ಜೈಲಿನಲ್ಲಿರುವ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ನೀಡುವಂತೆ ಭಾರತದ ಕಪಿಲ್ ದೇವ್, ಸುನಿಲ್ ಗವಾಸ್ಕರ್ ಸೇರಿದಂತೆ 21 ಮಂದಿ ಮಾಜಿ ನಾಯಕರು ಪಾಕ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ರಾಜಕೀಯ ಮೀರಿ ಕ್ರೀಡಾ ಸ್ಫೂರ್ತಿ ಮೆರೆದಿರುವ ಈ ದಿಗ್ಗಜರು, 1992ರ ವಿಶ್ವಕಪ್ ವಿಜೇತ ನಾಯಕನ ಮಾನವ ಹಕ್ಕುಗಳ ರಕ್ಷಣೆಗೆ ಧ್ವನಿ ಎತ್ತಿದ್ದಾರೆ.

ನವದೆಹಲಿ/ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ 1992ರ ವಿಶ್ವಕಪ್ ವಿಜೇತ ನಾಯಕ ಇಮ್ರಾನ್ ಖಾನ್ ಪ್ರಸ್ತುತ ಜೈಲು ಶಿಕ್ಷೆ ಅನುಭವಿಸುತ್ತಿದ್ದು, ಅವರ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಅಂತರಾಷ್ಟ್ರೀಯ ಕ್ರಿಕೆಟ್ ಸಮುದಾಯ ತೀವ್ರ ಕಳವಳ ವ್ಯಕ್ತಪಡಿಸಿದೆ. ವಿಶೇಷವೆಂದರೆ ಇಮ್ರಾನ್ ಖಾನ್ ಅವರ ಬೆಂಬಲಕ್ಕೆ ಭಾರತದ ದಿಗ್ಗಜ ಕ್ರಿಕೆಟಿಗರಾದ ಕಪಿಲ್ ದೇವ್ ಮತ್ತು ಸುನಿಲ್ ಗವಾಸ್ಕರ್ ಕೂಡ ನಿಂತಿದ್ದಾರೆ.

21 ಮಂದಿ ನಾಯಕರ ಒಕ್ಕೂಟ

ಆಸ್ಟ್ರೇಲಿಯಾದ ಮಾಜಿ ನಾಯಕ ಗ್ರೆಗ್ ಚಾಪೆಲ್ ನೇತೃತ್ವದಲ್ಲಿ ವಿಶ್ವದ ಒಟ್ಟು 21 ಮಂದಿ ಮಾಜಿ ಅಂತರಾಷ್ಟ್ರೀಯ ನಾಯಕರು ಪಾಕಿಸ್ತಾನ ಸರ್ಕಾರಕ್ಕೆ ಜಂಟಿ ಮನವಿಯೊಂದನ್ನು ಸಲ್ಲಿಸಿದ್ದಾರೆ. ಜೈಲಿನಲ್ಲಿರುವ ಇಮ್ರಾನ್ ಖಾನ್ ಅವರಿಗೆ ಅಂತರಾಷ್ಟ್ರೀಯ ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕು ಮತ್ತು ಅವರ ಪಟ್ಟ ಮಾನವೀಯತೆಯಿಂದ ವರ್ತಿಸಬೇಕು ಎಂದು ಇವರೆಲ್ಲರೂ ಒತ್ತಾಯಿಸಿದ್ದಾರೆ.

ಮೈದಾನದಲ್ಲಿ ಎಷ್ಟೇ ಪೈಪೋಟಿ ಇದ್ದರೂ, ಒಬ್ಬ ಶ್ರೇಷ್ಠ ಆಟಗಾರನ ಸಂಕಷ್ಟದ ಸಮಯದಲ್ಲಿ ಕ್ರೀಡಾ ಸ್ಫೂರ್ತಿಯನ್ನು ಮೆರೆದಿರುವ ಭಾರತದ ಮಾಜಿ ನಾಯಕರಾದ ಸುನಿಲ್ ಗವಾಸ್ಕರ್, ಕಪಿಲ್ ದೇವ್ ಮತ್ತು ದಿಲೀಪ್ ವೆಂಗ್‌ಸರ್ಕರ್ ಈ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ. ತಮ್ಮ ಸಹ ಆಟಗಾರನ ಹಕ್ಕುಗಳಿಗಾಗಿ ಇವರೆಲ್ಲರೂ ಒಗ್ಗೂಡಿರುವುದು ಈಗ ಜಾಗತಿಕವಾಗಿ ಚರ್ಚೆಗೆ ಕಾರಣವಾಗಿದೆ. ಭಾರತದ ಆಟಗಾರರ ಜೊತೆಗೆ ಶ್ರೀಲಂಕಾಕ್ಕೆ ಮೊದಲ ವಿಶ್ವಕಪ್ ತಂದುಕೊಟ್ಟ ಅರ್ಜುನ ರಣತುಂಗ, ವೆಸ್ಟ್ ಇಂಡೀಸ್‌ನ ಲೆಜೆಂಡ್ ಕ್ಲೈವ್ ಲಾಯ್ಡ್, ಇಂಗ್ಲೆಂಡ್‌ನ ಮಾಜಿ ಸಾರಥಿ ನಾಸರ್ ಹುಸೇನ್ ಸೇರಿದಂತೆ ಅನೇಕ ಘಟಾನುಘಟಿಗಳು ಈ ಮನವಿಗೆ ಸಹಿ ಹಾಕಿದ್ದಾರೆ. ರಾಜಕೀಯ ಸಿದ್ಧಾಂತಗಳಿಗಿಂತ ಮಾನವೀಯತೆ ಮತ್ತು ಕ್ರೀಡಾ ಸಂಸ್ಕೃತಿ ದೊಡ್ಡದು ಎಂದು ಈ ದಿಗ್ಗಜರು ಸಾಬೀತುಪಡಿಸಿದ್ದಾರೆ.

ಏನಿದು ಒತ್ತಾಯ?

ಇಮ್ರಾನ್ ಖಾನ್ ರಾಜಕೀಯ ಮತ್ತು ಕಾನೂನು ಸಂಕಷ್ಟಗಳನ್ನು ಎದುರಿಸುತ್ತಿರಬಹುದು, ಆದರೆ ಅವರು ವಿಶ್ವ ಕ್ರಿಕೆಟ್‌ಗೆ ನೀಡಿದ ಕೊಡುಗೆ ಅಪಾರ. ಅಂತಹ ಒಬ್ಬ ಆಲ್-ರೌಂಡರ್ ಜೈಲಿನಲ್ಲಿ ಮೂಲಭೂತ ಹಕ್ಕುಗಳಿಂದ ವಂಚಿತರಾಗಬಾರದು ಎನ್ನುವುದು ಈ ಮಾಜಿ ನಾಯಕರ ವಾದ. ಪಾಕಿಸ್ತಾನ ಸರ್ಕಾರವು ಈ ಜಾಗತಿಕ ಗಣ್ಯರ ಮನವಿಯನ್ನು ಹೇಗೆ ಸ್ವೀಕರಿಸುತ್ತದೆ ಎಂಬುದು ಈಗ ಕುತೂಹಲ ಮೂಡಿಸಿದೆ. ಒಟ್ಟಾರೆಯಾಗಿ ಮೈದಾನದ ಬದ್ಧ ವೈರಿಗಳಾಗಿದ್ದರೂ ಕಷ್ಟದ ಸಮಯದಲ್ಲಿ ಒಬ್ಬರಿಗೊಬ್ಬರು ಬೆಂಬಲ ನೀಡುವ ಮೂಲಕ ಕ್ರಿಕೆಟ್ ಲೋಕದ ಹಿರಿಯ ತಲೆಮಾರು ಹೊಸ ಮಾದರಿಯನ್ನು ಹಾಕಿಕೊಟ್ಟಿದೆ.