ಐಪಿಎಲ್ 2027ರ ಸೀಸನ್‌ಗೆ ಮುಂಬೈ ಇಂಡಿಯನ್ಸ್ ತಂಡವು ಹಾರ್ದಿಕ್ ಪಾಂಡ್ಯ ಅವರನ್ನು ಪಂಜಾಬ್ ಕಿಂಗ್ಸ್‌ಗೆ ಟ್ರೇಡ್ ಮಾಡಿದ್ದು, ಮತ್ತೆ ರೋಹಿತ್ ಶರ್ಮಾ ಅವರನ್ನು ನಾಯಕನಾಗಿ ನೇಮಿಸಿದೆ. 20ನೇ ಐಪಿಎಲ್ ಸೀಸನ್‌ನಲ್ಲಿ ಮುಂಬೈಗೆ ಐದು ಟ್ರೋಫಿ ತಂದುಕೊಟ್ಟ ರೋಹಿತ್ ಮತ್ತೆ ತಂಡವನ್ನು ಮುನ್ನಡೆಸಲಿದ್ದಾರೆ.

ಬೆಂಗಳೂರು(ನ.27): ಐಪಿಎಲ್ 2027ರ ಸೀಸನ್‌ಗೆ ಮುಂಬೈ ಇಂಡಿಯನ್ಸ್ ತಂಡವು ರೋಹಿತ್ ಶರ್ಮಾ ಅವರನ್ನು ನಾಯಕನಾಗಿ ನೇಮಕ ಮಾಡಿದೆ. ಎರಡು ವರ್ಷಗಳ ಕಾಲ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಆಡಿದ್ದ ರೋಹಿತ್ ಶರ್ಮಾ, ಇದೀಗ ಮತ್ತೆ ತಂಡದ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಐಪಿಎಲ್ 2027ರ ಮುನ್ನ ಮುಂಬೈ ಇಂಡಿಯನ್ಸ್ ತಂಡವು ಹಾರ್ದಿಕ್ ಪಾಂಡ್ಯ ಅವರನ್ನು ಪಂಜಾಬ್ ಕಿಂಗ್ಸ್‌ಗೆ ಟ್ರೇಡ್ ಮಾಡಿದೆ. ಭಾರತ ತಂಡದ ವೇಗದ ಬೌಲರ್ ಅರ್ಶದೀಪ್ ಸಿಂಗ್ ಅವರನ್ನು ಒಳಗೊಂಡ ಆಟಗಾರರ ವಿನಿಮಯದ ಮೂಲಕ ಈ ಒಪ್ಪಂದ ನಡೆದಿದೆ. ಹಾರ್ದಿಕ್ ತಂಡದಿಂದ ಹೊರಬಂದ ಹಿನ್ನೆಲೆಯಲ್ಲಿ ನಾಯಕತ್ವದ ಸ್ಥಾನ ಖಾಲಿಯಾಗಿತ್ತು. ಇದೀಗ ಐದು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ಮುಂಬೈ, ಅನುಭವಕ್ಕೆ ಮಣೆ ಹಾಕಿ ರೋಹಿತ್ ಅವರಿಗೆ ನಾಯಕತ್ವ ನೀಡಿದೆ.

ಮುಂಬೈಗೆ ಐದು ಐಪಿಎಲ್ ಟ್ರೋಫಿ ತಂದುಕೊಟ್ಟ ನಾಯಕ

ರೋಹಿತ್ ಶರ್ಮಾ 2013ರಿಂದ 2023ರವರೆಗೆ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದರು. ಅವರ ನಾಯಕತ್ವದಲ್ಲಿ ತಂಡವು 2013, 2015, 2017, 2019 ಮತ್ತು 2020ರಲ್ಲಿ ಐಪಿಎಲ್ ಪ್ರಶಸ್ತಿ ಗೆದ್ದಿತ್ತು. ಈ ಮೂಲಕ ಮುಂಬೈ ಇಂಡಿಯನ್ಸ್ ಐದು ಬಾರಿ ಚಾಂಪಿಯನ್ ಆಗುವಲ್ಲಿ ರೋಹಿತ್ ಪ್ರಮುಖ ಪಾತ್ರ ವಹಿಸಿದ್ದರು. ಆದರೆ 2024ರ ಐಪಿಎಲ್ ಸೀಸನ್‌ಗೆ ಮುನ್ನ ರೋಹಿತ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ, ಹಾರ್ದಿಕ್ ಪಾಂಡ್ಯ ಅವರಿಗೆ ಜವಾಬ್ದಾರಿ ನೀಡಲಾಗಿತ್ತು. ಈ ನಿರ್ಧಾರ ಮುಂಬೈ ಇಂಡಿಯನ್ಸ್ ಅಭಿಮಾನಿಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಎರಡು ವರ್ಷಗಳ ಬಳಿಕ ಮತ್ತೆ ರೋಹಿತ್ ನಾಯಕನಾಗಿ ಮರಳುತ್ತಿರುವುದು ತಂಡದ ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ಮುಂಬೈ ಇಂಡಿಯನ್ಸ್ ನನ್ನ ಜೀವನದ ದೊಡ್ಡ ಭಾಗ: ರೋಹಿತ್

ನಾಯಕತ್ವದ ಜವಾಬ್ದಾರಿ ಮತ್ತೆ ಸಿಕ್ಕಿರುವ ಕುರಿತು ರೋಹಿತ್ ಶರ್ಮಾ ಸಂತಸ ವ್ಯಕ್ತಪಡಿಸಿದ್ದಾರೆ. “ಮುಂಬೈ ಇಂಡಿಯನ್ಸ್ ನನ್ನ ಜೀವನದ ಬಹುದೊಡ್ಡ ಭಾಗವಾಗಿದೆ. ಈ ತಂಡವನ್ನು ಮುನ್ನಡೆಸುವುದು ಯಾವಾಗಲೂ ನನಗೆ ಹೆಮ್ಮೆಯ ವಿಷಯವಾಗಿದೆ. ಮುಂಬರುವ ಸೀಸನ್ ಕುರಿತು ನೀತಾ ಭಾಭಿ ಮತ್ತು ಆಕಾಶ್ ಅವರೊಂದಿಗೆ ನಡೆದ ಮಾತುಕತೆಗಳು ಉತ್ಸಾಹಭರಿತವಾಗಿದ್ದವು. ನಾವು ಸಾಧಿಸಬಹುದಾದ ವಿಷಯಗಳ ಬಗ್ಗೆ ನನಗೆ ಸಾಕಷ್ಟು ನಂಬಿಕೆಯಿದೆ,” ಎಂದು ರೋಹಿತ್ ಶರ್ಮಾ ಭಾವುಕರಾಗಿ ಹೇಳಿದ್ದಾರೆ.

ಮುಂದಿನ ಸೀಸನ್‌ನಲ್ಲಿ ತಂಡದೊಂದಿಗೆ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.

“ಐಪಿಎಲ್‌ನ 20ನೇ ಸೀಸನ್‌ಗೆ ನಾನು ಸಿದ್ಧನಿದ್ದೇನೆ. ಎದುರಾಗುವ ಸವಾಲುಗಳನ್ನು ಸ್ವೀಕರಿಸಲು ಮತ್ತು ನಮ್ಮ ಪಲ್ಟನ್‌ಗೆ ಸಂಭ್ರಮಿಸುವ ಸಾಕಷ್ಟು ಕ್ಷಣಗಳನ್ನು ನೀಡಲು ಕಾಯುತ್ತಿದ್ದೇನೆ. ನಮ್ಮದೇ ರೀತಿಯ ಕ್ರಿಕೆಟ್ ಆಡುವುದು, ಒಟ್ಟಾಗಿ ಸ್ಪರ್ಧಿಸುವುದು ಮತ್ತು ಆಟವನ್ನು ಆನಂದಿಸುವುದು ನಮ್ಮ ಗಮನವಾಗಿರಲಿದೆ,” ಎಂದು ರೋಹಿತ್ ತಿಳಿಸಿದ್ದಾರೆ.

Scroll to load tweet…

ಹಾರ್ದಿಕ್ ನಾಯಕತ್ವದಲ್ಲಿ ಮುಂಬೈಗೆ ಏರಿಳಿತ

ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಕಠಿಣ ಹಂತವನ್ನು ಎದುರಿಸಿತ್ತು. 2024ರ ಸೀಸನ್‌ನಲ್ಲಿ ತಂಡವು ಪ್ಲೇಆಫ್‌ಗೆ ಅರ್ಹತೆ ಪಡೆಯಲು ವಿಫಲವಾಗಿತ್ತು. 2025ರಲ್ಲಿ ಪ್ಲೇಆಫ್‌ಗೆ ಪ್ರವೇಶಿಸಿದರೂ, 2026ರ ಸೀಸನ್‌ನಲ್ಲಿ ಮತ್ತೆ ಸವಾಲಿನ ಅಭಿಯಾನ ಎದುರಿಸಿತು. ಈ ಹಿನ್ನೆಲೆ ಐಪಿಎಲ್ 2027ಕ್ಕೆ ಮುಂಬೈ ಇಂಡಿಯನ್ಸ್ ನಾಯಕತ್ವವನ್ನು ಮತ್ತೆ ರೋಹಿತ್ ಶರ್ಮಾ ಅವರಿಗೆ ನೀಡಿದೆ. ತಂಡದ ಪರ ಐದು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿರುವ ರೋಹಿತ್, ಇದೀಗ 20ನೇ ಸೀಸನ್‌ನಲ್ಲಿ ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ.