ಇಂಧನ ಮತ್ತು ಬಸ್‌ಗಳ ಕೊರತೆ ನೀಗಿಸಿ, ಸುಸ್ಥಿರ ಸಾರಿಗೆ ಒದಗಿಸಲು ಕರ್ನಾಟಕ ಸಾರಿಗೆ ಸಂಸ್ಥೆ ಗ್ರಾಮೀಣ ಭಾಗಗಳಲ್ಲೂ ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. 'ಕರ್ನಾಟಕ ಎಲೆಕ್ಟ್ರಿಕಲ್ ಬಸ್ ಪ್ರೋಗ್ರಾಮ್' ಅಡಿಯಲ್ಲಿ, ಮೊದಲ ಹಂತದಲ್ಲಿ 1,950 ಬಸ್‌ಗಳನ್ನು ತರಲು ಯೋಜಿಸಲಾಗಿದೆ.

ಆತ್ಮಭೂಷಣ್

ಮಂಗಳೂರು: ಇಂಧನ ಕೊರತೆ ಎದುರಿಸಲು ಹಾಗೂ ಬಸ್‌ಗಳ ಕೊರತೆಗೆ ಪರಿಹಾರವಾಗಿ ಮತ್ತು ಸುಸ್ಥಿರ ಸಾರಿಗೆ ಸೇವೆ ನೀಡಲು ಮುಂದಾಗಿರುವ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಗ್ರಾಮೀಣ ಭಾಗಗಳಲ್ಲೂ ಎಲೆಕ್ಟ್ರಿಕ್‌ ಬಸ್‌ ಓಡಿಸಲು ಸಿದ್ಧತೆ ಆರಂಭಿಸಿದೆ.

ಈಗಾಗಲೇ ಕರ್ನಾಟಕದಲ್ಲಿ ವ್ಯಾಪಕ ಪ್ರಶಂಸೆಗೆ ಒಳಗಾಗಿರುವ ಸರ್ಕಾರದ ಗ್ಯಾರಂಟಿ ಸ್ಕೀಂನ ಮಹಿಳೆಯರ ‘ಶಕ್ತಿ’ ಉಚಿತ ಬಸ್‌ ಪ್ರಯಾಣ ಯೋಜನೆಗೆ ಇನ್ನಷ್ಟು ಸಹಕಾರಿ ಆಗುವ ದಿಶೆಯಲ್ಲಿ ಕೇಂದ್ರ ಸರ್ಕಾರದ ಪಿಎಂ ಇ- ಬಸ್‌ ಯೋಜನೆಯ ಮಾದರಿಯಲ್ಲೇ ರಾಜ್ಯ ಸರ್ಕಾರ ಕೂಡ ಕರ್ನಾಟಕ ಎಲೆಕ್ಟ್ರಿಕಲ್‌ ಬಸ್‌ ಪ್ರೋಗ್ರಾಮ್‌(ಕೆಇಬಿಪಿ) ಯೋಜನೆಯನ್ನು ರಾಜ್ಯಾದ್ಯಂತ ಜಾರಿಗೆ ತರಲು ಚಿಂತನೆ ನಡೆಸಿದೆ.ಪ್ರಸಕ್ತ ಜಾಗತಿಕವಾಗಿ ಮಧ್ಯಪ್ರಾಚ್ಯದಲ್ಲಿ ಯುದ್ಧಾತಂಕದ ನಡುವೆಯೇ ಭವಿಷ್ಯದ ದಿನಗಳಲ್ಲಿ ಪೆಟ್ರೋಲಿಯಂ ಇಂಧನ ಬದಲು ಎಲೆಕ್ಟ್ರಿಕಲ್‌ ಸಾರಿಗೆಗೆ ಒತ್ತು ನೀಡುವ ದಿಶೆಯಲ್ಲಿ ಇದು ಮಹತ್ವದ ಹೆಜ್ಜೆಯಾಗುವ ಸಾಧ್ಯತೆ ಇದೆ.

ಈ ಯೋಜನೆ ಆರಂಭಿಕ ಹಂತದಲ್ಲಷ್ಟೇ ಇದ್ದು, ಇನ್ನೂ ಅಂತಿಮ ರೂಪ ಪಡೆದಿಲ್ಲ. ಆದರೂ ಕೆಲವೇ ದಿನಗಳಲ್ಲಿ ಮೂರ್ತರೂಪ ಪಡೆದುಕೊಂಡು ಜನಪ್ರಿಯ ಯೋಜನೆಯಾಗಿ ಇದನ್ನು ಕಾರ್ಯಗತಗೊಳಿಸಲು ರಸ್ತೆ ಸಾರಿಗೆ ನಿಗಮ ಚಿಂತನೆ ನಡೆಸುತ್ತಿದೆ. ಸಣ್ಣಪುಟ್ಟ ಬದಲಾವಣೆಯೊಂದಿಗೆ ಈ ಯೋಜನೆ ಜಾರಿಗೊಂಡರೆ ಗ್ರಾಮೀಣ ಭಾಗಗಳಲ್ಲೂ ಎಲೆಕ್ಟ್ರಿಕಲ್‌ ಬಸ್‌ ಓಡಿಸುವ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೂ ಕರ್ನಾಟಕ ಪಾತ್ರವಾಗಲಿದೆ.

ಏನಿದು ಯೋಚನೆ?:

ಈಗಿನ ಚಿಂತನೆ ಪ್ರಕಾರ ಇಡೀ ರಾಜ್ಯದಲ್ಲಿ ಮೊದಲ ಹಂತದಲ್ಲಿ 1,950 ಎಲೆಕ್ಟ್ರಿಕಲ್‌ ಬಸ್‌ಗಳನ್ನು ಹಂಚಿಕೆ ಮಾಡಲು ಯೋಚನೆ ನಡೆಸಲಾಗಿದೆ. ಈ ಮೂಲಕ ಗ್ರಾಮೀಣ ಭಾಗಗಳಲ್ಲೂ ಇ ಬಸ್‌ ಸಂಚಾರ ಏರ್ಪಡಿಸುವ ಇದರ ಉದ್ದೇಶಗಳಲ್ಲೊಂದು.

ಆರಂಭಿಕ ಚಿಂತನೆ ಪ್ರಕಾರ ಜಿಲ್ಲಾ ಅಥವಾ ತಾಲೂಕು ಕೇಂದ್ರಗಳಲ್ಲಿ ಕನಿಷ್ಠ ಒಂದು ಎಕರೆಯಲ್ಲಿ ಇ-ಬಸ್‌ ನಿಲ್ದಾಣಕ್ಕೆ ಜಾಗ ನಿಗದಿಪಡಿಸಬೇಕು. ಅಲ್ಲಿ ‘ಹಸಿರು ಘಟಕ’ ಸ್ಥಾಪಿಸಬೇಕು. ಅಂದರೆ ಇ-ಬಸ್‌ ಚಾರ್ಜಿಂಗ್‌ ಮತ್ತು ಸರ್ವಿಸ್‌ ಸ್ಟೇಷನ್‌ ರಚಿಸುವುದು ಈಗಿನ ಚಿಂತನೆ.

ಕನಿಷ್ಠ ಒಂದು ಎಕರೆ ಜಾಗ ನೀಡಿದರೆ ಅಲ್ಲಿಗೆ 20 ಇ- ಬಸ್‌ ಒದಗಿಸುವುದು. ಕನಿಷ್ಠ 2-3 ಎಕರೆ ನೀಡಿದರೆ ತಲಾ 20ರಂತೆ 60 ಬಸ್‌ ಸಿಗುತ್ತದೆ. ಈ ಬಸ್‌ಗಳನ್ನು ಆಯಾ ಹಸಿರು ಘಟಕಗಳಿಂದಲೇ ಕಾರ್ಯಾಚರಣೆ ನಡೆಸುವಂತೆ ನೋಡಿಕೊಳ್ಳುವುದು. ಆಗ ಸ್ಥಳೀಯವಾಗಿ ಇ- ಬಸ್‌ಗಳನ್ನು ಇನ್ನಷ್ಟು ಗ್ರಾಮೀಣ ಪ್ರದೇಶಗಳನ್ನು ತಲುಪಲು ಸಾಧ್ಯವಿದೆ.

ಅಲ್ಲದೆ ಕೇವಲ ಗ್ರಾಮೀಣ ಮಾತ್ರವಲ್ಲ ನಗರ, ತಾಲೂಕು, ಜಿಲ್ಲಾ ಕೇಂದ್ರಗಳ ವ್ಯಾಪ್ತಿಯಗಳಲ್ಲೂ ಇ- ಸಾರಿಗೆ ಸೌಲಭ್ಯವನ್ನು ಬಳಸಿಕೊಳ್ಳಲು ಅವಕಾಶ ಇದೆ. ಈಗಾಗಲೇ ಕೆಎಸ್ಆರ್‌ಟಿಸಿಯ ಸ್ವಂತ ಜಾಗವಿದ್ದರೆ ಅಲ್ಲಿಯೇ ಇ- ಬಸ್‌ಗೆ ಹಸಿರು ಘಟಕ ಸ್ಥಾಪಿಸುವುದು ಸುಲಭವಾಗಲಿದೆ ಎನ್ನುವುದು ಅಧಿಕಾರಿಗಳ ಲೆಕ್ಕಾಚಾರ.

ಡೀಸಿ, ಶಾಸಕರ ಮುತುವರ್ಜಿ ಅಗತ್ಯ

ಶಕ್ತಿ ಯೋಜನೆ ಜಾರಿ ಬಳಿಕ ಬಹುತೇಕ ಎಲ್ಲ ಕಡೆಗಳಲ್ಲೂ ಬಸ್‌ಗಳ ಕೊರತೆ ಉಂಟಾಗುತ್ತಿದೆ. ಪ್ರತಿ ದಿನವೂ ಪ್ರಯಾಣಿಕರ ದಟ್ಟಣೆಯಿಂದಾಗಿ ಇನ್ನಷ್ಟು ಬಸ್‌ಗಳಿಗೆ ಬೇಡಿಕೆ ಉಂಟಾಗಿದ್ದು, ಅದನ್ನು ಪೂರೈಸಲು ಸಾರಿಗೆ ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಈ ಯೋಜನೆಗೆ ಆಯಾ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಜಾಗ ಒದಗಿಸುವಲ್ಲಿ ಸಹಕರಿಸಿದರೆ ಸುಲಭದಲ್ಲಿ ಊರಿಗೊಂದು ಎಲೆಕ್ಟ್ರಿಕಲ್‌ ಬಸ್‌ ಸೌಲಭ್ಯ ಸಾಧ್ಯ ಎನ್ನುವುದು ಅಧಿಕಾರಿಗಳ ಅಂಬೋಣ.

ಶೀಘ್ರ ಪಿಎಂ ಇ-ಬಸ್‌ ಯೋಜನೆ

ಪಿಎಂ(ಪ್ರಧಾನ ಮಂತ್ರಿ) ಇ- ಬಸ್‌ ಯೋಜನೆಯಲ್ಲಿ ಕೇವಲ ನಗರ ಪ್ರದೇಶದಲ್ಲಿ ಮಾತ್ರ ಸಿಟಿ ಬಸ್‌ ಸಂಚಾರಕ್ಕೆ ಅವಕಾಶವಿದೆ. ದೇಶದ ಎಲ್ಲ ನಗರಗಳಿಗೆ ಇ- ಬಸ್‌ ಯೋಜನೆ ಕಾರ್ಯಗತಗೊಳ್ಳಲಿದ್ದು, ಒಂದು ನಗರಕ್ಕೆ 100 ಸಿಟಿ ಬಸ್‌ಗಳನ್ನು ಪೂರೈಸಲಿದೆ. ಕರ್ನಾಟಕದಲ್ಲಿ ಮೈಸೂರು, ಬೆಂಗಳೂರು, ಮಂಗಳೂರು, ಬೆಳಗಾವಿಗಳಿಗೆ ತಲಾ 100 ಬಸ್‌, ತುಮಕೂರು, ದಾವಣಗೆರೆಗೆ ತಲಾ 50 ಬಸ್‌ ಸಿಗಲಿದೆ. ಈಗಾಗಲೇ ಚಾರ್ಜಿಂಗ್‌ ಸ್ಟೇಷನ್‌ ನಿರ್ಮಾಣ ಪ್ರಕ್ರಿಯೆಗಳು ಆರಂಭಗೊಂಡಿವೆ.