ಐಪಿಎಲ್ ತಂಡ ರಾಜಸ್ಥಾನ್ ರಾಯಲ್ಸ್ ಮಾರಾಟ ಪ್ರಕ್ರಿಯೆಯಲ್ಲಿ ಹೊಸ ತಿರುವು ಉಂಟಾಗಿದೆ. ಆದಿತ್ಯ ಬಿರ್ಲಾ ಗ್ರೂಪ್ ಜೊತೆಗೆ, ಇದೀಗ ಜಾಗತಿಕ ಉಕ್ಕಿನ ದೈತ್ಯ 'ಆರ್ಸೆಲರ್ ಮಿತ್ತಲ್' ಕುಟುಂಬವೂ ಫ್ರಾಂಚೈಸಿ ಖರೀದಿಸಲು ಆಸಕ್ತಿ ತೋರಿದೆ. 

ಬೆಂಗಳೂರು (ಮಾ.17): ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದ ಚೊಚ್ಚಲ ಚಾಂಪಿಯನ್ಸ್ 'ರಾಜಸ್ಥಾನ್ ರಾಯಲ್ಸ್' (Rajasthan Royals) ತಂಡದ ಮಾರಾಟ ಪ್ರಕ್ರಿಯೆಯಲ್ಲಿ ಈಗ ದೊಡ್ಡ ತಿರುವು ಕಂಡುಬಂದಿದೆ. ಜಾಗತಿಕ ಉಕ್ಕಿನ ದೈತ್ಯ 'ಆರ್ಸೆಲರ್ ಮಿತ್ತಲ್' (Arcelor Mittal) ಸಮೂಹದ ಸಿಇಒ ಆದಿತ್ಯ ಮಿತ್ತಲ್ ನೇತೃತ್ವದ ಕುಟುಂಬವು ಈ ಫ್ರಾಂಚೈಸಿಯನ್ನು ಖರೀದಿಸಲು ಗಂಭೀರವಾಗಿ ಆಲೋಚಿಸುತ್ತಿದೆ. ಈ ಮೂಲಕ ಆದಿತ್ಯ ಬಿರ್ಲಾ ಗ್ರೂಪ್ ಮತ್ತು ಡೇವಿಡ್ ಬ್ಲಿಟ್ಜರ್ ಒಕ್ಕೂಟದ ನಡುವಿನ ಹಣಾಹಣಿಗೆ ಈಗ ಮಿತ್ತಲ್ ಕುಟುಂಬವೂ ಸೇರ್ಪಡೆಯಾದಂತಾಗಿದೆ.

ಕಳೆದ ವರ್ಷವಷ್ಟೇ ಆದಿತ್ಯ ಮಿತ್ತಲ್ ಮತ್ತು ಮಿತ್ತಲ್ ಫ್ಯಾಮಿಲಿ ಟ್ರಸ್ಟ್‌ನ ಟ್ರಸ್ಟಿಗಳು ವಿಲಿಯಂ ಚಿಸ್ಹೋಮ್ ನೇತೃತ್ವದ ಒಕ್ಕೂಟದೊಂದಿಗೆ ಸೇರಿ ಎನ್‌ಬಿಎ (NBA) ತಂಡವಾದ 'ಬೋಸ್ಟನ್ ಸೆಲ್ಟಿಕ್ಸ್' ಅನ್ನು ಖರೀದಿಸಿದ್ದರು. ಈ ವ್ಯವಹಾರದ ಬೆಲೆ ಸುಮಾರು 6.1 ಬಿಲಿಯನ್ ಡಾಲರ್ ಆಗಿತ್ತು. ಇದು ಅಮೆರಿಕದ ವೃತ್ತಿಪರ ಕ್ರೀಡಾ ತಂಡವೊಂದರ ಇತಿಹಾಸದಲ್ಲೇ ನಡೆದ ಅತಿದೊಡ್ಡ ಮಾರಾಟವಾಗಿತ್ತು. ಇದೀಗ ಭಾರತದ ಅತ್ಯಂತ ಮೌಲ್ಯಯುತ ಕ್ರೀಡಾ ಆಸ್ತಿಯನ್ನು ಹೊಂದುವ ಉದ್ದೇಶದಿಂದ ಅವರು ರಾಜಸ್ಥಾನ್ ರಾಯಲ್ಸ್ ಮೇಲೆ ಕಣ್ಣಿಟ್ಟಿದ್ದಾರೆ.

ಮಾರಾಟ ಪ್ರಕ್ರಿಯೆ ಎಲ್ಲಿದೆ?

ವರದಿಗಳ ಪ್ರಕಾರ, ರಾಜಸ್ಥಾನ್ ರಾಯಲ್ಸ್ ಮಾಲೀಕತ್ವಕ್ಕಾಗಿ ಬಿಡ್ ಸಲ್ಲಿಸಲು ಮಾರ್ಚ್ 17 ರ ಮುಂಜಾನೆ ಕೊನೆಯ ಗಡುವಾಗಿತ್ತು. ಈಗಾಗಲೇ ಕನಿಷ್ಠ ನಾಲ್ಕು ಪ್ರಮುಖ ಸಂಸ್ಥೆಗಳು ತಮ್ಮ ಪ್ರಸ್ತಾವನೆಯನ್ನು ಸಲ್ಲಿಸಿವೆ ಎಂದು ಮೂಲಗಳು ತಿಳಿಸಿವೆ. ಆದಿತ್ಯ ಮಿತ್ತಲ್ ಅವರು ಏಕಾಂಗಿಯಾಗಿ ಹೂಡಿಕೆ ಮಾಡಿದ್ದಾರೋ ಅಥವಾ ಇತರ ಪಾಲುದಾರರೊಂದಿಗೆ ಸೇರಿ ಬಿಡ್ ಮಾಡಿದ್ದಾರೋ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ.

ಯಾರೆಲ್ಲಾ ರೇಸ್‌ನಲ್ಲಿದ್ದಾರೆ?

ರಾಜಸ್ಥಾನ್ ರಾಯಲ್ಸ್ ಮಾಲೀಕತ್ವ ಪಡೆಯಲು ದೊಡ್ಡ ದೊಡ್ಡ ಉದ್ಯಮಿಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಅಮೆರಿಕದ ಕ್ರೀಡಾ ಹೂಡಿಕೆದಾರ ಡೇವಿಡ್ ಬ್ಲಿಟ್ಜರ್ ಅವರೊಂದಿಗೆ ಸೇರಿ ಆದಿತ್ಯ ಬಿರ್ಲಾ ಗ್ರೂಪ್ ಪ್ರಬಲ ಬಿಡ್ ಸಲ್ಲಿಸಿದೆ. ಈಗಾಗಲೇ ರಾಜಸ್ಥಾನ್ ರಾಯಲ್ಸ್‌ನಲ್ಲಿ ಹೂಡಿಕೆ ಮಾಡಿರುವ ಕಲ್ ಸೋಮನಿ ಅವರಿಗೆ ಜಾಗತಿಕ ರೀಟೇಲ್ ದೈತ್ಯ 'ವಾಲ್‌ಮಾರ್ಟ್'ನ ರಾಬ್ ವಾಲ್ಟನ್ ಬೆಂಬಲದೊಂದಿಗೆ ಬಿಡ್‌ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಮಾಧ್ಯಮ ಲೋಕದ ದೈತ್ಯ ಸಂಸ್ಥೆಯಾದ ಟೈಮ್ಸ್ ಆಫ್ ಇಂಡಿಯಾ ಗ್ರೂಪ್ ಕೂಡ ಈ ರೇಸ್‌ನಲ್ಲಿದೆ. ಎನ್‌ಬಿಎಫ್‌ಸಿ ಸಂಸ್ಥೆಯಾದ ಕ್ಯಾಪ್ರಿ ಗ್ಲೋಬಲ್ ಇಡೀ ಸೇಲ್‌ನಲ್ಲಿ 'ಡಾರ್ಕ್‌ ಹಾರ್ಸ್‌ನಂತೆ ಹೊರಹೊಮ್ಮುವ ಸಾಧ್ಯತೆಯಿದೆ.

ರಾಜಸ್ಥಾನ್ ರಾಯಲ್ಸ್ ಮೌಲ್ಯ ಎಷ್ಟು?

ಡಿಸೆಂಬರ್ 2025 ರ ವರದಿಯ ಪ್ರಕಾರ, ರಾಜಸ್ಥಾನ್ ರಾಯಲ್ಸ್ ತಂಡದ ಮೌಲ್ಯವು 1 ಬಿಲಿಯನ್ ಡಾಲರ್ (ಸುಮಾರು 8,300 ಕೋಟಿ ರೂ.) ಗಿಂತಲೂ ಹೆಚ್ಚಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಬ್ರಿಟಿಷ್-ಭಾರತೀಯ ಉದ್ಯಮಿ ಮನೋಜ್ ಬದಲೆ ಅವರ ಎಮರ್ಜಿಂಗ್ ಮೀಡಿಯಾ ವೆಂಚರ್ಸ್ ತಂಡದಲ್ಲಿ ಶೇ. 65 ರಷ್ಟು ಪಾಲನ್ನು ಹೊಂದಿದ್ದು, ರೆಡ್‌ಬರ್ಡ್ ಕ್ಯಾಪಿಟಲ್ ಪಾರ್ಟ್‌ನರ್ಸ್ ಮತ್ತು ಲಾಚ್ಲಾನ್ ಮುರ್ಡೋಕ್ ಉಳಿದ ಪಾಲುದಾರರಾಗಿದ್ದಾರೆ.

ರಾಯಲ್ಸ್ ತಂಡದ ಇತಿಹಾಸ ಮತ್ತು ಸಾಧನೆ

ಐಪಿಎಲ್‌ನ ಮೊದಲ ಸೀಸನ್ ವಿಜೇತ ತಂಡವಾಗಿದ್ದಲ್ಲದೆ, ವಿದೇಶಿ ನಾಯಕ ಮತ್ತು ತರಬೇತುದಾರನನ್ನು ಹೊಂದಿದ ಮೊದಲ ತಂಡ ಎನ್ನುವ ಶ್ರೇಯವೂ ಇದಕ್ಕಿದೆ. ಬಹು ಹೋಮ್ ಗ್ರೌಂಡ್‌ಗಳನ್ನು ಬಳಸಿದ ಮತ್ತು ವಿದೇಶದಲ್ಲಿ ಪ್ರದರ್ಶನ ಪಂದ್ಯಗಳನ್ನು ಆಡಿದ ಐಪಿಎಲ್‌ ಮೊದಲ ತಂಡವಾಗಿದೆ. ತಂಡದ 2025 ರ ಸ್ಕ್ವಾಡ್‌ನಲ್ಲಿ ರವೀಂದ್ರ ಜಡೇಜಾ, ಯಶಸ್ವಿ ಜೈಸ್ವಾಲ್, ಜೋಫ್ರಾ ಆರ್ಚರ್ ಅವರಂತಹ ಪ್ರಮುಖ ಆಟಗಾರರಿದ್ದಾರೆ. ಕುಮಾರ್ ಸಂಗಕ್ಕಾರ ಅವರು ಪ್ರಸ್ತುತ ಮುಖ್ಯ ತರಬೇತುದಾರ ಹಾಗೂ ಕ್ರಿಕೆಟ್ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.