ಜಮ್ಮು ಕಾಶ್ಮೀರದ ಪ್ರವಾಸಿ ತಾಣ ಸೋನಾಮಾರ್ಗ್‌ನಲ್ಲಿ ಭಾರಿ ಹಿಮಪಾತ ಸಂಭವಿಸಿದ್ದು, ಹಿಮದ ಪ್ರವಾಹವು ಹಲವು ಮನೆಗಳು ಮತ್ತು ವಾಹನಗಳನ್ನು ಸಮಾಧಿ ಮಾಡಿದೆ. ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕ್ಷಣಾರ್ಧದಲ್ಲಿ ಮನೆಗಳ ಸಮಾಧಿ ಮಾಡಿದ ಹಿಮಪಾತ
ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶಗಳಲ್ಲಿ ಹಿಮಪಾತ ತೀವ್ರವಾಗಿದ್ದು, ನೀರಿನ ಪ್ರವಾಹದಂತೆ ಹಿಮವೂ ಅಪ್ಪಳಿಸಿ ಬಂದು ಹಿಮದೊಳಗೆ ಹಲವು ಮನೆಗಳನ್ನು ಸಮಾಧಿ ಮಾಡಿದೆ. ಜಮ್ಮುಕಾಶ್ಮೀರದ ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾದ ಸೋನಾಮಾರ್ಗ್‌ನಲ್ಲಿ ಈ ಘಟನೆ ನಡೆದಿದೆ. ಒಮ್ಮೆಲೇ ಅಪ್ಪಳಿಸಿ ಬಂದ ಹಿಮದ ಬಿರುಗಾಳಿಯೂ ಅಲ್ಲಿದ್ದ ಮನೆ ಹೊಟೇಲ್‌ಗಳತ್ತ ಮುನ್ನುಗ್ಗಿದ್ದು, ಅವುಗಳನ್ನು ಹಿಮದೊಳಗೆಯೇ ಸಮಾಧಿ ಮಾಡಿದೆ.
ಮಂಗಳವಾರ ರಾತ್ರಿ 10.12ರ ಸುಮಾರಿಗೆ ಈ ಘಟನೆ ನಡೆದಿದ್ದು, ಸೋನಾಮಾರ್ಗ್‌ನ ಸರ್ಬಲ್ ಪ್ರದೇಶದಲ್ಲಿ ಹಿಮವೂ ಪ್ರವಾಹದಂತೆ ಮನೆಗಳಿಗೆ ಅಪ್ಪಳಿಸಿದೆ. ಈ ಘಟನೆಯಿಂದಾಗಿ ಮನೆಗಳು ಹಾಗೂ ವಾಹನಗಳಿಗೆ ತೀವ್ರ ಹಾನಿಯಾಗಿದೆ. ಆದರೆ ಸಾವು ನೋವು ಸಂಭವಿಸಿದ ಬಗ್ಗೆ ಗಾಯಗಳಾದ ಬಗ್ಗೆ ಯಾವುದೇ ವರದಿಯಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಚುಮು ಚುಮು ಚಳಿಗೆ ಮ್ಯಾಗಿ ತಯಾರಿಸಿ ಮಾರಿದ ಹುಡುಗ ಒಂದೇ ದಿನದಲ್ಲಿ ಗಳಿಸಿದ ಆದಾಯ ನೋಡಿ ನೆಟ್ಟಿಗರ ಅಚ್ಚರಿ..!
ಪ್ರಕೃತಿಯ ರೌದ್ರ ರಮಣೀಯ ದೃಶ್ಯವು ಸ್ಥಳೀಯ ಕಟ್ಟಡವೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಿಮಪಾತದ ತೀವ್ರತೆಯ ಹೊರತಾಗಿಯೂ, ಯಾವುದೇ ಜೀವಹಾನಿ ಸಂಭವಿಸಿದ ವರದಿಗಳಿಲ್ಲ ಎಂದು ಅಧಿಕಾರಿಗಳು ಪುನರುಚ್ಚರಿಸಿದ್ದಾರೆ. ಕಣಿವೆಯಾದ್ಯಂತ ನಿರಂತರ ಹಿಮಪಾತದ ನಂತರ ಸೋಮವಾರ ಈ ಪ್ರದೇಶಕ್ಕೆ ಹೆಚ್ಚಿನ ತೀವ್ರತೆಯ ಹಿಮಪಾತವಾಗುವ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು.
ಮಂಗಳವಾರ ಕಾಶ್ಮೀರದಾದ್ಯಂತ ಮತ್ತೆ ಹಿಮಪಾತದಿಂದಾಗಿ ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಮುಚ್ಚಲ್ಪಟ್ಟಿದ್ದು, ಶ್ರೀನಗರ ವಿಮಾನ ನಿಲ್ದಾಣದಿಂದ ಎಲ್ಲಾ ವಿಮಾನಗಳ ಹಾರಾಟ ರದ್ದಾಗಿತ್ತು, ಇದರಿಂದಾಗಿ ನೂರಾರು ಪ್ರವಾಸಿಗರು ಕಣಿವೆಯಲ್ಲಿ ಸಿಲುಕಿಕೊಂಡರು.
ಇದನ್ನೂ ಓದಿ: ಜಮ್ಮುಕಾಶ್ಮೀರದಲ್ಲಿ ತೀವ್ರ ಹಿಮಪಾತ: ತುರ್ತು ಚಿಕಿತ್ಸೆ ನೀಡಲು ಜೇಸಿಬಿ ಬಳಸಿ ಆಸ್ಪತ್ರೆ ತಲುಪಿದ ವೈದ್ಯರು
ಸೋಮವಾರ ತಡರಾತ್ರಿ ಹಿಮಪಾತ ಆರಂಭವಾಗಿ ಇಡೀ ಪ್ರದೇಶವನ್ನು ಹಿಮ ಆವರಿಸಿತ್ತು. ಖಾಜಿಗುಂಡ್ ಮತ್ತು ಬನಿಹಾಲ್‌ನಲ್ಲಿರುವ ನವಯುಗ್ ಸುರಂಗದ ಬಳಿ ಹಿಮ ರಾಶಿ ಬಿದ್ದಿದ್ದರಿಂದ ರಾಷ್ಟ್ರೀಯ ಹೆದ್ದಾರಿ 44 ಅನ್ನು ಸ್ಥಗಿತಗೊಳಿಸಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, 29 ಆಗಮನ ಮತ್ತು 29 ನಿರ್ಗಮನಗಳು ಸೇರಿದಂತೆ ಎಲ್ಲಾ 58 ನಿಗದಿತ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಹಿಮಪಾತವು ದಿನವಿಡೀ ಮುಂದುವರಿದ ಕಾರಣ ರನ್‌ವೇಯನ್ನು ಸುರಕ್ಷಿತವಾಗಿ ಬಳಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.


