ಮಂಗಳೂರು(ಅ.18): ಶಿಕ್ಷಕರ ಕೊರತೆಯಿಂದಾಗಿ ಉಪ್ಪಿನಂಗಡಿ ಸರ್ಕಾರಿ ಶಾಲೆಯ ಗೇಟ್‌ಗೆ ಬೀಗ ಬಿದ್ದಿದೆ. ವಿದ್ಯಾರ್ಥಿಗಳು ಬಂದರೂ ಶಿಕ್ಷಕರಿಲ್ಲದೆ ಪಾಠ ಪ್ರವಚನ ನಡೆಯದಂತಾಗಿದೆ.

ಉಪ್ಪಿನಂಗಡಿ ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಲು ಶಿಕ್ಷಕರ ಕೊರತೆಯನ್ನು ನೀಗಿಸಿ ಅಗತ್ಯ ಸಂಖ್ಯೆಯ ಶಿಕ್ಷಕರನ್ನು ಒದಗಿಸುವಂತೆ ಆಗ್ರಹಿಸಿ ಉಪ್ಪಿನಂಗಡಿಯ ಸರ್ಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಎಸ್‌ಡಿಎಂಸಿ, ಪೋಷಕರು ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಬೆಂಬಲದೊಂದಿಗೆ ಗುರುವಾರ ಶಾಲಾ ಗೇಟ್‌ಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ.

ನ್ಯಾಯಾಲಯಕ್ಕೂ ಮಾಧ್ಯಮ ಪ್ರವೇಶ ಅಗತ್ಯ: ನ್ಯಾ.ಸಂತೋಷ್‌ ಹೆಗ್ಡೆ

ಪ್ರತಿಭಟನಾ ಸ್ಥಳಕ್ಕೆ ಇಲಾಖಾಧಿಕಾರಿಗಳು ಯಾರೂ ಆಗಮಿಸದ್ದರಿಂದ ಆಕ್ರೋಶಗೊಂಡ ಪೋಷಕರು, ಶಿಕ್ಷಕರ ಕೊರತೆಯನ್ನು ನೀಗಿಸುವವರೆಗೆ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಗುರುವಾರ ಶಾಲೆಗೆ ಬಂದ ವಿದ್ಯಾರ್ಥಿಗಳು ತರಗತಿ ಕೊಠಡಿಗಳನ್ನು ಬಹಿಷ್ಕರಿಸಿ, ಪೋಷಕರೊಂದಿಗೆ ಶಾಲಾ ಪ್ರಧಾನ ಗೇಟಿನ ಮುಂದುಗಡೆ ಪ್ರತಿಭಟನೆ ನಡೆಸಿದ್ದಾರೆ.

ಈ ಸಂದರ್ಭ ಮಾತನಾಡಿದ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಮೊಯ್ದೀನ್‌ ಕುಟ್ಟಿ, ಇಲ್ಲಿದ್ದ 11 ಶಿಕ್ಷಕರಲ್ಲಿ ಇಬ್ಬರನ್ನು ವರ್ಗಾವಣೆಗೊಳಿಸಲಾಗಿದ್ದು, ಓರ್ವರು ಹೆರಿಗೆ ರಜೆಯಲ್ಲಿ ಹೋಗಿದ್ದಾರೆ. ವರ್ಗಾವಣೆಗೊಂಡಿರುವ ಇಬ್ಬರು ಶಿಕ್ಷಕರು ಕೂಡಾ ಒಂದನೇ ತರಗತಿಯ ಆಂಗ್ಲ ಮಾಧ್ಯಮ ತರಗತಿಗೆ ಪ್ರಸಕ್ತ ವರ್ಷ ತರಬೇತಿಯನ್ನು ಪಡೆದವರು. ಇದರಿಂದಾಗಿ ಇಲ್ಲಿ ಈಗ ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕಿ ಸೇರಿದಂತೆ ಒಟ್ಟು 8 ಮಂದಿ ಶಿಕ್ಷಕರು ಮಾತ್ರ ಇದ್ದಾರೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ, ಗುಣಮಟ್ಟದ ಶಿಕ್ಷಣಕ್ಕೆ, ಮಕ್ಕಳ ಸುರಕ್ಷತೆಗೆ ಹಾಗೂ ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ನಾವು ಮಾಡುತ್ತಿರುವ ಪ್ರಯತ್ನಕ್ಕೆ ತೀವ್ರ ಹಿನ್ನೆಡೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಹೊಳೆಗೆ ಬಿದ್ದ ಗೆಳೆಯನನ್ನು ರಕ್ಷಿಸಲು ಹೋಗಿ ಇಬ್ಬರೂ ನೀರು ಪಾಲು

ಮಧ್ಯಾಹ್ನ 12 ಗಂಟೆಯವರೆಗೆ ನಾವು ಶಾಲಾ ಗೇಟ್‌ನ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದು, ಶಿಕ್ಷಣ ಇಲಾಖೆಯಿಂದ ಯಾರೊಬ್ಬರೂ ಕೂಡ ಸ್ಥಳಕ್ಕಾಗಮಿಸಿ ನಮ್ಮ ಅಹವಾಲನ್ನು ಕೇಳಿಲ್ಲ. ಬಳಿಕ ಪೋಷಕರೊಂದಿಗೆ ಸಭೆ ನಡೆಸಿರುವ ನಾವು ಎರಡು ದಿನಗಳ ಕಾಲ ಮಕ್ಕಳನ್ನು ಶಾಲೆಗೆ ಕಳುಹಿಸದಿರಲು ತೀರ್ಮಾನಿಸಿದ್ದೇವೆ. ನಂತರವೂ ಇಲಾಖೆಯಿಂದ ಸ್ಪಂದನೆ ದೊರಕದಿದ್ದರೆ, ಅ.21ರಂದು ಮಕ್ಕಳ ಸಹಿತ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಸಿಕ್ಕಾಪಟ್ಟೆ ಜಾಮ್, ಕಾರಿನಿಂದಿಳಿದು ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಖಾದರ್.

ಪ್ರತಿಭಟನೆಯಲ್ಲಿ ಕೆಮ್ಮಾರ ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಸಲೀಕತ್‌ ಖಾನ್‌, ಉಪ್ಪಿನಂಗಡಿ ಹಿರಿಯ ಪ್ರಾಥಮಿಕ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಜಯಕುಮಾರ್‌ ಕಲ್ಲಳಿಕೆ, ಕಾರ್ಯದರ್ಶಿ ಝಕಾರಿಯಾ ಕೊಡಿಪ್ಪಾಡಿ, ಸದಸ್ಯರಾದ ಮಜೀದ್‌, ಮುಸ್ತಾಫ ಜಿ.ಎಂ., ಇಬ್ರಾಹಿಂ, ಕಿಶೋರ್‌ ನೆಕ್ಕಿಲಾಡಿ, ಹರೀಶ್‌ ಪೆದಮಲೆ, ಸುಲೈಮಾನ್‌, ಫಾತಿಮತ್‌ ಝೋಹಾರ, ಪುಷ್ಪಲತಾ, ವನಜಾಕ್ಷಿ, ಶೀಲಾವತಿ ಮತ್ತಿತರರು ಉಪಸ್ಥಿತರಿದ್ದರು.

ಶಿಕ್ಷಕರಿಗೂ ತಡೆಯೊಡ್ಡಿದ ಪ್ರತಿಭಟನಾಕರರು: ಬೆಳಗ್ಗೆ 9 ಗಂಟೆಯಿಂದಲೇ ಪ್ರತಿಭಟನೆ ಆರಂಭವಾಗಿದ್ದು, 9.30ರ ವೇಳೆಗೆ ಮುಖ್ಯ ಶಿಕ್ಷಕಿ ಸಹಿತ ಕೆಲವು ಶಿಕ್ಷಕರು ಶಾಲೆಗೆ ಆಗಮಿಸುತ್ತಿದ್ದಂತೆಯೇ ಪ್ರತಿಭಟನಾಕಾರರು ಶಾಲಾ ಗೇಟಿಗೆ ಬೀಗ ಜಡಿದರು. ಶಿಕ್ಷಕರು ಶಾಲೆಯೊಳಗೆ ಪ್ರವೇಶಿಸದಂತೆ ತಡೆಯೊಡ್ಡಿದರು. ಆ ವೇಳೆ ಸ್ಥಳಕ್ಕಾಗಮಿಸಿದ ಎಸೈ ನಂದಕುಮಾರ್‌ ಸರ್ಕಾರಿ ಸೇವೆಗೆ ಅಡ್ಡಿಪಡಿಸಿದರೆ ಕಠಿಣ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದಾಗ ಶಿಕ್ಷಕರಿಗೆ ಶಾಲಾ ಆವರಣ ಪ್ರವೇಶಿಸಲು ಅವಕಾಶ ಕಲ್ಪಿಸಲಾಯಿತು.

ಲಂಚಕ್ಕೆ ಬೇಡಿಕೆ ಇಟ್ಟವರನ್ನು ಸ್ಥಳದಲ್ಲೇ ಅಮಾನತು ಮಾಡಿದ ಸಚಿವ