ಸಚಿನ್, ದ್ರಾವಿಡ್, ಸೆಹ್ವಾಗ್ ಅವರ ಮಕ್ಕಳು ಕ್ರಿಕೆಟ್‌ನಲ್ಲಿ ಮುಂದುವರಿದರೆ, ಸೌರವ್ ಗಂಗೂಲಿ ಮಗಳು ಸನಾ ಗಂಗೂಲಿ ಯಾವ ಕ್ಷೇತ್ರದಲ್ಲಿ ಯಶಸ್ಸು ಕಂಡಿದ್ದಾರೆ ಎನ್ನುವುದನ್ನು ನೋಡೋಣ ಬನ್ನಿ.
ಸಾಮಾನ್ಯವಾಗಿ ಭಾರತೀಯ ಕ್ರಿಕೆಟ್‌ನ ದಂತಕಥೆಗಳ ಮಕ್ಕಳು ತಮ್ಮ ತಂದೆಯ ಹಾದಿಯನ್ನೇ ಹಿಡಿದು ಮೈದಾನಕ್ಕಿಳಿಯುವುದನ್ನು ನಾವು ನೋಡುತ್ತೇವೆ. ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮತ್ತು ವೀರೇಂದ್ರ ಸೆಹ್ವಾಗ್ ಅವರ ಮಕ್ಕಳು ಪ್ರಸ್ತುತ ಕ್ರಿಕೆಟ್ ಅಂಗಳದಲ್ಲಿ ತೀವ್ರ ಪರಿಶ್ರಮ ಪಡುತ್ತಾ ತಮ್ಮದೇ ಆದ ಗುರುತು ಮೂಡಿಸಲು ಹೆಣಗಾಡುತ್ತಿದ್ದಾರೆ. ಆದರೆ, ಭಾರತದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಸೌರವ್ ಗಂಗೂಲಿ ಅವರ ಮಗಳು ಸನಾ ಗಂಗೂಲಿ ಮಾತ್ರ ಕ್ರಿಕೆಟ್ ಮೈದಾನದಿಂದ ದೂರ ಉಳಿದು, ಕಾರ್ಪೊರೇಟ್ ಪ್ರಪಂಚದಲ್ಲಿ ವಿಭಿನ್ನ ಹಾದಿ ಹಿಡಿದು ಸಾಧನೆ ಮಾಡುತ್ತಿದ್ದಾರೆ.
ಕ್ರಿಕೆಟ್ ಮೈದಾನದಲ್ಲಿ ದಿಗ್ಗಜರ ಮಕ್ಕಳು!
ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ದೇಶೀಯ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿದ್ದು, ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸದಸ್ಯರಾಗಿ ಬೆಳೆಯುತ್ತಿದ್ದಾರೆ. ಇನ್ನು ಭಾರತೀಯ ಕ್ರಿಕೆಟ್‌ನ ಮತ್ತಿಬ್ಬರು ದಿಗ್ಗಜರಾದ ರಾಹುಲ್ ದ್ರಾವಿಡ್ ಮತ್ತು ವೀರೇಂದ್ರ ಸೆಹ್ವಾಗ್ ಅವರ ಪುತ್ರರು ಇತ್ತೀಚೆಗೆ ಭಾರತ ಅಂಡರ್-19 ತಂಡಕ್ಕೆ ಆಯ್ಕೆಯಾಗುವ ಮೂಲಕ ದೇಶದ ಗಮನ ಸೆಳೆದಿದ್ದಾರೆ. ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್ ಮತ್ತು ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವೇ ದ್ರಾವಿಡ್ ಅವರು ಭಾರತ ಅಂಡರ್-19 ತಂಡದ ಪರವಾಗಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಕಣಕ್ಕಿಳಿಯುತ್ತಿದ್ದಾರೆ.
ಡಿಪಿಎಲ್‌ನಲ್ಲಿ ಆರ್ಯವೀರ್!
ಆರ್ಯವೀರ್ ಸೆಹ್ವಾಗ್ ಇತ್ತೀಚೆಗೆ ನಡೆದ ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ (DPL) 'ಡೆಲ್ಲಿ ಲಯನ್ಸ್' ತಂಡದ ಪರವಾಗಿ ಆಡುತ್ತಾ ತಮ್ಮ ತಂದೆಯಂತೆಯೇ ಬಿರುಸಿನ ಬ್ಯಾಟಿಂಗ್ ಝಲಕ್ ತೋರಿಸಿ ಪ್ರೇಕ್ಷಕರನ್ನು ರಂಜಿಸಿದ್ದರು. ಹೀಗೆ ದಿಗ್ಗಜರ ಗಂಡು ಮಕ್ಕಳು ಕ್ರಿಕೆಟ್ ಬ್ಯಾಟ್ ಹಿಡಿದು ಮೈದಾನಕ್ಕಿಳಿದಿದ್ದರೆ, ಸೌರವ್ ಗಂಗೂಲಿಯವರ ಏಕೈಕ ಪುತ್ರಿ ಸನಾ ಗಂಗೂಲಿ ಆರಿಸಿಕೊಂಡಿದ್ದು ಸಂಪೂರ್ಣ ಭಿನ್ನವಾದ ಹಾದಿ.
ಲಂಡನ್‌ನಲ್ಲಿ ಸನಾ ಶಿಕ್ಷಣ ಮತ್ತು ಕಾರ್ಪೊರೇಟ್ ವೃತ್ತಿಜೀವನ!
ಸೌರವ್ ಗಂಗೂಲಿ ಮತ್ತು ಡೊನ್ನಾ ಗಂಗೂಲಿ ದಂಪತಿಯ ಪುತ್ರಿ ಸನಾ ಗಂಗೂಲಿ ಲಂಡನ್‌ನಲ್ಲಿ ತಮ್ಮ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಕಳೆದೆರಡು ವರ್ಷಗಳಿಂದ ಕೋಲ್ಕತ್ತಾದಿಂದ ದೂರವಿದ್ದು ಲಂಡನ್‌ನಲ್ಲೇ ನೆಲೆಸಿರುವ ಸನಾ, ವಿಶ್ವಪ್ರಸಿದ್ಧ 'ಡೆಲೋಯಿಟ್' ಸಲಹಾ ಸಂಸ್ಥೆಯಲ್ಲಿ ಇಂಟರ್ನ್ ಆಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದರು. ಇಂಟರ್ನ್‌ಶಿಪ್ ವೇಳೆಯಲ್ಲೇ ಅವರಿಗೆ ತಿಂಗಳಿಗೆ ಸುಮಾರು 1.5 ಲಕ್ಷ ರೂಪಾಯಿ ವೇತನ ಲಭಿಸುತ್ತಿತ್ತು. ಪ್ರಸ್ತುತ ಅವರು ಅದೇ ಸಂಸ್ಥೆಯಲ್ಲಿ ಶಾಶ್ವತ ಉದ್ಯೋಗಿಯಾಗಿದ್ದು, ಅವರ ವೇತನ ಮತ್ತು ಹುದ್ದೆಯು ಹಲವು ಪಟ್ಟು ಹೆಚ್ಚಾಗಿದೆ.
ಎಲ್ಲಿದ್ದಾರೆ ಗಂಗೂಲಿ ಮಗಳು!
ಸೌರವ್ ಗಂಗೂಲಿ ಮತ್ತು ಅವರ ಪತ್ನಿ ಡೊನ್ನಾ ತಮ್ಮ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ಆಗಾಗ ಲಂಡನ್‌ಗೆ ತೆರಳಿ ಮಗಳನ್ನು ಭೇಟಿಯಾಗುತ್ತಿದ್ದರು. ಸನಾ ಈಗ ಭಾರತಕ್ಕೆ ಹಿಂತಿರುಗಬೇಕು ಎಂಬುದು ನನ್ನ ಆಸೆ. ಆದರೆ ಅವಳ ಸ್ವತಂತ್ರ ಚಿಂತನೆ ಮತ್ತು ನಿರ್ಧಾರಗಳಲ್ಲಿ ನಾನು ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ. ಹಾಗಾಗಿ ಆಕೆ ಲಂಡನ್‌ನಲ್ಲೇ ಮುಂದುವರಿದಿದ್ದಾಳೆ ಎಂದು ಗಂಗೂಲಿ ಇತ್ತೀಚೆಗೆ ತಿಳಿಸಿದ್ದರು.
ಶೀಘ್ರದಲ್ಲೇ ಭಾರತಕ್ಕೆ ಕಾಯಂ ಪುನರಾಗಮನ!
ಸನಾ ಗಂಗೂಲಿ ಶೀಘ್ರದಲ್ಲೇ ಭಾರತಕ್ಕೆ ಮರಳಲಿದ್ದಾರೆ ಎಂಬ ಸಿಹಿ ಸುದ್ದಿಯನ್ನು ಸ್ವತಃ ಸೌರವ್ ಗಂಗೂಲಿ ಹಂಚಿಕೊಂಡಿದ್ದಾರೆ. ಈ ಬಾರಿ ಅವರು ಬರೀ ರಜೆಗಾಗಿ ಮನೆಗೆ ಬರುತ್ತಿಲ್ಲ, ಬದಲಾಗಿ ಶಾಶ್ವತವಾಗಿ ಕೋಲ್ಕತ್ತಾಗೆ ಹಿಂತಿರುಗುತ್ತಿದ್ದಾರೆ. ಇನ್ಮುಂದೆ ಅವರು ಭಾರತದಲ್ಲೇ ಇದ್ದು, ಕೋಲ್ಕತ್ತಾ ಕಚೇರಿಯಿಂದಲೇ ತಮ್ಮ ಕೆಲಸವನ್ನು ಮುಂದುವರಿಸಲಿದ್ದಾರೆ.
ಮಗಳ ಕುರಿತು ಗಂಗೂಲಿ ಭಾವುಕ ನುಡಿ!
ತಮ್ಮ ಮಗಳ ಕುರಿತು ಭಾವನಾತ್ಮಕವಾಗಿ ಮಾತನಾಡಿದ ಗಂಗೂಲಿ, ತನಗೆ ಮೊದಲ ಸಂಬಳ ಮತ್ತು ಶಾಶ್ವತ ಕೆಲಸ ಸಿಕ್ಕ ನಂತರ ಸನಾ ನನಗೂ ಹಾಗೂ ಡೊನ್ನಾಗೆ ಸಾಕಷ್ಟು ಬೆಲೆಬಾಳುವ ಉಡುಗೊರೆಗಳನ್ನು ತಂದುಕೊಟ್ಟಿದ್ದಳು. ನಮಗೆ ಆ ಉಡುಗೊರೆಗಳ ಅಗತ್ಯವಿರಲಿಲ್ಲ, ಆದರೆ ಮಗಳು ತನ್ನ ಸ್ವಂತ ಗಳಿಕೆಯಲ್ಲಿ ತಂದೆ-ತಾಯಿಗೆ ಪ್ರೀತಿಯಿಂದ ತಂದಿಕೊಟ್ಟಾಗ ಸಿಗುವ ಆನಂದವೇ ಬೇರೆ" ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಕೆಟ್ ದಿಗ್ಗಜರ ಮಕ್ಕಳು ಮೈದಾನದಲ್ಲಿ ಸಿಕ್ಸರ್-ಫೋರ್‌ಗಳ ಮೂಲಕ ಸದ್ದು ಮಾಡುತ್ತಿದ್ದರೆ, ಸೌರವ್ ಗಂಗೂಲಿ ಮಗಳು ಸನಾ ತಮ್ಮದೇ ಆದ ಸ್ವತಂತ್ರ ಸಾಮರ್ಥ್ಯದಿಂದ ಕಾರ್ಪೊರೇಟ್ ಕ್ಷೇತ್ರದಲ್ಲಿ ಯಶಸ್ಸಿನ ಮೆಟ್ಟಿಲೇರಿ ಕ್ರೀಡಾಲೋಕದ ಕುಟುಂಬಗಳಿಗೆ ಹೊಸ ಮಾದರಿಯಾಗಿದ್ದಾರೆ.


