಎನ್‌ಎಸ್‌ ವಿರಾಟ್‌ನ ಉಸ್ತುವಾಗಿರುವ ವಿನೋದ್‌, ಮೋದಿ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ್ದು, ಅಂದಿನ ಪ್ರಧಾನಿ ರಾಜೀವ್‌ ಗಾಂಧಿ ಮತ್ತು ಅವರ ಪತ್ನಿ ಸೋನಿಯಾ ಗಾಂಧಿ, ಎರಡು ದಿನಗಳ ಅಧಿಕೃತ ಪ್ರವಾಸದ ಮೇಲೆ ಯುದ್ಧ ನೌಕೆಯಲ್ಲಿ ಸಂಚಾರ ಕೈಗೊಂಡಿದ್ದರು. ಈ ಅಧಿಕೃತ ಕಾರ್ಯಕ್ರಮದ ವೇಳೆ ಎಲ್ಲಾ ಶಿಷ್ಟಾಚಾರಗಳನ್ನೂ ಪಾಲಿಸಲಾಗಿತ್ತು. ಯಾವುದೇ ವಿದೇಶಿ ವ್ಯಕ್ತಿ ಅಥವಾ ಅತಿಥಿಗಳಿಗೆ ಯುದ್ಧನೌಕೆಯಲ್ಲಿ ಸಂಚಾರ ಕೈಗೊಳ್ಳಲು ಅವಕಾಶ ಕಲ್ಪಿಸಿರಲಿಲ್ಲ. ವಿಹಾರಕ್ಕಾಗಿ ಯುದ್ಧ ನೌಕೆಯನ್ನು ಬಳಸಿಕೊಂಡಿರಲಿಲ್ಲ. ರಾಜೀವ್‌ ಮತ್ತು ಸೋನಿಯಾ ಜೊತೆಗೆ ಕೇವಲ ರಾಹುಲ್‌ ಗಾಂಧಿ ಮಾತ್ರ ಉಪಸ್ಥಿತರಿದ್ದರು ಎಂದು ಹೇಳಿದ್ದಾರೆ.

ರಾಜೀವ್‌ ಗಾಂಧಿ ಅವರು ತಮ್ಮ ಕುಟುಂಬ ಮತ್ತು ತಮ್ಮ ಸ್ನೇಹಿತರ ಕುಟುಂಬದೊಡನೆ ಲಕ್ಷದ್ವೀಪ ಸಮೂಹದ ದ್ವೀಪವೊಂದಕ್ಕೆ 10 ದಿನಗಳ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಕರಾವಳಿ ಕಾವಲಿಗೆ ನಿಯೋಜನೆಗೊಂಡಿದ್ದ ಐಎನ್‌ಎಸ್‌ ವಿರಾಟ್‌ ನೌಕೆಯನ್ನು ಗಾಂಧೀ ಕುಟುಂಬದ ವಿಹಾರಕ್ಕಾಗಿ ಮತ್ತು ಭದ್ರತೆಗಾಗಿ ಬಳಸಿಕೊಳ್ಳಲಾಗಿತ್ತು. ಈ ಮೂಲಕ ದೇಶದ ಭದ್ರತೆ ವಿಷಯದಲ್ಲಿ ರಾಜೀ ಮಾಡಿಕೊಳ್ಳಲಾಗಿತು. ಯುದ್ಧ ನೌಕೆಯನ್ನು ಗಾಂಧೀ ಕುಟುಂಬ ಪರ್ಸನಲ್‌ ಟ್ಯಾಕ್ಸಿಯಾಗಿ ಬಳಸಿಕೊಳ್ಳುವ ಮೂಲಕ ಐಎನ್‌ಎಸ್‌ ವಿರಾಟ್‌ಗೆ ಅವಮಾನ ಮಾಡಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ದೆಹಲಿಯಲ್ಲಿ ನಡೆದ ಚುನಾವಣಾ ರಾರ‍ಯಲಿಯಲ್ಲಿ ಗಂಭೀರ ಆರೋಪ ಮಾಡಿದ್ದರು.