Asianet Suvarna News Asianet Suvarna News

ಜೈಲಲ್ಲಿ ಶಿಕ್ಷೆಯೊಂದಿಗೆ ಶಿಕ್ಷಣ ಮುಂದುವರಿಕೆ: ಐವರು ಕೈದಿಗಳಿಗೆ ಕುವೆಂಪು ವಿವಿ ಪದವಿ ಕಿರೀಟ..!

*  ಕುವೆಂಪು ವಿವಿಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆಯಲಿರುವ ಐದು ಮಂದಿ ಕೈದಿಗಳು
*  ಮೂವರು ಈಗಲೂ ಕೈದಿಗಳಾಗಿ ಶಿಕ್ಷೆ ಅನುಭವಿಸುತ್ತಿದ್ದರೆ, ಇಬ್ಬರು ಬಿಡುಗಡೆ
*  ಕೇಂದ್ರ ಕಾರಾಗೃಹದಲ್ಲಿನ ದೂರಶಿಕ್ಷಣ ಕೇಂದ್ರದಲ್ಲಿ ಪರೀಕ್ಷೆ ಬರೆದಿರುವ ಕೈದಿಗಳು
 

Five Prisoners Completed Their Degree From Kuvempu University in Shivamogga Jail grg
Author
Bengaluru, First Published Jun 4, 2022, 12:03 PM IST

ಗೋಪಾಲ್‌ ಯಡಗೆರೆ

ಶಿವಮೊಗ್ಗ(ಜೂ.04): ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸಿದ್ದ ಮತ್ತು ಈಗಲೂ ಅನುಭವಿಸುತ್ತಿರುವ ಐದು ಮಂದಿ ಕುವೆಂಪು ವಿಶ್ವವಿದ್ಯಾನಿಲಯ ದೂರಶಿಕ್ಷಣ ಕೇಂದ್ರದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿದ್ದು, ಜೂ.16ರಂದು ನಡೆಯುವ ಕುವೆಂಪು ವಿವಿ ಘಟಿಕೋತ್ಸವದಲ್ಲಿ ಪದವಿ ಪಡೆಯಲಿದ್ದಾರೆ.

ಕುವೆಂಪು ವಿವಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೈದಿಗಳು ಪದವಿ ಪಡೆದಿದ್ದು, ವಿವಿಯ ಕಿರೀಟಕ್ಕೆ ಇನ್ನೊಂದು ಗರಿ ಸಿಕ್ಕಂತಾಗಿದೆ. ಆದರೆ, ಶಿಕ್ಷೆ ಅನುಭವಿಸುತ್ತಿರುವ ಕೈದಿಗಳು ಘಟಿಕೋತ್ಸವಕ್ಕೆ ಬಂದು ಪದವಿ ಸ್ವೀಕರಿಸಲು ಸರ್ಕಾರ ವಿಶೇಷ ಅವಕಾಶ ಒದಗಿಸಿಕೊಡಬೇಕು. ಇದಾದರೆ ಇದೊಂದು ಇತಿಹಾಸವಾಗಿ ಕೂಡ ದಾಖಲಾಗಲಿದೆ.

ವಿಜಯಪುರದ ವಿಕಲಚೇತನರ ಪುನಶ್ಚೇತನ ಕೇಂದ್ರಕ್ಕೆ ಜಿಲ್ಲಾ ಪಂಚಾಯತ್ ಸಿಇಓ ಭೇಟಿ!

4 ವರ್ಷಗಳ ಹಿಂದೆ ಕೇಂದ್ರ ಕಾರಾಗೃಹದಲ್ಲಿಯೇ ದೂರಶಿಕ್ಷಣ ಕೇಂದ್ರ ಸ್ಥಾಪಿಸಿ ಆಸಕ್ತ ಕೈದಿಗಳು, ಕಾರಾಗೃಹದ ಸಿಬ್ಬಂದಿ ಹಾಗೂ ಕುಟುಂಬ ವರ್ಗದವರಿಗೆ ಪದವಿ ಪಡೆಯಲು ಅನುಕೂಲ ಮಾಡಿಕೊಟ್ಟಿದ್ದ ಕುವೆಂಪು ವಿವಿ ದೂರಶಿಕ್ಷಣ ವಿಭಾಗದ ಪ್ರಯತ್ನಕ್ಕೆ ಫಲ ಸಿಕ್ಕಂತಾಗಿದೆ. 2020 ರಲ್ಲಿಯೇ ಪದವಿ ಪೂರೈಸಿರುವ ಈ ಐದು ಮಂದಿಗೆ ಕೊರೋನಾ ನೀಡಿದ ಮುಕ್ತಿಯಿಂದಾಗಿ ಘಟಿಕೋತ್ಸವದಲ್ಲಿ ಪದವಿ ಘೋಷಣೆಯಾಗುವ ಭಾಗ್ಯ ದೊರಕಿದೆ.

ಐದು ಮಂದಿಯಲ್ಲಿ ಇಬ್ಬರು ಈಗಾಗಲೇ ಬಿಡುಗಡೆಯಾಗಿದ್ದಾರೆ. ಇನ್ನು ಮೂರು ಮಂದಿ ಇನ್ನೂ ಶಿಕ್ಷೆ ಅನುಭವಿಸುತ್ತಲೇ ಇದ್ದಾರೆ. ಆದರೆ, ಇವರು ಘಟಿಕೋತ್ಸವಕ್ಕೆ ಬಂದು ಪದವಿ ಪತ್ರ ಪಡೆಯಬಹುದೇ ಎಂಬುದು ಇನ್ನೂ ನಿರ್ಧಾರವಾಗಿಲ್ಲ.
4 ವರ್ಷಗಳ ಹಿಂದೆ ಆಗಿನ ಕುಲಪತಿ ಜೋಗನ್‌ ಶಂಕರ್‌ ಮತ್ತು ಕುಲಸಚಿವ ಭೋಜ್ಯಾನಾಯ್‌್ಕ ಹಾಗೂ ಕೇಂದ್ರ ಕಾರಾಗೃಹದ ಅಧೀಕ್ಷಕ ರಂಗನಾಥ್‌ ಅವರ ಆಸಕ್ತಿಯ ಫಲವಾಗಿ ಕೇಂದ್ರ ಕಾರಾಗೃಹದಲ್ಲಿ ದೂರ ಶಿಕ್ಷಣ ಕೇಂದ್ರ ಸ್ಥಾಪಿಸಲಾಯಿತು. ಕೈದಿಗಳು, ಕಾರಾಗೃಹದ ಸಿಬ್ಬಂದಿ ಹಾಗೂ ಅವರ ಕುಟುಂಬ ಸದಸ್ಯರು ಈ ಕೇಂದ್ರದ ಮೂಲಕ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗುವ ಉದ್ದೇಶ ಇತ್ತು. ಯುಜಿಸಿ ಮಾರ್ಗದರ್ಶನದ ಪ್ರಕಾರವೇ ಇದನ್ನು ಆರಂಭಿಸಿದೆ. ಅಧ್ಯಯನಕ್ಕೆ ಬೇಕಾದಂತೆ ಕಾರಾಗೃಹದಲ್ಲಿ ಲೈಬ್ರರಿ ಕೂಡ ಸ್ಥಾಪಿಸಲಾಗಿದೆ. ಕುವೆಂಪು ವಿವಿ ಬೇಕಾದ ಪಠ್ಯಗಳನ್ನು ಪೂರೈಸುತ್ತದೆ. ಜೊತೆಗೆ ಆಗಾಗ್ಗೆ ವಿವಿ ವ್ಯಾಪ್ತಿಯ ವಿವಿಧ ಕಾಲೇಜು ಮತ್ತು ಸ್ನಾತಕ ಕೇಂದ್ರದ ಉಪನ್ಯಾಸಕರು ಬೋಧನೆ ಮಾಡುತ್ತಿದ್ದರು.

ಸಧ್ಯ ಈ ಕೇಂದ್ರದಲ್ಲಿ ಆರು ಜನ ಸಜಾ ಬಂಧಿಗಳು ಮತ್ತು 21 ಜನ ಕಾರಾಗೃಹದ ಸಿಬ್ಬಂದಿ ಹಾಗೂ ಕುಟುಂಬ ವರ್ಗದವರು ಅಧ್ಯಯನ ನಡೆಸುತ್ತಿದ್ದು, ದ್ವಿತೀಯ ವರ್ಷದಲ್ಲಿದ್ದಾರೆ.

Ramanagara: ಸರ್ಕಾರಿ ಶಾಲೆಗಳಲ್ಲಿ ಪಾಠ ಮಾಡುವುದಕ್ಕೆ ಶಿಕ್ಷಕರೇ ಇಲ್ಲ: ಜಿಲ್ಲೆಯ 40 ಶಾಲೆಗಳಲ್ಲಿ ಶಿಕ್ಷಕರ ಕೊರತೆ

ಅವರು ಸ್ವತಃ ಪ್ರತಿಭೆಯಿಂದ ಪದವಿ ಪಡೆದಿದ್ದಾರೆ. ಘಟಿಕೋತ್ಸವದಲ್ಲಿ ಪದವಿ ಸ್ವೀಕರಿಸಲು ಅವರಿಗೆ ಎಲ್ಲ ರೀತಿಯ ಹಕ್ಕಿದೆ. ಆದರೆ ಅವರಲ್ಲಿ ಮೂರು ಮಂದಿ ಇನ್ನೂ ಕೈದಿಗಳಾಗಿ ಶಿಕ್ಷೆ ಅನುಭವಿಸುತ್ತಿರುವುದರಿಂದ ಸರ್ಕಾರ ವಿಶೇಷ ಅವಕಾಶ ಒದಗಿಸಬೇಕಾಗಿ ಬರುತ್ತದೆ. ಕೈದಿಗಳು ಸರ್ಕಾರಕ್ಕೆ ನೇರವಾಗಿ ಪತ್ರ ಬರೆದು ಅನುಮತಿ ಕೋರಬಹುದು. ವಿವಿಯ ಪರವಾಗಿ ನಾವು ಅವರನ್ನು ಕೂಡ ಘಟಿಕೋತ್ಸವಕ್ಕೆ ಸ್ವಾಗತಿಸುತ್ತೇವೆ ಅಂತ ಕುವೆಂಪು ವಿವಿ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಹೇಳಿದ್ದಾರೆ.  

ಈ ಐದು ಮಂದಿಯೂ ಅತ್ಯುತ್ತಮ ಸನ್ನಡೆಯನ್ನು ಹೊಂದಿದ್ದು, ವಿದ್ಯಾರ್ಜನೆಯಲ್ಲಿ ಉತ್ತಮ ಆಸಕ್ತಿ ಹೊಂದಿದ್ದರು. ನಿತ್ಯ ಅಧ್ಯಯನ ಮಾಡುತ್ತಿದ್ದರು. ತಮ್ಮ ಸಾಮರ್ಥ್ಯದ ಮೇಲೆ ಪದವಿ ಪಡೆದಿದ್ದಾರೆ ಅಂತ ಕುವೆಂಪು ವಿವಿ ಮತ್ತು ಕಾರಾಗೃಹದ ದೂರ ಶಿಕ್ಷಣ ಕೇಂದ್ರದ ಸಂಪರ್ಕಾಧಿಕಾರಿ ಪ್ರೊ.ಹಸೀನಾ ತಿಳಿಸಿದ್ದಾರೆ. 
 

Follow Us:
Download App:
  • android
  • ios