ಬೆಂಗಳೂರಿನಲ್ಲಿ ಆಸ್ತಿ ವಿಚಾರವಾಗಿ ನಡೆದ ಜಗಳದಲ್ಲಿ, ಹಿರಿಯ ಮಗ ಪ್ರಕಾಶ್ ತನ್ನ ವೃದ್ಧ ತಾಯಿ ಲಕ್ಷ್ಮೀ ಅವರ ಮೇಲೆ ವಾಕಿಂಗ್ ಸ್ಟಿಕ್‌ನಿಂದ ಮಾರಣಾಂತಿಕ ಹಲ್ಲೆ.. ಗಂಭೀರವಾಗಿ ಗಾಯಗೊಂಡ ತಾಯಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಈ ಸಂಬಂಧ ತಿಲಕನಗರ ಪೊಲೀಸರು ಆರೋಪಿ ಮಗ ಪೊಲೀಸರ ವಶಕ್ಕೆ

ಬೆಂಗಳೂರು (ಮಾ.15): ಹಣ ಆಸ್ತಿ ಮೇಲಿನ ದುರಾಸೆ ಮನುಷ್ಯರಿಂದ ಎಂಥ ಪಾಪ ಕೃತ್ಯಗಳಿಗೆ ಇಳಿಯವಂತೆ ಮಾಡುತ್ತೆ, ಕ್ರೂರ ಸಂಬಂಧಗಳಿಗೂ ನಾಂದಿ ಹಾಡುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಆಸ್ತಿಗಾಗಿ ಸ್ವಂತ ತಾಯಿಯ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿದ್ದ ಆರೋಪಿ ಪ್ರಕಾಶ್ ಎಂಬಾತನನ್ನು ತಿಲಕನಗರ ಪೊಲೀಸರು ಇಂದು ಬಂಧಿಸಿದ್ದಾರೆ. ಮಾರ್ಚ್ 12ರಂದು ನಡೆದಿದ್ದ ಈ ಭೀಕರ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Add Asianetnews Kannada as a Preferred SourcegooglePreferred

ಮೊದಲನೇ ಮಗನಿಂದಲೇ ಕೃತ್ಯ

ವೃದ್ಧೆ ಲಕ್ಷ್ಮೀ ಅವರಿಗೆ ಒಟ್ಟು ಮೂವರು ಗಂಡು ಮಕ್ಕಳು. ಪತಿ ಹಾಗೂ ಎರಡನೇ ಮಗ ಈಗಾಗಲೇ ಮೃತಪಟ್ಟಿದ್ದಾರೆ. ಮೊದಲನೇ ಮಗ ಪ್ರಕಾಶ್ ಹಾಗೂ ಮೂರನೇ ಮಗ ರಮೇಶ್ ನಡುವೆ ದೀರ್ಘಕಾಲದಿಂದ ಆಸ್ತಿ ಹಂಚಿಕೆ ವಿಚಾರವಾಗಿ ಜಗಳ ನಡೆಯುತ್ತಿತ್ತು. ಈ ಸಂಬಂಧ 2016ರಿಂದಲೂ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಯುತ್ತಿದ್ದು, ಆಸ್ತಿ ತನ್ನ ಪಾಲಾಗಬೇಕೆಂದು ಪ್ರಕಾಶ್ ಹಠಕ್ಕೆ ಬಿದ್ದಿದ್ದ ಎನ್ನಲಾಗಿದೆ.

ವಾಕಿಂಗ್ ಸ್ಟಿಕ್‌ನಿಂದ ಹೆತ್ತ ತಾಯಿ ಮೇಲೆ ಹಲ್ಲೆ

ಮಾ.12ರಂದು ಏಕಾಏಕಿ ಮನೆಗೆ ನುಗ್ಗಿದ ಪ್ರಕಾಶ್, ತಮ್ಮ ರಮೇಶ್ ಜೊತೆ ಗಲಾಟೆ ಆರಂಭಿಸಿದ್ದಾನೆ. ಈ ವೇಳೆ ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ಒಡೆದು ಹಾಕಿ ರಂಪಾಟ ಮಾಡಿದ್ದಾನೆ. ಜಗಳ ವಿಕೋಪಕ್ಕೆ ಹೋದಾಗ, ಅದನ್ನು ಬಿಡಿಸಲು ಬಂದ ವೃದ್ಧ ತಾಯಿ ಲಕ್ಷ್ಮೀ ಅವರ ಮೇಲೆ ಪ್ರಕಾಶ್ ದಾಳಿ ಮಾಡಿದ್ದಾನೆ. ಕೈಯಲ್ಲಿದ್ದ ವಾಕಿಂಗ್ ಸ್ಟಿಕ್‌ನಿಂದಲೇ ತಾಯಿಯ ತಲೆಗೆ ಬಲವಾಗಿ ಹೊಡೆದಿದ್ದು, ವೃದ್ಧೆ ತೀವ್ರ ರಕ್ತಸ್ರಾವದಿಂದ ಮನೆಯಲ್ಲೇ ಕುಸಿದು ಬಿದ್ದಿದ್ದಾರೆ.

ಸಾವು-ಬದುಕಿನ ನಡುವೆ ತಾಯಿಯ ಹೋರಾಟ

ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿಯನ್ನು ಕಂಡು ಗಾಬರಿಯಾದ ಕಿರಿ ಮಗ ರಮೇಶ್, ಕೂಡಲೇ ಚಿಕಿತ್ಸೆಗಾಗಿ ಜಯನಗರದ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಲೆಗೆ ಗಂಭೀರವಾದ ಪೆಟ್ಟು ಬಿದ್ದಿರುವುದರಿಂದ ತಾಯಿ ಲಕ್ಷ್ಮೀ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಪ್ರಸ್ತುತ ಅವರು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

FIR: ಆರೋಪಿ ಪ್ರಕಾಶ್ ಅರೆಸ್ಟ್

ಘಟನೆ ಸಂಬಂಧ ಕಿರಿಯ ಮಗ ರಮೇಶ್ ತನ್ನ ಅಣ್ಣ ಪ್ರಕಾಶ್ ವಿರುದ್ಧ ತಿಲಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಲೆಮರೆಸಿಕೊಂಡಿದ್ದ ಆರೋಪಿ ಪ್ರಕಾಶ್‌ನನ್ನು ಬಂಧಿಸಿದ್ದಾರೆ. ಪ್ರಸ್ತುತ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.