ಮುಂಬರುವ ಏಷ್ಯನ್ ಗೇಮ್ಸ್‌ಗಾಗಿ ಅಫ್ಘಾನಿಸ್ತಾನ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ರಶೀದ್ ಖಾನ್‌ರಂತಹ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ದರ್ವೀಶ್ ರಸೂಲಿ ಅವರನ್ನು ನೂತನ ನಾಯಕರನ್ನಾಗಿ ನೇಮಿಸಲಾಗಿದ್ದು, ಮಾಜಿ ನಾಯಕ ಮೊಹಮ್ಮದ್ ನಬಿ ಅವರ ಪುತ್ರ ಹಸನ್ ಈಸಾಖಿಲ್‌ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ.
ಕಾಬೂಲ್: ಮುಂಬರುವ ಏಷ್ಯನ್ ಗೇಮ್ಸ್‌ಗಾಗಿ ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ (ACB) ತನ್ನ ತಂಡವನ್ನು ಪ್ರಕಟಿಸಿದೆ. ಅಚ್ಚರಿಯ ಬೆಳವಣಿಗೆಯಲ್ಲಿ, ಸ್ಟಾರ್ ಆಟಗಾರ ರಶೀದ್ ಖಾನ್ ಸೇರಿದಂತೆ ಹಲವು ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಆಫ್ಘಾನ್ ತಂಡಕ್ಕೆ ದರ್ವೀಶ್ ರಸೂಲಿ ನೂತನ ನಾಯಕರಾಗಿ ನೇಮಕವಾಗಿದ್ದಾರೆ.
ಮೊಹಮ್ಮದ್ ನಬಿ ಪುತ್ರನಿಗೆ ತಂಡದಲ್ಲಿ ಚಾನ್ಸ್!
ಈ ಆಫ್ಘಾನಿಸ್ತಾನ ತಂಡದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ಮಾಜಿ ನಾಯಕ ಹಾಗೂ ಆಲ್‌ರೌಂಡರ್ ಮೊಹಮ್ಮದ್ ನಬಿ ಅವರ ಪುತ್ರ ಹಸನ್ ಈಸಾಖಿಲ್. 15 ಸದಸ್ಯರ ತಂಡದಲ್ಲಿ ಹಸನ್‌ಗೆ ಸ್ಥಾನ ನೀಡಲಾಗಿದೆ. ಬ್ಯಾಟರ್ ಆಗಿರುವ ಹಸನ್ ಈಸಾಖಿಲ್ ಇನ್ನೂ ಸೀನಿಯರ್ ತಂಡಕ್ಕೆ ಪದಾರ್ಪಣೆ ಮಾಡಿಲ್ಲ. ಆದರೆ, 41 ಟಿ20 ಪಂದ್ಯಗಳಲ್ಲಿ 1,094 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ.
ಕರೀಂ ಜನತ್, ನಜೀಬುಲ್ಲಾ ಜದ್ರಾನ್ ಅವರಂತಹ ಅನುಭವಿ ಆಟಗಾರರು ತಂಡದಲ್ಲಿದ್ದರೂ, ರಶೀದ್ ಖಾನ್, ಇಬ್ರಾಹಿಂ ಜದ್ರಾನ್, ರಹಮಾನುಲ್ಲಾ ಗುರ್ಬಾಜ್, ಅಜ್ಮತುಲ್ಲಾ ಒಮರ್ ಝಾಯ್ ಮತ್ತು ಅಲ್ಲಾ ಘಜನ್‌ಫರ್ ಅವರಂತಹ ಪ್ರಮುಖ ಆಟಗಾರರಿಗೆ ಅಫ್ಘಾನ್ ಕ್ರಿಕೆಟ್ ಬೋರ್ಡ್ ರೆಸ್ಟ್ ನೀಡಿದೆ. ಭಾರತ ಮತ್ತು ಪಾಕಿಸ್ತಾನದಂತಹ ತಂಡಗಳು ತಮ್ಮ ಬಲಿಷ್ಠ ತಂಡಗಳನ್ನು ಕಳುಹಿಸುತ್ತಿರುವಾಗ, ಅಫ್ಘಾನಿಸ್ತಾನ ತನ್ನ ಎರಡನೇ ದರ್ಜೆಯ ತಂಡವನ್ನು ಕಣಕ್ಕಿಳಿಸುತ್ತಿರುವುದು ಕುತೂಹಲ ಮೂಡಿಸಿದೆ.
ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ತಂಡದಲ್ಲಿ ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್ ಅವರಂತಹ ಪ್ರಮುಖ ಆಟಗಾರರಿದ್ದಾರೆ. ಇತ್ತ ಪಾಕಿಸ್ತಾನ ತಂಡವನ್ನು ಸಾಹಿಬ್‌ಜಾದಾ ಫರ್ಹಾನ್ ಮುನ್ನಡೆಸಲಿದ್ದಾರೆ.
2023ರ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಅಫ್ಘಾನಿಸ್ತಾನ ಬೆಳ್ಳಿ ಪದಕ ಗೆದ್ದುಕೊಂಡಿತ್ತು. ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಫೈನಲ್‌ನಲ್ಲಿ ಭಾರತದ ವಿರುದ್ಧ ಸೋತರೂ, ತಂಡದ ಪ್ರದರ್ಶನ ಅದ್ಭುತವಾಗಿತ್ತು. ಈ ಬಾರಿ ಪ್ರಮುಖ ಆಟಗಾರರಿಲ್ಲದಿದ್ದರೂ, ಅದೇ ಪ್ರದರ್ಶನವನ್ನು ಪುನರಾವರ್ತಿಸುವ ಭರವಸೆಯಲ್ಲಿ ಯುವ ಪಡೆ ಇದೆ.
ಏಷ್ಯನ್ ಗೇಮ್ಸ್‌ಗೂ ಮುನ್ನ ಭಾರತ-ಆಫ್ಘಾನ್ 3 ಪಂದ್ಯಗಳ ಟಿ20 ಸರಣಿ:
ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನ ಕ್ರಿಕೆಟ್ ಪಂದ್ಯಾವಳಿಗಳು ಸೆಪ್ಟೆಂಬರ್ 24ರಿಂದ ಅಕ್ಟೋಬರ್ 03ರ ವರೆಗೆ ನಡೆಯಲಿದೆ. ಇದಕ್ಕೂ ಮೊದಲು ಆಫ್ಘಾನಿಸ್ತಾನ ತಂಡವು ಭಾರತದಲ್ಲಿ ಭಾರತ ವಿರುದ್ದ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಯೋಜಿಸಿದೆ. ಈ ಮೂರೂ ಪಂದ್ಯಗಳು, ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಈ ಸರಣಿಯನ್ನು ಅಭ್ಯಾಸದ ರೀತಿಯಲ್ಲಿ ಉಭಯ ತಂಡಗಳು ಬಳಸಿಕೊಳ್ಳುವ ಸಾಧ್ಯತೆಯಿದೆ.
ಏಷ್ಯನ್ ಗೇಮ್ಸ್‌ಗೆ ಅಫ್ಘಾನಿಸ್ತಾನ ತಂಡ:
ದರ್ವೀಶ್ ರಸೂಲಿ (ನಾಯಕ), ಮೊಹಮ್ಮದ್ ಇಶಾಕ್ (ವಿಕೆಟ್ ಕೀಪರ್), ಮೊಹಮ್ಮದ್ ಅಕ್ರಮ್, ಹಸನ್ ಈಸಾಖಿಲ್, ಖಾಲಿದ್ ತನಿವಾಲ್, ಇಮ್ರಾನ್ ಮಿರ್, ಫೈಸಲ್ ಖಾನ್ ಶಿನೋಜಾದ, ನಜೀಬುಲ್ಲಾ ಜದ್ರಾನ್, ಫರ್‌ಮುಲ್ಲಾ ಸಾಫಿ, ಇಸ್ಮತ್ ಆಲಂ, ಕರೀಂ ಜನತ್, ನಂಗ್ಯಾಲ್ ಖರೋಟಿ, ಅರಬ್ ಗುಲ್ ಮೊಮಂದ್, ಫರೀದೂನ್ ದಾವೂದ್‌ಜಾಯ್, ಅಬ್ದುಲ್ಲಾ ಅಹ್ಮದ್‌ಜಾಯ್.


