* ಇಂಗ್ಲೆಂಡ್ ಪ್ರವಾಸಕ್ಕೆ ಪಡಿಕ್ಕಲ್, ಪೃಥ್ವಿ ಶಾ ಕಳಿಸಿಕೊಡಲು ಬಿಸಿಸಿಐ ಆಯ್ಕೆ ಸಮಿತಿ ನಿರಾಸಕ್ತಿ* ಗಾಯದಿಂದಾಗಿ ಇಂಗ್ಲೆಂಡ್ ಸರಣಿಯಿಂದ ಹೊರಬಿದ್ದಿರುವ ಶುಭ್‌ಮನ್‌ ಗಿಲ್* ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿ ಆಗಸ್ಟ್ 04ರಿಂದ ಆರಂಭ

ಮುಂಬೈ(ಜು.06): ಶುಭ್‌ಮನ್‌ ಗಿಲ್‌ ಗಾಯಗೊಂಡು ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಿಂದ ಹೊರಬಿದ್ದಿದ್ದು, ಈ ಸ್ಥಾನಕ್ಕೆ ಯುವ ಆರಂಭಿಕರಾದ ದೇವದತ್‌ ಪಡಿಕ್ಕಲ್‌ ಹಾಗೂ ಪೃಥ್ವಿ ಶಾಗೆ ಅವಕಾಶ ನೀಡಲು ತಂಡದ ಆಡಳಿತ ಮಂಡಳಿ ಮುಂದಾಗಿದೆ ಎಂದು ವರದಿಯಾಗಿದೆ.

ಆದರೆ, ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್‌ ಶರ್ಮಾ ಲೆಕ್ಕಾಚಾರವೇ ಬೇರೆಯಾಗಿದೆ. 2019-20ನೇ ಋುತುವಿನ ರಣಜಿ ಹಾಗೂ ನ್ಯೂಜಿಲೆಂಡ್‌ ಪ್ರವಾಸ (ಭಾರತ -ಎ)ದಲ್ಲಿ ಕಳಪೆ ಪ್ರದರ್ಶನ ನೀಡಿದ ಬಂಗಾಳದ ಆರಂಭಿಕ ಆಟಗಾರ ಅಭಿಮನ್ಯು ಈಶ್ವರನ್‌ಗೆ ಟೀಂ ಇಂಡಿಯಾದಲ್ಲಿ ಅವಕಾಶ ನೀಡಲು ಮುಂದಾಗಿದ್ದಾರೆ. ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಪಡಿಕ್ಕಲ್‌, ಪೃಥ್ವಿ ಶಾರತಂಹ ಆಟಗಾರರನ್ನು ಬದಲಿಗೆ ಉನ್ನತ ಗುಣಮಟ್ಟಣದ ಟೆಸ್ಟ್‌ಗೆ ಇನ್ನೂ ತಾಂತ್ರಿಕವಾಗಿ ಸಿದ್ಧರಾಗದ ಈಶ್ವರನ್‌ಗೆ ಅವಕಾಶ ನೀಡುತ್ತಿರುವುದು ಅಭಿಮಾನಿಗಳ ಹುಬ್ಬೇರಿಸುವಂತೆ ಮಾಡಿದೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾಗೆ ಆಘಾತ; ಆರಂಭಿಕ ಔಟ್!

ಸದ್ಯ ಕನ್ನಡಿಗ ದೇವದತ್ ಪಡಿಕ್ಕಲ್ ಹಾಗೂ ಪೃಥ್ವಿ ಶಾ ಶ್ರೀಲಂಕಾ ಪ್ರವಾಸದಲ್ಲಿದ್ದಾರೆ. ಲಂಕಾ ವಿರುದ್ದದ ಸೀಮಿತ ಓವರ್‌ಗಳ ಸರಣಿಗೆ ಈ ಇಬ್ಬರು ಆಯ್ಕೆಯಾಗಿದ್ದಾರೆ. 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿರುವ ಈ ಇಬ್ಬರು ಆಟಗಾರರು ಲಂಕಾ ಸರಣಿಯಲ್ಲಿ ಮಿಂಚಲು ಎದುರು ನೋಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಆರ್‌ಸಿಬಿ ಕ್ರಿಕೆಟಿಗ ಪಡಿಕ್ಕಲ್‌ಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಕ್ಕಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ.