ಐಪಿಎಲ್ 2026ರಲ್ಲಿ ರಾಜಸ್ಥಾನ ರಾಯಲ್ಸ್ ಪರ 96 ರನ್ ಸಿಡಿಸಿ ಅಬ್ಬರಿಸಿದ 15ರ ಯುವ ಆಟಗಾರ ವೈಭವ್ ಸೂರ್ಯವಂಶಿ, ತಂಡ ಸೋತಾಗ ಕಣ್ಣೀರು ಹಾಕಿದ್ದರು. ಈ ಬಾಲಕನ ಅದ್ಭುತ ಆಟ ಮತ್ತು ಭಾವುಕ ಕ್ಷಣಕ್ಕೆ ಮನಸೋತ ಬಾಲಿವುಡ್ ನಟ ಅಮಿತಾಭ್ ಬಚ್ಚನ್, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಬೆಂಬಲ ಸೂಚಿಸಿದ್ದಾರೆ.
ಮುಂಬೈ/ಚಂಡೀಗಢ (ಮೇ.30): ಐಪಿಎಲ್ 2026ರ ಕ್ವಾಲಿಫೈಯರ್-2 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡ ಸೋತು ಟೂರ್ನಿಯಿಂದ ಹೊರಬಿದ್ದಿರಬಹುದು. ಆದರೆ, ರಾಜಸ್ಥಾನ ಪರ ಕೇವಲ 15ನೇ ವಯಸ್ಸಿಗೆ ಕ್ರೀಸ್‌ನಲ್ಲಿ ಸಿಡಿಲಬ್ಬರ ಸೃಷ್ಟಿಸಿದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅವರ ಅದ್ಭುತ ಇನ್ನಿಂಗ್ಸ್ ಇಡೀ ವಿಶ್ವದಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ಶತಕದ ಸನಿಹ ಬಂದು (96 ರನ್) ಔಟಾಗಿ, ತಂಡದ ಸೋಲಿನಿಂದ ಮೈದಾನದಲ್ಲೇ ಕಣ್ಣೀರು ಹಾಕಿದ ಈ ಬಾಲಕನ ಬೆಂಬಲಕ್ಕೆ ಈಗ ಖುದ್ದು ಬಾಲಿವುಡ್ ಶಹನ್‌ಶಾ ಅಮಿತಾಭ್ ಬಚ್ಚನ್ ಧಾವಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈಭವ್ ಆಟವನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಬಿಗ್ ಬಿ, ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ನಮಗೆ ಗೋಲಿ, ಗಿಲ್ಲಿ-ದಂಡಾ ಆಡೋಕೂ ಬರ್ತಿರಲಿಲ್ಲ: ಬಿಗ್ ಬಿ ಭಾವುಕ ಟ್ವೀಟ್
ಶುಕ್ರವಾರ ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ ರಾಜಸ್ಥಾನದ ಸೋಲಿನ ನಂತರ ವೈಭವ್ ಸೂರ್ಯವಂಶಿ ಮೈದಾನದಲ್ಲಿ ತೀವ್ರ ಭಾವುಕರಾಗಿದ್ದ ದೃಶ್ಯ ಕಂಡುಬಂದಿತ್ತು. ಇದನ್ನು ಗಮನಿಸಿದ ನಟ ಅಮಿತಾಭ್ ಬಚ್ಚನ್, ತಮ್ಮ ಎಕ್ಸ್ ಖಾತೆಯಲ್ಲಿ ಹಿಂದಿಯಲ್ಲಿ ಮನದಾಳದ ಮಾತುಗಳನ್ನು ಬರೆದುಕೊಂಡಿದ್ದಾರೆ. ಸೂರ್ಯವಂಶಿ - 15 ವರ್ಷದ ವಯಸ್ಸಿನ ಅದ್ಭುತ ಸೂರ್ಯ! ಈ ವಯಸ್ಸಿನಲ್ಲಿ ನಮಗಂತೂ ಗೋಲಿ ಆಟ ಮತ್ತು ಗಿಲ್ಲಿ-ದಾಂಡು (ಚಿನ್ನಿ-ದಾಂಡು) ಕೂಡ ಸರಿಯಾಗಿ ಆಡಲು ಬರುತ್ತಿರಲಿಲ್ಲ' ಎಂದು ಬರೆದಿದ್ದಾರೆ.
ತಮ್ಮ 15ನೇ ವಯಸ್ಸಿನಲ್ಲಿ ತಮಗೆ ಇಂತಹ ಅಸಾಧಾರಣ ಪ್ರತಿಭೆಯನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ ಎಂದು ಬಿಗ್ ಬಿ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಅಮಿತಾಭ್ ಅವರ ಈ ಪೋಸ್ಟ್ ಕ್ರೀಡಾಭಿಮಾನಿಗಳ ಹೃದಯ ಗೆದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
96 ರನ್ ಸಿಡಿಸಿ ಡಗೌಟ್‌ನಲ್ಲಿ ಕಣ್ಣೀರು ಹಾಕಿದ ಯುವ ಹೀರೊ!
ಕ್ವಾಲಿಫೈಯರ್-2 ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 47 ಎಸೆತಗಳಲ್ಲಿ ಬರೋಬ್ಬರಿ 96 ರನ್ ಚಚ್ಚಿ ಅಬ್ಬರಿಸಿದ್ದರು. ಆದರೆ ತಂಡ ಸೋತ ತಕ್ಷಣ ತೀವ್ರ ನಿರಾಶೆಗೊಂಡ ಬಾಲಕ, ಡಗೌಟ್‌ನಲ್ಲಿ ಮೌನವಾಗಿ ಕುಳಿತು ತನ್ನ ಕಣ್ಣೀರನ್ನು ಬಚ್ಚಿಡಲು ಹರಸಾಹಸ ಪಡುತ್ತಿದ್ದ. ಇದನ್ನು ಗಮನಿಸಿದ ರಾಜಸ್ಥಾನ ತಂಡದ ಸಿಬ್ಬಂದಿ ಆತನ ಬಳಿ ಬಂದು ಅಪ್ಪಿಕೊಂಡು ಸಾಂತ್ವನ ಹೇಳಿದರು. ಈ ಭಾವುಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಆತನ ಬೆನ್ನಿಗೆ ನಿಂತಿದ್ದಾರೆ.
ಇದಕ್ಕೆ ಕಾಮೆಂಟ್ ಮಾಡಿರುವ ಒಬ್ಬರು 'ನಾನು ಐಪಿಎಲ್‌ನ ದೊಡ್ಡ ಅಭಿಮಾನಿಯೇನಲ್ಲ, ಯಾರು ಗೆದ್ದರೂ ಸೋತರೂ ನನಗೆ ವಾಸ್ತವವಾಗಿ ವಿಶೇಷವೇನಲ್ಲ. ಆದರೆ ಇಂದು ರಾಜಸ್ಥಾನ ಸೋತಿದ್ದಕ್ಕೆ ಬೇಸರವಿದೆ, ಏಕೆಂದರೆ ನಮಗೆ ಮುಂದಿನ ಪಂದ್ಯದಲ್ಲಿ ವೈಭವ್ ಸೂರ್ಯವಂಶಿಯ ಮತ್ತೊಂದು ಇನ್ನಿಂಗ್ಸ್ ನೋಡುವ ಅವಕಾಶ ಸಿಗುವುದಿಲ್ಲ' ಎಂದಿದ್ದಾರೆ. ಮತ್ತೊಬ್ಬ ಅಭಿಮಾನಿ, "ಸರ್, ಗಿಲ್ಲಿ ದಾಂಡು ಕ್ರಿಕೆಟ್‌ಗೆ ತಾಯಿ ಇದ್ದಂತೆ. ವೈಭವ್ ಭಾರತೀಯ ಕ್ರಿಕೆಟ್‌ನ ಭವಿಷ್ಯದ ಹೀರೊ. ಇಂದು ಆರ್‌ಆರ್ ಸೋತಿರಬಹುದು, ಆದರೆ ಸೂರ್ಯವಂಶಿ ಗೆದ್ದಿದ್ದಾರೆ. ಆತನ ಆಟದ ಹಿಂದೆ ತಂದೆಯ ತಪಸ್ಸು ಹಾಗೂ ಕಠಿಣ ಪರಿಶ್ರಮವಿದೆ" ಎಂದು ಬರೆದುಕೊಂಡಿದ್ದಾರೆ.

'ಕಲ್ಕಿ-2' ಶೂಟಿಂಗ್‌ನಲ್ಲಿ ಬಿಗ್ ಬಿ ಬ್ಯುಸಿ!
ಒಂದೆಡೆ ಕ್ರಿಕೆಟ್ ಮೇಲಿನ ತಮ್ಮ ಪ್ರೀತಿಯನ್ನು ತೋರ್ಪಡಿಸುತ್ತಿರುವ ಅಮಿತಾಭ್ ಬಚ್ಚನ್, ಪ್ರಸ್ತುತ ಸಿನಿಮಾ ರಂಗದಲ್ಲೂ ಸಖತ್ ಬ್ಯುಸಿಯಾಗಿದ್ದಾರೆ. ಪ್ಯಾನ್-ಇಂಡಿಯಾ ಸೂಪರ್‌ಹಿಟ್ ಚಿತ್ರ 'ಕಲ್ಕಿ 2898 ಎಡಿ' (Kalki 2898 AD) ಸಿನಿಮಾದ ಸೀಕ್ವೆಲ್ (ಭಾಗ-2) ಶೂಟಿಂಗ್‌ನಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ರೆಬೆಲ್ ಸ್ಟಾರ್ ಪ್ರಭಾಸ್ ಮತ್ತು ಉಳಗನಾಯಗನ್ ಕಮಲ್ ಹಾಸನ್ ಅವರೊಂದಿಗೆ ಬಿಗ್ ಬಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಈ ನೂತನ ಸೀಕ್ವೆಲ್ ಪ್ರಾಜೆಕ್ಟ್‌ಗೆ ನಟಿ ಸಾಯಿ ಪಲ್ಲವಿ ಕೂಡ ಸೇರ್ಪಡೆಯಾಗಲಿದ್ದಾರೆ ಎಂಬ ಗಾಢ ವಂದತಿಗಳಿದ್ದು, ಚಿತ್ರತಂಡದಿಂದ ಅಧಿಕೃತ ಪ್ರಕಟಣೆ ಬಾಕಿ ಇದೆ.


