ಗಾಲೆ ಟೆಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧ ಭಾರತ 165 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಮಾನವ್ ಸುತಾರ್ ಅವರ 10 ವಿಕೆಟ್ ಪ್ರದರ್ಶನದಿಂದ ಗೆಲುವು ಸಾಧ್ಯವಾದರೂ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಭಾರತ ಐದನೇ ಸ್ಥಾನದಲ್ಲಿಯೇ ಉಳಿದುಕೊಂಡಿದೆ.

ಗಾಲೆ: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 165 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ತಲುಪುವ ತನ್ನ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಇನ್ನು ಗಾಲೆ ಟೆಸ್ಟ್ ಗೆಲುವಿನ ಹೊರತಾಗಿಯೂ ಟೀಂ ಇಂಡಿಯಾ ಅಂಕಪಟ್ಟಿಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲೇ ಉಳಿದ ಟೀಂ ಇಂಡಿಯಾ:

ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಶುಭ್‌ಮನ್ ಗಿಲ್ ನೇತೃತ್ವದ ಭಾರತ, ಈ ಸೀಸನ್‌ನಲ್ಲಿ ಆಡಿದ ಹತ್ತು ಪಂದ್ಯಗಳಿಂದ ಐದನೇ ಗೆಲುವಿನೊಂದಿಗೆ ತನ್ನ ಪಾಯಿಂಟ್ಸ್ ಶೇಕಡಾವಾರು ಪ್ರಮಾಣವನ್ನು 53.33ಕ್ಕೆ ಏರಿಸಿಕೊಂಡಿದೆ. ಆದರೂ, ಅಂಕಪಟ್ಟಿಯಲ್ಲಿ ಭಾರತ ಇನ್ನೂ ಐದನೇ ಸ್ಥಾನದಲ್ಲಿಯೇ ಮುಂದುವರಿದಿದೆ. ಕಳೆದ ವಾರ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಜಯ ಗಳಿಸಿದ್ದ ಬಾಂಗ್ಲಾದೇಶ ನಾಲ್ಕನೇ ಸ್ಥಾನದಲ್ಲೇ ಇದೆ. ಭಾರತದೆದುರು ಸೋತ ಶ್ರೀಲಂಕಾ ತಂಡದ ಪಾಯಿಂಟ್ಸ್ ಶೇಕಡಾವಾರು 41.67ರಿಂದ 33.33ಕ್ಕೆ ಇಳಿದರೂ, ಅದು ಆರನೇ ಸ್ಥಾನದಲ್ಲಿಯೇ ಉಳಿದುಕೊಂಡಿದೆ.

ಹೀಗಿತ್ತು ಗಾಲೆ ಟೆಸ್ಟ್‌ ಫೈಟ್:

ಗಾಲೆ ಟೆಸ್ಟ್‌ ಪಂದ್ಯದ ಕೊನೆಯ ದಿನ, 372 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡವನ್ನು ಭಾರತ 206 ರನ್‌ಗಳಿಗೆ ಆಲೌಟ್ ಮಾಡಿತು. ಎಡಗೈ ಸ್ಪಿನ್ನರ್ ಮಾನವ್ ಸುತಾರ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಸುತಾರ್, 23.4 ಓವರ್‌ಗಳಲ್ಲಿ ಕೇವಲ 55 ರನ್ ನೀಡಿ 6 ವಿಕೆಟ್ ಕಬಳಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ 76 ರನ್‌ಗೆ 4 ವಿಕೆಟ್ ಪಡೆದಿದ್ದ ಅವರು, ಪಂದ್ಯದಲ್ಲಿ ಒಟ್ಟು 10 ವಿಕೆಟ್ ಪಡೆದು ಮಿಂಚಿದರು. ಇದಕ್ಕೂ ಮುನ್ನ, ಭಾರತದ 462 ರನ್‌ಗಳಿಗೆ ಉತ್ತರವಾಗಿ ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ 284 ರನ್‌ಗಳಿಗೆ ಸರ್ವಪತನ ಕಂಡಿತ್ತು.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಲೆಕ್ಕಾಚಾರ:

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಮೊದಲೆರಡು ಸೀಸನ್‌ಗಳಲ್ಲಿ ಫೈನಲ್ ತಲುಪಿದ್ದರೂ, ಭಾರತಕ್ಕೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಕಳೆದ ಸೀಸನ್‌ನಲ್ಲಿ ತಂಡ ಫೈನಲ್ ಪ್ರವೇಶಿಸದೆ ಹೊರಬಿದ್ದಿತ್ತು. ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 0-2 ಅಂತರದಲ್ಲಿ ಸರಣಿ ಸೋತಿದ್ದು ಭಾರತದ ಫೈನಲ್ ಕನಸಿಗೆ ದೊಡ್ಡ ಹೊಡೆತ ನೀಡಿತ್ತು. ಆದಾಗ್ಯೂ, ಪ್ರಸ್ತುತ 2025-27ರ ಟೆಸ್ಟ್ ಚಾಂಪಿಯನ್‌ಶಿಪ್ ಸೈಕಲ್‌ನಲ್ಲಿ ಭಾರತಕ್ಕೆ ಇನ್ನೂ ಎಂಟು ಟೆಸ್ಟ್ ಪಂದ್ಯಗಳು ಬಾಕಿ ಇವೆ. ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್, ನ್ಯೂಜಿಲೆಂಡ್ ವಿರುದ್ಧ ಎರಡು ಟೆಸ್ಟ್ ಮತ್ತು ಮುಂದಿನ ವರ್ಷ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಐದು ಟೆಸ್ಟ್‌ಗಳ ಸರಣಿ ಇದರಲ್ಲಿ ಸೇರಿದೆ. ಫೈನಲ್ ತಲುಪಬೇಕಾದರೆ, ಈ ಎಂಟು ಪಂದ್ಯಗಳಲ್ಲಿ ಕನಿಷ್ಠ ಆರರಲ್ಲಿ ಭಾರತ ಗೆಲ್ಲಲೇಬೇಕು.

ಅಂಕಪಟ್ಟಿಯಲ್ಲಿ ಟಾಪ್-5 ಸ್ಥಾನದಲ್ಲಿರುವ ತಂಡಗಳು ಯಾವುವು?

ಬಾಂಗ್ಲಾದೇಶ ಎದುರಿನ ಮೊದಲ ಟೆಸ್ಟ್ ಪಂದ್ಯ ಸೋಲಿನ ಹೊರತಾಗಿಯೂ ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 77.78%ನೊಂದಿಗೆ ಮೊದಲ ಸ್ಥಾನದಲ್ಲಿದೆ. ಇನ್ನು ದಕ್ಷಿಣ ಆಫ್ರಿಕಾ 75.00%, ನ್ಯೂಜಿಲೆಂಡ್ 72.22%, ಬಾಂಗ್ಲಾದೇಶ 66.67% ಪ್ರತಿಶತ ಅಂಕಗಳೊಂದಿಗೆ ಟಾಪ್ 4 ಪಟ್ಟಿಯಲ್ಲಿವೆ. ಇನ್ನು ಲಂಕಾ ಎದುರಿನ ಗೆಲುವಿನ ಹೊರತಾಗಿಯೂ ಟೀಂ ಇಂಡಿಯಾ, 53,33% ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿಯೇ ಉಳಿದುಕೊಂಡಿದೆ.