ಟೀಂ ಇಂಡಿಯಾ ಕ್ರಿಕೆಟಿಗ ಕರಣ್ ಶರ್ಮಾ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಸತತ ಮೂರು ಸೀಸನ್‌ಗಳಲ್ಲಿ ಮೂರು ವಿಭಿನ್ನ ತಂಡಗಳ ಪರ ಐಪಿಎಲ್ ಟ್ರೋಫಿ ಗೆದ್ದಿರುವ ಅಪರೂಪದ ದಾಖಲೆಯನ್ನು ಅವರು ಹೊಂದಿದ್ದಾರೆ. ತಮ್ಮ ವೃತ್ತಿಜೀವನದ ಕೊನೆಯ ಪಂದ್ಯವನ್ನು ಯುಪಿ ಟಿ20 ಲೀಗ್‌ನಲ್ಲಿ ಆಡಲಿದ್ದಾರೆ.
ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗ ಮತ್ತು ರೈಲ್ವೇಸ್ ಆಟಗಾರ ಕರಣ್ ಶರ್ಮಾ, ವೃತ್ತಿಪರ ಕ್ರಿಕೆಟ್‌ನ ಎಲ್ಲಾ ಮಾದರಿಗಳಿಗೂ ನಿವೃತ್ತಿ ಘೋಷಿಸಿದ್ದಾರೆ. ಯುಪಿ ಟಿ20 ಲೀಗ್‌ನಲ್ಲಿ ಕಾನ್ಪುರ್ ಸೂಪರ್ ಸ್ಟಾರ್ಸ್ ಪರವಾಗಿ ಆಡುತ್ತಿರುವ ಅವರು, ಆಗಸ್ಟ್ 25 ರಂದು ಲಕ್ನೋದ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೀರತ್ ಮ್ಯಾವೆರಿಕ್ಸ್ ವಿರುದ್ಧ ನಡೆಯಲಿರುವ ಪಂದ್ಯವೇ ತಮ್ಮ ವೃತ್ತಿಜೀವನದ ಕೊನೆಯ ಪಂದ್ಯ ಎಂದು ಸ್ಪಷ್ಟಪಡಿಸಿದ್ದಾರೆ. ಕ್ರಿಕೆಟ್‌ನಿಂದ ನಿವೃತ್ತಿ ಆದ ನಂತರ ಕೋಚಿಂಗ್ ಅಥವಾ ಕ್ರಿಕೆಟ್‌ಗೆ ಸಂಬಂಧಿಸಿದ ಬೇರೆ ಜವಾಬ್ದಾರಿಗಳನ್ನು ತೆಗೆದುಕೊಳ್ಳುವ ಯೋಚನೆ ಇದೆ ಅಂತ ಕರಣ್ ಶರ್ಮಾ ಹೇಳಿದ್ದಾರೆ.
ತಮ್ಮ ವೃತ್ತಿಜೀವನದುದ್ದಕ್ಕೂ ಬೆಂಬಲ ನೀಡಿದ ಕುಟುಂಬ, ಬಿಸಿಸಿಐ, ರೈಲ್ವೇಸ್, ಯುಪಿಸಿಎ, ಆಂಧ್ರ ಮತ್ತು ವಿದರ್ಭ ಕ್ರಿಕೆಟ್ ಅಸೋಸಿಯೇಷನ್‌ಗಳಿಗೆ ಹಾಗೂ ಅಭಿಮಾನಿಗಳಿಗೆ ಅವರು ಧನ್ಯವಾದ ತಿಳಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಕರಣ್ ಶರ್ಮಾ ಒಂದು ಅಪರೂಪದ ದಾಖಲೆಯೊಂದಿಗೆ ತಮ್ಮ ವೃತ್ತಿಜೀವನ ಮುಗಿಸುತ್ತಿದ್ದಾರೆ. ಸತತ ಮೂರು ಸೀಸನ್‌ಗಳಲ್ಲಿ, ಮೂರು ಬೇರೆ ಬೇರೆ ತಂಡಗಳ ಪರ ಆಡಿ ಐಪಿಎಲ್ ಟ್ರೋಫಿ ಗೆದ್ದ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ಇವರದ್ದು.
ಸನ್‌ರೈಸರ್ಸ್ ಹೈದರಾಬಾದ್, ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳಿಗಾಗಿ ಆಡಿರುವ ಕರಣ್, ಐಪಿಎಲ್‌ನಲ್ಲಿ ಒಟ್ಟು 90 ಪಂದ್ಯಗಳಿಂದ 26.68ರ ಸರಾಸರಿ ಮತ್ತು 8.38ರ ಎಕಾನಮಿ ರೇಟ್‌ನಲ್ಲಿ 83 ವಿಕೆಟ್‌ಗಳನ್ನು ಪಡೆದಿದ್ದಾರೆ.
ಮೂರು ಬೇರೆ ಬೇರೆ ತಂಡಗಳ ಪರ ಐಪಿಎಲ್ ಟ್ರೋಫಿ ಗೆದ್ದಿರುವ ಏಕೈಕ ಕ್ರಿಕೆಟಿಗ:
ಕರಣ್ ಶರ್ಮಾ ಸನ್‌ರೈಸರ್ಸ್ ಹೈದರಾಬಾದ್, ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ ಟ್ರೋಫಿ ಜಯಿಸುವ ಮೂಲಕ ವಿವಿಧ ತಂಡಗಳ ಪರ 3 ಐಪಿಎಲ್ ಟ್ರೋಫಿ ಗೆದ್ದ ಏಕೈಕ ಕ್ರಿಕೆಟಿಗ ಎನ್ನುವ ಹೆಗ್ಗಳಿಕೆಗೆ ಕರಣ್ ಶರ್ಮಾ ಪಾತ್ರರಾಗಿದ್ದಾರೆ. ಅಂದಹಾಗೆ 2015ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಸೇರಿದ್ದ ಕರಣ್ ಶರ್ಮಾ, 2016ರಲ್ಲಿ ಆರೆಂಜ್ ಆರ್ಮಿ ಪರ ಮೊದಲ ಸಲ ಐಪಿಎಲ್ ಟ್ರೋಫಿ ಜಯಿಸಿದ್ದರು. ಇದಾದ ಬಳಿಕ 2017ರಲ್ಲಿ ಕರಣ್ ಶರ್ಮಾ ಅವರನ್ನು ಮುಂಬೈ ಇಂಡಿಯನ್ಸ್ ಖರೀದಿಸಿತ್ತು. 2017ರಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಈ ಮೂಲಕ ಕರಣ್ ಶರ್ಮಾ ಎರಡನೇ ಟ್ರೋಫಿ ಜಯಿಸಿದ್ದರು. ಇದಾದ ಬಳಿಕ 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ತೆಕ್ಕೆಗೆ ಜಾರಿದ್ದ ಕರಣ್ ಶರ್ಮಾ ಮೂರನೇ ಬಾರಿಗೆ ಐಪಿಎಲ್ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿದ್ದರು.
ಟೀಂ ಇಂಡಿಯಾ ಪರ 4 ಪಂದ್ಯಗಳನ್ನು ಆಡಿದ ಕರಣ್ ಶರ್ಮಾ
ಇನ್ನು ಭಾರತ ತಂಡದ ಪರ ಕರಣ್ ಶರ್ಮಾ ಆಡಿದ್ದು ಕೇವಲ ನಾಲ್ಕು ಪಂದ್ಯಗಳನ್ನು ಮಾತ್ರ. ಒಂದು ಟೆಸ್ಟ್, ಎರಡು ಏಕದಿನ ಮತ್ತು ಒಂದು ಟಿ20 ಪಂದ್ಯಗಳಲ್ಲಿ ಅವರು ಒಟ್ಟು ಐದು ವಿಕೆಟ್ ಪಡೆದಿದ್ದಾರೆ. 2014ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಅನಿರೀಕ್ಷಿತವಾಗಿ ತಂಡಕ್ಕೆ ಎಂಟ್ರಿ ಕೊಟ್ಟಿದ್ದ ಅವರು, ಆ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದು ಗಮನ ಸೆಳೆದಿದ್ದರು. ಅದೇ ವರ್ಷ ಸೀಮಿತ ಓವರ್‌ಗಳ ಪಂದ್ಯಗಳಲ್ಲೂ ಆಡಿದ್ದರೂ, ಅಂತರಾಷ್ಟ್ರೀಯ ಮಟ್ಟದಲ್ಲಿ ತಂಡದ ಖಾಯಂ ಸದಸ್ಯರಾಗಲು ಅವರಿಗೆ ಸಾಧ್ಯವಾಗಲಿಲ್ಲ. ಆದರೂ, ದೇಶೀಯ ಕ್ರಿಕೆಟ್ ಮತ್ತು ಐಪಿಎಲ್‌ನಲ್ಲಿ ಒಬ್ಬ ನಂಬಿಕಸ್ಥ ಮ್ಯಾಚ್ ವಿನ್ನರ್ ಆಗಿ ಕರಣ್ ಶರ್ಮಾ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸುತ್ತಿದ್ದಾರೆ.


