Galgotias robodog controversy: ವಿಶ್ವ ಮಟ್ಟದ ಎಐ ಶೃಂಗಸಭೆಯಲ್ಲಿ ಚೀನಾದ ರೋಬೋಡಾಗ್ ಅನ್ನು ತಮ್ಮದೆಂದು ಹೇಳಿ ಗಾಲ್ಗೋಟಿಯಸ್ ವಿಶ್ವವಿದ್ಯಾನಿಲಯವು ಮುಜುಗರಕ್ಕೀಡಾಗಿತ್ತು. ಈ ಘಟನೆಯ ನಂತರಿ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ವಿಶ್ವವಿದ್ಯಾನಿಲಯವನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.
ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದೆ ಗಾಲ್ಗೋಟಿಯಸ್ ವಿಶ್ವವಿದ್ಯಾನಿಲಯ
ವಿಶ್ವ ಮಟ್ಟದ ಎಐ ಶೃಂಗಸಭೆಯಲ್ಲಿ ಗಾಲ್ಗೋಟಿಯಸ್ ವಿಶ್ವವಿದ್ಯಾನಿಲಯವು ಚೀನಾದ ರೋಬೋಡಾಗ್ ಅನ್ನು ತಮ್ಮದೇ ಸೃಷ್ಟಿ ಎಂದು ತೋರಿಸಿ ವಿಶ್ವ ಮಟ್ಟದಲ್ಲಿ ದೇಶಕ್ಕೆ ಮುಜುಗರ ತಂದಿದ್ದು, ಗೊತ್ತೇ ಇದೆ. ಇದಾದ ನಂತರ ಕಾಲೇಜಿನ ಸ್ಟಾಲ್ ಅನ್ನು ಎಐ ಶೃಂಗಸಭೆಯಿಂದ ಜಾಗ ಖಾಲಿ ಮಾಡಿಸಿ ವಾರ್ನಿಂಗ್ ಮಾಡಿದ್ದು, ನಂತರ ಕಾಲೇಜು ಆಡಳಿತ ಅದಕ್ಕೆ ಸ್ಪಷ್ಟನೆ ನೀಡಿದ್ದು, ಆಯ್ತು. ಆದರೆ ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು ಎಂಬ ಗಾದೆ ಮಾತಿನಂತೆ ಈಗ ಜಾಗತಿಕ ಮಟ್ಟದಲ್ಲಿ ದೇಶದ ಮಾನದ ಜೊತೆ ಗಾಲ್ಗೋಟಿಯಸ್ ವಿಶ್ವವಿದ್ಯಾನಿಲಯದ ಮಾನವು ಹೋಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಟ್ರೋಲರ್‌ಗಳು ಕಾಲೇಜನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡ್ತಿದ್ದಾರೆ.
ಹೌದು ಈ ಟ್ರೋಲ್‌ಗಳು ಜನರನ್ನು ನಕ್ಕುನಗಿಸುತ್ತಿವೆ. Rahi🍁(@TheSarcastica)ಎಂಬ ಎಂಬ ಎಕ್ಸ್ ಖಾತೆಯಿಂದ ಗಾಲ್ಗೋಟಿಯಸ್ ವಿಶ್ವವಿದ್ಯಾನಿಲಯವನ್ನು ಸಿನಿಮಾದ ತುಣುಕ್ಕೊಂದನ್ನು ಹಂಚಿಕೊಳ್ಳುವ ಮೂಲಕ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿದೆ. ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾನಿಲಯದ ಮೆಕ್ಯಾನಿಕಲ್ ಎಂಜಿನಿಯರ್‌ಗಳು ಎಂದು ಬರೆದು ಅಳುವ ಇಮೋಜಿ ಹಾಕಿವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ವಿಡಿಯೋ ನೋಡಿದರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಹಾಗಿದ್ರೆ ಈ ವೀಡಿಯೋದಲ್ಲೇನಿದೆ?
ಈ ವೀಡಿಯೋವೂ ಅನಿಲ್ ಕಪೂರ್, ಅಜಯ್ ದೇವಗನ್, ರಿತೇಶ್ ದೇಶ್‌ಮುಖ್ ನಟಿಸಿರುವ 2019ರ ಸಿನಿಮಾವಾದ 'ಟೋಟಲ್ ಧಮಾಲ್' ಸಿನಿಮಾದ ಕಾಮಿಡಿ ದೃಶ್ಯವಾಗಿದೆ. ಇದರಲ್ಲಿ ರಿತೇಶ್ ದೇಶ್‌ಮುಖ್ ಹಾಳಾದ ಹೆಲಿಕಾಪ್ಟರ್‌ಗೆ ಮನೆಗೆ ಅಳವಡಿಸುವ ಫ್ಯಾನ್ ತಂದು ಅಳವಡಿಸಿ ತಿರುಗಿತಿಸುತ್ತಾರೆ. ಇದಕ್ಕೆ ಜೊತೆಯಲ್ಲಿದ್ದ ಜಾನಿ ಲೀವರ್ ಹೇಯ್ ಏನ್ ಮಾಡ್ತಿದ್ದೀಯಾ ನೀನು ಮನೆಯ ಫ್ಯಾನ್ ತಂದು ಹೆಲಿಕಾಪ್ಟರ್‌ಗೆ ಅಳವಡಿಸುತ್ತಿದ್ದಿಯಾ ಅಲ್ಲಾ? ಎಂದು ಕೇಳುತ್ತಾರೆ. ಅದಕ್ಕೆ ರಿತೇಶ್ ದೇಶ್‌ಮುಖ್ ಹೀಗೆ ಹೇಳ್ತಾರೆ. 'ನೋಡು ಇದು ಮನೆಯ ಫ್ಯಾನ್ ಎಂದು ನಿನಗೆ ಗೊತ್ತು, ನಮಗೂ ಗೊತ್ತು ಅದು ಮನೆಯ ಫ್ಯಾನ್ ಅಂತ ಆದರೆ ಹೆಲಿಕಾಫ್ಟರ್‌ಗೆ ಗೊತ್ತಾ ಅದು ಮನೆಯ ಫ್ಯಾನ್ ಅಂತ ಎಂದು ಕೇಳುತ್ತಾರೆ. ರಿತೇಶ್ ಮಾತು ಕೇಳಿ ಬೆರಗಾಗುವ ಜಾನಿ ಲಿವರ್ ನೀನು ಮನುಷ್ಯ ಅಲ್ಲಾ ಸೈಂಟಿಸ್ಟ್ ಎಂದು ರಿತೇಶ್‌ನನ್ನು ಹೊಗಳುತ್ತಾರೆ. ಪ್ರಸ್ತುತ ಸಿನಿಮಾದ ಈ ಕಾಮಿಡಿ ಸೀನ್ ಈಗ ಗಾಲ್ಗೋಟಿಯಸ್ ವಿಶ್ವವಿದ್ಯಾನಿಲಯವು ಎಐ ಶೃಂಗಸಭೆಯಲ್ಲಿ ಮಾಡಿದ ವರ್ತನೆಗೆ ಸರಿಯಾಗಿ ಮ್ಯಾಚ್ ಆಗ್ತಿತ್ತು. ನೋಡಿಗರು ಬಿದ್ದು ಬಿದ್ದು ನಗುತ್ತಿದ್ದಾರೆ.
ಎಐ ಶೃಂಗದಲ್ಲಿ ಆಗಿದ್ದೇನು?
ದೆಹಲಿಯ ಭಾರತ ಮಂಟಪದಲ್ಲಿ ನಡೆಯುತ್ತಿರುವ ವಿಶ್ವ ಮಟ್ಟದ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಗಾಲ್ಗೋಟಿಯಾಸ್ ಕಾಲೇಜು ಚೀನಾ ನಿರ್ಮಿತ ರೋಬೋಟ್ ಡಾಗ್ ಅನ್ನು ತಮ್ಮದೆಂದು ತೋರಿಸಿ ಮುಜುಗರಕ್ಕೀಡಾಗಿತ್ತು. 2026 ರ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಈ ಗಾಲ್ಗೋಟಿಯಾಸ್ ವಿಶ್ವವಿದ್ಯಾನಿಲಯವು ಚೀನೀ ಯುನಿಟ್ರೀ ರೋಬೋಡಾಗ್ ಅನ್ನು ತಾವೇ ನಿರ್ಮಿಸಿದ್ದು ಎಂದು ಹೇಳಿ ಪ್ರದರ್ಶನಕ್ಕಿಟ್ಟಿತ್ತು. ಆದರೆ ಈ ಎಐ ಶೃಂಗಸಭೆಯಲ್ಲಿ ಗಾಲ್ಗೋಟಿಯಾಸ್ ವಿಶ್ವವಿದ್ಯಾನಿಲಯದ ಸ್ಟಾಲ್‌ನ ವೀಡಿಯೊವನ್ನುಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಂತೆ ಅನೇಕರು ಇದು ಚೀನಾದು ಎಂದು ಗಮನ ಸೆಳೆದರು. ಆ ವೀಡಿಯೋದಲ್ಲಿ ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ನೇಹಾ ಸಿಂಗ್ ಈ ಚೀನಿ ಮೂಲದ ರೋಬೋಡಾಗ್ ಬಗ್ಗೆ ವಿವರಿಸುತ್ತಾ ನೀವು ಓರಿಯನ್ ಅನ್ನು ಭೇಟಿ ಮಾಡಬೇಕು. ಇದನ್ನು ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯದ ಸೆಂಟರ್ ಆಫ್ ಎಕ್ಸಲೆನ್ಸ್ ಅಭಿವೃದ್ಧಿಪಡಿಸಿದೆ. ಈ ಯಂತ್ರವು ಕಣ್ಗಾವಲು ಮತ್ತು ಮೇಲ್ವಿಚಾರಣೆ ಕಾರ್ಯಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಅದು ಕ್ಯಾಂಪಸ್‌ನಾದ್ಯಂತ ಮುಕ್ತವಾಗಿ ಚಲಿಸುತ್ತದೆ ಎಂದು ಹೇಳಿದ್ದರು.
ಇದನ್ನೂ ಓದಿ: 99 ವರ್ಷದ ವೃದ್ಧೆಯ ಕೊಲೆ ಮಾಡಿ ದರೋಡೆ: ಶವ ಕಬ್ಬಿಣದ ಪೆಟ್ಟಿಗೆಗೆ ತುಂಬಿ ಎಸ್ಕೇಪ್
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆದ ಸ್ವಲ್ಪ ಸಮಯದಲ್ಲೇ ಹಲವಾರು ವೀಕ್ಷಕರು ರೋಬೋಟ್ ನಾಯಿಯನ್ನು ಚೀನಾದ ರೊಬೊಟಿಕ್ಸ್ ಸಂಸ್ಥೆ ಯುನಿಟ್ರೀಯಿಂದ ಪಡೆಯಲಾಗಿದೆ ಎಂದು ಹೇಳಿಕೊಂಡರು. ಈ ಘಟನೆ ವಿವಾದಕ್ಕಿಡಾಗುತ್ತಿದ್ದಂತೆ ಗಾಲ್ಗೋಟಿಯಾಸ್ ವಿಶ್ವವಿದ್ಯಾನಿಲಯವು ಪತ್ರಿಕಾ ಪ್ರಕಟಣೆ ಹೊರಡಿಸಿ, ಈ ಶೃಂಗಸಭೆಯಲ್ಲಿ ಕಾಲೇಜಿನ ಪ್ರತಿನಿಧಿಯಾಗಿ ಭಾಗವಹಿಸಿದ್ದ ಪ್ರೊಫೆಸರ್ ನೇಹಾ ಸಿಂಗ್ ಅವರಿಗೆ ಇದರ ಬಗ್ಗೆ ಅರಿವಿರಲಿಲ್ಲ, ಕ್ಯಾಮೆರಾದ ಮುಂದೆ ಉತ್ಸಾಹದಲ್ಲಿ ಅವರು ತಪ್ಪು ಮಾಹಿತಿಯನ್ನು ನೀಡಿದ್ದಾರೆ ಅವರಿಗೆ ಮೀಡಿಯಾ ಮುಂದೆ ಮಾತನಾಡಲು ಅಧಿಕಾರವಿರಲಿಲ್ಲ ಎಂದು ಅದು ಹೇಳಿತ್ತು. ಘಟನೆಯ ನಂತರ ಸರ್ಕಾರವು ಶೃಂಗಸಭೆಯಿಂದ ಗಾಲ್ಗೋಟಿಯಾಸ್ ವಿವಿಯನ್ನು ಹೊರಗೆ ಕಳುಹಿಸಿತ್ತು ಜೊತೆಗೆ ಇಲ್ಲಿ ಪ್ರದರ್ಶಿಸುವವರು ತಮ್ಮದಲ್ಲದ ವಸ್ತುಗಳನ್ನು ಪ್ರದರ್ಶಿಸಬಾರದು ಎಂದು ಐಟಿ ಕಾರ್ಯದರ್ಶಿ ಎಸ್ ಕೃಷ್ಣನ್ ಎಲ್ಲಾ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ: ಅವಲಕ್ಕಿ ತೊಳಿದೇ ಬಳಸ್ತಿರಾ: ಹಾಗಿದ್ರೆ ಈ ವೀಡಿಯೋ ನೋಡಲೇ ಬೇಕು

