* ಟೀಂ ಇಂಡಿಯಾ ಹೆಡ್‌ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಿಸಲು ಆಗ್ರಹ* ಹೆಡ್ ಕೋಚ್ ರವಿಶಾಸ್ತ್ರಿ ಪರ ಬ್ಯಾಟ್ ಬೀಸಿದ ಕಪಿಲ್ ದೇವ್* ತಂಡ ಉತ್ತಮ ಪ್ರದರ್ಶನ ತೋರಿದರೆ, ಶಾಸ್ತ್ರಿ ಕೆಳಗಿಳಿಸುವ ಪ್ರಶ್ನೆಯೇ ಇಲ್ಲ  

ನವದೆಹಲಿ(ಜು.06): ಶ್ರೀಲಂಕಾ ಸರಣಿಗೆ ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಹೆಡ್‌ ಕೋಚ್‌ ಆಗಿ ನೇಮಕವಾಗಿರುವ ಬೆನ್ನಲ್ಲೇ, ಅವರನ್ನೇ ಮುಂಬರುವ ದಿನಗಳಲ್ಲಿ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಿಸಲಿ ಎನ್ನುವ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿ ಬರಲಾರಂಭಿಸಿದೆ.

ಇದರ ಬೆನ್ನಲ್ಲೇ ಮುಂದೆಯೂ ಉತ್ತಮ ಫಲಿತಾಂಶಗಳನ್ನು ನೀಡುತ್ತಾ ಹೋದರೆ, ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಸ್ಥಾನದಿಂದ ರವಿಶಾಸ್ತ್ರಿ ಅವರನ್ನು ಕೆಳಗಿಳಿಸಲು ಯಾವುದೇ ಕಾರಣಗಳಿಲ್ಲ ಎಂದು ದಿಗ್ಗಜ ಕ್ರಿಕೆಟಿಗ ಕಪಿಲ್‌ ದೇವ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂಬರುವ ಟಿ20 ವಿಶ್ವಕಪ್‌ ಬಳಿಕ ರವಿಶಾಸ್ತ್ರಿ ಅವರ ಒಪ್ಪಂದ ಕೊನೆಗೊಳ್ಳಲಿದೆ. ಇದೇ ವೇಳೆ ಎನ್‌ಸಿಎ ಮುಖ್ಯಸ್ಥ ರಾಹುಲ್‌ ದ್ರಾವಿಡ್‌ರನ್ನು ಬಿಸಿಸಿಐ ಮುಖ್ಯ ಕೋಚ್‌ ಆಗಿ ನೇಮಿಸಲಿದೆ ಎಂಬ ಊಹಾಪೋಹಗಳು ಕೇಳಿಬಂದಿವೆ.

ಇಂಗ್ಲೆಂಡ್‌ ಟೆಸ್ಟ್ ಸರಣಿ: ಪಡಿಕ್ಕಲ್‌, ಪೃಥ್ವಿ ಶಾ ಬಗ್ಗೆ ಆಯ್ಕೆ ಸಮಿತಿ ನಿರಾಸಕ್ತಿ?

ಇದಕ್ಕೆ ಪ್ರತಿಕ್ರಿಯಿಸಿರುವ ಕಪಿಲ್‌, ಮೊದಲು ಶ್ರೀಲಂಕಾ ಸರಣಿ ಮುಗಿಯಲಿ. ಹೊಸ ಕೋಚ್‌ಗೆ ಅವಕಾಶ ನೀಡಿದರೆ ತಪ್ಪಿಲ್ಲ. ಈ ಬಗ್ಗೆ ಸದ್ಯಕ್ಕೆ ಮಾತನಾಡುವ ಅವಶ್ಯಕತೆಯಿಲ್ಲ. ಉತ್ತಮ ಫಲಿತಾಂಶ ನೀಡುತ್ತಿದ್ದರೆ ರವಿಶಾಸ್ತ್ರಿಯನ್ನು ತೆಗೆಯಲು ಕಾರಣವಿಲ್ಲ. ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ. ಇಂತಹ ಹೇಳಿಕೆಗಳು ಆಟಗಾರರು ಮತ್ತು ಕೋಚ್‌ಗಳ ಮೇಲೆ ಒತ್ತಡವನ್ನುಂಟು ಮಾಡಲಿವೆ’ಎಂದಿದ್ದಾರೆ.