ನಂಬಿಕೆ ಹುಸಿ ಮಾಡಿರುವ ಮೂರು ರತ್ನಗಳು.. RCBಯಿಂದ ಮೂವರಿಗೆ ಗೇಟ್‌ಪಾಸ್?
ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿರುವ ಆರ್‍ಸಿಬಿ ಹ್ಯಾಟ್ರಿಕ್ ಕನಸು ಕಾಣ್ತಿದೆ. ಅದಕ್ಕೆ ಈಗಿನಿಂದಲೇ ತೆರೆಮರೆಯಲ್ಲಿ ಸಿದ್ಧತೆ ನಡೆಸ್ತಿದ್ದು, ಮುಂದೆ ಎದುರಾಗುವ ಹರಾಜಿನ ಮೇಲೆ ಕಣ್ಣಿಟ್ಟಿದೆ. ಅದರ ಮುಂದುವರಿದ ಭಾಗವಾಗಿ ಮೂವರು ಆಟಗಾರರಿಗೆ ಕೊಕ್ ನೀಡಲು ಮುಂದಾಗಿದೆ ಎನ್ನಲಾಗ್ತಿದೆ.

ಯಾರಿಗೆ ಗೇಟ್‌ಪಾಸ್?
2026ರ ಐಪಿಎಲ್‌ನಲ್ಲಿ ಆರ್‌ಸಿಬಿಯಲ್ಲಿ ವಿರಾಟ್ ಕೊಹ್ಲಿ, ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹೇಜಲ್‌ವುಡ್ ಅವರಂತಹ ದಿಗ್ಗಜ ಆಟಗಾರರಿದ್ದರು. ಆದರೆ ಇವರ ಜೊತೆಗೆ ಕೆಲ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗುವ ಮೂಲಕ ತಂಡಕ್ಕೆ ಹೊರೆಯಾಗಿದ್ದರು. ಹೀಗಾಗಿ, ಐಪಿಎಲ್ 2027ರ ಹರಾಜಿಗೂ ಮುನ್ನ ಬೆಂಗಳೂರು ಫ್ರಾಂಚೈಸಿ ಬಿಡುಗಡೆ ಮಾಡಬಹುದಾದ ಮೂವರು ಪ್ರಮುಖ ಆಟಗಾರರ ವಿವರ ಇಲ್ಲಿದೆ.
ಜಿತೇಶ್ ಶರ್ಮಾ
ಐಪಿಎಲ್‌ನಲ್ಲಿ ಕೆಲ ಆಟಗಾರರಿಗೆ ದೊಡ್ಡ ಮೊತ್ತದ ಸಂಭಾವನೆ ಸಿಕ್ಕರೂ ಮೈದಾನದಲ್ಲಿ ಮಾತ್ರ ಅದಕ್ಕೆ ತಕ್ಕ ಪ್ರದರ್ಶನ ನೀಡಲು ಸಾಧ್ಯವಾಗುವುದಿಲ್ಲ. ಅಂತಹ ಆಟಗಾರರ ಸಾಲಿಗೆ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಸೇರಿದ್ದಾರೆ. 2026ರ ಸೀಸನ್‌ನಲ್ಲಿ ಆರ್‌ಸಿಬಿ ತಂಡದಿಂದ ಬರೋಬ್ಬರಿ 11 ಕೋಟಿ ರೂಪಾಯಿ ಪಡೆದಿದ್ದ ಜಿತೇಶ್ ಶರ್ಮಾ ತೀವ್ರ ನಿರಾಸೆ ಮೂಡಿಸಿದರು. ಇಡೀ ಸೀಸನ್‌ನಲ್ಲಿ ಅವರು ಆಡಿದ 16 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 116 ರನ್ ಮಾತ್ರ. ಇವರ ವೈಯಕ್ತಿಕ ಗರಿಷ್ಠ ಸ್ಕೋರ್ ಕೇವಲ 23 ರನ್ ಆಗಿತ್ತು. ಈ ಕಳಪೆ ಪ್ರದರ್ಶನದಿಂದಾಗಿ ಮುಂದಿನ ಸೀಸನ್‌ನಲ್ಲಿ ಅವರು ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವುದು ಕಷ್ಟ ಎನ್ನಲಾಗಿದೆ.
ರೊಮಾರಿಯೋ ಶೆಫರ್ಡ್
ವೆಸ್ಟ್ ಇಂಡೀಸ್‌ನ ಈ ಆಲ್‌ರೌಂಡರ್ 2025 ಮತ್ತು 2026ರ ಚಾಂಪಿಯನ್ ಆರ್‌ಸಿಬಿ ತಂಡದ ಭಾಗವಾಗಿದ್ದರು. ತಂಡದ ಇತರ ಸ್ಟಾರ್ ಆಟಗಾರರ ಅತ್ಯುತ್ತಮ ಪ್ರದರ್ಶನದ ನಡುವೆ ಇವರ ಕಳಪೆ ಪ್ರದರ್ಶನವು ಎದ್ದು ಕಾಣದೆ ಮರೆಯಾಗಿತ್ತು. 2026ರ ಆವೃತ್ತಿಯಲ್ಲಿ ಅವರು 15 ಪಂದ್ಯಗಳನ್ನು ಆಡಿ ಕೇವಲ 7 ವಿಕೆಟ್ ಪಡೆದು, ಬ್ಯಾಟಿಂಗ್‌ನಲ್ಲಿ 83 ರನ್ ಮಾತ್ರ ಗಳಿಸಿದರು. 2025ರ ಸೀಸನ್‌ನಲ್ಲೂ ಇವರ ಅಂಕಿ-ಅಂಶಗಳು ಅಷ್ಟೊಂದು ಆಕರ್ಷಕವಾಗಿರಲಿಲ್ಲ. ತಂಡದ ಸಮತೋಲನವನ್ನು ಕಾಯ್ದುಕೊಳ್ಳಲು ಮುಂದಿನ ಬಾರಿ ಇವರನ್ನು ಬಿಡುಗಡೆ ಮಾಡುವ ಸಾಧ್ಯತೆ ದಟ್ಟವಾಗಿದೆ.
ಸುಯಶ್ ಶರ್ಮಾ
ಲೆಗ್ ಸ್ಪಿನ್ನರ್ ಸುಯಶ್ ಶರ್ಮಾ ಕೂಡ ಕಳೆದ ಎರಡು ಸೀಸನ್‌ಗಳಿಂದ ಫಾರ್ಮ್ ಕೊರತೆಯಿಂದ ಬಳಲುತ್ತಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಇವರಿಗಾಗಿ 2.60 ಕೋಟಿ ರೂಪಾಯಿ ಖರ್ಚು ಮಾಡಿತ್ತು. ಆದರೆ ಸುಯಶ್ 2026ರ ಐಪಿಎಲ್ ಸೀಸನ್‌ನಲ್ಲಿ ಕೇವಲ 9 ವಿಕೆಟ್ ಮತ್ತು ಅದಕ್ಕೂ ಹಿಂದಿನ ಸೀಸನ್‌ನಲ್ಲಿ 8 ವಿಕೆಟ್ ಮಾತ್ರ ಪಡೆಯಲು ಯಶಸ್ವಿಯಾಗಿದ್ದರು. ಇವರ ಎಕಾನಮಿ ದರ ಒಂಬತ್ತಕ್ಕಿಂತ (9) ಹೆಚ್ಚಾಗಿದ್ದು, ರನ್ ನಿಯಂತ್ರಿಸುವಲ್ಲಿ ಹಾಗೂ ವಿಕೆಟ್ ಪಡೆಯುವಲ್ಲಿ ಇವರು ವಿಫಲರಾಗಿದ್ದಾರೆ.
ಯಾವದೂ ಶಾಶ್ವತವಲ್ಲ
ಸತತ ಎರಡು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 2025 ಮತ್ತು 2026ರ ಸೀಸನ್‌ಗಳಲ್ಲಿ ಅತ್ಯಂತ ಬಲಿಷ್ಠವಾಗಿ ಕಾಣಿಸಿಕೊಂಡಿತ್ತು. ಆದರೆ ಕ್ರಿಕೆಟ್‌ನಲ್ಲಿ ಯಾವುದೂ ಶಾಶ್ವತವಲ್ಲ. ಎಷ್ಟೇ ಬಲಿಷ್ಠ ತಂಡವಾಗಿದ್ದರೂ ತಪ್ಪುಗಳು ಮತ್ತು ವೈಫಲ್ಯಗಳು ಸಹಜವಾಗಿ ಎದ್ದು ಕಾಣುತ್ತವೆ. ಚಾಂಪಿಯನ್ ತಂಡಗಳಲ್ಲೂ ಕೆಲವೊಂದು ದೌರ್ಬಲ್ಯಗಳು ಇರುತ್ತವೆ ಎಂಬುದಕ್ಕೆ ಕಳೆದ ಸೀಸನ್ ಸಾಕ್ಷಿಯಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

