ಭಾರತದಲ್ಲಿ ನಕಲಿ ವಿಶ್ವವಿದ್ಯಾನಿಲಯಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಯುಜಿಸಿ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಎಚ್ಚರಿಕೆ ನೀಡಿದೆ. ದೇಶದ 12 ರಾಜ್ಯಗಳಲ್ಲಿ 32 ನಕಲಿ ವಿವಿಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರವೇಶ ಪಡೆಯುವ ಮುನ್ನ ಯುಜಿಸಿ ವೆಬ್‌ಸೈಟ್‌ನಲ್ಲಿ ಪಟ್ಟಿ ಪರಿಶೀಲಿಸುವಂತೆ ಸೂಚಿಸಲಾಗಿದೆ.
ಭಾರತದಲ್ಲಿ ಶಿಕ್ಷಣ ಇಂದು ದೊಡ್ಡಮಟ್ಟದ ಉದ್ಯಮವಾಗಿ ಬದಲಾಗಿರುವುದು ಗೊತ್ತೆ ಇದೆ. ಎಲ್‌ಕೆಜಿ ಓದುವ ಮಕ್ಕಳಿಗೆ ವರ್ಷಕ್ಕೆ ಲಕ್ಷಕ್ಕಿಂತ ಅಧಿಕ ವೆಚ್ಚವಾಗುತ್ತಿದೆ ಎಂದರೆ ನೀವು ಭಾರತದಲ್ಲಿ ಶಿಕ್ಷಣ ಎಷ್ಟು ದುಬಾರಿ ಹಾಗೂ ಮಾಫಿಯಾವಾಗಿ ಬದಲಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಇದರ ಜೊತೆಗೆ ನಕಲಿ ಶಾಲಾ ಕಾಲೇಜುಗಳ ಹಾವಳಿ. ಹೌದು ಶಿಕ್ಷಣ ಸಂಸ್ಥೆ ಆರಂಭಿಸಿದರೆ ಅದೊಂದು ಚಿನ್ನದ ಮೊಟ್ಟೆ ಇರಿಸುವ ಕೋಳಿಯಂತೆ. ಹೀಗಾಗಿಯೇ ನಾಯಿಕೊಡೆಯಂತೆ ಅಲ್ಲಲ್ಲಿ ಒಂದೊಂದು ಶಿಕ್ಷಣ ಸಂಸ್ಥೆಗಳು ತಲೆ ಎತ್ತುತ್ತಿವೆ. ಇದರ ನಡುವೆ ಅಸಲಿ ಯಾವುದು ನಕಲಿ ಯಾವುದು ಎಂಬುದನ್ನು ತಿಳಿದುಕೊಳ್ಳುವುದೇ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಒಂದು ದೊಡ್ಡ ತಲೆನೋವಾಗಿದೆ. ಹೀಗಿರುವಾಗ ಯುಜಿಸಿ ದೇಶದಲ್ಲಿ ತಲೆ ಎತ್ತಿರುವ ನಕಲಿ ವಿಶ್ವವಿದ್ಯಾನಿಲಯಗಳ ಬಗ್ಗೆ ಮಾಹಿತಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಹಗಲು ಬ್ಯೂಟಿ ಪಾರ್ಲರ್ ರಾತ್ರಿ ಬೇರೆಯದೇ ಕೆಲಸ: ಮಹಿಳೆಯ ಬಂಧಿಸಿದ ದೆಹಲಿ ಪೊಲೀಸರು
ಎರಡು ವರ್ಷಗಳ ಹಿಂದೆ ಕೇವಲ ಎಂಟು ರಾಜ್ಯಗಳಿಗೆ ಸೀಮಿತವಾಗಿದ್ದಈ ನಕಲಿ ವಿಶ್ವವಿದ್ಯಾನಿಲಯಗಳ ಸಂಖ್ಯೆ ಈಗ 12 ರಾಜ್ಯಗಳಿಗೆ ವಿಸ್ತರಣೆಯಾಗಿದೆ. ಕಳೆದ ಎರಡು ವರ್ಷಗಳಲ್ಲಿ ನಕಲಿ ವಿಶ್ವವಿದ್ಯಾಲಯಗಳ ಸಂಖ್ಯೆ 20 ರಿಂದ 32 ಕ್ಕೆ ಏರಿದೆ. ನಕಲಿ ವಿಶ್ವವಿದ್ಯಾಲಯಗಳು ಹೊಸದಾಗಿ ಶುರುವಾಗಿರುವ ರಾಜ್ಯಗಳಲ್ಲಿ ಹರಿಯಾಣ, ರಾಜಸ್ಥಾನ, ಜಾರ್ಖಂಡ್ ಮತ್ತು ಅರುಣಾಚಲ ಪ್ರದೇಶ ಸೇರಿವೆ. ನಕಲಿ ವಿಶ್ವವಿದ್ಯಾಲಯಗಳ ಈ ಜಾಲ ನಿರಂತರ ಬೆಳೆಯುತ್ತಿರುವ ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಅಂತಹ ನಕಲಿ ಸಂಸ್ಥೆಗಳ ಬಗ್ಗೆ ಎಚ್ಚರಿಕೆ ನೀಡಿದೆ.
ಈ ನಕಲಿ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳು ದಾಖಲಾಗುವುದರ ವಿರುದ್ಧವೂ ಅದು ಎಚ್ಚರಿಕೆ ನೀಡಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗ್ಲೋಬಲ್ ಹ್ಯೂಮನ್ ಪೀಸ್ ಯೂನಿವರ್ಸಿಟಿ ಎಂಬ ಹೆಸರಿನಲ್ಲಿ ನಕಲಿ ವಿಶ್ವವಿದ್ಯಾನಿಲಯವೊಂದು ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂದ ನಂತರ ಯುಜಿಸಿ ಈ ಸೂಚನೆ ನೀಡಿದೆ.
ನಕಲಿ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಕಂಡುಹಿಡಿಯುವುದು ಹೇಗೆ?
ಪ್ರವೇಶ ಪಡೆಯುವ ಮೊದಲು ಯುಜಿಸಿ ವೆಬ್‌ಸೈಟ್‌ನಲ್ಲಿರುವ ನಕಲಿ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಪರಿಶೀಲಿಸಲು ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಯುಜಿಸಿ ಕೋರಿದೆ. ಕಳೆದ ಕೆಲವು ವರ್ಷಗಳಿಂದ ಯುಜಿಸಿ ನಕಲಿ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಲೇ ಇದೆ ಆದರೆ ಮುಂದೆ ಏನಾಗುತ್ತಿದೆ ಎಂಬುದನ್ನು ಅದು ಮೇಲ್ವಿಚಾರಣೆ ಮಾಡುವುದಿಲ್ಲ. ಅದೇ ಸಮಯದಲ್ಲಿ, ಪ್ರತಿ ಹಳ್ಳಿಗೂ ತಮ್ಮ ಜಾಲವನ್ನು ಹರಡಿರುವ ನಕಲಿ ವಿಶ್ವವಿದ್ಯಾಲಯಗಳು ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳನ್ನು ಬಲಿಪಶುಗಳನ್ನಾಗಿ ಮಾಡುತ್ತಿವೆ. ಅತ್ಯಂತ ಆಘಾತಕಾರಿ ವಿಷಯವೆಂದರೆ 32 ನಕಲಿ ವಿಶ್ವವಿದ್ಯಾಲಯಗಳಲ್ಲಿ 12 ದೆಹಲಿಯಲ್ಲಿಯೇ ಇವೆ, ಕೆಲವು ಯುಜಿಸಿಯಿಂದ ಕೆಲವು ಮೀಟರ್ ದೂರದಲ್ಲಿ ಕಾರ್ಯನಿರ್ವಹಿಸುತ್ತಿವೆ.
ಇದನ್ನೂ ಓದಿ: ಚೀನಾ ರೋಬೋಡಾಗ್ ತಮ್ಮದೆಂದು ತೋರಿಸಿದ ಗಾಲ್ಗೋಟಿಯಾಸ್ ವಿವಿಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡ್ತಿದ್ದಾರೆ ನೆಟ್ಟಿಗರು
ಪ್ರಸ್ತುತ, ನಕಲಿ ವಿಶ್ವವಿದ್ಯಾಲಯಗಳು ಅಸ್ತಿತ್ವದಲ್ಲಿರುವ 12 ರಾಜ್ಯಗಳಲ್ಲಿ, ದೆಹಲಿಯಲ್ಲಿ 12, ಉತ್ತರ ಪ್ರದೇಶದಲ್ಲಿ ನಾಲ್ಕು, ಕೇರಳ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಪುದುಚೇರಿ, ಆಂಧ್ರಪ್ರದೇಶ, ಕರ್ನಾಟಕದಲ್ಲಿ ತಲಾ ಎರಡು, ಹರಿಯಾಣ, ರಾಜಸ್ಥಾನ, ಜಾರ್ಖಂಡ್ ಮತ್ತು ಅರುಣಾಚಲ ಪ್ರದೇಶದಲ್ಲಿ ತಲಾ ಒಂದು ನಕಲಿ ವಿಶ್ವವಿದ್ಯಾಲಯವಿದೆ.
ದೆಹಲಿಯಲ್ಲಿ ಕಾರ್ಯಾಚರಿಸುತ್ತಿರುವ ನಕಲಿ ವಿಶ್ವವಿದ್ಯಾನಿಲಯಗಳು
- ಅಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ & ಫಿಸಿಕಲ್ ಹೆಲ್ತ್ ಸೈನ್ಸ್
- ಕಮರ್ಷಿಯಲ್ ಯುನಿವರ್ಸಿಟಿ ಲಿಮಿಟೆಡ್
- ಯುನೈಟೆಡ್ ನೇಷನ್ ಯುನಿವರ್ಸಿಟಿ
- ವಕೇಶನಲ್ ಯುನಿವರ್ಸಿಟಿ
- ಎಡಿಆರ್ ಸೆಂಟ್ರಿಕ್ ಜ್ಯೂರಿಡಿಕಲ್ ಯುನಿವರ್ಸಿಟಿ
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ & ಇಂಜಿನಿರಿಂಗ್
- ವಿಶ್ವಕರ್ಮ ಒಪನ್ ಯುನಿವರ್ಸಿಟಿ ಫಾರ್ ಸೆಲ್ಫ್ ಎಂಪ್ಲಾಯ್‌ಮೆಂಟ್
- ಸ್ಪಿರಿಚುವಲ್ ಯುನಿವರ್ಸಿಟಿ
- ವರ್ಲ್ಡ್ ಪೀಸ್ ಅಫ್ ಯುನೈಟೆಡ್ ನ್ಯಾಷನಲ್ ಯುನಿವರ್ಸಿಟಿ
- ಇನ್ಸ್ಟಿಟ್ಯುಟ್ ಆಫ್ ಮ್ಯಾನೇಜ್ಮೆಂಟ್ & ಇಂಜಿನಿಯರಿಂಗ್
- ಮೌಂಟೇನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ & ಟೆಕ್ನಾಲಾಜಿ
- ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸೊಲ್ಯೂಷನ್
ಪಶ್ಚಿಮ ಬಂಗಾಳ:
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್
- ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್ ಅಂಡ್ ರಿಸರ್ಚ್
ಉತ್ತರ ಪ್ರದೇಶ:
- ಗಾಂಧಿ ಹಿಂದಿ ವಿದ್ಯಾಪೀಠ, ಪ್ರಯಾಗ
- ಮಹಾಮಾಯಾ ತಾಂತ್ರಿಕ ವಿಶ್ವವಿದ್ಯಾಲಯ, ನೋಯ್ಡಾ
- ನೇತಾಜಿ ಸುಭಾಷ್ ಚಂದ್ರ ಬೋಸ್ ಮುಕ್ತ ವಿಶ್ವವಿದ್ಯಾಲಯ
- ಅಲಿಘರ್ ಮತ್ತು ಭಾರತೀಯ ಶಿಕ್ಷಣ ಮಂಡಳಿ ಭಾರತ್ ಭವನ ಲಕ್ನೋ
ಹರಿಯಾಣ
- ಮ್ಯಾಜಿಕ್ ಮತ್ತು ಕಲಾ ವಿಶ್ವವಿದ್ಯಾಲಯ, ಫರಿದಾಬಾದ್.
ಜಾರ್ಖಂಡ್
- ದಕ್ಷ ವಿಶ್ವವಿದ್ಯಾಲಯ, ರಾಂಚಿ.
ಈ ನಕಲಿ ವಿಶ್ವವಿದ್ಯಾನಿಲಯಗಳು ವಿದೇಶಿ ವಿಶ್ವವಿದ್ಯಾಲಯಗಳ ಸೋಗಿನಲ್ಲೂ ಕಾರ್ಯಾಚರಿಸುತ್ತಿವೆ. ಇತ್ತೀಚೆಗೆ ಶ್ರೀಲಂಕಾದ ಕೊಲಂಬಿಯಾ ವಿಶ್ವವಿದ್ಯಾಲಯವು ಮಹಾರಾಷ್ಟ್ರದಲ್ಲಿ ತಮ್ಮ ಹೆಸರು ಮತ್ತು ಲೋಗೋ ಬಳಸಿ ಕಾರ್ಯನಿರ್ವಹಿಸುತ್ತಿರುವ ಇದೇ ರೀತಿಯ ನಕಲಿ ವಿಶ್ವವಿದ್ಯಾಲಯದ ಬಗ್ಗೆ ಯುಜಿಸಿಗೆ ದೂರು ನೀಡಿತು. ಇದರ ನಂತರ, ಯುಜಿಸಿ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಈ ನಕಲಿ ವಿಶ್ವವಿದ್ಯಾಲಯಗಳ ಬಗ್ಗೆ ಎಚ್ಚರಿಕೆ ನೀಡಿತು.


