ಹಾಲಿ ಚಾಂಪಿಯನ್ ಆರ್‌ಸಿಬಿ ತಂಡವು ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಎದುರಿಸಲಿದೆ. ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ, ರಜತ್ ಪಾಟೀದಾರ್ ನಾಯಕತ್ವದ ಆರ್‌ಸಿಬಿ ಬಲಿಷ್ಠವಾಗಿದ್ದರೂ, ವಿದೇಶಿ ಆಟಗಾರರ ಆಯ್ಕೆಯ ಗೊಂದಲದಲ್ಲಿದೆ. 

ಬೆಂಗಳೂರು: ಹಾಲಿ ಚಾಂಪಿಯನ್‌ ಆರ್‌ಸಿಬಿ ತಂಡ ಈ ಬಾರಿ ಐಪಿಎಲ್‌ನ ಉದ್ಘಾಟನಾ ಪಂದ್ಯದಲ್ಲಿ ಶನಿವಾರ ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ ಸೆಣಸಾಡಲಿದೆ. ತಂಡ ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಭಾರಂಭದ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಜತ್‌ ಪಾಟೀದಾರ್‌ ನಾಯಕತ್ವದ ಆರ್‌ಸಿಬಿ ಹೆಚ್ಚೂ ಕಡಿಮೆ ಕಳೆದ ಬಾರಿಯ ತಂಡವನ್ನೇ ಉಳಿಸಿಕೊಂಡಿದ್ದು, ಬಲಿಷ್ಠವಾಗಿ ತೋರುತ್ತಿದೆ. ಆದರೆ ಗಾಯಾಳು ಜೋಶ್‌ ಹೇಜಲ್‌ವುಡ್‌ ಅನುಪಸ್ಥಿತಿ ತಂಡವನ್ನು ಕಾಡಬಹುದು. ಮಾಜಿ ನಾಯಕ ವಿರಾಟ್‌ ಕೊಹ್ಲಿ ಈ ಬಾರಿಯೂ ಅಬ್ಬರದ ಆಟವಾಡುವ ವಿಶ್ವಾಸದಲ್ಲಿದ್ದು, ಫಿಲ್‌ ಸಾಲ್ಟ್‌ ಜೊತೆ ಆರಂಭಿಕನಾಗಿ ಆಡಲು ಸಜ್ಜಾಗಿದ್ದಾರೆ. ವೆಂಕಟೇಶ್‌ ಅಯ್ಯರ್‌, ರಜತ್‌, ಜಿತೇಶ್‌, ಕೃನಾಲ್‌ ಜೊತೆ ಟಿ20ಗೆ ಹೇಳಿ ಮಾಡಿಸಿದಂತಿರುವ ಟಿಮ್‌ ಡೇವಿಡ್‌, ರೊಮಾರಿಯೊ ಶೆಫರ್ಡ್‌ ತಂಡಕ್ಕೆ ಆಧಾರಸ್ತಂಭ. ಬೌಲಿಂಗ್‌ ವಿಭಾಗದಲ್ಲಿ ಭುವನೇಶ್ವರ್‌, ಸುಯಸ್‌ ಶರ್ಮಾ, ಯುವ ವೇಗಿ ಮಂಗೇಶ್‌ ಯಾದವ್‌ ಇದ್ದಾರೆ.

ಮತ್ತೊಂದೆಡೆ ಸನ್‌ರೈಸರ್ಸ್‌ ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿ. 2024ರಲ್ಲಿ ಆರ್‌ಸಿಬಿ ವಿರುದ್ಧ ಬೆಂಗಳೂರಿನಲ್ಲೇ ಸನ್‌ರೈಸರ್ಸ್‌ ತಂಡ 3 ವಿಕೆಟ್‌ಗೆ 287 ರನ್‌ ಗಳಿಸಿತ್ತು. ಈ ಬಾರಿಯೂ ಬೃಹತ್‌ ಮೊತ್ತ ದಾಖಲಾಗುವ ನಿರೀಕ್ಷೆಯಿದೆ. ತಂಡದಲ್ಲಿ ಅಭಿಷೇಕ್‌, ಹೆಡ್‌, ಕ್ಲಾಸೆನ್‌, ಲಿವಿಂಗ್‌ಸ್ಟೋನ್‌, ನಿತೀಶ್‌ ಕುಮಾರ್‌ ಸೇರಿ ಪ್ರಮುಖರಿದ್ದಾರೆ.

--

ಹೇಗಿರುತ್ತೆ ಆರ್‌ಸಿಬಿ ಟೀಂ ಸಂಯೋಜನೆ?

ಆರ್‌ಸಿಬಿ ತನ್ನ ಆಡುವ 11ರ ಬಳಗವನ್ನು ಬಹುತೇಕ ಖಚಿತಪಡಿಸಿಕೊಂಡಿದ್ದರೂ, ವಿದೇಶಿ ಆಟಗಾರರ ವಿಚಾರದಲ್ಲಿ ತಂಡಕ್ಕೆ ಗೊಂದಲ ಎದುರಾಗಬಹುದು. ಸಾಲ್ಟ್‌ ಆರಂಭಿಕನಾಗಿ ಆಡಿದರೆ, ಡೇವಿಡ್‌, ಶೆಫರ್ಡ್‌ ಆಲ್ರೌಂಡರ್‌ಗಳಾಗಿ ಸ್ಥಾನ ಪಡೆಯುತ್ತಾರೆ. ಹೇಜಲ್‌ವುಡ್‌ ಅನುಪಸ್ಥಿತಿಯಲ್ಲಿ ಜೇಕಬ್‌ ಡಫಿ ಅವರನ್ನು ಆಡಿಸಿಸಬಹುದು. ಹೀಗಾದರೆ ಯುವ ತಾರೆ ಜೇಕಬ್‌ ಬೆಥೆಲ್‌ಗೆ ಸ್ಥಾನವಿಲ್ಲ. ಬೆಥೆಲ್‌ರನ್ನು ಆಡಿಸಬೇಕಿದ್ದರೆ ಸಾಲ್ಟ್‌ರನ್ನು ಹೊರಗಿಡಬೇಕಾಗುತ್ತದೆ ಅಥವಾ ಆರಂಭಿಕ ಪಂದ್ಯಗಳಲ್ಲಿ ಡಫಿಯನ್ನು ಹೊರಗಿಟ್ಟು ಭಾರತೀಯ ವೇಗಿಗೆ ಅವಕಾಶ ನೀಡಬೇಕಾಗುತ್ತದೆ.

ಸಂಭವನೀಯ ಆಟಗಾರರು

ಆರ್‌ಸಿಬಿ: ಸಾಲ್ಟ್‌, ಕೊಹ್ಲಿ, ವೆಂಕಟೇಶ್‌, ರಜತ್‌(ನಾಯಕ), ಜಿತೇಶ್‌, ಕೃನಾಲ್‌, ಡೇವಿಡ್‌, ಶೆಫರ್ಡ್‌, ಸುಯಶ್‌, ಭುವನೇಶ್ವರ್‌, ಡಫಿ, ಮಂಗೇಶ್‌.

ಸನ್‌ರೈಸರ್ಸ್: ಅಭಿಷೇಕ್‌, ಹೆಡ್‌, ಇಶಾನ್‌(ನಾಯಕ), ನಿತೇಶ್‌, ಕ್ಲಾಸೆನ್‌, ಲಿವಿಂಗ್‌ಸ್ಟೋನ್‌, ಸಲೀಲ್‌, ಹರ್ಷ್‌ ದುಬೆ, ಶಿವಾಂಗ್‌, ಕಾರ್ಸ್‌, ಹರ್ಷಲ್‌, ಉನಾದ್ಕಟ್‌,

ಮುಖಾಮುಖಿ: 25

ಆರ್‌ಸಿಬಿ: 11

ಸನ್‌ರೈಸರ್ಸ್‌: 13

ಪಂದ್ಯ: ಸಂಜೆ 7.30 । ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಹಾಟ್‌ಸ್ಟಾರ್‌.

ಇದನ್ನೂ ಓದಿ: ಜನರ ಜೀವ ಮುಖ್ಯವೋ? ಐಪಿಎಲ್‌ ಮುಖ್ಯವೋ? ಉಚಿತ ವಿಐಪಿ ಟಿಕೆಟ್‌ ಕೇಳಿದ ಶಾಸಕರಿಗೆ ಮಾತಲ್ಲೇ ಬೆಂಡೆತ್ತಿದ ನಿಖಿಲ್

ಇದನ್ನೂ ಓದಿ: 1 ಟಿಕೆಟ್‌ ಕೊಡ್ತಾರೆ, ಕುಟುಂಬ ಕರೆದೊಯ್ಯೋದ್ಹೇಗೆ? ಶಾಸಕರಿಗೆ ಕನಿಷ್ಠ 5 ಐಪಿಎಲ್‌ ಟಿಕೆಟ್‌ ನೀಡುವಂತೆ ವಿಧಾನಸಭೆಯಲ್ಲಿ ಆಗ್ರಹ!