ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಟೆಸ್ಟ್ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಅವರು 64 ಟೆಸ್ಟ್ ಪಂದ್ಯಗಳಲ್ಲಿ 229 ವಿಕೆಟ್ ಪಡೆದಿದ್ದು, ಬಿಸಿಸಿಐ ಮತ್ತು ಅಭಿಮಾನಿಗಳಿಗೆ ಭಾವುಕವಾಗಿ ಧನ್ಯವಾದ ಅರ್ಪಿಸಿದ್ದಾರೆ.
ಬೆಂಗಳೂರು (ನ.6): ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ಎನ್ನುವಂತೆ ಟೀಮ್ ಇಂಡಿಯಾದ ಅನುಭವಿ ಹಾಗೂ ಮಾರಕ ವೇಗದ ಬೌಲರ್ ಮೊಹಮ್ಮದ್ ಶಮಿ (Mohammed Shami) ಅವರು ಟೆಸ್ಟ್ ಕ್ರಿಕೆಟ್‌ಗೆ (Test Cricket) ದಿಢೀರ್ ನಿವೃತ್ತಿ ಘೋಷಿಸಿದ್ದಾರೆ: "'ನಾನು ಬಿಳಿ ಜರ್ಸಿಯನ್ನು ತೊರೆಯುತ್ತಿರಬಹುದು, ಆದರೆ ಅದಕ್ಕೆ ಬೆಸೆದುಕೊಂಡಿರುವ ನೆನಪುಗಳನ್ನು ಎಂದಿಗೂ ತೊರೆಯುವುದಿಲ್ಲ" ಎಂದು ಅತ್ಯಂತ ಭಾವುಕವಾಗಿ ಬರೆದುಕೊಂಡು ತಮ್ಮ ಸುದೀರ್ಘ ರೆಡ್-ಬಾಲ್ ಕ್ರಿಕೆಟ್ ಪಯಣಕ್ಕೆ ವಿದಾಯ ಹೇಳಿದ್ದಾರೆ
ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಭಾವನಾತ್ಮಕ ನಿವೃತ್ತಿ ಸಂದೇಶವನ್ನು ಹಂಚಿಕೊಂಡಿರುವ ಮೊಹಮ್ಮದ್ ಶಮಿ, ಟೆಸ್ಟ್ ಕ್ರಿಕೆಟ್ ತಮಗೆ ನೀಡಿದ ಕೊಡುಗೆ ಹಾಗೂ ತಮ್ಮ ಕಷ್ಟ-ಸುಖದ ಹಾದಿಯಲ್ಲಿ ಬೆಂಬಲವಾಗಿ ನಿಂತ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ. ಟೀಮ್ ಇಂಡಿಯಾ ಪರವಾಗಿ 64 ಟೆಸ್ಟ್ ಪಂದ್ಯವಾಡಿರುವ ಮೊಹಮದ್ ಶಮಿ, 229 ವಿಕೆಟ್ ಉರುಳಿಸಿದ್ದಾರೆ.6 ಬಾರಿ 5 ವಿಕೆಟ್ ಹಾಗೂ 12 ಬಾರಿ 4 ವಿಕೆಟ್ ಸಾಧನೆ ಮಾಡಿದ್ದಾರೆ. ಟೆಸ್ಟ್‌ನಲ್ಲಿ 11,515 ಎಸೆತ ಹಾಕಿರುವ ಶಮಿ 364 ಮೇಡನ್ ಓವರ್ ಎಸೆದಿದ್ದಾರೆ.
ಪ್ರತಿಯೊಂದು ವಿಕೆಟ್, ಗಾಯ ಹಾಗೂ ಕಂಬ್ಯಾಕ್ ನನಗೊಂದು ಪಾಠ: ಶಮಿ ಭಾವುಕ ನುಡಿ
ತಮ್ಮ ನಿವೃತ್ತಿ ಪ್ರಕಟಣೆಯಲ್ಲಿ ಅತ್ಯಂತ ಸವಿಸ್ತಾರವಾಗಿ ಬರೆದುಕೊಂಡಿರುವ ಮೊಹಮ್ಮದ್ ಶಮ, 'ನಾನು ಮೊದಲ ಬಾರಿಗೆ ಭಾರತದ ಟೆಸ್ಟ್ ಜರ್ಸಿಯನ್ನು ತೊಟ್ಟಾಗ, ನನ್ನ ದೇಶಕ್ಕಾಗಿ ಏನಾದರೂ ಸಾಧಿಸಬೇಕು ಎಂಬ ಒಂದೇ ಒಂದು ಕನಸು ನನ್ನಲ್ಲಿತ್ತು. ಅಂದಿನಿಂದ ಇಲ್ಲಿಯವರೆಗೆ ನಾನು ಪಡೆದ ಪ್ರತಿಯೊಂದು ವಿಕೆಟ್, ಪಟ್ಟ ಶ್ರಮ, ಎದುರಿಸಿದ ಪ್ರತಿಯೊಂದು ಗಾಯ ಹಾಗೂ ಮಾಡಿದ ಪ್ರತಿಯೊಂದು ಭರ್ಜರಿ ಕಂಬ್ಯಾಕ್ (Comeback) ನನಗೇನನ್ನಾದರೂ ಕಲ್ಪಿಸಿಕೊಟ್ಟಿದೆ ಮತ್ತು ಕಲಿಸಿದೆ. ಟೆಸ್ಟ್ ಕ್ರಿಕೆಟ್ ನನಗೇವಲ ಒಂದು ಮಾದರಿಯಷ್ಟೇ ಆಗಿರಲಿಲ್ಲ; ಅದು ನನ್ನ ಜೀವನದ ಅತ್ಯಂತ ವಿಶೇಷ ಹಾಗೂ ಅಮೂಲ್ಯವಾದ ಭಾಗವಾಗಿತ್ತು. ಇಂದು, ಭಾರವಾದ ಹೃದಯದೊಂದಿಗೆ ಹಾಗೂ ಅಪಾರ ಸಂಖ್ಯೆಯ ಸುಂದರ ನೆನಪುಗಳೊಂದಿಗೆ, ನಾನು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯಲು ನಿರ್ಧರಿಸುತ್ತಿದ್ದೇನೆ' ಎಂದು ಬರೆದಿದ್ದಾರೆ.
ಬಿಸಿಸಿಐ, ಸಿಎಬಿ ಹಾಗೂ ಕೋಟಿ ಕೋಟಿ ಭಾರತೀಯರಿಗೆ ಧನ್ಯವಾದ
ತಮ್ಮ ಈ ದೀರ್ಘಾವಧಿಯ ಪಯಣದಲ್ಲಿ ಸಾಥ್ ನೀಡಿದ ಪ್ರತಿಯೊಬ್ಬರನ್ನು ಸ್ಮರಿಸಿರುವ ಶಮಿ, 'ನನ್ನ ಈ ಪಯಣದಲ್ಲಿ ನನ್ನೊಂದಿಗೆ ನೆರಳಾಗಿ ನಿಂತು, ಒಳ್ಳೆಯ ಸಮಯದಲ್ಲೂ ಹಾಗೂ ಅತ್ಯಂತ ಕಠಿಣ ಸಂದರ್ಭಗಳಲ್ಲೂ ನನ್ನ ಮೇಲೆ ನಂಬಿಕೆ ಇಟ್ಟಿದ್ದ ನನ್ನ ಪ್ರತಿಯೊಬ್ಬ ಸಹ ಆಟಗಾರರಿಗೆ (Teammates), ತರಬೇತುದಾರರಿಗೆ (Coaches), ಕುಟುಂಬದ ಸದಸ್ಯರಿಗೆ ಹಾಗೂ ಕೋಟ್ಯಂತರ ಭಾರತೀಯ ಅಭಿಮಾನಿಗಳಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು' ಎಂದಿದ್ದಾರೆ.
ಇದರೊಂದಿಗೆ, ನನ್ನ ಪ್ರತಿಭೆಯನ್ನು ಗುರುತಿಸಿ, ಬೆಳವಣಿಗೆಗೆ ಅಪಾರ ಅವಕಾಶಗಳನ್ನು ನೀಡಿ, ನನ್ನ ಕ್ರಿಕೆಟ್ ಪಯಣದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಹಾಗೂ ಕ್ರಿಕೆಟ್ ಅಸೋಸಿಯೇಷನ್ ಆಫ್ ಬಂಗಾಳ (CAB) ಸಂಸ್ಥೆಗಳಿಗೆ ನನ್ನ ಕೃತಜ್ಞತೆಗಳು. ನಿಮ್ಮ ಬೆಂಬಲ ಮತ್ತು ನಂಬಿಕೆ ನನ್ನ ಹೃದಯದಲ್ಲಿ ಎಂದಿಗೂ ವಿಶೇಷವಾಗಿರುತ್ತದೆ" ಎಂದು ಬರೆದುಕೊಂಡಿದ್ದಾರೆ.
ಭಾರತಕ್ಕೆ ಆಡಿದ ಹೆಮ್ಮೆ ಎಂದಿಗೂ ಅಮರ
ತಮ್ಮ ಸಂದೇಶದ ಕೊನೆಯಲ್ಲಿ ಮೈದಾನದ ಪಯಣದ ಬಗ್ಗೆ ಮಾತನಾಡುತ್ತಾ'ಮೈದಾನದಲ್ಲಿ ನಾನು ಎಸೆದ ಕೊನೆಯ ಟೆಸ್ಟ್ ಎಸೆತ ಮುಗಿದಿರಬಹುದು, ಆದರೆ ಭಾರತ ದೇಶಕ್ಕಾಗಿ ಆಡಿದ್ದೇನೆ ಎಂಬ ಹೆಮ್ಮೆ ನನ್ನ ಹೃದಯದಲ್ಲಿ ಎಂದಿಗೂ ಜೀವಂತವಾಗಿರುತ್ತದೆ. ಧನ್ಯವಾದಗಳು ಟೆಸ್ಟ್ ಕ್ರಿಕೆಟ್. ಇಂತಿ, ನಿಮ್ಮ ಶಮಿ" ಎಂದು ಬರೆಯುವ ಮೂಲಕ ತಮ್ಮ ಐತಿಹಾಸಿಕ ಟೆಸ್ಟ್ ಕ್ರಿಕೆಟ್ ಜೀವನಕ್ಕೆ ಪೂರ್ಣವಿರಾಮ ಇಟ್ಟಿದ್ದಾರೆ. ಭಾರತೀಯ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಹಾಗೂ ಮಾರಕ ರಿವರ್ಸ್ ಸ್ವಿಂಗ್ ಬೌಲರ್‌ಗಳಲ್ಲಿ ಒಬ್ಬರಾಗಿ ಶಮಿ ನೆನಪಿನಲ್ಲಿ ಉಳಿದಿದ್ದಾರೆ.














