ನವದೆಹಲಿ[ಮೇ.11]: ರಾಜೀವ್‌ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಐಎನ್‌ಎಸ್‌ ವಿರಾಟ್‌ ಅನ್ನು ತಮ್ಮ ಕುಟುಂಬದ ಖಾಸಗಿ ಟ್ಯಾಕ್ಸಿಯನ್ನಾಗಿ ಮಾಡಿಕೊಂಡಿದ್ದರು. ಈ ಮೂಲಕ ದೇಶದ ಭದ್ರತೆ ಜೊತೆ ರಾಜೀ ಮಾಡಿಕೊಳ್ಳಲಾಗಿತ್ತು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಗಂಭೀರ ಆರೋಪಕ್ಕೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಗ್ಗೆ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ರಾಹುಲ್‌, ‘ನನ್ನ ತಂದೆ ಪ್ರಧಾನಿಯಾಗಿದ್ದಾಗ ನಾನು ಅವರ ಜೊತೆ ಐಎನ್‌ಎಸ್‌ ವಿರಾಟ್‌ ನೌಕೆಗೆ ಹೋಗಿದ್ದು ನಿಜ. ಹಾಗಾಗಿಯೇ ಈ ಕುರಿತಾದ ಫೋಟೋಗಳಿವೆ. ಆದರೆ, ಮೋಜು-ಮಸ್ತಿಗಾಗಿ ಹೋಗಿದ್ದೆವು ಎಂಬ ಆರೋಪವೇ ಹುಚ್ಚುತನದ್ದು. ಪ್ರಧಾನಿಯವರ ಅಧಿಕೃತ ಕಾರ್ಯಕ್ರಮಕ್ಕಾಗಿ ಐಎನ್‌ಎಸ್‌ ವಿರಾಟ್‌ನಲ್ಲಿ ಲಕ್ಷದ್ವೀಪಕ್ಕೆ ಹೋಗಿದ್ದೆವು. ಯುದ್ಧ ವಿಮಾನಗಳನ್ನು ಹೊತ್ತೊಯ್ಯುವ ಐಎನ್‌ಎಸ್‌ ವಿರಾಟ್‌ನಲ್ಲಿ ಯಾರಾದರೂ ರಜೆಯ ಮೋಜು ಮಾಡುತ್ತಾರೆಯೇ? ಅದೇನು ಕ್ರೂಸ್‌ ಶಿಪ್‌ (ಐಷಾರಾಮಿ ಹಡಗು) ಅಲ್ಲ’ ಎಂದು ಮೋದಿ ಅವರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.