ಇತ್ತೀಚೆಗೆ ರೌಡಿ ಶೀಟರ್‌ನನ್ನು ಕೊಲೆ ಮಾಡಿದ್ದ ಆರೋಪಿ, ಸ್ಥಳ ಮಹಜರಿಗಾಗಿ ಕರೆದೊಯ್ದಾಗ ಲಾಂಗ್‌ನಿಂದ ಹಲ್ಲೆ

ಪೀಣ್ಯ ದಾಸರಹಳ್ಳಿ(ನ.26): ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಮಹಜರಿಗೆ ತೆರಳಿದ್ದ ವೇಳೆ ಪೊಲೀಸರ ಮೇಲೆ ಲಾಂಗ್‌ ಬೀಸಿ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಕೊಲೆ ಆರೋಪಿಯೊಬ್ಬನಿಗೆ ಮಾದನಾಯಕನಹಳ್ಳಿ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.

ಪೊಲೀಸರ ಗುಂಡೇಟು ತಗುಲಿ ಕಾಲಿಗೆ ಗಾಯಗೊಂಡಿರುವ ರೌಡಿ ರಾಜರಾಜನ್‌ ಅಲಿಯಾಸ್‌ ಸೇಠು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ರಾಜರಾಜನ್‌ ಲಾಂಗ್‌ನಿಂದ ನಡೆಸಿದ ಹಲ್ಲೆಯಿಂದ ಮಾದನಾಯಕನಹಳ್ಳಿ ಪೊಲೀಸ್‌ ಪೇದೆ ಹಾಜಿಮಲಂಗ್‌ ಇನಾಮದರ್‌ ಎಡಗೈಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Belagavi Crime: ಗಂಡನ ಮನೆಗೆ ಬರಲು ಒಲ್ಲೆ ಎಂದ ಪತ್ನಿ ಮೇಲೆ ಫೈರಿಂಗ್‌..!

ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ಮಾಚೋಹಳ್ಳಿಯ ಗೋಡನ್‌ ಒಂದರ ಬಳಿ ನವೆಂಬರ್‌ 15ರಂದು ರೌಡಿಶೀಟರ್‌ ನಟರಾಜ ಅಲಿಯಾಸ್‌ ಮುಳ್ಳು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜರಾಜನ್‌ ಹಾಗೂ ಕುಮಾರ್‌ನನ್ನು ಎರಡು ದಿನಗಳ ಹಿಂದೆ ಬಂಧಿಸಲಾಗಿತ್ತು. ಕೊಲೆಗೆ ಹಳೇ ವೈಷಮ್ಯವೇ ಕಾರಣ ಇರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು.

ಅದರಂತೆ ಬಂಧಿತ ಪ್ರಮುಖ ಆರೋಪಿ ರಾಜರಾಜನ್‌ನನ್ನು ಪೊಲೀಸರ ತಂಡ ಶುಕ್ರವಾರ ಮುಂಜಾನೆ ಸ್ಥಳ ಮಹಜರಿಗೆ ಕರೆತಂದಿದ್ದರು. ಈ ಸಂದರ್ಭದಲ್ಲಿ ಕೊಲೆಗೆ ಬಳಸಿದ ಲಾಂಗನ್ನು ಹುಡುಕಿ ತೆಗೆದ ಆರೋಪಿ ರಾಜರಾಜನ್‌ ಏಕಾಏಕಿ ಪೊಲೀಸರ ಮೇಲೆ ಲಾಂಗ್‌ ಬೀಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಪೇದೆ ಹಾಜಿಮಲಂಗ್‌ ಇನಾಮದರ್‌ ಎಡಗೈಗೆ ತೀವ್ರವಾಗಿ ಗಾಯವಾಗಿದೆ. ಪೊಲೀಸ್‌ ಇನ್‌ಸ್ಪೆಕ್ಟರ್‌ ಬಿ.ಎಸ್‌.ಮಂಜುನಾಥ್‌ ಗಾಳಿಯಲ್ಲಿ ಗುಂಡು ಹಾರಿಸಿ ಆರೋಪಿಗೆ ಎಚ್ಚರಿಕೆ ನೀಡಿದ್ದಾರೆ. ಆದರೂ ರಾಜರಾಜನ್‌ ಮತ್ತೆ ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಮತ್ತೊಂದು ಗುಂಡು ಹಾರಿಸಿದ್ದಾರೆ. ಆ ಗುಂಡು ಅರೊಪಿ ರಾಜರಾಜನ್‌ ಎಡಗಾಲಿಗೆ ತಗುಲಿ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಬಂಧಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಗ್ರಾಮಾಂತರ ಎಸ್‌.ಪಿ.ಬಾಲದಂಡಿ ತಿಳಿಸಿದ್ದಾರೆ.