ಶಿಕ್ಷಕಿಯೋ ಶೂರ್ಪನಖಿಯೋ?: ಮುಗ್ಧ ಮಕ್ಕಳ ಮೇಲೆ ಕ್ರೌರ್ಯ!
ಮುಗ್ಧ ಮಕ್ಕಳ ಮೇಲೆ ಶಿಕ್ಷಕಿಯ ಪ್ರಕೋಪ! ಹಣ ಕದ್ದ ಆರೋಪದ ಮೇಲೆ ಮನಬಂದಂತೆ ಥಳಿತ! ಬಾಗಲಕೋಟೆ ಜಿಲ್ಲೆಯ ರಾಘಾಪುರ ಗ್ರಾಮ! ಸರ್ಕಾರಿ ಶಾಲೆ ಶಿಕ್ಷಕಿಯ ವರ್ತನೆಗೆ ಖಂಡನೆ! ಶಿಕ್ಷಕ ಚಂದ್ರು, ಶಿಕ್ಷಕಿ ಅಶ್ವಿನಿ ವಿರುದ್ಧ ಪ್ರತಿಭಟನೆ
ಬಾಗಲಕೋಟೆ(ಆ.8): ಶಾಲಾ ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆ ಕಾಣುತ್ತೇವೆ, ಮುಗ್ಧ, ಎಳೆಯ ಹೃದಯಗಳಲ್ಲಿ ಸ್ಥಾನಗಳಿಸಲು ಪ್ರಯತ್ನಿಸುತ್ತೇವೆ ಅಂತೆಲ್ಲಾ ಟಿಇಟಿ ಪರೀಕ್ಷೆಯಲ್ಲಿ ಪುಟಗಟ್ಟಲೇ ಪುಂಗಿ ಊದುವ ಬಹುತೇಕ ಶಿಕ್ಷಕರು, ಒಮ್ಮೆ ಕೆಲಸ ಗಿಟ್ಟಿಸಿಕೊಂಡ ಮೇಲೆ ಈ ಆದರ್ಶಗಳನ್ನೆಲ್ಲಾ ಮರೆತು ಬಿಡುತ್ತಾರೆ.
ಬ್ಯಾಗ್ ನಲ್ಲಿದ್ದ 500 ರೂ. ಕಾಣೆಯಾದ ಹಿನ್ನೆಲೆಯಲ್ಲಿ ಶಾಲಾ ವಿಧ್ಯಾರ್ಥಿಗಳನ್ನು ಶಿಕ್ಷಕ ಮತ್ತು ಶಿಕ್ಷಕಿ ಸೇರಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ರಾಘಾಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ ಅಶ್ವಿನಿ ಮತ್ತು ಶಿಕ್ಷಕ ಚಂದ್ರು ಐದನೇ ತರಗತಿಯ ಹತ್ತಕ್ಕೂ ಹೆಚ್ಚು ವಿಧ್ಯಾರ್ಥಿಗಳ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ.ಇದರಿಂದ ವಿಧ್ಯಾರ್ಥಿಗಳ ಬೆನ್ನು, ತೊಡೆ, ಸೊಂಟದ ಭಾಗದಲ್ಲಿ ಬಾಸುಂಡೆಗಳು ಕಾಣಿಸಿಕೊಂಡಿವೆ.
ವಿಧ್ಯಾರ್ಥಿಗಳು ಹಣ ಕದ್ದಿದ್ದಾರೆ ಎಂದು ಆರೋಪಿಸಿ ಸಾಮೂಹಿಕವಾಗಿ ವಿಧ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ಪೋಷಕರು ಶಿಕ್ಷಕ ಚಂದ್ರು ದಾಸರ ಮತ್ತು ಶಿಕ್ಷಕಿ ಅಶ್ವಿನಿ ಅಂಗಡಿ ವಿರುದ್ದ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ಮೂರು ದಿನದ ಹಿಂದೆಯೇ ಈ ಘಟನೆ ನಡೆದಿದ್ದು,ಗ್ರಾಮದ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯಿತಿ ಮಾಡಿ ವಿಷಯ ಮುಂದುವರೆಸದೆ ಮುಚ್ಚಿ ಹಾಕಲಾಗಿದೆ. ಇನ್ನು ಘಟನೆ ಸಂಬಂಧ ವರದಿ ಮಾಡಲು ಹೋಗಿದ್ದ ಖಾಸಗಿ ವಾಹಿನಿ ವರದಿಗಾರನ ಮೇಲೂ ಶಿಕ್ಷಕರ ಬೆಂಬಲಿಗರು ಹಲ್ಲೆಗೆ ಯತ್ನಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಮಾಜಿ ಸಿಎಂ ಸಿದ್ರಾಮಯ್ಯ ಅವರ ಕ್ಷೇತ್ರದಲ್ಲಿ ಶಿಕ್ಷಕಿಯೋರ್ವಳು ಈ ರೀತಿ ಗೂಂಡಾ ವರ್ತನೆ ತೋರಿಸಿದ್ದಾಳೆ ಎಂದರೆ ಇಲ್ಲಿನ ಬಿಇಓ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಇಷ್ಟೆಲ್ಲಾ ಘಟನೆ ನಡೆದರೂ ಅವರ ಮೇಲೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂಬುದು ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ.