15 ವರ್ಷದ ವೈಭವ್ ಸೂರ್ಯವಂಶಿ, ಸಚಿನ್ ತೆಂಡೂಲ್ಕರ್ ದಾಖಲೆ ಮುರಿದು ಭಾರತದ ಅತಿ ಕಿರಿಯ ಅಂತರರಾಷ್ಟ್ರೀಯ ಕ್ರಿಕೆಟಿಗನಾಗಲು ಸಜ್ಜಾಗಿದ್ದಾರೆ. ಆದರೆ, ಇಂಗ್ಲೆಂಡ್ ಪ್ರವಾಸದಲ್ಲಿ ಐಸಿಸಿಯ ಬಾಲ ಸುರಕ್ಷತಾ ನಿಯಮಗಳ ಅಡಿಯಲ್ಲಿ, ಅವರಿಗೆ ಪ್ರತ್ಯೇಕ ಚೇಂಜಿಂಗ್ ರೂಮ್ ವ್ಯವಸ್ಥೆ ಮಾಡಲಾಗುತ್ತಿದೆ.

ಲಂಡನ್ (ಜೂ.24): ಟೀಮ್ ಇಂಡಿಯಾದ 'ವಂಡರ್ ಕಿಡ್' ಎಂದೇ ಖ್ಯಾತರಾಗಿರುವ 15 ವರ್ಷದ ಹರೆಯದ ರನ್ ಮಷಿನ್ ವೈಭವ್ ಸೂರ್ಯವಂಶಿಇಂಗ್ಲೆಂಡ್ ಪ್ರವಾಸದಲ್ಲಿದ್ದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಹಾದಿಯಲ್ಲಿದ್ದಾರೆ. ಆದರೆ, ಐಸಿಸಿಯ ಕಠಿಣ ಸುರಕ್ಷತಾ ನಿಯಮಗಳ (Safeguarding Reasons) ಹಿನ್ನೆಲೆಯಲ್ಲಿ ಅವರಿಗೆ ಪ್ರತ್ಯೇಕ ಚೇಂಜಿಂಗ್ ರೂಮ್ (ಬಟ್ಟೆ ಬದಲಿಸುವ ಕೊಠಡಿ) ವ್ಯವಸ್ಥೆ ಮಾಡಲಾಗುತ್ತಿದೆ. 15 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ, ಇದೇ ಶುಕ್ರವಾರ ಬೆಲ್‌ಫಾಸ್ಟ್‌ನಲ್ಲಿ ಐರ್ಲೆಂಡ್ ವಿರುದ್ಧ ನಡೆಯಲಿರುವ ಟಿ20 ಪಂದ್ಯದ ಮೂಲಕ ಭಾರತದ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಮೂಲಕ ಭಾರತದ ಪರ ಅತಿ ಕಿರಿಯ ವಯಸ್ಸಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ ಇತಿಹಾಸ ನಿರ್ಮಿಸಲಿದ್ದಾರೆ. ಇದಾದ ನಂತರ ಮುಂದಿನ ಬುಧವಾರದಿಂದ ಡರ್ಹಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ 5 ಪಂದ್ಯಗಳ ಟಿ20 ಸರಣಿಯಲ್ಲೂ ಅವರು ಕಣಕ್ಕಿಳಿಯಲಿದ್ದಾರೆ.

ಮಾಸ್ಟರ್ ಬ್ಲಾಸ್ಟರ್ ಸಚಿನ್ ದಾಖಲೆ ಧೂಳೀಪಟ!

ಇಲ್ಲಿಯವರೆಗೆ ಭಾರತದ ಪರ ಅತಿ ಕಿರಿಯ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಹೆಸರಲ್ಲಿದೆ. ಸಚಿನ್ 1989ರಲ್ಲಿ ತಮ್ಮ 16 ವರ್ಷ 205 ದಿನಗಳ ಪ್ರಾಯದಲ್ಲಿ ಪಾಕಿಸ್ತಾನ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಈಗ ವೈಭವ್ ಆ ದಾಖಲೆಯನ್ನು ಮುರಿಯಲಿದ್ದಾರೆ. ಅಷ್ಟೇ ಅಲ್ಲದೆ, 1996ರಲ್ಲಿ ಬಾಂಗ್ಲಾದೇಶ ವಿರುದ್ಧ ಕೇವಲ 14ನೇ ವಯಸ್ಸಿಗೆ ಕಣಕ್ಕಿಳಿದಿದ್ದ ಪಾಕಿಸ್ತಾನದ ಹಸನ್ ರಜಾ ನಂತರ, ವಿಶ್ವದ ಪೂರ್ಣ ಸದಸ್ಯತ್ವ ಹೊಂದಿರುವ ದೇಶವೊಂದರ ಪರ ಆಡುತ್ತಿರುವ ಅತಿ ಕಿರಿಯ ಅಂತರರಾಷ್ಟ್ರೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ವೈಭವ್ ಪಾತ್ರರಾಗಲಿದ್ದಾರೆ.

ಏನಿದು ಇಂಗ್ಲೆಂಡ್‌ನ ವಿಚಿತ್ರ ನಿಯಮ?

ಇಂಗ್ಲೆಂಡ್ ವಿರುದ್ಧದ ಈ ಸರಣಿಯು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಅಡಿಯಲ್ಲಿ ನಡೆಯುತ್ತಿರುವುದರಿಂದ, ಐಸಿಸಿ ಮತ್ತು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಯ ಬಾಲ ಸುರಕ್ಷತಾ ನಿಯಮಗಳು ಇಲ್ಲಿ ಕಡ್ಡಾಯವಾಗಿ ಅನ್ವಯಿಸುತ್ತವೆ. ಇಂಗ್ಲೆಂಡ್ ಕ್ರೀಡಾ ನಿಯಮಾವಳಿಗಳ ಅನ್ವಯ 16 ವರ್ಷದೊಳಗಿನ ಅಪ್ರಾಪ್ತ ಆಟಗಾರರು ವಯಸ್ಕ (Adult) ಆಟಗಾರರೊಂದಿಗೆ ಒಂದೇ ಡ್ರೆಸ್ಸಿಂಗ್ ರೂಮ್‌ನಲ್ಲಿ ಬಟ್ಟೆ ಬದಲಾಯಿಸುವಂತಿಲ್ಲ. ಹೀಗಾಗಿ, ವೈಭವ್ ಸೂರ್ಯವಂಶಿ ಅವರಿಗೆ ಪಂದ್ಯ ನಡೆಯುವ ಎಲ್ಲಾ ಕ್ರೀಡಾಂಗಣಗಳಲ್ಲೂ ಪ್ರತ್ಯೇಕ ಚೇಂಜಿಂಗ್ ರೂಮ್ ಮತ್ತು ಶೌಚಾಲಯದ ವ್ಯವಸ್ಥೆ ಮಾಡಲಾಗುತ್ತಿದೆ. ಸುರಕ್ಷತೆಯ ದೃಷ್ಟಿಯಿಂದ ಈ ಪ್ರವಾಸದಲ್ಲಿ ವೈಭವ್ ಅವರ ಪೋಷಕರು ಕೂಡ ಅವರ ಜೊತೆಯಲ್ಲೇ ಇರಲಿದ್ದಾರೆ.

ಆದರೆ, ಈ ನಿರ್ಬಂಧ ಕೇವಲ ಪಂದ್ಯದ ಮುನ್ನ ಹಾಗೂ ನಂತರ ಬಟ್ಟೆ ಬದಲಾಯಿಸುವ ಸಮಯಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಪಂದ್ಯ ನಡೆಯುವ ಸಮಯದಲ್ಲಿ ವೈಭವ್ ಭಾರತ ತಂಡದ ಮುಖ್ಯ ಡ್ರೆಸ್ಸಿಂಗ್ ರೂಮ್‌ನಲ್ಲೇ ಇರಲಿದ್ದಾರೆ. ಅಲ್ಲದೆ ತಂಡದ ಆಂತರಿಕ ಸಭೆಗಳು, ತಂತ್ರಗಾರಿಕೆಯ ಚರ್ಚೆಗಳಲ್ಲೂ (Team Talks) ಎಂದಿನಂತೆ ಸಹ ಆಟಗಾರರೊಂದಿಗೆ ಭಾಗವಹಿಸಲು ಅವರಿಗೆ ಪೂರ್ಣ ಅನುಮತಿ ಇರಲಿದೆ.

ಭಾರತದಲ್ಲಿ ಇರಲಿಲ್ಲ ಇಂತಹ ರೂಲ್ಸ್!

ಇಂಗ್ಲೆಂಡ್‌ನ ಕ್ರೀಡಾ ವಲಯದಲ್ಲಿ ಇಂತಹ ಸುರಕ್ಷತಾ ಕ್ರಮಗಳು ತೀರಾ ಸಾಮಾನ್ಯ. ಕಳೆದ ಫುಟ್‌ಬಾಲ್ ಸೀಸನ್‌ನಲ್ಲಿ ಆರ್ಸೆನಲ್ ಕ್ಲಬ್‌ನ ಮ್ಯಾಕ್ಸ್ ಡೋಮನ್ ತನಗೆ 16 ವರ್ಷ ತುಂಬುವವರೆಗೆ ತನ್ನ ಸೀನಿಯರ್ ಆಟಗಾರರಿಗಿಂತ ಭಿನ್ನವಾದ ಚೇಂಜಿಂಗ್ ರೂಮ್ ಬಳಸುತ್ತಿದ್ದರು. ಆದರೆ, ಭಾರತದಲ್ಲಿ ಇಂತಹ ನಿಯಮಗಳಿಲ್ಲದ ಕಾರಣ ವೈಭವ್‌ಗೆ ಇದು ಸಂಪೂರ್ಣ ಹೊಸ ಅನುಭವವಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL) ಕಳೆದ ಎರಡು ಸೀಸನ್‌ಗಳಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ವೈಭವ್, ಸ್ಟಾರ್ ಆಟಗಾರರೊಂದಿಗೆ ಒಂದೇ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದರು.

ಪ್ರಸ್ತುತ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ಬಿಸಿಸಿಐ (BCCI) ಹಾಗೂ ಪಂದ್ಯ ನಡೆಯುವ ಎಲ್ಲಾ 5 ಕೌಂಟಿ ಕ್ರೀಡಾಂಗಣಗಳ ಭದ್ರತಾ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದೆ. ಒಟ್ಟಿನಲ್ಲಿ 15ರ ಹರೆಯದ ಈ ಭಾರತೀಯ ಬ್ಯಾಟಿಂಗ್ ಸನ್ಸೇಷನ್‌ನ ಇಂಗ್ಲೆಂಡ್ ಜರ್ನಿ ಭಾರಿ ಕುತೂಹಲ ಮೂಡಿಸಿದೆ.