ದಕ್ಷಿಣ ಕನ್ನಡದ ಸುಳ್ಯದ 14 ವರ್ಷದ ಬಾಲಕ ಜಸ್ವಿತ್, ತನ್ನ ನಿರರ್ಗಳ ಕನ್ನಡ ಮತ್ತು ಇಂಗ್ಲಿಷ್ ಭಾಷಾ ಕ್ರಿಕೆಟ್ ಕಾಮೆಂಟರಿಯಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾನೆ. ಸ್ಥಳೀಯ ಟೂರ್ನಿಯೊಂದರಲ್ಲಿ ಆತ ವೀಕ್ಷಕ ವಿವರಣೆ ನೀಡುತ್ತಿರುವ ವೀಡಿಯೋ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.
ವೀಕ್ಷಕ ವಿವರಣೆ ಅಥವಾ ಕ್ರಿಕೆಟ್ ಕಾಮೆಂಟರಿ ಹೇಳೋದು ಅಷ್ಟು ಸುಲಭದ ಕೆಲಸವಲ್ಲ, ಇದಕ್ಕೆ ಭಾಷೆಯ ಪ್ರಾವೀಣ್ಯತೆಯ ಜೊತೆ ನಿರರ್ಗಳವಾದ ನಿರಂತರ ಮಾತು ಬ್ಯಾಟರ್ ದೂರಕ್ಕೆ ಹೊಡೆದ ಚೆಂಡಿನ ವೇಗದಷ್ಟೇ ಚುರುಕುತನ, ನೋಟ ಬಹಳ ಅಗತ್ಯವಾಗಿ ಬೇಕು. ಹೀಗಿರುವಾಗ 14 ವರ್ಷದ ಪುಟ್ಟ ಬಾಲಕನ ಕ್ರಿಕೆಟ್ ಕಾಮೆಂಟರಿಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. Kiran Bellare ಎಂಬುವವರು ತಮ್ಮ ಊರಿನ ಈ ಪುಟಾಣಿ ಪ್ರತಿಭೆಯನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯಿಸಿದ್ದಾರೆ. ವೀಡಿಯೋದಲ್ಲಿ ಬಾಲಕ ಸ್ಪಷ್ಟ ಹಾಗೂ ನಿರರ್ಗಳವಾಗಿ ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿ ವೀಕ್ಷಕ ವಿವರಣೆಯನ್ನು ನೀಡುತ್ತಿದ್ದಾನೆ.
ಅಂದಹಾಗೆ ಈ ಹುಡುಗ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಬಾಲಕ. ಈತನ ಹೆಸರು ಜಸ್ವಿತ್ ಈತ ಕ್ರಿಕೆಟ್‌ನ ವೀಕ್ಷಕ ವಿವರಣೆ ನೀಡುತ್ತಿದ್ದರೆ, ಕ್ರಿಕೆಟ್ ನೋಡುವುದಕ್ಕಿಂತಲೂ ವೀಕ್ಷಕರ ವಿವರಣೆ ನೀಡುವವರು ಯಾರಿರಬಹುದು ಎಂಬ ಕುತೂಹಲ ಅಲ್ಲಿದ್ದವರೆಲ್ಲರನ್ನು ಕಾಡುತ್ತಿರುತ್ತದೆ. ಅಂತಹ ಸ್ಪಷ್ಟ ಮಾತುಗಾರಿಕೆ ಹಾಗೂ ಇಂಗ್ಲೀಷ್ ಹಾಗೂ ಕನ್ನಡ ಎರಡೂ ಭಾಷೆಗಳ ಪ್ರಾವೀಣ್ಯತೆ ಈ ಬಾಲಕ ಜಸ್ವಿತ್‌ಗೆ ಒಲಿದಿದೆ.
ಸುಳ್ಯದ ಕೆವಿಜಿ ವಿದ್ಯಾಸಂಸ್ಥೆಯಲ್ಲಿ ನಡೆದ ಕ್ರಿಕೆಟ್ ಟೂರ್ನಿಯಲ್ಲಿ ಈ ಬಾಲಕ ಜಸ್ವಿತ್ ವೀಕ್ಷಕ ವಿವರಣೆಗಾರನಾಗಿ ಕಾಮೆಂಟರಿ ನೀಡುತ್ತಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದ್ದು, ಇಷ್ಟು ಎಳೆಯ ವಯಸ್ಸಿಗೆ ಇಷ್ಟೊಂದು ಸ್ಪಷ್ಟ ಹಾಗೂ ನಿರರ್ಗಳವಾದ ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿ ಕ್ರಿಕೆಟ್‌ನ ಪದಗಳನ್ನು ಆತ ಹೇಳುತ್ತಿರುವುದನ್ನು ಕೇಳಿಸಿಕೊಳ್ಳುತ್ತಿದ್ದರೆ ಎಲ್ಲರೂ ವಾಹ್ ಎಂದು ತಲೆದೂಗುತ್ತಾರೆ. ಈತನ ಈ ಪ್ರತಿಭೆಗೆ ವೇದಿಕೆ ಒದಗಿಸಿದ ಕೆವಿಜಿ ವಿದ್ಯಾಸಂಸ್ಥೆಯು ಕಾರ್ಯಕ್ರಮದಲ್ಲಿ ಜಸ್ವಿತ್‌ನನ್ನು ಅಭಿನಂದಿಸಿ ಶುಭಹಾರೈಸಿದೆ.
ಇದನ್ನೂ ಓದಿ: ರೈಲು ನಿಲ್ದಾಣದ ಪಾರ್ಕಿಂಗ್ ಏರಿಯಾದಲ್ಲಿ ಬೆಂಕಿ: 500 ಬೈಕ್‌ಗಳು ಬೆಂಕಿಗಾಹುತಿ
ಇತ್ತೀಚೆಗೆ ಬಹುತೇಕ ಮಕ್ಕಳಿಗೆ ಬರೆಯುವುದಕ್ಕೆ ಓದುವುದಕ್ಕೆ ಕನ್ನಡ ಬಂದರೆ ಇಂಗ್ಲೀಷ್ ಬರಲ್ಲ, ಇಂಗ್ಲೀಷ್ ಬಂದರೆ ಕನ್ನಡ ಬರಲ್ಲ. ಹಾಗೆಯೇ ಕ್ರಿಕೆಟ್‌ನ ಇಂಗ್ಲೀಷ್ ಪದಗಳಿಗೆ ಸ್ಪಷ್ಟವಾಗಿ ಕನ್ನಡ ಪದಗಳನ್ನು ಹುಡುಕುವುದು ಅದನ್ನು ಬಹಳ ಸಹಜ ಎಂಬಂತೆ ಬಳಸುವುದು ಸುಲಭವಲ್ಲ. ಆದರೂ ಈ ಬಾಲಕ ಇಲ್ಲಿ ಸ್ಪಷ್ಟವಾದ ಕನ್ನಡದಲ್ಲಿಯೂ ಕೂಡ ಎಲ್ಲರೂ ಇಷ್ಟಪಡುವಂತೆ ಕಾಮೆಂಟರಿ ಮಾಡುತ್ತಿದ್ದು, ಈ ಹಳ್ಳಿಯ ಪ್ರತಿಭೆ ಭವಿಷ್ಯದಲ್ಲಿ ಇನ್ನಷ್ಟು ಮತ್ತಷ್ಟು ಬೆಳೆದು ತಮ್ಮೂರಿಗೆ ಕೀರ್ತಿ ತರಬೇಕು ಎಂಬ ಆಶಯ ಅಲ್ಲಿನ ಸ್ಥಳೀಯ ಕ್ರೀಡಾಭಿಮಾನಿಗಳದ್ದು.
ಇದನ್ನೂ ಓದಿ: ತಾಜ್ ಮಹಲ್ ಮುಂದೆ ಫೋಟೋ ತೆಗೆಯುವಂತೆ ಕೇಳಿದ ವೃದ್ಧ ದಂಪತಿ: ವೀಡಿಯೋಗೆ ಭಾವುಕರಾದ ನೆಟ್ಟಿಗರು
ಇತ್ತ ಕಿರಣ್ ಬೆಳ್ಳಾರೆ ಅವರು ಹಂಚಿಕೊಂಡ ಜಸ್ವಿತ್ ಅವರ ವಿಡಿಯೋವನ್ನು ಈಗಾಗಲೇ ಕೆಲ ನಿಮಿಷಗಳಲ್ಲಿ 40 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದು ಬಾಲಕನಿಗೆ ಶುಭ ಹಾರೈಸಿ ಕಾಮೆಂಟ್ ಮಾಡಿದ್ದಾರೆ. ಕ್ರಿಕೆಟ್ ಆಡುವವರು ಮನೆಮನೆಯಲ್ಲಿ ಸಿಗ್ತಾರೆ ಆದ್ರೆ ಊರಲ್ಲಿ ಯಾವುದೇ ಪಂದ್ಯ ಮಾಡಿದ್ರು ಒಬ್ಬ ವೀಕ್ಷಕ ವಿವರಣೆಗಾರರು ಸಿಗೋದಿಲ್ಲ ಆದ್ರೆ ಈ ಚಿಕ್ಕ ವಯಸ್ಸಲ್ಲಿ ಜಸ್ವಿತ್‌ದು ಉತ್ತಮ ಮಾತುಗರಿಗೆ ಹಾಗೆ ವೇದಿಕೆ ಭಾಷಣ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ವಾವ್ ಏನ್ ಟೇಲೆಂಟ್... God bless ಯು ಪುಟ್ಟ, ಇವರಿಗೆ ಇನ್ನಷ್ಟು ಅವಕಾಶ ಮಾಡಿಕೊಡಬೇಕು ಎಂದು ಇನ್ನು ಕೆಲವರು ಕಾಮೆಂಟ್ ಮಾಡಿ ಜಸ್ವಿತ್‌ನ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.

