ಕಲಬುರಗಿ: ಅಂಗಿ ಮೇಲಿದ್ದ ಟೈಲರ್ ಲೇಬಲ್ ಮಾಹಿತಿಯಿಂದ ಪಾತಕಿಗಳ ಪತ್ತೆ..!
ಸುರಪುರದ ಎಲೆಕ್ಟ್ರಿಶಿಯನ್ ಚಾಂದ್‌ಪಾಶಾ ಹಂತಕರ ಹೆಡಮುರಿ ಕಟ್ಟಿದ ಜೇವರ್ಗಿ- ಯಡ್ರಾಮಿ ಪೊಲೀಸರು
ಕಲಬುರಗಿ(ನ.30): ಯಾದಗಿರಿ ಜಿಲ್ಲೆಯಲ್ಲಿ ಬರುವ ಸುರಪುರದ ಎಲೆಕ್ಟಿಶಿಯನ್ ಚಾಂದಪಾಶಾ ನಿಗೂಢ ಕೊಲೆ ಪ್ರಕರಣ ಭೇದಿಸಿರುವ ಕಲಬುರಗಿ ಪೊಲೀಸರು ಈ ಸಂಬಂಧ ನಾಲ್ವರು ಹಂತಕರನ್ನು ಬಂಧಿಸಿದ್ದಾರೆ. ಬಂಧಿತ ಪಾತಕಿಗಳನ್ನು ಸೈಯ್ಯದ್ ಶಾಬುದ್ದೀನ್, ಪ್ರಭುಗೌಡ ಬಿರೇದಾರ್, ಮಲ್ಲಿಕಾರ್ಜುನ ಲಕಣಾಪುರ (21) ಹಾಗೂ ರೆಹೆಮಾನ್ ಕೌತಾಳ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಹುಣಸಗಿ ತಾಲೂಕಿನ ಸಿದ್ದಾಪುರ, ದೇವತ್ಕಲ್ ನಿವಾಸಿಗಳಾಗಿದ್ದಾರೆ.
ಚಾಂದ್‌ಪಾಶಾನನ್ನು ತಮ್ಮ ಮನೆಯಲ್ಲಿ ವಿದ್ಯುತ್ ಜಾಲ ದುರಸ್ತಿ ಮಾಡೋದಿದೆ ಎಂದು ಉಪಾಯವಾಗಿ ಕರೆದು ನಾಲ್ವರು ಸೇರಿಕೊಂಡು ಆತನನ್ನು ಕಾರಿನಲ್ಲಿ ಕೋಡೈಕಲ್‌ವರೆಗೂ ಕರೆದೊಯ್ದು ಅಲ್ಲಿ ಹಗ್ಗದಿಂದ ನೇಣು ಬಿಗಿದು ನಂತರ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆಮಾಡಿ, ಶವ ಕೃಷ್ಣಾನದಿ ಕೆನಾಲ್‌ನಲ್ಲಿ ಬಿಸಾಕಿ ಪರಾರಿಯಾಗಿದ್ದರು.
ಕಿರುಕುಳ ನೀಡ್ತಿದ್ದ ಮಗನ ಕೊಲೆಗೈದು ಪೊಲೀಸರಿಗೆ ಶರಣಾದ ತಂದೆ
ಚಾಂದ್‌ಪಾಶಾ ಶವ 50 ಕಿಮೀ ಹರಿದುಕೊಂಡು ಬಂದು ಯಡ್ರಾಮಿ ಠಾಣಾ ವ್ಯಾಪ್ತಿಯಲ್ಲಿ ಬರುವ ಬಳಬಟ್ಟಿಸೀಮಾಂತರದಲ್ಲಿ ತೇಲಿತ್ತು. ತಮ್ಮ ಹೊಲದ ಪಕ್ಕದಲ್ಲಿ ಅಪರಿತ ಶವ ಪತ್ತೆಯಾಗಿದೆ. ಕೆನಾಲ್‌ನಲ್ಲಿ ಶವ ತೇಲಾಡುತ್ತಿದೆ. ವಾರದ ಹಿಂದೆಯೇ ಈ ಕೊಲೆಯಾದಂತಿದೆ ಎಂದು ಭೀಮನಗೌಡ ಎಂಬುವವರು ಯಡ್ರಾಮಿ ಠಾಣೆಗೆ ನೀಡಿದ ದೂರಿನ ಅನ್ವಯ ಪೊಲೀಸರು ಅಲ್ಲಿಗೆ ಹೋಗಿ ಪರಿಶೀಲನೆ ನಡೆಸಿದ್ದರು.
ಶವ ಗುರುತು ಹಿಡಿಯದಂತೆ ಇತ್ತು. ಅಪರಿತ ವ್ಯಕ್ತಿಯ ಕೊಲೆ ಎಂದು ಪ್ರಕರಣ ದಾಖಲಿಸಿಕೊಂಡು ಯಡ್ರಾಮಿ ಪೊಲೀಸರು ತನಿಖೆ ಮುಂದುವರಿಸಿದಾಗ ಅಂಗಿಯ ಕಾಲರ್ ಮೇಲಿನ ಟೈಲರ್ ಲೇಬಲ್, ಕಿಸೆಲ್ಲಿದ್ದ ಸ್ಕೂರ್ ಡ್ರೈವರ್ ಇವೆಲ್ಲವನ್ನೂ ಸಂಗ್ರಹಿಸಿ ಪೊಲೀಸರು ತನಿಖೆ ಜಾಣ್ಮೆ ಮೆರೆದಿದ್ದು, ಈ ಸುಳಿವುಗಳು ಹಂತಕರ ಹತ್ತಿರ ಕೊಂಡೊಯ್ದಿವೆ. ಸೆ.4ರಂದು ನಡೆದ ಕೊಲೆ ಘಟನೆಯನ್ನು ತುಂಬಾ ಜಾಣತನದಿಂದ ಭೇದಿಸಿರುವ ಪೊಲೀಸರು ನ. 29ರಂದು ಹಂತಕರನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಹಗ್ಗ, ಕಾರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಅನೈತಿಕ ಸಂಬಂಧವೇ ಕೊಲೆಗೆ ಕಾರಣ
ಇಂದಿಲ್ಲಿ ಸುದ್ದಿಗೋಷ್ಠಿಲ್ಲಿ ಈ ಮಾಹಿತಿ ನೀಡಿದ ಎಸ್ಪಿ ಇಶಾ ಪಂತ್ ಕೊಲೆ ಯಾದಗಿರಿ ಜಿಲ್ಲೆ ಸುರಪುದಲ್ಲಾದರೂ ಶವ 50 ಕಿಮೀ ದೂರದವರೆಗೂ ಕೆನಾಲ್ ಮೂಲಕ ತೇಲಿಬಂದು ಯಡ್ರಾಮಿಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ವೈಜ್ಞಾನಿಕ ವಿಧಾನ ಬಳಸಿ ತನಿಖೆ ನಡೆಸುವಲ್ಲಿ ಯಶ ಕಂಡಿದ್ದಾರೆ. ಕೊಲೆಗೆ ಅನೈತಿಕ ಸಂಬಂಧವೇ ಕಾರಣ ಎಂಬುದನ್ನೂ ಆರೋಪಿಗಳು ತನಿಖೆ ಕಾಲದಲ್ಲಿ ಒಪ್ಪಿದ್ದಾರೆ. ಬಂಧಿತರು ಕೊಲೆ ಮಾಡಲು 1.20 ಲಕ್ಷ ರು ಸುಪಾರಿ ಹಣ ಸಹ ಪಡೆದಿರೋದು ಗೊತ್ತಾಗಿದೆ ಎಂದರು.
ಕೊಲೆಯಾದ ಚಾಂದ್‌ಪಾಶಾ ಸುರಪುರದಲ್ಲಿ ರಹೇಮಾನ್ ಅವರ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ, ಇದರಿಂದ ಕುಪಿತನಾಗಿದ್ದ ರಹೇಮಾನ್ ತನ್ನ ತಮ್ಮ ಸೈಯ್ಯದ್ ಜೊತೆ ಸೇರಿ ಗೆಳೆಯರಾಗಿದ್ದ ಮಲ್ಲಿಕಾರ್ಜುನ ಮತ್ತು ಪ್ರಭುಗೌಡ ಅವರನ್ನು ಭೇಟಿ ಮಾಡಿ ಚಾಂದ್ ಕೊಲೆಗೆ ಸಂಚು ರೂಪಿಸಿದ್ದಾನೆ. ಇದಕ್ಕಾಗಿ 2 ಹಂತಗಳಲ್ಲಿ ರಹೇಮಾನ್ ಪಾತಕಿಗಳಿಗೆ 1.20 ಲಕ್ಷ ರು. ಹಣ ಸಂದಾಯ ಮಾಡಿದ್ದಾನೆ. ಇದೀಗ ಸಹೋದರರು ಹಾಗೂ ಸುಪಾರಿ ಪಡೆದವರು ಸೇರಿದಂತೆ ನಾಲ್ವರು ಪೊಲೀಸ್ ಅತಿಥಿಗಳಾಾಗಿ ಜೈಲು ಸೇರಿದ್ದಾರೆಂದು ಎಸ್ಪಿ ಇಶಾ ಪಂತ್ ಮಾಹಾತಿ ನೀಡಿದ್ದಾರೆ.
ಬೆಂಗಳೂರು: ಪೊಲೀಸರ ಮೇಲೆ ಲಾಂಗ್ ಬೀಸಿದ ಕೊಲೆ ಆರೋಪಿಗೆ ಗುಂಡೇಟು, ಬಂಧನ
ಹಂತಕರು ಯುವಕರಾಗಿದ್ದಾರೆ. ಇವರು ತಮಗಿರುವ ದುಶ್ಚಟಗಳಿಗೆ ಹಣ ಹೊಂದಿಸಲು ಇಂತಹ ಕೃತ್ಯಗಳಿಗೆ ಮುಂದಾಗಿರೋದು ವಿಚಾರಣೆಯಲ್ಲಿ ಒಪ್ಪಿದ್ದಾರೆ. ಈಚೆಗೆ ಸೇಡಂನಲ್ಲಿ ನಡೆದ ಕೊಲೆಯ ಪ್ರಕರಣದಲ್ಲೂ ಹಂತಕರು ಸುಪಾರಿ ಪಡೆದಿದ್ದರು. ಈ ಪ್ರಕರಣದಲ್ಲೂ ಸುಪಾರಿ ಪಡೆಯಲಾಗಿದೆ. ಹಂತಕರು ಎರಡೂ ಕಡೆ ಯುವತರೇ ಆಗಿರೋದು ಆತಂಕದ ಸಂಗತಿ. ಯುವಕರು ಷೋಕಿಗಾಗಿ ಹಣ ಹೊಂದಿಸಲು ಅಪರಾಧಕ್ಕೆ ಮುಂದಾಗುತ್ತಿದ್ದಾರೆ ಎಂದು ಎಸ್ಪಿ ಇಶಾ ಪಂತ್ ಹೇಳಿದರು.
ಜೇವರ್ಗಿ ಪ್ರಭಾರ ಸಿಪಿಐ ಪರಶುರಾಮ ವನಂಜಕರ್, ಯಡ್ರಾಮಿ ಪಿಎಸ್‌ಐ ಬಸವರಾಜ ಚಿತಕೋಟೆ, ಸಿಬ್ಬಂದಿ ಸುರೇಶ, ಚಂದ್ರಕಾಂತ, ಅಣ್ಣಪ್ಪ, ಮಲ್ಲಣ್ಣ, ಬಲರಾಮ ಅವರನ್ನೊಳಗೊಂಡ ತಂಡ ಕೊಲೆಗಡುಕರ ಕರಾರುವಾಕ್ಕಾದ ಮಾಹಿತಿ ಕಲೆ ಹಾಕುವ ಮೂಲಕ ನಿಗೂಢ ಕೊಲೆ ರಹಸ್ಯ ಭೇದಿಸಿದೆ. ತಂಡದ ಈ ಕೆಲಸಕ್ಕೆ ಎಸ್ಪಿ ಇಶಾ ಪಂತ್ ಮೆಚ್ಚುಗೆ ಸೂಚಿಸಿದ್ದಾರೆ.