ಭಾರತ ಮಹಿಳಾ ತಂಡದ ಆಟಗಾರ್ತಿ ಸಜನಾ ಸಜೀವನ್, ತಮ್ಮ ಬಾಲ್ಯದಲ್ಲಿ ತೆಂಗಿನ ಹೆಡೆಯನ್ನೇ ಬ್ಯಾಟ್ ಆಗಿ ಬಳಸಿ ಕ್ರಿಕೆಟ್ ಆಡುತ್ತಿದ್ದ ನೆನಪನ್ನು ಹಂಚಿಕೊಂಡಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ ಅವರು, ತಮ್ಮ ಮೊದಲ ಪಂದ್ಯದಲ್ಲೇ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ.
ಮುಂಬೈ (ಜ.13): ಬಹುಶಃ ಇಂಥ ವಿಚಾರದೊಂದಿಗೆ ಅತಿ ವೇಗವಾಗಿ ಕನೆಕ್ಟ್ ಆಗೋದು 90ರ ದಶಕದ ಮಕ್ಕಳು. ಕ್ರಿಕೆಟ್ ಅನ್ನು ತುಂಬಾ ಪ್ರೀತಿಸುತ್ತಿದ್ದ ತೊಂಬತ್ತರ ದಶಕದ ಮಕ್ಕಳಿಗೆ, ಕ್ರಿಕೆಟ್ ಬ್ಯಾಟ್ ಸಾಮಾನ್ಯವಾಗಿ ಅವರ ಬಾಲ್ಯದಲ್ಲಿ ಕೇವಲ ಕನಸಾಗಿತ್ತು. ಬಾಲ್ಯದಲ್ಲಿ ಮನೆಯಲ್ಲಿರುವ ಇರುತ್ತಿದ್ದ ತೆಂಗಿನ ಮರದ ತೆಂಗಿನ ಹಡೆಗಳೇ ಬ್ಯಾಟ್ ಆಗಿ ಪರಿವರ್ತನೆ ಆಗುತ್ತಿದ್ದವು. ಈಗ ಭಾರತ ಮಹಿಳಾ ತಂಡದ ಕೇರಳ ಮೂಲದ ಆಟಗಾರ್ತಿ ಸಜನಾ ಸಜೀವನ್ ತಮ್ಮ ಮೊದಲ ಬ್ಯಾಟ್‌ನ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ ಸಜನಾ, ಇತ್ತೀಚೆಗೆ ಮುಂಬೈ ಇಂಡಿಯನ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತೆಂಗಿನ ಹೆಡೆಯನ್ನು ವೇದಿಕೆಗೆ ತಂದು ತಮ್ಮ ನೆನಪುಗಳನ್ನು ಹಂಚಿಕೊಂಡರು. ತಮ್ಮ ಮೊದಲ ಬ್ಯಾಟ್ ತಯಾರಾಗಿದ್ದೇ ತೆಂಗಿನ ಹೆಡೆಯಿಂದ ಎಂದು ಹೇಳಿಕೊಂಡರು. ಕೇರಳದಲ್ಲಿ ನಾವು ಕ್ರಿಕೆಟ್ ಬ್ಯಾಟ್‌ಗಳನ್ನು ಇದರಿಂದಲೇ ಮಾಡುತ್ತಿದ್ದೆವು ಎಂದು ಸಜನಾ ಹೇಳಿಕೊಂಡಿದ್ದಾರೆ. ತನ್ನ ಊರಿನಲ್ಲಿ ಕ್ರಿಕೆಟ್ ಆಡುವ ಏಕೈಕ ಹುಡುಗಿ ನಾನಾಗಿದ್ದೆ ಎಂದು ಸಜನಾ ಹೇಳಿದ್ದು, ಹುಡುಗರ ಜೊತೆಯಲ್ಲಿ ನಾನು ಕ್ರಿಕೆಟ್ ಆಡುತ್ತಿದ್ದೆ ಎಂದಿದ್ದಾರೆ. ಮುಂಬೈ ಇಂಡಿಯನ್ಸ್ ತಂಡ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಮುಂಬೈ ಇಂಡಿಯನ್ಸ್ ಆಟಗಾರ್ತಿ
ಈ ಬಾರಿ, ಮಹಿಳಾ ಪ್ರೀಮಿಯರ್ ಲೀಗ್‌ನ ಆರಂಭಿಕ ಪಂದ್ಯದಲ್ಲಿ ಸಜನಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಉತ್ತಮ ಪ್ರದರ್ಶನ ನೀಡಿದರು. ಮುಂಬೈ ಬ್ಯಾಟಿಂಗ್‌ನಲ್ಲಿ ಸಂಕಷ್ಟದಲ್ಲಿದ್ದ ಸಮಯದಲ್ಲಿ ಆರನೇ ಸ್ಥಾನದಲ್ಲಿ ಕ್ರೀಸ್‌ಗೆ ಬಂದ ಸಜನಾ 25 ಎಸೆತಗಳಲ್ಲಿ 45 ರನ್ ಗಳಿಸಿ ಟಾಪ್ ಸ್ಕೋರರ್ ಆಗಿದ್ದರು. ಈ ಬಾರಿ ಮುಂಬೈ ಸಜನಾ ಅವರನ್ನು 75 ಲಕ್ಷ ರೂಪಾಯಿಗೆ ಖರೀದಿಸಿತು. ಸಜನಾ ಒಬ್ಬ ಆಲ್ ರೌಂಡರ್, ಬಲಗೈ ಬ್ಯಾಟ್ಸ್‌ಮನ್ ಮತ್ತು ಆಫ್ ಸ್ಪಿನ್ನರ್ ಆಗಿದ್ದಾರೆ.


