ಭಾರತದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಟೆಸ್ಟ್ ಕ್ರಿಕೆಟ್‌ಗೆ ದಿಢೀರ್ ವಿದಾಯ ಘೋಷಿಸಿದ್ದಾರೆ. ಶಮಿ ಅವರ ನಿವೃತ್ತಿ ನಿರ್ಧಾರದ ಬೆನ್ನಲ್ಲೇ ಆಯ್ಕೆ ಸಮಿತಿಯ ಕಾರ್ಯವೈಖರಿ ಬಗ್ಗೆ ಮಾಜಿ ಕೋಚ್ ರವಿಶಾಸ್ತ್ರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟೆಸ್ಟ್‌ನಿಂದ ನಿವೃತ್ತಿಯಾದರೂ ಶಮಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಮುಂದುವರಿಯಲಿದ್ದಾರೆ.

ನವದೆಹಲಿ(ನ.07): ಭಾರತದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. 13 ವರ್ಷಗಳ ಟೆಸ್ಟ್ ಕ್ರಿಕೆಟ್ ಪಯಣಕ್ಕೆ ನವೆಂಬರ್ 6, 2026ರಂದು ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ತೆರೆ ಎಳೆದಿದ್ದಾರೆ. ಶಮಿ ನಿವೃತ್ತಿ ನಿರ್ಧಾರದ ಬೆನ್ನಲ್ಲೇ ಭಾರತದ ಮಾಜಿ ಕೋಚ್ ರವಿಶಾಸ್ತ್ರಿ ಅಸಮಾಧಾನ ವ್ಯಕ್ತಪಡಿಸಿದ್ದು, ಆಯ್ಕೆ ಸಮಿತಿ ಅವರ ವೃತ್ತಿಜೀವನವನ್ನು ನಿರ್ವಹಿಸಿದ ರೀತಿಯನ್ನು ಪ್ರಶ್ನಿಸಿದ್ದಾರೆ.

2013ರ ನವೆಂಬರ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಶಮಿ, ಭಾರತದ ಪರ 64 ಪಂದ್ಯಗಳನ್ನಾಡಿ 229 ವಿಕೆಟ್ ಕಬಳಿಸಿದ್ದಾರೆ. ಆರು ಬಾರಿ ಐದು ವಿಕೆಟ್‌ಗಳ ಗೊಂಚಲು ಪಡೆದಿರುವುದು ಅವರ ಸಾಧನೆಯಾಗಿದೆ. 2023ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ್ದೇ ಅವರ ಕೊನೆಯ ಟೆಸ್ಟ್ ಪಂದ್ಯವಾಗಿದೆ.

ಶಮಿಗೆ ಇನ್ನೂ 30-40 ವಿಕೆಟ್ ಪಡೆಯುವ ಸಾಮರ್ಥ್ಯವಿತ್ತು: ರವಿಶಾಸ್ತ್ರಿ

ಶಮಿ ಅವರ ನಿವೃತ್ತಿ ಬಗ್ಗೆ ಮಾತನಾಡಿರುವ ರವಿಶಾಸ್ತ್ರಿ, ಅವರು ಇನ್ನೂ ಕೆಲವು ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್ ಆಡಬಹುದಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ದೇಶಕ್ಕಾಗಿ ಅತ್ಯುತ್ತಮವಾಗಿ ಆಡಿರುವ ಆಟಗಾರನೊಬ್ಬ ವಿದಾಯ ಹೇಳುತ್ತಿರುವುದು ಬೇಸರದ ಸಂಗತಿ. ಅವರಿಂದ ಇನ್ನೂ 30ರಿಂದ 40 ವಿಕೆಟ್‌ಗಳನ್ನು ನಿರೀಕ್ಷಿಸಬಹುದಿತ್ತು. ಕಳೆದ 12 ತಿಂಗಳಲ್ಲಿ ಅವರು ಟೆಸ್ಟ್ ಆಡಬೇಕಿತ್ತು. ಟೆಸ್ಟ್ ಬೌಲರ್ ಆಗಿ ತಂಡದಲ್ಲಿ ಸ್ಥಾನ ಪಡೆಯಬೇಕಿತ್ತು ಎಂದು ನಾನು ಭಾವಿಸಿದ್ದೆ” ಎಂದು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಶಾಸ್ತ್ರಿ ಹೇಳಿದ್ದಾರೆ.

ಆಯ್ಕೆ ಸಮಿತಿಯ ನಿರ್ಧಾರದ ಬಗ್ಗೆ ಕಿಡಿಕಾರಿದ ಮಾಜಿ ಕೋಚ್

2025ರ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ನಿವೃತ್ತಿಯಿಂದ ಬದಲಾವಣೆಯ ಹಂತ ಆರಂಭವಾಗಿತ್ತು. ಈ ಸಂದರ್ಭದಲ್ಲಿ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್, ಶಮಿ ಅವರ ಕೆಲಸದ ಹೊರೆ (Workload) ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎಂದು ತಿಳಿಸಿದ್ದರು. 2025ರ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಶಮಿ ಅವರ ಫಿಟ್ನೆಸ್ ಬಗ್ಗೆ ಸ್ಪಷ್ಟ ಮಾಹಿತಿ ನೀಡಿರಲಿಲ್ಲ. ಇದರಿಂದ ಅವರು ತಂಡದ ಆಯ್ಕೆಗೆ ಪರಿಗಣನೆಯಾಗಲಿಲ್ಲ ಎಂದಿದ್ದರು.

ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಶಮಿ ಅವರನ್ನು ಆಯ್ಕೆ ಮಾಡದ ವೈದ್ಯಕೀಯ ತಂಡದ ಫಿಟ್ನೆಸ್ ಮೌಲ್ಯಮಾಪನದ ಬಗ್ಗೆಯೂ ಶಾಸ್ತ್ರಿ ಪ್ರಶ್ನೆ ಎತ್ತಿದ್ದಾರೆ. ಬಂಗಾಳ ಪರ ದೇಶೀಯ ಕ್ರಿಕೆಟ್‌ನಲ್ಲಿ ಶಮಿ ನಿರಂತರವಾಗಿ ಆಡುತ್ತಿದ್ದುದನ್ನು ಅವರು ಉಲ್ಲೇಖಿಸಿದ್ದಾರೆ. “ಜಿಮ್‌ನಲ್ಲಿ ಫಿಟ್ ಆಗಿರುವುದರಿಂದ ಏನು ಪ್ರಯೋಜನ? ಪಂದ್ಯದಲ್ಲಿ 10 ರಿಂದ 12 ಓವರ್ ಬೌಲಿಂಗ್ ಮಾಡಲು ಸಾಧ್ಯವಾಗದಿದ್ದರೆ ಅದಕ್ಕೆ ಅರ್ಥವೇನು? ನಮ್ಮ ಬಳಿ ತಂಡಕ್ಕಾಗಿ ಸತತವಾಗಿ ಬೌಲಿಂಗ್ ಮಾಡಬಲ್ಲ ಆಟಗಾರನಿದ್ದ. ಅವರು ಮತ್ತೊಂದು ಅವಕಾಶ ಪಡೆಯದಿರುವುದು ನನಗೆ ನಿರಾಸೆ ತಂದಿದೆ” ಎಂದು ಶಾಸ್ತ್ರಿ ಹೇಳಿದ್ದಾರೆ.

“ಫಿಟ್ನೆಸ್ ಸರಿಯಿಲ್ಲ ಎಂಬ ವರದಿಗಳನ್ನು ಕೇಳಿದ್ದೇನೆ. ಆದರೆ ಅವರು ಬಂಗಾಳ ಪರ ಪ್ರತಿ ಪಂದ್ಯವನ್ನೂ ಆಡುತ್ತಿದ್ದರು. 15ರಿಂದ 20 ಓವರ್‌ಗಳನ್ನು ಬೌಲಿಂಗ್ ಮಾಡುತ್ತಿದ್ದರು. ತಮ್ಮ ಫಿಟ್ನೆಸ್ ಸಾಬೀತುಪಡಿಸಲು ಆಟಗಾರ ಇನ್ನೇನು ಮಾಡಬೇಕು?” ಎಂದು ರವಿಶಾಸ್ತ್ರಿ, ಆಯ್ಕೆ ಸಮಿತಿ ಮೇಲೆ ಕಿಡಿಕಾರಿದ್ದಾರೆ.

ಟೆಸ್ಟ್‌ಗೆ ವಿದಾಯ; ಸೀಮಿತ ಓವರ್‌ಗಳ ಕ್ರಿಕೆಟ್ ಮುಂದುವರಿಕೆ

ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾದರೂ ಶಮಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಮುಂದುವರಿಯಲು ನಿರ್ಧರಿಸಿದ್ದಾರೆ. ಐಪಿಎಲ್ ಹಾಗೂ ದೇಶೀಯ ಕ್ರಿಕೆಟ್‌ನಲ್ಲಿ ಆಡಲಿದ್ದಾರೆ. ಫಿಟ್ನೆಸ್ ಕಾಪಾಡಿಕೊಳ್ಳುವ ಉದ್ದೇಶದಿಂದ ಅಗತ್ಯವಿದ್ದರೆ ದೇಶೀಯ ಬಹುದಿನಗಳ ಪಂದ್ಯಗಳಲ್ಲೂ ಭಾಗವಹಿಸಲಿದ್ದಾರೆ. ಆದರೆ, ಇನ್ನು ಮುಂದೆ ಭಾರತ ಪರ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯಗಳನ್ನು ಆಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಶಮಿ ಅವರ ನಿವೃತ್ತಿ ನಿರ್ಧಾರದಿಂದ ಭಾರತದ ಟೆಸ್ಟ್ ಕ್ರಿಕೆಟ್‌ಗೆ ಅನುಭವಿ ವೇಗದ ಬೌಲರ್‌ನ ಸೇವೆ ಅಂತ್ಯಗೊಂಡಿದೆ. ಆದರೆ, ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಅವರ ಆಟ ಮುಂದುವರಿಯುವ ನಿರೀಕ್ಷೆಯಿದೆ.

ಏಕದಿನ ವಿಶ್ವಕಪ್ ಮೇಲೆ ಕಣ್ಣು:

ಇನ್ನು ಮೊಹಮ್ಮದ್ ಶಮಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದರೂ, ಏಕದಿನ ಹಾಗೂ ಟಿ20 ಹೀಗೆ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಮುಂದುವರೆಯುವುದಾಗಿ ಸ್ಪಷ್ಟಪಡಿಸಿದ್ದಾರೆ. ಅಂದಹಾಗೆ ಶಮಿ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾ ಪ್ರತಿನಿಧಿಸಿದ್ದರು. ಇದೀಗ ಶಮಿ 2027ರ ಏಕದಿನ ವಿಶ್ವಕಪ್ ಆಡುವ ಕನಸು ಕಾಣುತ್ತಿದ್ದು, ಮುಂಬರುವ ದಿನಗಳಲ್ಲಿ ಶಮಿಗೆ ಬಿಸಿಸಿಐ ಆಯ್ಕೆ ಸಮಿತಿ ಮಣೆ ಹಾಕುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.