ನವದೆಹಲಿ[ಮೇ.10]: ದಿವಂಗತ ರಾಜೀವ್‌ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಯುದ್ಧ ನೌಕೆ ‘ಐಎನ್‌ಎಸ್‌ ವಿರಾಟ್‌’ ಅನ್ನು ಹಿಂದೊಮ್ಮೆ ಖಾಸಗಿ ಟ್ಯಾಕ್ಸಿ ರೀತಿ ಮಾಡಿಕೊಂಡಿದ್ದರು ಎಂಬ ಪ್ರಧಾನಿ ನರೇಂದ್ರ ಮೋದಿ ಆರೋಪ ಕಾಂಗ್ರೆಸ್ಸಿನ ಆಕ್ರೋಶಕ್ಕೆ ಕಾರಣವಾಗಿದೆ. ಮೋದಿ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್‌, ಭಾರತೀಯ ವಾಯುಪಡೆ ವಿಮಾನಗಳನ್ನು ಮೋದಿ ಅವರೇ ಖಾಸಗಿ ಟ್ಯಾಕ್ಸಿ ಮಾಡಿಕೊಂಡಿದ್ದಾರೆ. ಚುನಾವಣಾ ರಾರ‍ಯಲಿಗಳಿಗೆ ತೆರಳಲು ವಿಮಾನ ಬಳಸಿ ಕೇವಲ 744 ರು.ನಷ್ಟುಬಾಡಿಗೆ ಪಾವತಿಸಿದ್ದಾರೆ ಎಂದು ಹರಿಹಾಯ್ದಿದೆ.

ಬೇರೆಯವರತ್ತ ಬೆರಳು ತೋರಿಸಬೇಡಿ:

ಸುದ್ದಿಗಾರರ ಜತೆ ಮಾತನಾಡಿದ ಕಾಂಗ್ರೆಸ್‌ ಪ್ರಧಾನ ವಕ್ತಾರ ರಣದೀಪ್‌ ಸುರ್ಜೇವಾಲ, ಚುನಾವಣಾ ರಾರ‍ಯಲಿಗಳಿಗೆ ತೆರಳಲು ವಿಮಾನ ಬಳಸಿ 744 ರು.ನಷ್ಟುಕಡಿಮೆ ಬಾಡಿಗೆಯನ್ನು ವಾಯುಪಡೆಗೆ ಮೋದಿ ಪಾವತಿಸಿದ್ದಾರೆ. ತನ್ಮೂಲಕ ವಾಯುಪಡೆ ವಿಮಾನಗಳನ್ನು ಖಾಸಗಿ ಟ್ಯಾಕ್ಸಿ ಮಾಡಿಕೊಂಡಿದ್ದಾರೆ. ವಿಷಯಾಂತರ ಹಾಗೂ ಮೋಸ ಮಾಡುವುದು ಅವರ ಅಂತಿಮ ಆಯ್ಕೆ. ತಮ್ಮ ಪಾಪಗಳು ತಮ್ಮನ್ನೇ ಕಾಡಬಹುದು ಎಂಬ ಕಾರಣಕ್ಕೆ ಮೋದಿ ಅವರು ಬೇರೆಯವರತ್ತ ಬೆರಳು ತೋರಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

2004ರಿಂದ 2019ರವರೆಗೆ ಮೋದಿ ಅವರು ವಾಯುಪಡೆ ವಿಮಾನಗಳನ್ನು 240 ಬಾರಿ ಖಾಸಗಿ ಕೆಲಸಕ್ಕೆ ಬಳಸಿಕೊಂಡಿದ್ದಾರೆ. ಅದಕ್ಕೆ ಬಿಜೆಪಿ 1.4 ಕೋಟಿ ರು. ಬಾಡಿಗೆ ನೀಡಿದೆ. ಕೆಲವೊಂದು ಬಾರಿ ಬಿಜೆಪಿ 744 ರು.ನಷ್ಟುಕಡಿಮೆ ಬಾಡಿಗೆಯನ್ನು ನೀಡಿದೆ ಎಂದು ಆರ್‌ಟಿಐನಡಿ ಲಭಿಸಿದ ಉತ್ತರವನ್ನು ಆಧರಿಸಿ ಪತ್ರಿಕೆಯೊಂದು ವರದಿ ಮಾಡಿತ್ತು. ಅದನ್ನೇ ಮುಂದಿಟ್ಟುಕೊಂಡು ಸುರ್ಜೇವಾಲ ಅವರು ಮೋದಿ ವಿರುದ್ಧ ಕಿಡಿಕಾರಿದ್ದಾರೆ.