ಮಂಗಳೂರು(ಅ.18): ಮಂಗಳೂರು ವಿದ್ಯುತ್‌ ಸರಬರಾಜು ಕಂಪನಿ(ಮೆಸ್ಕಾಂ) ಈಗ ಸಾಮಾಜಿಕ ಜಾಲತಾಣಗಳಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಂಡಿದೆ. ವೆಬ್‌ಸೈಟ್‌ ಮಾತ್ರವಲ್ಲದೆ, ಫೇಸ್‌ಬುಕ್‌, ಯೂಟ್ಯೂಬ್‌, ಟ್ವಿಟರ್‌ ಹಾಗೂ ವಾಟ್ಸ್‌ಆ್ಯಪ್‌ನಲ್ಲೂ ಸಕ್ರಿಯವಾಗಿದೆ. ಈ ಮೂಲಕ ದ.ಕ, ಉಡುಪಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ಗ್ರಾಹಕರಿಗೆ ತಕ್ಷಣದಲ್ಲಿ ಸ್ಪಂದಿಸಲು ಸಾಧ್ಯವಾಗಲಿದೆ.

ಮೆಸ್ಕಾಂ ತನ್ನ ಹೆಸರಿನಲ್ಲಿ ಫೇಸ್‌ಬುಕ್‌(ಮೆಸ್ಕಾಂ ಕರ್ನಾಟಕ), ಯೂಟ್ಯೂಬ್‌ ಹಾಗೂ ಟ್ವಿಟರ್‌(ಮೆಸ್ಕಾಂ ಆಫೀಶಿಯಲ್‌) ಖಾತೆಯನ್ನು ಬಹಳ ಹಿಂದೆಯೇ ಹೊಂದಿತ್ತು. ಆದರೆ ಅದು ಸಕ್ರಿಯವಾಗಿ ಇರಲಿಲ್ಲ. ಇದೀಗ ವಾಟ್ಸ್‌ಆ್ಯಪ್‌ನ್ನೂ ಸೇರ್ಪಡೆಗೊಳಿಸಿದ್ದು, ಗ್ರಾಹಕರ ಕುಂದುಕೊರತೆಗೆ ಸ್ಪಂದಿಸಲು ಸುಲಭವಾಗಲಿದೆ ಎನ್ನುತ್ತಾರೆ ಮೆಸ್ಕಾಂ ಅಧಿಕಾರಿಗಳು.

ಏನೇನು ಸ್ಪಂದನ?:

ಪ್ರಮುಖವಾಗಿ ಮೆಸ್ಕಾಂ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ವಿದ್ಯುತ್‌ ನಿಲುಗಡೆಯಾಗುತ್ತದೆ? ಗ್ರಾಹಕರಿಗೆ ನೀಡುವ ಸೂಚನೆಗಳು, ತುರ್ತು ಪ್ರಕಟಣೆಗಳನ್ನು ಟ್ವಿಟರ್‌ನಲ್ಲಿ ಟ್ವೀಟ್‌ ಮಾಡಲಾಗುತ್ತದೆ. ಇದೇ ರೀತಿ ಫೇಸ್‌ಬುಕ್‌ನಲ್ಲೂ ಪೋಸ್ಟ್‌ ಮಾಡುತ್ತಾರೆ. ಸದಾ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಗ್ರಾಹಕರಿಗೆ ಇದರಿಂದ ಉಪಯುಕ್ತವಾಗಲಿದೆ. ಇದಲ್ಲದೆ ವಿದ್ಯುತ್‌ ಲೈನ್‌, ವಿದ್ಯುತ್‌ ಸಂಪರ್ಕ, ವಿದ್ಯುತ್‌ ಬಿಲ್‌, ಸಬ್‌ಸ್ಟೇಷನ್‌ ತೊಂದರೆ ಸೇರಿದಂತೆ ಯಾವುದೇ ಕುಂದುಕೊರತೆಗಳಿದ್ದರೆ, ಅದನ್ನು ಜಾಲತಾಣಗಳಲ್ಲಿ ಹಂಚಿಕೊಳ್ಳಲು ಗ್ರಾಹಕರಿಗೆ ಮೆಸ್ಕಾಂ ಮುಕ್ತ ಅವಕಾಶವನ್ನು ಕಲ್ಪಿಸಿದೆ.

ಫೋಟೋ ಅಪ್‌ಲೋಡ್ ಮಾಡಿ, ಸಮಸ್ಯೆ ಹೇಳಿ

ಜಾಲತಾಣಗಳ ಮೂಲಕ ಕೇಳುವ ಪ್ರಶ್ನೆಗಳಿಗೂ ಮೆಸ್ಕಾಂ ಸೂಕ್ತವಾಗಿ ಸ್ಪಂದಿಸಲಿದೆ. ಗ್ರಾಹಕರು ವಿದ್ಯುತ್‌ ಸಮಸ್ಯೆಗೆ ಸಂಬಂಧಿಸಿದ ಫೋಟೋಗಳನ್ನು ಕೂಡ ಅಪ್‌ಲೋಡ್‌ ಮಾಡಿ ಸಮಸ್ಯೆಯನ್ನು ಕೇಳಿಕೊಳ್ಳಲು ಅವಕಾಶ ನೀಡಲಾಗಿದೆ. ಕೇವಲ ವೆಬ್‌ಸೈಟ್‌ ಮಾತ್ರವಲ್ಲ ಜಾಲತಾಣಗಳ ಮೂಲಕ ಎಲ್ಲ ಮಗ್ಗಲುಗಳಿಂದಲೂ ಗ್ರಾಹಕರಿಗೆ ಸ್ಪಂದನ ಸಿಗಬೇಕು ಎನ್ನುವುದು ಮೆಸ್ಕಾಂನ ನಿಲುವು.

ನ್ಯಾಯಾಲಯಕ್ಕೂ ಮಾಧ್ಯಮ ಪ್ರವೇಶ ಅಗತ್ಯ: ನ್ಯಾ.ಸಂತೋಷ್‌ ಹೆಗ್ಡೆ

ಯೂಟ್ಯೂಬ್‌ ಮೂಲಕ ಕಿರು ಚಿತ್ರವನ್ನು ನಿರ್ಮಿಸಿದ್ದು, ವಿದ್ಯುತ್‌ ಸುರಕ್ಷತೆಯ ಬಗ್ಗೆ ಮುನ್ನೆಚ್ಚರಿಕೆ ನೀಡುತ್ತದೆ. ಸುಮಾರು 3.54 ನಿಮಿಷದ ಈ ಕಿರು ಚಿತ್ರದಲ್ಲಿ ವಿದ್ಯುತ್‌ ಅವಘಡದಿಂದ ಪಾರಾಗುವ ಹಾಗೂ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಬಗ್ಗೆ ಹೇಳಲಾಗಿದೆ. ಇದರ ಕೊನೆಯಲ್ಲಿ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ವಿದ್ಯುತ್‌ ಸುರಕ್ಷತೆ ಬಗ್ಗೆ ಕಳಕಳಿ ವ್ಯಕ್ತಪಡಿಸುವ ಮಾತು ಇದೆ.

ಕರಾವಳಿ ಹಾಗೂ ಮಲೆನಾಡಿನ ನಾಲ್ಕು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಮೆಸ್ಕಾಂನಲ್ಲಿ 26 ಲಕ್ಷ ಗ್ರಾಹಕರಿದ್ದಾರೆ. ಇದರಲ್ಲಿ ಶೇ.60ರಷ್ಟುಮಂದಿಯನ್ನು ಮೆಸ್ಕಾಂ ಈಗಾಗಲೇ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಸಿಕೊಂಡಿದೆ.

ಇಲ್ಲಿ ಕರೆ ಅಥವಾ ಎಸ್‌ಎಂಎಸ್‌ ಮಾತ್ರ

ಜಾಲತಾಣಗಳ ಸಾಲಿಗೆ ವಾಟ್ಸ್‌ಆ್ಯಪ್‌ನ್ನೂ ಸೇರ್ಪಡೆಗೊಳಿಸಿರುವ ಮೆಸ್ಕಾಂ, ಸಹಾಯವಾಣಿಗೆ ಕರೆ ಮಾಡುವ ಮೂಲಕ ಗ್ರಾಹಕರು ದೂರು ದಾಖಲಿಸಬಹುದು. ಇಲ್ಲವೇ ವಾಟ್ಸ್‌ಆ್ಯಪ್‌ ನಂಬರಿಗೆ ಎಸ್‌ಎಂಎಸ್‌ ಕೂಡ ಕಳುಹಿಸುವ ಅವಕಾಶ ನೀಡಿದೆ.

ಸಿಕ್ಕಾಪಟ್ಟೆ ಜಾಮ್, ಕಾರಿನಿಂದಿಳಿದು ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಖಾದರ್

ಮೆಸ್ಕಾಂ ಗ್ರಾಹಕರು 1912 ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಿದರೆ, ತ್ವರಿತವಾಗಿ ಸ್ಪಂದಿಸಲಾಗುತ್ತದೆ. ಇಲ್ಲವೇ ವಾಟ್ಸಾಪ್‌, ಎಸ್‌ಎಂಎಸ್‌ ಮಾಡುವವರು 9483041912 ನಂಬರಿಗೆ ಕಳುಹಿಸಬಹುದು. ತಕ್ಷಣವೇ ದೂರುದಾರರಿಗೆ ಕರೆ ಮಾಡಿ ದೂರಿನ ಸಮಗ್ರ ಮಾಹಿತಿಯನ್ನು ಪಡೆದು ಸಂಬಂಧಿಸಿದ ವಿಭಾಗಕ್ಕೆ ಕಳುಹಿಸುತ್ತಾರೆ. ಈÜ ಮಾಹಿತಿಯನ್ನುಮೇಲಧಿಕಾರಿಗಳಿಗೂ ಕಳುಹಿಸುತ್ತಾರೆ. ಹಾಗಾಗಿ ಇಲ್ಲಿ ಮೆಸ್ಕಾಂನ ಕೆಳಹಂತದ ಸಿಬ್ಬಂದಿ ಕಾರ್ಯಲೋಪ ಎಸಗುವಂತಿಲ್ಲ. ದೂರಿನ ಬಗ್ಗೆ ಪ್ರಗತಿಯನ್ನು ಹಂತಹಂತವಾಗಿ ಗ್ರಾಹಕರಿಗೆ ಎಸ್‌ಎಂಎಸ್‌ ಮೂಲಕ ರವಾನಿಸಲಾಗುತ್ತದೆ.

ಶಿಕ್ಷಕರಿಲ್ಲ: ಸರ್ಕಾರಿ ಶಾಲೆ ಗೇಟ್‌ಗೆ ಬಿತ್ತು ಬೀಗ..!

ಇದಲ್ಲದೆ ಮೆಸ್ಕೋ ಡಾನ್‌ ಇನ್‌ ಎಂಬ ವೆಬ್‌ಸೈಟ್‌ ಮೂಲಕವೂ ಲಾಗಿನ್‌ ಆಗಿ ದೂರು ಸಲ್ಲಿಸಲು ಗ್ರಾಹಕರಿಗೆ ಅವಕಾಶವಿದೆ ಎಂದು ಮೆಸ್ಕಾಂನ ತಾಂತ್ರಿಕ ವಿಭಾಗದ ಅಧಿಕಾರಿ ರೋಹಿತ್‌ ಹೇಳುತ್ತಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಬಹಳಷ್ಟುಮಂದಿ ಗ್ರಾಹಕರಿದ್ದಾರೆ. ಮೆಸ್ಕಾಂ ಕೂಡ ಜಾಲತಾಣಕ್ಕೆ ಪ್ರವೇಶಿಸಿದ ಕಾರಣ ಗ್ರಾಹಕರಿಗೆ ಇದರಿಂದ ಕುಂದುಕೊರತೆ ಹೇಳಿಕೊಳ್ಳಲು, ಗ್ರಾಹಕರೊಂದಿಗೆ ಸಂಪರ್ಕ ಬೆಳೆಸಲು ಸುಲಭವಾಗಲಿದೆ ಎಂದು ಮೆಸ್ಕಾಂ ತಾಂತ್ರಿಕ ನಿರ್ದೇಶಕ ರಘುಪ್ರಕಾಶ್‌ ಹೇಳಿದ್ದಾರೆ.

-ಆತ್ಮಭೂಷಣ್‌