ಟು ವ್ಹೀಲರ್, ಕಾರು ಅಥವಾ ಆಟೋ ರಿಕ್ಷಾ ಸೇರಿದಂತೆ ಯಾವುದೇ ವಾಹನ ಖರೀದಿ ಮಾಡುತ್ತಿದ್ದೀರಾ? ಎಲೆಕ್ಟ್ರಿಕ್ ವಾಹನ ಖರೀದಿಸಿದರೆ ಸರ್ಕಾರದಿಂದ ಭರ್ಜರಿ ಕೊಡುಗೆ ನೀಡಲಾಗುತ್ತಿದೆ. ಹೊಸ ಇವಿ ಪಾಲಿಸಿದೆ ರಾಷ್ಟ್ರ ರಾಜಧಾನಿ ಸರ್ಕಾರ ಅನುಮೋದನೆ ನೀಡಿದೆ.

ನವದೆಹಲಿ (ಜೂ.29) ತೈಲ ಆಮದು ಕಡಿತಗೊಳಿಸಲಿ ಅವಲಂಬನೆ ತಪ್ಪಿಸಲು, ವಾಯು ಮಾಲಿನ್ಯ ಸೇರಿದಂತೆ ತೀವ್ರ ಆರೋಗ್ಯ ಸಮಸ್ಯೆಗಳಿಗೆ ಕಡಿವಾಣ ಹಾಕಲು ದೆಹಲಿ ಸರ್ಕಾರ ಮಹತ್ವದ ಇವಿ ಪಾಲಿಸಿಗೆ ಅನುಮೋದನೆ ನೀಡಿದೆ. ಬರೋಬ್ಬರಿ 1 ಲಕ್ಷ ರೂಪಾಯಿ ಸಬ್ಸಿಡಿ, ಎಲೆಕ್ಟ್ರಿಕ್ ವಾಹನ ಖರೀದಿ ವೇಳೆ ರಿಜಿಸ್ಟ್ರೇಶನ್ ಉಚಿತ ಸೇರಿದಂತೆ ಹಲವು ಕೊಡುಗೆಗಳನ್ನು ನೀಡುತ್ತಿದೆ. ವಿಶೇಷ ಅಂದರೆ ಜುಲೈ 1 ರಿಂದ ಈ ಹೊಸ ಪಾಲಿಸಿ ಜಾರಿಯಾಗುತ್ತಿದೆ. ಈ ಕುರಿತು ದೆಹಲಿ ಸರ್ಕಾರ ಮಹತ್ವದ ಘೋಷಣೆ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜುಲೈ1, 2026ರಿಂದ ಮಾರ್ಚ್ 31, 2030ರ ವರೆಗೆ ಎಲೆಕ್ಟ್ರಿಕ್ ವಾನಹ ಪಾಲಿಸಿ ಜಾರಿಯಲ್ಲಿರಲಿದೆ ಎಂದು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತ ಹೇಳಿದ್ದಾರೆ. ಇದರೊಂದಿಗೆ ದೆಹಲಿಯಲ್ಲಿ ಇಂಧನ ವಾಹನಗಳನ್ನು ಕಡಿತಗೊಳಿಸಿ ಎಲೆಕ್ಟ್ರಿಕ್ ವಾಹನಗಳ ಹೆಚ್ಚಿಸಲು ಭಾರಿ ಪ್ರಯತ್ನ ಮಾಡಲಾಗುತ್ತಿದೆ. ಇದರ ಭಾಗವಾಗಿ ಇದೀಗ ಇವಿ ಪಾಲಿಸಿ ತರಲಾಗಿದೆ.

ವಾಹನಗಳಿಗೆ ಸಬ್ಸಿಡಿ ಘೋಷಣೆ

ಜುಲೈ 1, 2026ರಿಂದ ಎಲೆಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರಿಗೆ ಮೂರು ಹಂತದಲ್ಲಿ ಸಬ್ಸಿಡಿ ನೀಡಲಾಗುತ್ತದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿದಾರರಿಗೆ 30,000 ರೂಪಾಯಿ,20,000 ರೂಪಾಯಿ ಹಾಗೂ 10,000 ರೂಪಾಯಿ ಮೊದಲ ವರ್ಷ, 2ನೇ ವರ್ಷ ಹಾಗೂ 3ನೇ ವರ್ಷ ನೀಡಲಾಗುತ್ತದೆ. ಇನ್ನು ಎಲೆಕ್ಟ್ರಿಕ್ ರಿಕ್ಷಾ ಖರೀದಿಸುವ ಗ್ರಾಹಕರು ಇದೇ ರೀತಿ ಮೂರು ವರ್ಷ 50,000 ರೂಪಾಯಿ, 40,000 ರೂಪಾಯಿ ಹಾಗೂ 30,000 ರೂಪಾಯಿ ಸಬ್ಸಿಡಿ ಪಡೆಯಲಿದ್ದಾರೆ. ವಿಶೇಷ ಅಂದರೆ ಎನ್1 ಕೆಟಗರಿ ಎಲೆಕ್ಟ್ರಿಕ್ ಟ್ರಕ್ ಖರೀದಿಸುವ ಗ್ರಾಹಕರಿಗೆ ಬರೋಬ್ಬರಿ 1 ಲಕ್ಷ ರೂಪಾಯಿ ಸಬ್ಸಿಡಿ ನೀಡಲಾಗುತ್ತದೆ. ಇನ್ನು BS-IV ಹಾಗೂ ಅದಕ್ಕಿಂತ ಹಳೇ ಎಮಿಷನ್ ವಾಹನಗಳನ್ನು ಸ್ಕಾಪ್‌ಗೆ ಹಾಕಿ ಹೊಸ ಎಲೆಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರಿ 1 ಲಕ್ಷ ರೂಪಾಯಿ ಇನ್ಸೆಂಟೀವ್ ನೀಡಲಾಗುತ್ತದೆ.

ಆದರೆ ಹೈಬ್ರಿಡ್ ವಾಹನಗಳಿಗೆ ಯಾವುದೇ ಸಬ್ಸಿಡಿ ನೀಡಲಾಗುವುದಿಲ್ಲ ಎಂದು ದೆಹಲಿ ಸರ್ಕಾರ ಸ್ಪಷ್ಟಪಡಿಸಿದೆ. ಈ ಇವಿ ಪಾಲಿಸಿ ಕೇವಲ ಶೂನ್ಯ ಎಮಿಶನ್ ವಾಹನಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ದೆಹಲಿ ಸರ್ಕಾರ ಹೇಳಿದೆ.

15,000 ಕೋಟಿ ರೂಪಾಯಿ ಹೂಡಿಕೆ

ದೆಹಲಿಯಲ್ಲಿ ವಾಯು ಮಾಲಿನ್ಯ ತಗ್ಗಿಸಲು ಈಗಿನಿಂದಲೇ ಪ್ರಯತ್ನ ಮಾಡಲಾಗುತ್ತದೆ. ಚಳಿಗಾಲ ಆರಂಭಗೊಳ್ಳುತ್ತಿದ್ದಂತೆ ದೆಹಲಿಯಲ್ಲಿ ವಾಯು ಮಾಲಿನ್ಯ ವಿಪರೀತವಾಗುತ್ತದೆ. ಹೀಗಾಗಿ ಅಕ್ಟೋಬರ್ ತಿಂಗಳಿನಿಂದ ದೆಹಲಿಯಲ್ಲಿ ಗಣನೀಯವಾಗಿ ವಾಯು ಮಾಲಿನ್ಯ ತಗ್ಗಿಸಲು ಇವಿ ವಾಹನಗಳಿಗೆ ಒತ್ತು ನೀಡಲಾಗುತ್ತದೆ. ಜೊತೆಗೆ ತೈಲ ಅವಲಂಬನೆಯೂ ಕಡಿಮೆಯಾಗಲಿದೆ ಎಂದು ರೇಖಾ ಗುಪ್ತ ಹೇಳಿದ್ದಾರೆ.ಮುಂದಿನ ನಾಲ್ಕು ವರ್ಷಗಳಲ್ಲಿ ದೆಹಲಿ ಸರ್ಕಾರ ಇವಿ ಪಾಲಿಸಿಗಾಗಿ ಬರೋಬ್ಬರಿ 15 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ. ಈ ಪೈಕಿ 7,000 ಕೋಟಿ ರೂಪಾಯಿಗಳನ್ನು ಸಬ್ಸಿಡಿಗಳಿಗೆ ನೀಡಲಾಗುತ್ತದೆ. ಇನ್ನುಳಿದ 8000 ರೂಪಾಯಿ ಮೊತ್ತವನ್ನು ಇವಿ ಮೂಲಭೂತ ಸೌಕರ್ಯ ಹೆಚ್ಚಿಸಲು ನೀಡಲಾಗುತ್ತದೆ. ದೆಹಲಿಯಲ್ಲಿ 32000 ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಶನ್ ಅಳವಡಿಕೆ ಕಾರ್ಯಗಳು ಪ್ರಗತಿಯಲ್ಲಿದೆ ಎಂದು ರೇಖಾ ಗುಪ್ತ ಹೇಳಿದ್ದಾರೆ.