ಟೀಂ ಇಂಡಿಯಾಗೆ ವೈಭವ್ ಸೂರ್ಯವಂಶಿ ಎಂಟ್ರಿಯಿಂದ ಹಿರಿಯ ಆಟಗಾರ ಸಂಜು ಸ್ಯಾಮ್ಸನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಸ್ಥಿರ ಪ್ರದರ್ಶನದಿಂದ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಅವರಿಗೆ ಟೀಂ ಇಂಡಿಯಾದ ಮಾಜಿ ವೇಗೆ ಎಸ್.ಶ್ರೀಶಾಂತ್ ಕಿವಿಮಾತು ಹೇಳಿದ್ದಾರೆ. ಏನು ಹೇಳಿದ್ದಾರೆ ಅನ್ನೋದ್ರ ವಿವರ ಈ ಸ್ಟೋರಿಯಲ್ಲಿದೆ. 

ನವದೆಹಲಿ: ಜಿಂಬಾಬ್ವೆ ಪ್ರವಾಸಕ್ಕಾಗಿ ಭಾರತ ತಂಡ ಪ್ರಕಟವಾಗಿದೆ. ಟಿ20 ವಿಶ್ವಕಪ್ ತಂಡದಲ್ಲಿದ್ದ ಸಂಜು ಸ್ಯಾಮ್ಸನ್ ಅವರಿಗೆ ಈ ತಂಡದಲ್ಲಿ ಸ್ಥಾನ ಸಿಗದಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಈ ಬಗ್ಗೆ ಮಾತನಾಡಿರುವ ಭಾರತದ ಮಾಜಿ ವೇಗಿ ಹಾಗೂ ಕೇರಳ ಎಕ್ಸ್‌ಪ್ರೆಸ್ ಖ್ಯಾತಿಯ ಎಸ್.ಶ್ರೀಶಾಂತ್, ಸಂಜು ಸ್ಯಾಮ್ಸನ್ ತಂಡದಲ್ಲಿ ಮುಂದುವರಿಯಬೇಕಾದರೆ ಇನ್ನಷ್ಟು ಸ್ಥಿರ ಪ್ರದರ್ಶನ ನೀಡುವ ಅಗತ್ಯವಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸಂಜುಗೆ ಎಚ್ಚರಿಕೆ

ಸಂದರ್ಶನವೊಂದರಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಶ್ರೀಶಾಂತ್, ಸಂಜು ಸ್ಯಾಮ್ಸನ್ ತಮ್ಮ ಆಟದಲ್ಲಿ ಸ್ಥಿರತೆ (Consistency) ಕಾಯ್ದುಕೊಳ್ಳಬೇಕು. ಐರ್ಲೆಂಡ್‌ನಂತಹ ತಂಡಗಳ ವಿರುದ್ಧವೂ ನೀವು ರನ್ ಗಳಿಸದಿದ್ದರೆ ಕಷ್ಟವಾಗುತ್ತದೆ. ಭಾರತೀಯ ಕ್ರಿಕೆಟ್‌ನಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಸಂಜು ವಿಶ್ವಕಪ್‌ನಲ್ಲಿ ಉತ್ತಮವಾಗಿ ಮಾಡಿರಬಹುದು, ಆದರೆ ಈಗ ಮತ್ತೆ ಫಾರ್ಮ್‌ ಸಾಬೀತುಪಡಿಸುವ ಅಗತ್ಯವಿದೆ. ಅವಕಾಶ ಸಿಕ್ಕಾಗ ಅದನ್ನು ಎರಡೂ ಕೈಗಳಿಂದ ಬಾಚಿಕೊಳ್ಳಬೇಕು, ಇಲ್ಲದಿದ್ದರೆ ಪೈಪೋಟಿ ತುಂಬಾ ಹೆಚ್ಚಿದೆ ಎಂದು ನೇರವಾಗಿ ಎಚ್ಚರಿಕೆ ನೀಡಿದ್ದಾರೆ.

ಸೂರ್ಯವಂಶಿ ಬಗ್ಗೆ ಮೆಚ್ಚುಗೆ

ಯುವ ಆಟಗಾರ ವೈಭವ್ ಸೂರ್ಯವಂಶಿ ಬಗ್ಗೆ ಅಪಾರ ವಿಶ್ವಾಸ ವ್ಯಕ್ತಪಡಿಸಿದ ಶ್ರೀಶಾಂತ್, ವೈಭವ್ ಸೂರ್ಯವಂಶಿ ಭಾರತೀಯ ಕ್ರಿಕೆಟ್‌ನ ಭವಿಷ್ಯ. ಈ ಬಾರಿಯ ಐಪಿಎಲ್‌ನಲ್ಲಿ ಅವರ ಪ್ರದರ್ಶನ ಅದ್ಭುತವಾಗಿತ್ತು. ಅವರ ಮೈಂಡ್ ಸೆಟ್ ತುಂಬಾ ಚೆನ್ನಾಗಿದೆ. ಭವಿಷ್ಯದಲ್ಲಿ ಕ್ರಿಕೆಟ್ ಒಲಿಂಪಿಕ್ಸ್‌ನಲ್ಲಿ ಸೇರಿದಾಗ, ಭಾರತಕ್ಕೆ ಚಿನ್ನದ ಪದಕ ತಂದುಕೊಡುವ ಶಕ್ತಿ ಸೂರ್ಯವಂಶಿ ಅವರಿಗೆ ಇದೆ ಎಂದು ಭವಿಷ್ಯ ನುಡಿದ್ದಾರೆ.

ಭಾರತದ ವೈಫಲ್ಯಕ್ಕೆ ಕಾರಣವೇನು?

ಭಾರತ ತಂಡ ಇಂಗ್ಲೆಂಡ್ ಪ್ರವಾಸಗಳಲ್ಲಿ ಎಡವುತ್ತಿರುವುದರ ಬಗ್ಗೆ ವಿಶ್ಲೇಷಿಸಿದ ಶ್ರೀಶಾಂತ್, ಐಪಿಎಲ್‌ನಲ್ಲಿ ಬ್ಯಾಟರ್‌ಗಳಿಗೆ ಫ್ಲಾಟ್ ಪಿಚ್‌ಗಳು ಸಿಗುತ್ತವೆ, ಅಲ್ಲಿ ಚೆಂಡು ಸುಲಭವಾಗಿ ಬ್ಯಾಟ್‌ಗೆ ಬರುತ್ತದೆ. ಇಂಗ್ಲೆಂಡ್‌ನಲ್ಲಿ ಪರಿಸ್ಥಿತಿ ಹಾಗಿರುವುದಿಲ್ಲ. ಅಲ್ಲಿ ಚೆಂಡು ಸ್ವಿಂಗ್ ಆಗುತ್ತದೆ. ಪ್ರತಿ ಬಾಲ್ ಅನ್ನು ಹಿಟ್ ಮಾಡುತ್ತೇನೆ ಎನ್ನುವ ಬದಲು, ಬೌಲರ್‌ಗಳಿಗೆ ಗೌರವ ನೀಡಬೇಕು. 120 ಎಸೆತಗಳಲ್ಲಿ ಯಾವ ಬೌಲರ್ ಚೆನ್ನಾಗಿ ಬೌಲಿಂಗ್ ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಿ ಆಡಬೇಕಾಗುತ್ತದೆ ಎಂದಿದ್ದಾರೆ.

ವೇಗಿಗಳಿಗೆ ಶ್ರೀಶಾಂತ್ ಸಲಹೆ

ಒಬ್ಬ ವೇಗದ ಬೌಲರ್ ಆಗಿ ಇಂದಿನ ವೇಗಿಗಳಿಗೆ ಕಿವಿಮಾತು ಹೇಳಿದ ಶ್ರೀಶಾಂತ್, ವೇಗದ ಬೌಲಿಂಗ್‌ನಲ್ಲಿ ತಯಾರಿಗಿಂತ ಮೈಂಡ್ ಸೆಟ್ ಬಹಳ ಮುಖ್ಯ. ಹೊಸ ಚೆಂಡಿನಲ್ಲಿ ವಿಕೆಟ್ ಪಡೆಯುವುದು ಅತ್ಯಗತ್ಯ. ನಿಮ್ಮ ಮೂರು ಓವರ್‌ಗಳು ಸರಿಯಾಗಿ ಹೋಗದಿದ್ದರೆ, ನಾಲ್ಕನೇ ಓವರ್‌ನಲ್ಲಿ ಯಾರ್ಕರ್ ಎಸೆಯುವ ಯೋಜನೆ ಇರಬೇಕು. ಯಾವ ಬ್ಯಾಟರ್‌ಗೆ ಎಲ್ಲಿ ಬೌಲಿಂಗ್ ಮಾಡಬೇಕು ಎಂಬ ಬಗ್ಗೆ ಸರಿಯಾದ ಹೋಮ್‌ವರ್ಕ್ ಮಾಡಿಕೊಂಡು ಮೈದಾನಕ್ಕೆ ಇಳಿಯಬೇಕು. ನೀವು ದೇಶಕ್ಕಾಗಿ ಆಡುತ್ತಿದ್ದೀರಿ ಎಂಬ ನೆನಪಿರಲಿ ಎಂದು ಸೂಚನೆ ನೀಡಿದ್ದಾರೆ.