ಇಲ್ಲಿನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ 2024ನೇ ಸಾಲಿನ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಮೊದಲ ಬಾರಿಗೆ ನಾಯಕನಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಋತುರಾಜ್ ಗಾಯಕ್ವಾಡ್ ಯಶಸ್ವಿಯಾಗಿ ಮುನ್ನಡೆಸಿದ್ದಾರೆ.
ಚೆನ್ನೈ(ಮಾ.23): 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ವಿಧ್ಯುಕ್ತ ಚಾಲನೆ ಸಿಕ್ಕಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಋತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಭರ್ಜರಿ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಇಲ್ಲಿನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ 2024ನೇ ಸಾಲಿನ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಮೊದಲ ಬಾರಿಗೆ ನಾಯಕನಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಋತುರಾಜ್ ಗಾಯಕ್ವಾಡ್ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಮುಸ್ತಾಫಿಜುರ್ ರೆಹಮಾನ್ ಮಾರಕ ಬೌಲಿಂಗ್ ಹಾಗೂ ರಚಿನ್ ರವೀಂದ್ರ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಆರ್‌ಸಿಬಿ ಎದುರು 6 ವಿಕೆಟ್ ಭರ್ಜರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.
IPL 2024: ಚಾಂಪಿಯನ್‌ಗೆ ಚೆನ್ನೈಗೆ ತಲೆಬಾಗಿದ ಆರ್‌ಸಿಬಿ!
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ಸ್ಪೋಟಕ ಆರಂಭ ಪಡೆಯಿತಾದರೂ, ಆ ಬಳಿಕ ಮುಸ್ತಾಫಿಜುರ್ ಮಾರಕ ದಾಳಿಗೆ ತತ್ತರಿಸಿ ಹೋಯಿತು. ಇದರ ಹೊರತಾಗಿಯೂ ದಿನೇಶ್ ಕಾರ್ತಿಕ್ ಹಾಗೂ ಅನುಜ್ ರಾವತ್ ಸ್ಪೋಟಕ ಬ್ಯಾಟಿಂಗ್ ನಡೆಸಿದರು. ಪರಿಣಾಮ ಆರ್‌ಸಿಬಿ ತಂಡವು ನಿಗಧಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 173 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಸಿಎಸ್‌ಕೆ ಪರ ಎಡಗೈ ವೇಗಿ ಮುಸ್ತಾಫಿಜುರ್ ರೆಹಮಾನ್ 29 ರನ್ ನೀಡಿ 4 ವಿಕೆಟ್ ಕಬಳಿಸಿ ಮಿಂಚಿದರು.
ಇನ್ನು ಸವಾಲಿನ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಎಡಗೈ ಆರಂಭಿಕ ಬ್ಯಾಟರ್ ರಚಿನ್ ರವೀಂದ್ರ ಸಿಡಿಲಬ್ಬರದ ಆರಂಭ ಒದಗಿಸಿಕೊಟ್ಟರು. ರಚಿನ್ ರವೀಂದ್ರ ಕೇವಲ 15 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 3 ಮುಗಿಲೆತ್ತರದ ಸಿಕ್ಸರ್ ನೆರವಿನಿಂದ ಚುರುಕಿನ 37 ರನ್ ಸಿಡಿಸಿದರು. ಪರಿಣಾಮ ಸಿಎಸ್‌ಕೆ ತಂಡವು ಮೊದಲ 7 ಓವರ್‌ನಲ್ಲೇ 71 ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು.
ಈ ಸಂದರ್ಭದಲ್ಲಿ ದಾಳಿಗಿಳಿದ ಆರ್‌ಸಿಬಿ ಸ್ಪಿನ್ನರ್ ಕರ್ಣ್ ಶರ್ಮಾ, ರಚಿನ್ ರವೀಂದ್ರ ಬಲಿ ಪಡೆಯುವಲ್ಲಿ ಯಶಸ್ವಿಯಾದರು. ರಚಿನ್ ಸಿಕ್ಸರ್ ಸಿಡಿಸುವ ಯತ್ನದಲ್ಲಿ ರಜತ್ ಪಾಟೀದಾರ್‌ಗೆ ಕ್ಯಾಚಿತ್ತು ಪೆವಿಲಿಯನ್ ಹಾದಿ ಹಿಡಿದರು. ರಚಿನ್ ರವೀಂದ್ರ ಔಟ್ ಆಗುತ್ತಿದ್ದಂತೆಯೇ ಆಕ್ರಮಣಕಾರಿ ಮನೋಭಾವದ ವಿರಾಟ್ ಕೊಹ್ಲಿ ವ್ಯಂಗ್ಯವಾಗಿ ರಚಿನ್‌ಗೆ ಪೆವಿಲಿಯನ್ ಕಡೆ ಹೋಗಲು ಸನ್ಹೆ ಮಾಡಿದರು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಆರ್‌ಸಿಬಿಗೆ ಕಪ್ ಗೆದ್ದು ಇದೀಗ ಆಸೀಸ್ ಪರ ಹೊಸ ಇತಿಹಾಸ ನಿರ್ಮಿಸಿದ ಪೆರ್ರಿ..!
ಇನ್ನು ವಿರಾಟ್ ಕೊಹ್ಲಿಯ ಈ ನಡೆಯ ಬಗ್ಗೆ ಆರ್‌ಸಿಬಿ ಅಭಿಮಾನಿಗಳು ಸಮರ್ಥಿಸಿಕೊಂಡಿದ್ದರೆ, ಮತ್ತೆ ಸಿಎಸ್‌ಕೆ ಕಡೆಯ ಅಭಿಮಾನಿಗಳು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಕೆಲವು ನೆಟ್ಟಿಗರಂತೂ ಇಂತಹ ವರ್ತನೆಗಳಿಂದಲೇ ಆರ್‌ಸಿಬಿ ಸೋಲುತ್ತಿರುವುದು ಎಂದು ಕೊಹ್ಲಿಯನ್ನು ಟೀಕಿಸಿದ್ದಾರೆ.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಲು ಪದೇ ಪದೇ ಎಡವುತ್ತಿದೆ. 2008ರಲ್ಲಿ ನಡೆದ ಚೊಚ್ಚಲ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವು ಚೆನ್ನೈ ತಂಡವನ್ನು ಅವರದ್ದೇ ನೆಲದಲ್ಲಿ ಮಣಿಸಿತ್ತು. ಇದಾದ ಬಳಿಕ ನಿನ್ನೆಯ ಪಂದ್ಯವೂ ಸೇರಿದಂತೆ 8 ಬಾರಿ ಮುಖಾಮುಖಿಯಾಗಿದ್ದು, 8 ಪಂದ್ಯದಲ್ಲೂ ಸಿಎಸ್‌ಕೆ ಎದುರು ಆರ್‌ಸಿಬಿಗೆ ಸೋಲು ಎದುರಾಗಿದೆ.
