3 ವರ್ಷಗಳ ಹಿಂದೆ ಹುಲಿ ಉಗುರು ಖರೀದಿಸಿದ ಬಗ್ಗೆ ಬಿಗ್‌ಬಾಸ್ ವರ್ತೂರ್ ಸಂತೋಷ್ ತಪ್ಪೊಪ್ಪಿಗೆ
ಹುಲಿ ಉಗುರು ಇರುವ ಲಾಕೆಟ್ ಧರಿಸಿದ ಆರೋಪದಲ್ಲಿ ಬಿಗ್‌ಬಾಸ್ ಮನೆಯಿಂದ ಬಂಧನವಾಗಿರುವ ಹಳ್ಳಿಕಾರ್ ಒಡೆಯ ಖ್ಯಾತಿಯ ವರ್ತೂರ್ ಸಂತೋಷ್ ಅವರು ಅರಣ್ಯ ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.
ಬೆಂಗಳೂರು (ಅ.23): ಹುಲಿ ಉಗುರು ಇರುವ ಲಾಕೆಟ್ ಧರಿಸಿದ ಆರೋಪದಲ್ಲಿ ಬಿಗ್‌ಬಾಸ್ ಮನೆಯಿಂದ ಬಂಧನವಾಗಿರುವ ಹಳ್ಳಿಕಾರ್ ಒಡೆಯ ಖ್ಯಾತಿಯ ವರ್ತೂರ್ ಸಂತೋಷ್ ಅವರು ಅರಣ್ಯ ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. 3 ವರ್ಷಗಳ ಹಿಂದೆ ತಮಿಳುನಾಡಿನ ವ್ಯಕ್ತಿಯೊಬ್ಬರಿಂದ ಹುಲಿ ಉಗುರು ಖರೀದಿ ಮಾಡಿದ್ದೆ. ಆದರೆ ಅದನ್ನು ಧರಿಸುವುದು ತಪ್ಪೆಂದು ತಿಳಿದಿರಲಿಲ್ಲ ಎಂದು ಅಧಿಕಾರಿಗಳ ಮುಂದೆ ಹೇಳಿದ್ದಾರೆ ಎಂದು ವರದಿಯಾಗಿದೆ.
ಹುಲಿ ಉಗುರು ಧರಿಸಿದ್ಧ ವರ್ತೂರು ಸಂತೋಷ್ ಬಂಧನ, ಬಿಗ್ ಬಾಸ್ ಇತಿಹಾಸದಲ್ಲೇ ಇದು ಮೊದಲು!
ಸದ್ಯ ಅವರನ್ನು ವೈದ್ಯಕೀಯ ಪರೀಕ್ಷೆ ಮುಗಿಸಿ ಮತ್ತೆ ಕರೆತಂದ ರಾಮೋಹಳ್ಳಿ ಅರಣ್ಯಾಧಿಕಾರಿಗಳು ಕಗ್ಗಲಿಪುರ ಅರಣ್ಯ ಇಲಾಖೆ ಕಚೇರಿಯಲ್ಲಿರಿಸಿದ್ದಾರೆ. ಇಂದು ಮ್ಯಾಜಿಸ್ಟ್ರೇಟ್ ಮುಂದೆ ಅಧಿಕಾರಿಗಳು ಹಾಜರುಪಡಿಸಲಿದ್ದಾರೆ ಎಂದು ಸುವರ್ಣ ನ್ಯೂಸ್ ಗೆ ಬೆಂಗಳೂರು ಅರಣ್ಯ ಸಂರಕ್ಷಣಾ ಅಧಿಕಾರಿ ರವೀಂದ್ರ ಮಾಹಿತಿ ನೀಡಿದ್ದಾರೆ.
ಪ್ರಾಥಮಿಕ ತನಿಖೆಯ ನಂತರ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯಾಗಲಿದೆ. ಚಾರ್ಜ್ ಶೀಟ್ ಸಲ್ಲಿಕೆ ನಂತರ ಸಾಕ್ಷಿಗಳನ್ನು ಒದಗಿಸಲಾಗುತ್ತದೆ. ಹೀಗೆ ಪ್ರಕರಣದಲ್ಲಿ ಹುಲಿ ಉಗುರು ಧರಿಸಿರುವುದು ಮತ್ತು ಹೇಗೆ ಸಿಕ್ಕಿತು ಎಂಬ ಬಗ್ಗೆ ಸಾಬೀತಾದ್ರೆ 3 ವರ್ಷದಿಂದ 7 ವರ್ಷದವರಗೆ ಸಂತೋಷ್‌ಗೆ ಶಿಕ್ಷೆಯಾಗುವ ಸಾಧ್ಯತೆ ಇದೆ.
BBK10 ಎರಡನೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಗೌರೀಶ್
ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿ ಸ್ಪರ್ಧಿ ಒಬ್ಬ ಅರೆಸ್ಟ್ ಮಾಡಲಾಗಿದ್ದು, ಭಾನುವಾರ ಮಧ್ಯಾಹ್ನ 5.30ಕ್ಕೆ ಅರಣ್ಯಾಧಿಕಾರಿಗಳು ಬಂಧನಕ್ಕೆ ತೆರಳಿದ್ದರು. ವೀಕೆಂಡ್ ಶೂಟಿಂಗ್ ಇದ್ದ ಕಾರಣ 9.30 ತನಕ ಕಾಯಿಸಿದ ಬಿಗ್ ಬಾಸ್ ಟೀಂ ಬಳಿಕ ಅಧಿಕಾರಿಗಳಿಗೆ ಮುಂದಿನ ಪ್ರಕ್ರಿಯೆಗೆ ಅವಕಾಶ ಮಾಡಿ ಕೊಟ್ಟಿತ್ತು ಎಂದು ತಿಳಿದುಬಂದಿದೆ. ಇನ್ನೊಂದೆಡೆ ಅರಣ್ಯಾಧಿಕಾರಿ 4 ದಿನಗಳ ಹಿಂದೆಯೇ ಈ ಬಗ್ಗೆ ಬಿಗ್‌ಬಾಸ್ ಟೀಂಗೆ ಮಾಹಿತಿ ನೀಡಿದ್ದರು ಎಂದು ಹೇಳಲಾಗುತ್ತಿದೆ.
ಪ್ರಕರಣ ಸಾಬೀತಾದರೆ 3 ರಿಂದ7 ವರ್ಷ ಜೈಲು:
1972 ರ ಅರಣ್ಯ ಕಾಯ್ದೆ ಅಡಿ ವನ್ಯ ಜೀವಿಯ ಮೂಳೆ ಅಥವಾ ಚರ್ಮವನ್ನು ಧರಿಸುವುದು ಅಪರಾಧವಾಗಿದೆ. ಇದೇ ಕಾಯ್ದೆಯಡಿ ಹುಲಿಯನ್ನು ಷೆಡ್ಯೂಲ್ 1 ರಡಿ ಅಳಿವಿನಂಚಿನ ಪ್ರಾಣಿಗಳು ಎಂದು ಗುರುತು ಮಾಡಲಾಗಿದೆ. ಹೀಗಾಗಿ ಹುಲಿಯ ಉಗುರು, ಚರ್ಮ ಅಥವಾ ಮೂಳೆ ಧರಿಸುವುದು ಗಂಭೀರ ಅಪರಾಧವಾಗಿದೆ.
ಹುಲಿ ಉಗುರಿನ ಜಾಡು ಬೆನ್ನತ್ತಿದ ಅರಣ್ಯ ಅಧಿಕಾರಿಗಳು
ಸಂತೋಷ್ ಬಳಿ ಸಿಕ್ಕಿರುವ ಹುಲಿ ಉಗುರಿನ ಜಾಡು ಬೆನ್ನತ್ತಿರುವ ಅರಣ್ಯ ಅಧಿಕಾರಿಗಳು ಉಗುರನ್ನ ಸಾವನ್ನಪ್ಪಿರುವ ಹುಲಿಗಳ ಡೇಟಾ ಮೂಲಕ ತಾಳೆ ಮಾಡಿ ಪರಿಶೀಲನೆ ನಡೆಸಲಿದ್ದಾರೆ. ಯಾವುದಾದ್ರೂ ಸತ್ತ ಹುಲಿಗೆ ಸಂಬಂಧಪಟ್ಟ ಉಗುರಾ ಎಂದು ತಾಳೆ ಮಾಡಲಿದ್ದಾರೆ. ಇದಕ್ಕಾಗಿ ರಾಷ್ಟ್ರೀಯ ಹುಲಿ ಸಂರಕ್ಷಣಾ ವಿಭಾಗದಲ್ಲಿ ಇರುವ ಡೇಟಾದಲ್ಲಿ ಪರಿಶೀಲನೆ ನಡೆಸಲಿದ್ದಾರೆ. ಒಂದು ವೇಳೆ ಡೇಟಾ ತಾಳೆಯಾದ್ರೆ ಆ ಹುಲಿಯ ಸಾವಿನ ಬಗ್ಗೆ ಇನ್ವೆಸ್ಟಿಗೇಶನ್ ಕೂಡ ನಡೆಯಲಿದೆ.
ಪತ್ತೆ ಹಚ್ಚುವುದು ಹೇಗೆ?
- ವ್ಯಕ್ತಿ ಧರಿಸಿದ ಲಾಕೆಟ್ ಮಾಡಿದವರು ಯಾರು?
- ಲಾಕೆಟ್ ಮಾಡಿದವರಿಗೆ ಯಾವ ಮೂಲದಿಂದ ಉಗುರು ಸಿಕ್ಕಿತ್ತು.
- ಯಾವುದಾದರೂ ಅರಣ್ಯದಲ್ಲಿ ಹುಲಿಯನ್ನು ಬೇಟೆಯಾಡಲಾದ ಪ್ರಕರಣಗಳು ದಾಖಲಾಗಿದೆಯೇ?
- ಆ ಪ್ರಕರಣದಲ್ಲಿ ಪ್ರಾಣಿಯ ಕಳೆಬರಹದಲ್ಲಿ ಚರ್ಮ ಅಥವಾ ಹಲ್ಲು,ಅಥವಾ ಉಗುರುಗಳು ಕಾಣೆಯಾಗಿರುವ ಬಗ್ಗೆ ಉಲ್ಲೇಖ ಇದೆಯೇ ಎಂದು ಪರಿಶೀಲನೆ ಮಾಡಲಾಗುತ್ತದೆ.