ವಿಜಯ್ ಹಜಾರೆ ಟ್ರೋಫಿ 2019: ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಕರ್ನಾಟಕ
ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕ ತಂಡವು ನಿರೀಕ್ಷೆಯಂತೆಯೇ ಸೆಮಿಫೈನಲ್’ಗೆ ಲಗ್ಗೆಯಿಟ್ಟಿದೆ. ಕೆ.ಎಲ್ ರಾಹುಲ್, ರೋಹನ್ ಕದಂ, ದೇವದತ್ ಪಡಿಕ್ಕಲ್ ಕರ್ನಾಟಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಬೆಂಗಳೂರು[ಅ.21]: 2019ರ ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಕರ್ನಾಟಕ ತಂಡ ಸೆಮಿಫೈನಲ್ ಪ್ರವೇಶಿಸಿದೆ. ಭಾನುವಾರ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಪುದುಚೇರಿ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಕರ್ನಾಟಕ ಉಪಾಂತ್ಯಕ್ಕೆ ಲಗ್ಗೆ ಇಟ್ಟಿತು. ಸೋಮವಾರ ನಡೆಯಲಿರುವ ಮತ್ತೆರಡು ಕ್ವಾರ್ಟರ್‌ಫೈನಲ್ ಪಂದ್ಯಗಳ ಬಳಿಕ ಕರ್ನಾಟಕ ತಂಡದ ಸೆಮೀಸ್ ಎದುರಾಳಿ ಯಾರು ಎನ್ನುವುದು ಖಚಿತವಾಗಲಿದೆ.
ರಾಹುಲ್ ಭರ್ಜರಿ ಬ್ಯಾಟಿಂಗ್
ರಾಜ್ಯದ ವಿನಯ್ ಕುಮಾರ್ ಪ್ರತಿನಿಧಿಸುತ್ತಿರುವ ಪುದುಚೇರಿ ತಂಡ ನೀಡಿದ 208 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಕರ್ನಾಟಕ, ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾಯಿತು. ಆರಂಭಿಕರಾದ ಕೆ.ಎಲ್.ರಾಹುಲ್ ಹಾಗೂ ದೇವದತ್ ಪಡಿಕ್ಕಲ್ ಮೊದಲ ವಿಕೆಟ್‌ಗೆ 98 ರನ್‌ಗಳ ಜೊತೆಯಾಟ ನಿರ್ವಹಿಸಿದರು. ದೇವದತ್ 50 ರನ್ ಗಳಿಸಿದರೆ, ರಾಹುಲ್ 90 ರನ್ ಗಳಿಸಿ ಔಟಾಗುವ ಮೂಲಕ ಟೂರ್ನಿಯಲ್ಲಿ 2ನೇ ಶತಕ ಬಾರಿಸುವ ಅವಕಾಶದಿಂದ ವಂಚಿತರಾದರು. ರೋಹನ್ ಕದಂ (50) ಮತ್ತು ನಾಯಕ ಮನೀಶ್ ಪಾಂಡೆ (20) ತಂಡಕ್ಕೆ 9 ಓವರ್ ಬಾಕಿ ಇರುವಂತೆಯೇ ಜಯ ತಂದುಕೊಟ್ಟರು.
ಬಾಂಗ್ಲಾ ಟಿ20 ಸರಣಿ: ಕೊಹ್ಲಿಗೆ ವಿಶ್ರಾಂತಿ?
ಬೌಲರ್‌ಗಳ ಪ್ರಾಬಲ್ಯ: ರಾಜ್ಯದ ಬೌಲರ್‌ಗಳ ಮಾರಕ ದಾಳಿಗೆ ಕುಸಿದ ಪುದುಚೇರಿ ಆರಂಭದಲ್ಲಿ ರನ್‌ಗಳಿಸಲು ಪರದಾಡಿತು. ಒಂದು ಹಂತದಲ್ಲಿ 41 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಷ್ಟದಲ್ಲಿತ್ತು. ಸಾಗರ್ ತ್ರಿವೇದಿ (54) ಹಾಗೂ ಮಾರಿಮುತು(58) 7ನೇ ವಿಕೆಟ್‌ಗೆ 76 ರನ್ ಕಲೆಹಾಕಿದ್ದರಿಂದ ಚೇತರಿಸಿಕೊಂಡಿತು. ಪುದುಚೇರಿ 50 ಓವರಲ್ಲಿ 9 ವಿಕೆಟ್‌ಗೆ 207 ರನ್ ಗಳಿಸಿತು. ಕರ್ನಾಟಕ ಪರ ಪ್ರವೀಣ್ ದುಬೆ 3, ಮಿಥುನ್ ಹಾಗೂ ಕೌಶಿಕ್ ತಲಾ 2 ವಿಕೆಟ್ ಪಡೆದರು.
ಸ್ಕೋರ್:
ಪುದುಚೇರಿ 207/9 (ಮಾರಿಮುತ್ತು 58, ಸಾಗರ್ 54, ಪ್ರವೀಣ್ 3-44, ಕೌಶಿಕ್ 2-33),
ಕರ್ನಾಟಕ 213/2 (ರಾಹುಲ್ 90, ದೇವದತ್್ತ 50, ರೋಹನ್ 50)