Asianet Suvarna News Asianet Suvarna News

ಬಿಹಾರ, ಒಡಿಶಾದಿಂದ ಬೆಂಗಳೂರಿಗೆ ವಲಸೆ ಕಾರ್ಮಿಕರು ವಾಪಾಸ್..!

ಬಿಹಾರ ಮತ್ತು ಒಡಿಶಾದ ಮುಖ್ಯಮಂತ್ರಿಗಳು ಸ್ವಂತ ಊರಿಗೆ ಮರಳಿದ ಕಾರ್ಮಿಕರಿಗೆಲ್ಲ ಇಲ್ಲೇ ಕೆಲಸ ಸಿಗುವಂತೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಅದು ಹುಸಿಯಾಗಿದ್ದು, ಊರಿಗೆ ಮರಳಿದ ಕಾರ್ಮಿಕರು ಕೆಲಸ ಸಿಗದೆ ಪರಿತಪಿಸುವಂತಾಗಿದೆ. ಹೀಗಾಗಿ ಈ ಹಿಂದೆ ತಮಗೆ ಕೆಲಸ ನೀಡಿದ್ದವರು ಲಾಕ್‌ಡೌನ್‌ ವೇಳೆಯಲ್ಲಿ ಕೈಬಿಟ್ಟಿದ್ದರೂ ಈಗ ಮತ್ತೆ ಅವರು ಫೋನ್‌ ಮಾಡಿದರೆ ಕಾರ್ಮಿಕರು ತಕ್ಷಣ ಒಪ್ಪಿಕೊಂಡು ಕೆಲಸಕ್ಕೆ ಮರಳುತ್ತಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Migrant labourers Slowly returning back to big cities like Bengaluru Delhi in search of job
Author
Patna, First Published Aug 28, 2020, 9:15 AM IST

ಪಟನಾ(ಆ.28): ಲಾಕ್‌ಡೌನ್‌ ವೇಳೆಯಲ್ಲಿ ದೇಶದ ಮಹಾನಗರಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಬಿಹಾರ, ಒಡಿಶಾ ಮುಂತಾದ ರಾಜ್ಯಗಳಿಗೆ ಮರಳಿದ್ದ ವಲಸೆ ಕಾರ್ಮಿಕರು ಇದೀಗ ತಮ್ಮ ರಾಜ್ಯಗಳಲ್ಲಿ ಕೆಲಸ ಸಿಗದೆ, ಕುಟುಂಬದ ಹಸಿವು ನೀಗಿಸಲಾಗದೆ ಕಂಗೆಟ್ಟು ಮತ್ತೆ ಮಹಾನಗರಗಳತ್ತ ತೆರಳತೊಡಗಿದ್ದಾರೆ. ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್‌ನಂತಹ ನಗರಗಳಿಗೆ ಕಾರ್ಮಿಕರ ಮರುವಲಸೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ.

ಬಿಹಾರ ಮತ್ತು ಒಡಿಶಾದ ಮುಖ್ಯಮಂತ್ರಿಗಳು ಸ್ವಂತ ಊರಿಗೆ ಮರಳಿದ ಕಾರ್ಮಿಕರಿಗೆಲ್ಲ ಇಲ್ಲೇ ಕೆಲಸ ಸಿಗುವಂತೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಅದು ಹುಸಿಯಾಗಿದ್ದು, ಊರಿಗೆ ಮರಳಿದ ಕಾರ್ಮಿಕರು ಕೆಲಸ ಸಿಗದೆ ಪರಿತಪಿಸುವಂತಾಗಿದೆ. ಹೀಗಾಗಿ ಈ ಹಿಂದೆ ತಮಗೆ ಕೆಲಸ ನೀಡಿದ್ದವರು ಲಾಕ್‌ಡೌನ್‌ ವೇಳೆಯಲ್ಲಿ ಕೈಬಿಟ್ಟಿದ್ದರೂ ಈಗ ಮತ್ತೆ ಅವರು ಫೋನ್‌ ಮಾಡಿದರೆ ಕಾರ್ಮಿಕರು ತಕ್ಷಣ ಒಪ್ಪಿಕೊಂಡು ಕೆಲಸಕ್ಕೆ ಮರಳುತ್ತಿದ್ದಾರೆ. ಹೀಗೆ ಮರಳುವ ಕಾರ್ಮಿಕರನ್ನು ಮಹಾನಗರಗಳಲ್ಲಿರುವ ಕಾರ್ಖಾನೆಗಳು, ನಿರ್ಮಾಣ ಕಂಪನಿಗಳು ಮುಂತಾದ ಉದ್ಯೋಗದಾತರು ವಿಮಾನ, ರೈಲು ಹಾಗೂ ವಿಶೇಷ ಬಸ್‌ಗಳಲ್ಲಿ ಕರೆಸಿಕೊಳ್ಳುತ್ತಿದ್ದಾರೆ.

'ಬದುಕು ಅನಿವಾರ್ಯ' ನಗರದತ್ತ ವಲಸೆ ಕಾರ್ಮಿಕರ ಪುನರಾಗಮನ

ಕೆಲ ದಿನಗಳಿಂದ ಪಟನಾ ಹಾಗೂ ಭುವನೇಶ್ವರದಿಂದ ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್‌, ಅಹ್ಮದಾಬಾದ್‌, ಅಮೃತಸರ ಮುಂತಾದ ಊರುಗಳಿಗೆ ತೆರಳುವ ವಿಮಾನಗಳು ಸಂಪೂರ್ಣ ಭರ್ತಿಯಾಗಿ ಹಾರುತ್ತಿವೆ. ಅವುಗಳಲ್ಲಿ ಶೇ.80ರಷ್ಟು ವಲಸೆ ಕಾರ್ಮಿಕರೇ ತುಂಬಿರುತ್ತಾರೆ. ವಿಶೇಷ ರೈಲುಗಳಂತೂ ಶೇ.180-200ರಷ್ಟು ಭರ್ತಿಯಾಗಿ, ಅಂದರೆ ತಮ್ಮ ಸಾಮರ್ಥ್ಯಕ್ಕಿಂತ ದುಪ್ಪಟ್ಟು ಪ್ರಯಾಣಿಕರನ್ನು ಹೊತ್ತು ಚಲಿಸುತ್ತಿವೆ. ಲಾಕ್‌ಡೌನ್‌ ವೇಳೆಯಲ್ಲಿ ನಾನಾ ಊರುಗಳಿಂದ ಬಿಹಾರಕ್ಕೆ ಸುಮಾರು 20 ಲಕ್ಷಕ್ಕೂ ಹೆಚ್ಚು ಹಾಗೂ ಒಡಿಶಾಕ್ಕೆ 7 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಮರಳಿದ್ದರು. ಅವರಲ್ಲಿ ಕೆಲವರಿಗೆ ತಮ್ಮ ಊರುಗಳಲ್ಲಿ ಉದ್ಯೋಗ ಖಾತ್ರಿ ಹಾಗೂ ಕೇಂದ್ರ ಸರ್ಕಾರದ ಗರೀಬ್‌ ಕಲ್ಯಾಣ್‌ ರೋಜಗಾರ್‌ ಅಭಿಯಾನದಡಿ ಕೆಲಸ ಸಿಕ್ಕಿದ್ದರೂ ಬಹುತೇಕರಿಗೆ ದೊರೆತಿಲ್ಲ. ಹೀಗಾಗಿ ಪೂರ್ವದ ರಾಜ್ಯಗಳಿಂದ ಕಾರ್ಮಿಕರು ಮತ್ತೆ ಮಹಾನಗರಗಳಿಗೆ ತೆರಳಲು ಸರತಿಯಲ್ಲಿ ಕಾಯುತ್ತಿದ್ದಾರೆ.

ದೆಹಲಿಯಲ್ಲಿರುವ ಅಣಬೆ ಕೃಷಿಕ ಪಪ್ಪನ್‌ ಸಿಂಗ್‌ ಎಂಬಾತ ಲಾಕ್‌ಡೌನ್‌ ವೇಳೆಯಲ್ಲಿ 10 ನೌಕರರನ್ನು ಬಿಹಾರಕ್ಕೆ ಕಳಿಸಿದ್ದ. ಈಗ 1 ಲಕ್ಷ ರು. ನೀಡಿ ವಿಮಾನದ ಟಿಕೆಟ್‌ ಬುಕ್‌ ಮಾಡಿ ಅವರನ್ನೆಲ್ಲ ವಾಪಸ್‌ ಕರೆಸಿಕೊಳ್ಳುತ್ತಿದ್ದಾನೆ. ಇಂತಹ ನೂರಾರು ಉದಾಹರಣೆಗಳನ್ನು ಬಿಹಾರ ಮತ್ತು ಒಡಿಶಾದ ಹಳ್ಳಿಗರು ನೀಡುತ್ತಾರೆ. ಆದರೆ, ಈಗಲೂ ಈ ಎರಡೂ ರಾಜ್ಯಗಳ ಸರ್ಕಾರಗಳು ಕಾರ್ಮಿಕರಿಗೆ ಇಲ್ಲೇ ಕೆಲಸ ಸಿಗುವಂತೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ, ಎಲ್ಲರಿಗೂ ಕೆಲಸ ಸಿಗುತ್ತದೆ ಎಂದೇ ಹೇಳುತ್ತಿದ್ದಾರೆ. ಆದರೆ, ಉಪವಾಸದಿಂದ ಕಂಗೆಟ್ಟಿರುವ ಕಾರ್ಮಿಕರು ಸರ್ಕಾರದಲ್ಲಿ ಭರವಸೆ ಕಳೆದುಕೊಂಡಿದ್ದು, ಮಹಾನಗರಗಳಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿದ್ದರೂ ಅನಿವಾರ್ಯವಾಗಿ ಅತ್ತ ಮುಖಮಾಡುತ್ತಿರುವುದು ಕಂಡುಬಂದಿದೆ.
 

Follow Us:
Download App:
  • android
  • ios