ವುಮೆನ್ಸ್‌ ಪ್ರೀಮಿಯರ್‌ ಲೀಗ್‌ನ ಮೊದಲ ಪಂದ್ಯದಲ್ಲಿ, ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ರೋಚಕ ಗೆಲುವು ಸಾಧಿಸಿದೆ. ಕೊನೆಯ ಓವರ್‌ನಲ್ಲಿ 18 ರನ್‌ಗಳ ಅವಶ್ಯಕತೆಯಿದ್ದಾಗ, ಡಿ ಕ್ಲರ್ಕ್‌ ಅವರ ಸ್ಫೋಟಕ ಬ್ಯಾಟಿಂಗ್ ಗೆಲುವಿಗೆ ಕಾರಣವಾಯಿತು.

ಮುಂಬೈ (ಜ.9): ವುಮೆನ್ಸ್‌ ಪ್ರೀಮಿಯರ್‌ ಲೀಗ್‌ನ ಮೊದಲ ಪಂದ್ಯದಲ್ಲಿಯೇ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ವುಮೆನ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವುಮೆನ್‌ ತಂಡ ಅತ್ಯಂತ ರೋಚಕ ಗೆಲುವು ಕಂಡಿದೆ. ಕೊನೇ ಓವರ್‌ನಲ್ಲಿ ಗೆಲುವಿಗೆ ಬೇಕಿದ್ದ 18 ರನ್‌ಗಳನ್ನು ಏಕಾಂಗಿಯಾಗಿ ಬಾರಿಸಿದ ದಕ್ಷಿಣ ಆಫ್ರಿಕಾ ಮೂಲದ ಆಲ್ರೌಂಡರ್‌ 25 ವರ್ಷದ ನಡಿನ್‌ ಡಿ ಕ್ಲರ್ಕ್‌ ಆರ್‌ಸಿಬಿಯ ರೋಚಕ ಗೆಲುವಿಗೆ ಕಾರಣರಾದರು. ಕೊನೇ ಓವರ್‌ನವರೆಗೂ ಆರ್‌ಸಿಬಿ ಪಂದ್ಯ ಗೆಲ್ಲುವ ಯಾವ ಲಕ್ಷಣಗಳೂ ಇದ್ದಿರಲಿಲ್ಲ. ಆದರೆ, ಇಂಗ್ಲೆಂಡ್‌ನ ಅನುಭವಿ ಬೌಲರ್‌ ಸ್ಕ್ರೀವರ್‌ ಬ್ರಂಟ್‌ ದಾಳಿಯನ್ನು ಚೆಂಡಾಡಿದ ನಡಿನ್‌ ಡಿ ಕ್ಲರ್ಕ್‌ ಆರ್‌ಸಿಬಿಗೆ ರೋಚಕ 3 ವಿಕೆಟ್‌ ಗೆಲುವಿಗೆ ಕಾರಣರಾದರು. ಹಾಲಿ ಚಾಂಪಿಯನ್‌ ವಿರುದ್ಧ ಗೆಲುವಿನೊಂದಿಗೆ 2024ರ ಚಾಂಪಿಯನ್‌ ಆರ್‌ಸಿಬಿ ಟೀಮ್‌ 2026ರ WPL ಶುಭಾರಂಭ ಮಾಡಿದೆ.

ಮುಂಬೈ ಇಂಡಿಯನ್ಸ್‌ ನೀಡಿದ ಸಾಧಾರಣ ಗುರಿಯನ್ನು ಬೆನ್ನಟ್ಟಲು ಬಹುತೇಕ ವಿಫಲವಾಗುವ ಹಾದಿಯಲ್ಲಿ ಸ್ಮೃತಿ ಮಂಧನಾ ನೇತೃತ್ವದ ಆರ್‌ಸಿಬಿ ತಂಡ ಕೊನೇ ಓವರ್‌ನಲ್ಲಿ ತೋರಿದ ಸಾಹಸಿಕ ಬ್ಯಾಟಿಂಗ್‌ ನಿರ್ವಹಣೆಯಿಂದ ಅಸಾಧಾರಣ ಗೆಲುವು ಕಂಡಿತು. 44 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್‌ ಇದ್ದ ಅಜೇಯ 63 ರನ್‌ ಬಾರಿಸಿದ ನಡಿನ್‌ ಡಿ ಕ್ಲರ್ಕ್‌ ತಂಡಕ್ಕೆ ಅಮೋಘ ಗೆಲುವು ತಂದರು.

ಶುಕ್ರವಾರ ಡಿವೈ ಪಾಟೀಲ್‌ ಸ್ಪೋಟ್ಸ್‌ ಅಕಾಡೆಮಿ ಮೈದಾನದಲ್ಲಿ ನಡೆದ 2026ರ ಆವೃತ್ತಿಯ ಮೊದಲ ಡಬ್ಲ್ಯುಪಿಎಲ್‌ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್‌ ತಂಡ 6 ವಿಕೆಟ್‌ಗೆ 154 ರನ್‌ ಕಲೆಹಾಕಿತು. ಪ್ರತಿಯಾಗಿ ಆರ್‌ಸಿಬಿ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 157 ರನ್‌ ಬಾರಿಸಿ ಶುಭಾರಂಭ ಮಾಡಿತು.

Scroll to load tweet…

ಕೊನೇ ಓವರ್‌ನಲ್ಲಿ ನಡಿನ್‌ ಡಿ ಕ್ಲರ್ಕ್‌ ಮಿಂಚು

ಕೊನೇ ಓವರ್‌ನಲ್ಲಿ ಆರ್‌ಸಿಬಿ ಗೆಲುವಿಗೆ 18 ರನ್‌ಗಳು ಬೇಕಿದ್ದವು. ಅದಾಗಲೇ 7 ವಿಕೆಟ್‌ ಕಳೆದುಕೊಂಡಿದ್ದ ಆರ್‌ಸಿಬಿಗೆ ಆ ಕ್ಷಣದಲ್ಲಿ ಡಿ ಕ್ಲರ್ಕ್‌ ಮೇಲೆ ಮಾತ್ರವೇ ಕೊಂಚ ವಿಶ್ವಾಸವಿಟ್ಟಿತ್ತು. ಆದರೆ, ಬ್ರಂಟ್‌ ಎಸೆದ ಮೊದಲ ಎರಡು ಎಸೆತಗಳಲ್ಲಿ ಯಾವುದೇ ರನ್‌ ಬಂದಿರಲಿಲ್ಲ. ಇದರಿಂದಾಗಿ ಕೊನೇ 14 ಎಸೆತಗಳಲ್ಲಿ 18 ರನ್‌ ಬಾರಿಸುವ ಅವಶ್ಯಕತೆ ಇತ್ತು.

ಈ ಹಂತದಲ್ಲಿ ಬ್ರಂಟ್‌ ಅವರ 3ನೇ ಎಸೆತವನ್ನು ಲಾಂಗ್‌ ಆಫ್‌ನಲ್ಲಿ ಸಿಕ್ಸರ್‌ಗೆ ಅಟ್ಟಿದರೆ, ಮರು ಎಸೆತದಲ್ಲಿ ಬ್ಯಾಕ್‌ವರ್ಡ್‌ ಆಫ್‌ ಸ್ಕ್ವೇರ್‌ನಲ್ಲಿ ಬೌಂಡರಿ ಬಾರಿಸಿ ತಮ್ಮ ಅರ್ಧಶತಕ ಪೂರೈಸಿದರು. ನಂತರ ಎಸೆತವನ್ನು ಕೌ ಕಾರ್ನರ್‌ಗೆ ಸಿಕ್ಸರ್‌ಗೆ ಅಟ್ಟಿದಾಗ ಆರ್‌ಸಿಬಿಗೆ ಕೊನೇ ಎಸೆತದಲ್ಲಿ 2 ರನ್‌ಬಾರಿಸುವ ಅವಶ್ಯಕತೆ ಬಂದಿತು. ಕೊನೇ ಎಸೆತವನ್ನು ಬೌಂಡರಿಗಟ್ಟುವ ಮೂಲಕ ರೋಚಕ ಗೆಲವು ತಂದರು.

ಮುಂಬೈ ತಂಡದ ಪರವಾಗಿ ಯಾರೊಬ್ಬರೂ ಅರ್ಧಶತಕ ಬಾರಿಸಲು ವಿಫಲರಾದರೂ, ಮಧ್ಯಮ ಕ್ರಮಾಂಕದಲ್ಲಿನ ನಿಕೋಲಾ ಕ್ಯಾರಿ (40ರನ್‌, 29 ಎಸೆತ, 4 ಬೌಂಡರಿ) ಹಾಗೂ ಸಜೀವನ್‌ ಸಜನಾ (45ರನ್‌, 25 ಎಸೆತ, 7 ಬೌಂಡರಿ, 1 ಸಿಕ್ಸರ್‌) ತಂಡದ ಸವಾಲಿನ ಮೊತ್ತಕ್ಕೆ ಕಾರಣರಾಗಿದ್ದರು.