ಟೀಂ ಇಂಡಿಯಾದ ಫೀಲ್ಡಿಂಗ್ ಕೋಚ್ ಆಗಿದ್ದ ಟಿ. ದಿಲಿಪ್ ಅವರ ಒಪ್ಪಂದವನ್ನು ಬಿಸಿಸಿಐ ಮುಂದುವರೆಸಿಲ್ಲ. ಅವರ ಸ್ಥಾನಕ್ಕೆ ಭಾರತ ಮಹಿಳಾ ತಂಡದ ಮಾಜಿ ಫೀಲ್ಡಿಂಗ್ ಕೋಚ್ ಆಗಿದ್ದ ಶುಭದೀಪ್ ಘೋಷ್ ಅವರನ್ನು ನೇಮಕ ಮಾಡಲಾಗಿದೆ. ಮುಂಬರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಘೋಷ್ ತಮ್ಮ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ಬೆಂಗಳೂರು: ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರಿನ ಸೀಮಿತ ಓವರ್‌ಗಳ ಸರಣಿ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾದಲ್ಲಿ ಮೇಜರ್ ಸರ್ಜರಿಯಾಗಲಿದೆ ಎನ್ನುವ ನಿರೀಕ್ಷೆ ನಿಜವಾಗಿದೆ. ಕೆಲ ದಿನಗಳ ಹಿಂದಷ್ಟೇ ಟೀಂ ಇಂಡಿಯಾ ಸಹಾಯಕ ಕೋಚ್ ಆಗಿದ್ದ ರ್‍ಯಾನ್ ಟೆನ್ ಡೊಶ್ಕ್ಯಾಟೆ ರಾಜೀನಾಮೆ ಸಲ್ಲಿಸಿದ್ದರು. ಇದೀಗ ಟೀಂ ಇಂಡಿಯಾ ಫೀಲ್ಡಿಂಗ್ ಕೋಚ್ ಟಿ. ದಿಲಿಪ್ ತಲೆದಂಡವಾಗಿದ್ದು, ಲಂಕಾ ಎದುರಿನ ಟೆಸ್ಟ್ ಸರಣಿಯಲ್ಲಿ ನೂತನ ಫೀಲ್ಡಿಂಗ್ ಕೋಚ್ ಆಗಿ ಶುಭದೀಪ್ ಘೋಷ್ ನೇಮಕವಾಗಿದ್ದಾರೆ.
2025ರ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಟಿ ದಿಲಿಪ್ ಅವರನ್ನು ಎರಡನೇ ಅವಧಿಗೆ ಒಂದು ವರ್ಷದ ಅವಧಿಗೆ ಭಾರತದ ಫೀಲ್ಡಿಂಗ್ ಕೋಚ್ ಆಗಿ ನೇಮಕವಾಗಿದ್ದರು. ಇದೀಗ ದಿಲಿಪ್ ಅವರ ಕಾಂಟ್ರ್ಯಾಕ್ಟ್ ಕೊನೆಯಾದ ಬೆನ್ನಲ್ಲೇ ಮತ್ತೆ ಅವರ ಜತೆಗಿನ ಒಪ್ಪಂದಾವಧಿ ಮುಂದುವರೆಸದಿರಲು ಬಿಸಿಸಿಐ ತೀರ್ಮಾನಿಸಿದೆ. ಟಿ ದಿಲಿಪ್, 2021ರಲ್ಲಿ ಭಾರತಕ್ಕೆ ಮೊದಲ ಅವಧಿಯಲ್ಲಿ ಫೀಲ್ಡಿಂಗ್ ಕೋಚ್ ಆಗಿ ತೀರ್ಮಾನಿಸಿದ್ದರು. 2021ರಿಂದ ಟಿ ದಿಲಿಪ್ 2024-25ರ ಬಾರ್ಡರ್-ಗವಾಸ್ಕರ್ ಟ್ರೋಫಿವರೆಗೂ ದಿಲಿಪ್ ಟೀಂ ಇಂಡಿಯಾ ಫೀಲ್ಡಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಇದಾದ ಬಳಿಕ ಒಂದು ವರ್ಷದ ಅವಧಿಗೆ ಅವರ ಕಾಂಟ್ರ್ಯಾಕ್ಟ್ ವಿಸ್ತರಿಸಲಾಗಿತ್ತು.
ಭಾರತದ ನೂತನ ಫೀಲ್ಡಿಂಗ್ ಕೋಚ್ ಶುಭದೀಪ್ ಘೋಷ್ ಯಾರು? ಹಿನ್ನಲೆಯೇನು?
57 ವರ್ಷದ ಶುಭದೀಪ್ ಘೋಷ್, ಫೀಲ್ಡಿಂಗ್ ಕೋಚ್ ಆಗಿ ಈಗಾಗಲೇ ಅಪಾರ ಅನುಭವ ಹೊಂದಿದ್ದಾರೆ. ಈ ಮೊದಲು ಶುಭದೀಪ್ ಘೋಷ್ ಭಾರತ ಮಹಿಳಾ ಕ್ರಿಕೆಟ್ ತಂಡ ಕೋಚ್ ಆಗಿ ಸೈ ಎನಿಸಿಕೊಂಡಿದ್ದರು. ಶುಭದೀಪ್ ಘೋಷ್, 2022ರ ಮಹಿಳಾ ಏಕದಿನ ವಿಶ್ವಕಪ್‌ನಿಂದ 2023ರ ಟಿ20 ವಿಶ್ವಕಪ್‌ವರೆಗೆ ಫೀಲ್ಡಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು.
ಶುಭದೀಪ್ ಘೋಷ್, ಈ ಮೊದಲು ಭಾರತ 'ಎ' ತಂಡದ ಸಹಾಯಕ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಇದರ ಜತೆಗೆ ಅಸ್ಸಾಂ ಹಿರಿಯರ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಶುಭದೀಪ್ ಸಿಂಗ್, ಕೋಚ್ ಆಗಿ ಎರಡನೇ ಇನ್ನಿಂಗ್ಸ್ ಆರಂಭಿಸುವ ಮುನ್ನ, ದೇಶಿ ಕ್ರಿಕೆಟ್‌ನಲ್ಲಿ ಬಲಗೈ ಬ್ಯಾಟರ್ ಆಗಿ ಅಸ್ಸಾಂ ಹಾಗೂ ರೈಲ್ವೇಸ್ ಪರ ತಲಾ 17 ಪ್ರಥಮ ದರ್ಜೆ ಹಾಗೂ 17 ಲಿಸ್ಟ್ 'ಎ' ಪಂದ್ಯಗಳನ್ನಾಡಿದ್ದಾರೆ.
ಭಾರತ-ಶ್ರೀಲಂಕಾ ಎರಡು ಪಂದ್ಯಗಳ ಟೆಸ್ಟ್ ಸರಣಿ
ಶುಭ್‌ಮನ್ ಗಿಲ್ ನೇತೃತ್ವದ ಭಾರತ ತಂಡವು ಇದೇ ಆಗಸ್ಟ್ 4ರಂದು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಆಗಸ್ಟ್ 7ರಂದು ಕೊಲಂಬೊದಲ್ಲಿ ಮೂರು ದಿನಗಳ ಅಭ್ಯಾಸ ಪಂದ್ಯವನ್ನಾಡಲಿದೆ. ಇದಾದ ಬಳಿಕ ಆಗಸ್ಟ್ 15ರಂದು ಗಾಲೆಯಲ್ಲಿ ಶ್ರೀಲಂಕಾ ವಿರುದ್ದ ಭಾರತ ಮೊದಲ ಟೆಸ್ಟ್ ಪಂದ್ಯವನ್ನಾಡಲಿದೆ. ಇನ್ನು ಎರಡನೇ ಪಂದ್ಯವು ಆಗಸ್ಟ್ 23ರಿಂದ ಕೊಲಂಬೊದಲ್ಲಿ ಉಭಯ ತಂಡಗಳು ಕಾದಾಡಲಿವೆ. ಈ ಸರಣಿ ಮೂಲಕ ಶುಭದೀಪ್ ಘೋಷ್, ಭಾರತ ತಂಡದ ಫೀಲ್ಡಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.


