ಮನೆ ಕೆಲಸಕ್ಕಿದ್ದ ಪುಟ್ಟ ಬಾಲಕ ಒಂದು ಹಣ್ಣು ತಿಂದ ಎಂದು ಆತನನ್ನು ಮನೆ ಮಂದಿ ಕ್ರೂರವಾಗಿ ಕೊಂದ ಅಮಾನವೀಯ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

ಲಾಹೋರ್‌: ಮನೆ ಕೆಲಸಕ್ಕಿದ್ದ ಪುಟ್ಟ ಬಾಲಕ ಒಂದು ಹಣ್ಣು ತಿಂದ ಎಂದು ಆತನನ್ನು ಮನೆ ಮಂದಿ ಕ್ರೂರವಾಗಿ ಕೊಂದ ಅಮಾನವೀಯ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಶ್ರೀಮಂತರ ಮನೆಯೊಂದರಲ್ಲಿ 10 ವರ್ಷದ ಬಾಲಕ ಮನೆ ಕೆಲಸ ಮಾಡುತ್ತಿದ್ದ. ಆತ ಮನೆಯಲ್ಲಿದ್ದ ರೆಫ್ರಿಜರೇಟರ್‌ನಿಂದ ಹಣ್ಣುಗಳನ್ನು ತಿಂದಿದ್ದಾನೆ ಎಂದು ಆತ ಕೆಲಸ ಮಾಡುತ್ತಿದ್ದ ಮನೆಯವರು ಆತನಿಗೆ ಕ್ರೂರವಾಗಿ ಹಿಂಸೆ ನೀಡಿ ಕೊಂದು ಹಾಕಿದ್ದಾರೆ. ಕಮ್ರಾನ್‌ ಹತ್ಯೆಯಾದ ಬಾಲಕ

ಅದೇ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಬಾಲಕ ಕಮ್ರಾನ್ ನ ಆರು ವರ್ಷದ ಸಹೋದರ ರಿಜ್ವಾನ್‌ಗೂ ಕೂಡ ಮನೆ ಮಂದಿ ಥಳಿಸಿದ್ದು, ಆತ ತೀವ್ರವಾಗಿ ಗಾಯಗೊಂಡಿದ್ದಾನೆ. ಒಂದು ವರ್ಷದ ಹಿಂದೆ ಲಾಹೋರ್‌ನ ಐಷಾರಾಮಿ ಡಿಫೆನ್ಸ್ ಹೌಸಿಂಗ್ ಅಥಾರಿಟಿಯಲ್ಲಿ ನೆಲೆಸಿದ್ದ ನಸ್ರುಲ್ಲಾ ಎಂಬವರು ಈ ಇಬ್ಬರು ಇಬ್ಬರು ಪುಟ್ಟ ಬಾಲಕರನ್ನು ಮನೆ ಕೆಲಸಕ್ಕೆ ತಮ್ಮ ಮನೆಗೆ ಕರೆಸಿಕೊಂಡಿದ್ದರು.

ಶಿಕ್ಷಕಿಯೋ ಶೂರ್ಪನಖಿಯೋ?: ಮುಗ್ಧ ಮಕ್ಕಳ ಮೇಲೆ ಕ್ರೌರ್ಯ!

ಮಂಗಳವಾರ (ಜುಲೈ 12), ಅನುಮತಿಯಿಲ್ಲದೆ ರೆಫ್ರಿಜರೇಟರ್‌ನಿಂದ ಹಣ್ಣುಗಳನ್ನು ತಿಂದಿದ್ದಕ್ಕಾಗಿ ಈ ಇಬ್ಬರೂ ಮಕ್ಕಳನ್ನು ನಸ್ರುಲ್ಲಾ ಅವರ ಪತ್ನಿ, ಇಬ್ಬರು ಪುತ್ರರು ಮತ್ತು ಅವರ ಸೊಸೆ ತೀವ್ರವಾಗಿ ಹಿಂಸಿಸಿದ್ದಾರೆ. ಅವರು ಮಕ್ಕಳಿಗೆ ಚಾಕುವಿನಿಂದ ಕೂಡ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸ್ ತನಿಖಾಧಿಕಾರಿ ಮುಹಮ್ಮದ್ ಯೂಸುಫ್ ಹೇಳಿದ್ದಾರೆ. ಹಲ್ಲೆಯಿಂದ ಮಕ್ಕಳಿಬ್ಬರ ಸ್ಥಿತಿ ಹದಗೆಟ್ಟಾಗ ನಸ್ರುಲ್ಲಾ, ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತನಿಖಾಧಿಕಾರಿ ಯೂಸುಫ್ ಹೇಳಿದ್ದಾರೆ. ಆಸ್ಪತ್ರೆಗೆ ಬರುವ ವೇಳೆಯೇ ಕಮ್ರಾನ್ ಮೃತಪಟ್ಟಿದ್ದು, ರಿಜ್ವಾನ್ ಸ್ಥಿತಿ ಚಿಂತಾಜನಕವಾಗಿದೆ ಎಂದು ಅವರು ತಿಳಿಸಿದ್ದಾರೆ.

ನಸ್ರುಲ್ಲಾ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಈ ಮನೆಯವರು ಸಣ್ಣಪುಟ್ಟ ವಿಷಯಗಳಿಗೆ ಮಕ್ಕಳಿಬ್ಬರನ್ನೂ ಹಿಂಸಿಸುತ್ತಿದ್ದರು ಮತ್ತು ಕಮ್ರಾನ್‌ನ ದೇಹದ ಮೇಲೆ ಮತ್ತು ಗಾಯಗೊಂಡ ರಿಜ್ವಾನ್‌ನ ದೇಹದ ಮೇಲೆಯೂ ಡಜನ್‌ಗೂ ಹೆಚ್ಚು ಕಡೆ ಆಳವಾದ ಗಾಯಗಳು ಕಂಡು ಬಂದಿವೆ ಎಂದು ಯೂಸುಫ್ ಹೇಳಿದ್ದಾರೆ. 

ಹೆಂಡತಿಯನ್ನು 'ಅಶ್ಲೀಲ'ವಾಗಿ ನೋಡಿದನೆಂದು 6 ವರ್ಷದ ಬಾಲಕನ ಕೊಲೆ

ಆರೋಪಿಗಳು ಮಕ್ಕಳಿಬ್ಬರನ್ನೂ ಹಗ್ಗದಿಂದ ಕಟ್ಟಿ ಫ್ರಿಡ್ಜ್‌ನಿಂದ ಹಣ್ಣುಗಳನ್ನು ತಿಂದಿದ್ದಕ್ಕಾಗಿ ಚಿತ್ರಹಿಂಸೆ ನೀಡಿದ್ದಾರೆ ಎಂದು ನಸ್ರುಲ್ಲಾ ವಿಚಾರಣೆಯ ಸಮಯದಲ್ಲಿ ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಹಮ್ಜಾ ಶೆಹಬಾಜ್ ಘಟನೆಯ ಬಗ್ಗೆ ವಿವರ ಕೇಳಿದ್ದಾರೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಂದ ವರದಿಯನ್ನು ತರಿಸಿಕೊಂಡಿದ್ದಾರೆ. 

ರಿಜ್ವಾನ್‌ಗೆ ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಈ ಘಟನೆಗೆ ಪಾಕಿಸ್ತಾನದ ಮಾನವ ಹಕ್ಕುಗಳ ಕಾರ್ಯಕರ್ತರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಇದು ಅತಿರೇಕದ ಸಂಗತಿಯಾಗಿದೆ. ಅಮಾಯಕ ಮಗುವಿನ ಹಂತಕರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು. ಸರ್ಕಾರವು ಈ ಪ್ರಕರಣವನ್ನು ಬೆಂಬಲಿಸುವ ಅಗತ್ಯವಿದೆ. ಅಪರಾಧಿಗಳು ತಪ್ಪಿಸಿಕೊಳ್ಳಬಾರದು ಎಂದು ಮಾನವ ಹಕ್ಕುಗಳ ಕಾರ್ಯಕರ್ತ ಶೆರ್ಯಾರ್ ರಿಜ್ವಾನ್ ಹೇಳಿದರು.