2026ರ ಏಷ್ಯನ್ ಗೇಮ್ಸ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಅಬ್ಬರಿಸಿದ ಸ್ಮೃತಿ ಮಂಧನಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 11,000 ರನ್ ಪೂರೈಸಿದ್ದಾರೆ. ಈ ಮೂಲಕ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಈ ಮೈಲಿಗಲ್ಲು ತಲುಪಿದ ವಿಶ್ವದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೊತೆಗೆ ಶಫಾಲಿ ವರ್ಮಾ ಅವರೊಂದಿಗೆ 4,000 ರನ್‌ಗಳ ಜೊತೆಯಾಟದ ದಾಖಲೆಯನ್ನೂ ಬರೆದಿದ್ದಾರೆ.

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಓಪನರ್ ಸ್ಮೃತಿ ಮಂಧನಾ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. 2026ರ ಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಅಬ್ಬರದ ಬ್ಯಾಟಿಂಗ್ ನಡೆಸಿದ ಮಂಧನಾ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 11,000 ರನ್ಸ್ ಪೂರೈಸಿದ್ದಾರೆ.

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್‌ನ ಚಿನ್ನದ ಪದಕದ ಪಂದ್ಯದಲ್ಲಿ ಟೀಂ ಇಂಡಿಯಾ ಓಪನರ್ ಹಾಗೂ ವೈಸ್ ಕ್ಯಾಪ್ಟನ್ ಸ್ಮೃತಿ ಮಂಧನಾ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ನಿಸ್ಶಿನ್‌ನ ಕೊರೊಗಿ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಫೈನಲ್ ಕದನದಲ್ಲಿ, ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ 11,000 ರನ್ಸ್ ಪೂರೈಸಿದ ವಿಶ್ವದ ಮೊದಲ ಕ್ರಿಕೆಟರ್ ಆಗಿ ಹೊರಹೊಮ್ಮಿದ್ದಾರೆ. 30 ವರ್ಷದ ಈ ಮಹಾರಾಷ್ಟ್ರದ ಲೆಫ್ಟ್ ಹ್ಯಾಂಡ್ ಬ್ಯಾಟರ್ ತಮ್ಮ ವೃತ್ತಿಜೀವನದಲ್ಲಿ ಮತ್ತೊಂದು ಅತಿದೊಡ್ಡ ಮೈಲಿಗಲ್ಲನ್ನು ತಲುಪಿದ್ದಾರೆ.

ಕೇವಲ 10 ಎಸೆತಗಳಲ್ಲಿ ಐತಿಹಾಸಿಕ ಮೈಲಿಗಲ್ಲು

ಶ್ರೀಲಂಕಾ ವಿರುದ್ಧದ ಗೋಲ್ಡ್ ಮೆಡಲ್ ಮ್ಯಾಚ್ ಶುರುವಾಗುವ ಮುನ್ನ ಸ್ಮೃತಿ ಮಂಧನಾ ಈ 11,000 ರನ್‌ಗಳ ಗಡಿ ಮುಟ್ಟಲು ಕೇವಲ 13 ರನ್‌ಗಳ ಹಿಂದಿದ್ದರು. ಪಂದ್ಯದಲ್ಲಿ ಇನ್ನಿಂಗ್ಸ್ ಆರಂಭಿಸಿದ ಅವರು ಕೇವಲ 10 ಎಸೆತಗಳಲ್ಲೇ ಆ 13 ರನ್‌ಗಳ ಗುರಿ ದಾಟಿ ವಿಶ್ವ ದಾಖಲೆ ಬರೆದರು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ಸ್ಮೃತಿ ಮಂಧನಾ ಭರ್ಜರಿ ಆರಂಭ ಒದಗಿಸಿದರು. ಕೇವಲ 30 ಎಸೆತಗಳಲ್ಲಿ ಹಾಫ್ ಸೆಂಚುರಿ ಪೂರೈಸಿದ ಮಂಧನಾ, ಒಟ್ಟಾರೆ 45 ಎಸೆತಗಳಲ್ಲಿ 5 ಫೋರ್, 7 ಸಿಕ್ಸರ್‌ಗಳೊಂದಿಗೆ 79 ರನ್ಸ್ ಸಿಡಿಸಿ ಭಾರತ ಬೃಹತ್ ಮೊತ್ತ ಕಲೆಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮಿಥಾಲಿ ರಾಜ್ ದಾಖಲೆ ಬ್ರೇಕ್ ಮಾಡಿದ ಮಂಧನಾ

ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ಸ್ ಗಳಿಸಿದ ಆಟಗಾರ್ತಿಯರ ಪಟ್ಟಿಯಲ್ಲಿ ಸ್ಮೃತಿ ಮಂಧನಾ ಈಗ ಟಾಪ್‌ನಲ್ಲಿದ್ದಾರೆ. ಇದಕ್ಕೂ ಮುನ್ನ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಿಥಾಲಿ ರಾಜ್ ಹೆಸರಲ್ಲಿದ್ದ 10,868 ರನ್‌ಗಳ ದಾಖಲೆಯನ್ನು ಮಂಧನಾ ಈಗಾಗಲೇ ಹಿಂದಿಕ್ಕಿದ್ದಾರೆ. ಈ ಹಿಂದೆ ನಡೆದ 2026ರ ಮಹಿಳಾ ಏಷ್ಯಾಕಪ್‌ನಲ್ಲಿ ಹಾಂಗ್ ಕಾಂಗ್ ವಿರುದ್ಧ 124 ರನ್‌ಗಳ ಬೃಹತ್ ಇನ್ನಿಂಗ್ಸ್ ಆಡುವ ಮೂಲಕ ಮಿಥಾಲಿ ದಾಖಲೆಯನ್ನು ಸ್ಮೃತಿ ಅಳಿಸಿಹಾಕಿದ್ದರು. ಈಗ ಏಷ್ಯನ್ ಗೇಮ್ಸ್ ಫೈನಲ್‌ನಲ್ಲಿ ನೇರವಾಗಿ 11,000 ರನ್‌ಗಳ ಮೈಲಿಗಲ್ಲನ್ನು ಮುಟ್ಟಿ ಯಾರಿಗೂ ನಿಲುಕದ ಎತ್ತರಕ್ಕೆ ಬೆಳೆದಿದ್ದಾರೆ.

ಫಾರ್ಮ್ಯಾಟ್‌ಗಳ ಪ್ರಕಾರ ಮಂಧನಾ ರನ್ಸ್ ವಿವರ ಇಲ್ಲಿದೆ

2013ರ ಏಪ್ರಿಲ್ 5ರಂದು ಬಾಂಗ್ಲಾದೇಶ ವಿರುದ್ಧದ ಟಿ20 ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿಕೊಟ್ಟ ಸ್ಮೃತಿ ಮಂಧನಾ, ಇದುವರೆಗೆ ಟೀಂ ಇಂಡಿಯಾ ಪರ ಮೂರು ಫಾರ್ಮ್ಯಾಟ್‌ಗಳಲ್ಲೂ ಬೆಸ್ಟ್ ಪರ್ಫಾರ್ಮೆನ್ಸ್ ನೀಡಿದ್ದಾರೆ.

ಟೆಸ್ಟ್: 9 ಪಂದ್ಯಗಳಲ್ಲಿ 788 ರನ್ಸ್ (2 ಸೆಂಚುರಿ, 5 ಹಾಫ್ ಸೆಂಚುರಿ)

• ಏಕದಿನ: 120 ಪಂದ್ಯಗಳಲ್ಲಿ 5,411 ರನ್ಸ್ (14 ಸೆಂಚುರಿ, 35 ಹಾಫ್ ಸೆಂಚುರಿ)

• ಟಿ20: 179 ಪಂದ್ಯಗಳಲ್ಲಿ 4,792 ರನ್ಸ್ (2 ಸೆಂಚುರಿ, 36 ಹಾಫ್ ಸೆಂಚುರಿ, 101 ಸಿಕ್ಸರ್)

ಒಟ್ಟಾರೆಯಾಗಿ 308 ಪಂದ್ಯಗಳಲ್ಲಿ 18 ಸೆಂಚುರಿ, 76 ಅರ್ಧ ಸೆಂಚುರಿಗಳ ನೆರವಿನಿಂದ 11,001* ರನ್ಸ್ ಪೂರೈಸಿದ್ದಾರೆ. ಟಿ20 ಫಾರ್ಮ್ಯಾಟ್‌ನಲ್ಲಿ 100 ಸಿಕ್ಸರ್ ಬಾರಿಸಿದ ಮೊದಲ ಭಾರತೀಯ ಮಹಿಳಾ ಕ್ರಿಕೆಟರ್ ಎಂಬ ದಾಖಲೆಯನ್ನೂ ಅವರು ಸೆಮಿಫೈನಲ್‌ನಲ್ಲಿ ನಿರ್ಮಿಸಿದ್ದರು.

ಶಫಾಲಿ ವರ್ಮಾ ಜೊತೆ ಸೇರಿ ಮತ್ತೊಂದು ವಿಶ್ವ ದಾಖಲೆ

ಈ ಪಂದ್ಯದಲ್ಲಿ ಸ್ಮೃತಿ ಮಂಧನಾ ಮತ್ತು ಶಫಾಲಿ ವರ್ಮಾ ಜೋಡಿ ಮತ್ತೊಂದು ಸೆನ್ಸೇಷನಲ್ ರೆಕಾರ್ಡ್ ಮಾಡಿದೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಯಾವುದೇ ವಿಕೆಟ್‌ಗೆ 4,000 ರನ್‌ಗಳ ಜೊತೆಯಾಟ ಪೂರೈಸಿದ ಮೊದಲ ಜೋಡಿ ಎಂಬ ಹೆಗ್ಗಳಿಕೆಗೆ ಮಂಧನಾ-ಶಫಾಲಿ ಪಾತ್ರರಾಗಿದ್ದಾರೆ. ಶ್ರೀಲಂಕಾ ವಿರುದ್ಧ ಮೊದಲ ವಿಕೆಟ್‌ಗೆ 99 ರನ್‌ಗಳ ಜೊತೆಯಾಟವಾಡಿ ಟೀಂ ಇಂಡಿಯಾಗೆ ಭದ್ರ ಬುನಾದಿ ಹಾಕಿಕೊಟ್ಟರು. ಆಮೇಲೆ ರಿಚಾ ಘೋಷ್ (22 ಎಸೆತಗಳಲ್ಲಿ 49*) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 216 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.