ಶ್ರೀಲಂಕಾ ವೇಗಿ ಅಸಿತ ಫರ್ನಾಂಡೋಗೆ ಡಿಚ್ಚಿ ಕೊಟ್ಟ ಪ್ರಕರಣದಲ್ಲಿ ಯಶಸ್ವಿ ಜೈಸ್ವಾಲ್ ಅಮಾನತು ಭೀತಿಯಲ್ಲಿದ್ದಾರೆ. ಇದು ಐಸಿಸಿ ಲೆವೆಲ್ 4 ಉಲ್ಲಂಘನೆ ಎಂದು ಪರಿಗಣಿಸಲ್ಪಟ್ಟರೆ 5 ಟೆಸ್ಟ್ ಅಥವಾ 10 ಏಕದಿನ ಪಂದ್ಯಗಳಿಂದ ಇವರು ಬ್ಯಾನ್ ಆಗಬಹುದು.
ಕೊಲಂಬೊ: ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ವೇಳೆ ಮೈದಾನದಲ್ಲಿ ಅಗ್ರೆಸೀವ್ ಆಗಿ ವರ್ತಿಸಿದ ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಂಕಾ ವೇಗಿ ಅಸಿತ ಫರ್ನಾಂಡೋ ಜೊತೆಗಿನ ಕಿತ್ತಾಟ ಮತ್ತು ಅವರ ಮುಖಕ್ಕೆ ಹೆಲ್ಮೆಟ್‌ನಿಂದ ಡಿಚ್ಚಿ ಕೊಟ್ಟ ಘಟನೆಯು ಜೈಸ್ವಾಲ್ ಅವರ ವೃತ್ತಿಜೀವನಕ್ಕೆ ದೊಡ್ಡ ಪೆಟ್ಟು ನೀಡುವ ಸಾಧ್ಯತೆಯಿದೆ.
ನಡೆದಿದ್ದೇನು?
ಪಂದ್ಯದ ಮೊದಲ ದಿನ 45 ರನ್ ಗಳಿಸಿ ಆಡುತ್ತಿದ್ದ ಜೈಸ್ವಾಲ್, ಅಸಿತ ಫರ್ನಾಂಡೋ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಈ ವೇಳೆ ಬೌಲರ್ ನೀಡಿದ 'ಸೆಂಡ್ ಆಫ್'ನಿಂದ ಕೆರಳಿದ ಜೈಸ್ವಾಲ್, ಪೆವಿಲಿಯನ್ ಕಡೆಗೆ ಹೋಗುವುದನ್ನು ಬಿಟ್ಟು ವಾಪಸ್ ಬೌಲರ್ ಬಳಿಗೆ ಬಂದು ಆಕ್ರೋಶ ಹೊರಹಾಕಿದರು. ಅಷ್ಟೇ ಅಲ್ಲದೆ ಫರ್ನಾಂಡೋ ಅವರ ಮುಖಕ್ಕೆ ಮುಖವನ್ನಿಟ್ಟು ಜೋರಾಗಿ ಡಿಚ್ಚಿ (Head-to-head contact) ನೀಡಿದರು.
5 ಟೆಸ್ಟ್ ಅಥವಾ 10 ಏಕದಿನ ಪಂದ್ಯಗಳಿಂದ ಬ್ಯಾನ್?
ಐಸಿಸಿ (ICC) ಮತ್ತು ಎಂಸಿಸಿ (MCC) ನಿಯಮಗಳ ಪ್ರಕಾರ.. ಎದುರಾಳಿ ಆಟಗಾರನ ಮೇಲೆ ಹಲ್ಲೆ ಮಾಡುವುದು ಅಥವಾ ದೈಹಿಕವಾಗಿ ಕೆಣಕುವುದು 'ಲೆವೆಲ್ 4' (Level 4) ಅಡಿಯಲ್ಲಿ ಬರುವ ಗಂಭೀರ ಅಪರಾಧವಾಗಿದೆ. ಒಂದು ವೇಳೆ ಮ್ಯಾಚ್ ರೆಫರಿ ಇದನ್ನು ಗಂಭೀರವಾಗಿ ಪರಿಗಣಿಸಿದರೆ ಜೈಸ್ವಾಲ್ ಅವರಿಗೆ ಈ ಕೆಳಗಿನ ಶಿಕ್ಷೆಗಳಾಗಬಹುದು..
- 5 ಟೆಸ್ಟ್ ಪಂದ್ಯಗಳಿಂದ ನಿಷೇಧ
- ಅಥವಾ 10 ಏಕದಿನ ಪಂದ್ಯಗಳಿಂದ ನಿಷೇಧ
- ಅತ್ಯಂತ ಗಂಭೀರ ಹಿಂಸಾಚಾರ ಎಂದು ಸಾಬೀತಾದರೆ ಜೀವಮಾನದ ನಿಷೇಧ ಹೇರಲು ಕೂಡ ಅವಕಾಶವಿದೆ
ಜೈಸ್ವಾಲ್‌ಗೆ ಇದು ಮೊದಲಲ್ಲ
ಯಶಸ್ವಿ ಜೈಸ್ವಾಲ್ ಮೈದಾನದಲ್ಲಿ ಇಂತಹ ವರ್ತನೆ ತೋರುತ್ತಿರುವುದು ಇದೇ ಮೊದಲೇನಲ್ಲ. 2022ರ ದುಲೀಪ್ ಟ್ರೋಫಿ ಪಂದ್ಯದಲ್ಲೂ ಅವರು ರವಿ ತೇಜ ಎಂಬ ಆಟಗಾರನ ಜೊತೆ ಇದೇ ರೀತಿ ಕಿತ್ತಾಟ ನಡೆಸಿದ್ದರು. ಅಂದು ಅಂಪೈರ್ ಎಚ್ಚರಿಕೆ ನೀಡಿದರೂ ಕೇಳದಿದ್ದಾಗ ವೆಸ್ಟ್ ಝೋನ್ ತಂಡದ ನಾಯಕ ಅಜಿಂಕ್ಯ ರಹಾನೆ ಅವರು ಸ್ವತಃ ಜೈಸ್ವಾಲ್ ಅವರನ್ನು ಮೈದಾನದಿಂದ ಹೊರಕ್ಕೆ ಕಳುಹಿಸಿ ಶಿಸ್ತು ಕ್ರಮ ಕೈಗೊಂಡಿದ್ದರು.
ಈಗ ಕೊಲಂಬೊ ಟೆಸ್ಟ್‌ನಲ್ಲಿ ನಡೆದ ಘಟನೆಯ ವಿಡಿಯೋಗಳನ್ನು ಪರಿಶೀಲಿಸುತ್ತಿರುವ ಮ್ಯಾಚ್ ರೆಫರಿ ಶೀಘ್ರದಲ್ಲೇ ತಮ್ಮ ತೀರ್ಪನ್ನು ಪ್ರಕಟಿಸಲಿದ್ದಾರೆ. ಟೀಂ ಇಂಡಿಯಾದ ಉದಯೋನ್ಮುಖ ತಾರೆಯಾಗಿರುವ ಜೈಸ್ವಾಲ್ ಅವರ ಈ ಆಕ್ರಮಣಕಾರಿ ವರ್ತನೆ ಈಗ ಅವರ ಸ್ಥಾನಕ್ಕೇ ಕಂಟಕ ತಂದೊಡ್ಡಿದೆ.


