ಜಿಂಬಾಬ್ವೆ ಪ್ರವಾಸಕ್ಕೆ ಟೀಂ ಇಂಡಿಯಾದಲ್ಲಿ ಸಂಜು ಸ್ಯಾಮ್ಸನ್ ಹೆಸರು ಇಲ್ಲದಿರೋದು ಭಾರೀ ಚರ್ಚೆಗೆ ಕಾರಣವಾಗಿದೆ. ವೈಭವ್ ಸೂರ್ಯವಂಶಿಗಾಗಿ ಸಂಜುಗೆ ಅನ್ಯಾಯ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅಂತೆಯೇ ಬಿಸಿಸಿಐ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಸಂಜು ಸ್ಯಾಮ್ಸನ್ ಅವರ ಅಸ್ಥಿರ ಪ್ರದರ್ಶನ ತಂಡದಲ್ಲಿ ಬೇರೆ ಬೇರೆ ಬೆಳವಣಿಗೆಗೆ ದಾರಿ ಮಾಡಿಕೊಡ್ತಿದೆ. ಒಮ್ಮೆ ಆಕಾಶ ಗಿಟ್ಟಿಸಿಕೊಳ್ಳುವುದು, ಇನ್ನೊಮ್ಮೆ ಅವಕಾಶದಿಂದ ವಂಚಿತರಾಗೋದು. ಇದು ಬಿಸಿಸಿಐಗೆ ಹೊಸದೇನಲ್ಲ. ಇದೀಗ ಜಿಂಬಾಬ್ವೆ ವಿರುದ್ಧದ ಮುಂಬರುವ ಟಿ20 ಸರಣಿಯಿಂದ ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟಿರುವುದು ಹೊಸ ವಿವಾದಕ್ಕೆ ಕಿಡಿ ಹಚ್ಚಿದೆ. ಕೇವಲ 15 ವರ್ಷದ ವೈಭವ್ ಸೂರ್ಯವಂಶಿಗೆ ಅವಕಾಶ ನೀಡಲು ಸಂಜು ಅವರ ಭವಿಷ್ಯಕ್ಕೆ ಬಿಸಿಸಿಐ ಮೊಳೆ ಹೊಡೆಯುತ್ತಿದೆಯೇ? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿದೆ.
ಸೂರ್ಯವಂಶಿ ಅಬ್ಬರ.. ಸಂಜುಗೆ ಸಂಕಷ್ಟ!
ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟು 15 ವರ್ಷದ ವೈಭವ್ ಸೂರ್ಯವಂಶಿಗೆ ಪದಾರ್ಪಣೆ ಮಾಡಲು ಅವಕಾಶ ನೀಡಲಾಗಿತ್ತು. ಆ ಮೂಲಕ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನೇ ಮುರಿದು ಭಾರತದ ಅತ್ಯಂತ ಕಿರಿಯ ಅಂತಾರಾಷ್ಟ್ರೀಯ ಆಟಗಾರ ಎಂಬ ಹೆಗ್ಗಳಿಕೆಗೆ ವೈಭವ್ ಪಾತ್ರರಾದರು. ಈ ಬಾಲಕನ ಎಂಟ್ರಿ ಸಂಜು ಸ್ಯಾಮ್ಸನ್ ಪಾಲಿಗೆ ಮರಣಶಾಸನವಾಯಿತೇ? ಎಂಬ ಸಂಶಯ ಈಗ ದಟ್ಟವಾಗಿದೆ. ಜಿಂಬಾಬ್ವೆ ಪ್ರವಾಸದ ತಂಡದಲ್ಲೂ ವೈಭವ್ ಇದ್ದಾರೆ, ಆದರೆ ಸಂಜು ಹೆಸರಿಲ್ಲ!
ಮೂರು ಪಂದ್ಯಗಳ ವೈಫಲ್ಯವೇ ಮುಳುವಾಯಿತೇ?
ಟಿ20 ವಿಶ್ವಕಪ್ 2026ರಲ್ಲಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಆಗಿ ಹೊರಹೊಮ್ಮಿದ್ದ ಸಂಜು ಸ್ಯಾಮ್ಸನ್, ಕಳೆದ ಐಪಿಎಲ್‌ನಲ್ಲಿ ಎರಡು ಶತಕ ಸಿಡಿಸಿ ಫಾರ್ಮ್‌ನಲ್ಲಿದ್ದರು. ಅದೃಷ್ಟ ಮತ್ತು ಸ್ಥಿರತೆ ಅವರ ಬೆನ್ನಿಗಿಲ್ಲ. ಇತ್ತೀಚೆಗೆ ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳು ಮತ್ತು ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸಂಜು ಸತತವಾಗಿ ವೈಫಲ್ಯ ಅನುಭವಿಸಿದರು. ಈ ಮೂರು ಪಂದ್ಯಗಳ ಕಳಪೆ ಪ್ರದರ್ಶನವೇ ಆಯ್ಕೆಗಾರರಿಗೆ ಅವರನ್ನು ಕೈಬಿಡಲು ಪ್ರಬಲ ಕಾರಣ ನೀಡಿದಂತಿದೆ.
ಬಿಸಿಸಿಐನದ್ದು ವಿಚಿತ್ರ ತರ್ಕ!
ಜಿಂಬಾಬ್ವೆ ಸರಣಿಗೆ ತಂಡದ ಹಿರಿಯ ಆಟಗಾರರಾದ ಶ್ರೇಯಸ್ ಅಯ್ಯರ್ (ನಾಯಕ), ಇಶಾನ್ ಕಿಶನ್, ಮತ್ತು ಶಿವಂ ದುಬೆ ಅವರಿಗೆ ಸ್ಥಾನ ನೀಡಲಾಗಿದೆ. ಆದರೆ ಸಂಜು ಅವರನ್ನು ಮಾತ್ರ ಕೈಬಿಡಲಾಗಿದೆ. ಬಿಸಿಸಿಐ ಮೂಲಗಳ ಪ್ರಕಾರ, ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ತಂಡದಲ್ಲಿ ಸಂಜು ಇರುವುದರಿಂದ ಅವರಿಗೆ 'ವಿಶ್ರಾಂತಿ' ನೀಡಲಾಗಿದೆ ಎನ್ನಲಾಗುತ್ತಿದೆ. ಯುವಕರಿಗೆ ಚಾನ್ಸ್ ನೀಡುವ ನೆಪದಲ್ಲಿ ಸಂಜು ಸ್ಯಾಮ್ಸನ್ ಅವರ ಕೆರಿಯರ್ ಮುಗಿಸಲು ಬಿಸಿಸಿಐ ಸಂಚು ರೂಪಿಸುತ್ತಿದೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.
ಅಭಿಮಾನಿಗಳ ಆಕ್ರೋಶದ ಅಲೆ
ಒಬ್ಬ 15 ವರ್ಷದ ಹುಡುಗನಿಗಾಗಿ 31 ವರ್ಷದ ಅನುಭವಿ ಆಟಗಾರನನ್ನು ಈ ರೀತಿ ಕಡೆಗಣಿಸುವುದು ಎಷ್ಟು ಸರಿ? ಎಂದು ಸಂಜು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಪ್ರಭ್‌ಸಿಮ್ರಾನ್ ಸಿಂಗ್ ಅವರನ್ನು ಬ್ಯಾಕಪ್ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಿರುವುದು ಕೂಡ ಸಂಜು ಅವರಿಗೆ ತಂಡದ ಬಾಗಿಲು ಮುಚ್ಚುತ್ತಿದೆ ಎಂಬುದಕ್ಕೆ ಸಾಕ್ಷಿ ಎನ್ನುತ್ತಿದ್ದಾರೆ ವಿಶ್ಲೇಷಕರು.
ವೈಭವ್ ಸೂರ್ಯವಂಶಿ ಅವರ ಪ್ರತಿಭೆಯ ಬಗ್ಗೆ ಸಂಶಯವಿಲ್ಲ, ಆದರೆ ಸಂಜು ಸ್ಯಾಮ್ಸನ್ ಅವರಂತಹ ಪ್ರತಿಭಾವಂತ ಆಟಗಾರನಿಗೆ ಸತತ ಅವಕಾಶ ನೀಡದ ಬಿಸಿಸಿಐ ಧೋರಣೆ ಚರ್ಚಾರ್ಹ. ಇದು ಸಂಜು ಅವರ ವೃತ್ತಿಜೀವನದ ಅಂತಿಮ ಹಂತವೇ? ಅಥವಾ ಏಷ್ಯನ್ ಗೇಮ್ಸ್ ಮೂಲಕ ಅವರು ಭರ್ಜರಿ ಕಮ್‌ಬ್ಯಾಕ್ ಮಾಡುತ್ತಾರಾ? ಎಂಬುದನ್ನು ಕಾದುನೋಡಬೇಕಿದೆ.


