ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ, ಪೋಸ್ಟ್‌ಮಾರ್ಟ್‌ಮ್ ವೇಳೆ ಮಹಿಳಾ ಮೃತದೇಹಗಳ ಬೆತ್ತಲೆ ಚಿತ್ರಗಳನ್ನು ತೆಗೆಯುತ್ತಿದ್ದ ಅಟೆಂಡರ್‌ನನ್ನು ಬಂಧಿಸಲಾಗಿದೆ. ಆಸ್ಪತ್ರೆ ಆಡಳಿತ ಮಂಡಳಿ ದೂರು ನೀಡಿದ ನಂತರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಬೀದರ್‌ನ ಬ್ರಿಮ್ಸ್ (BRIMS) ಜಿಲ್ಲಾಸ್ಪತ್ರೆಯಲ್ಲಿ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದ್ದು, ಶವಾಗಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಟೆಂಡರ್‌ನೊಬ್ಬ ಪೋಸ್ಟ್‌ಮಾರ್ಟ್‌ಮ್ ವೇಳೆ ಮಹಿಳಾ ಮೃತದೇಹಗಳ ಬೆತ್ತಲೆ ಚಿತ್ರಗಳನ್ನು ತನ್ನ ಮೊಬೈಲ್‌ನಲ್ಲಿ ಸೆರೆಹಿಡಿಯುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿದೆ.
ಆರೋಪಿ ಮುನೀರ್ ಅಹ್ಮದ್ ಹಲವು ವರ್ಷಗಳಿಂದ ಆಸ್ಪತ್ರೆಯ ಶವಾಗಾರ ವಿಭಾಗದಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದಾನೆ. ಪೋಸ್ಟ್‌ಮಾರ್ಟ್‌ಮ್ ಪ್ರಕ್ರಿಯೆ ನಡೆಯುವ ವೇಳೆ ಮಹಿಳಾ ಶವಗಳ ಫೋಟೋಗಳನ್ನು ರಹಸ್ಯವಾಗಿ ತೆಗೆದು ಸಂಗ್ರಹಿಸಿಡುತ್ತಿದ್ದನೆಂಬ ವಿಚಾರ ತಿಳಿದು ಆಸ್ಪತ್ರೆ ಸಿಬ್ಬಂದಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಹಿತಿಯ ಪ್ರಕಾರ, ಆರೋಪಿಯ ಮೊಬೈಲ್ ಫೋನ್ ಪರಿಶೀಲಿಸಿದಾಗ ಹಲವು ಮಹಿಳಾ ಮೃತದೇಹಗಳ ಬೆತ್ತಲೆ ಚಿತ್ರಗಳು ಪತ್ತೆಯಾಗಿವೆ. ಇದರಿಂದ ಆತ ಹಲವು ವರ್ಷಗಳಿಂದ ಇದೇ ರೀತಿಯ ವಿಕೃತ ಕೃತ್ಯ ಎಸಗುತ್ತಿದ್ದಾನೆಯೇ ಎಂಬ ಅನುಮಾನ ಮೂಡಿದ್ದು, ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ಗಂಭೀರತೆಯನ್ನು ಮನಗಂಡ ಬ್ರಿಮ್ಸ್ ಮುಖ್ಯಸ್ಥ ಡಾ. ಮೊಸಿನ್ ಉಲ್ ಹಕ್ ಅವರು ನ್ಯೂಟೌನ್ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಮುನೀರ್ ಅಹ್ಮದ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆಸ್ಪತ್ರೆಯಂತಹ ಸೂಕ್ಷ್ಮ ಮತ್ತು ಗೌರವಯುತ ಸ್ಥಳದಲ್ಲಿ ನಡೆದಿರುವ ಈ ಕೃತ್ಯ ಸಾರ್ವಜನಿಕರಲ್ಲಿ ತೀವ್ರ ಆಘಾತ ಉಂಟುಮಾಡಿದ್ದು, ಪ್ರಕರಣದ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


