ವಾರಾಣಸಿ(ಫೆ.14): ಸದಾ ವೇದ ಪಾರಾಯಣ, ವಿದ್ಯಾಭ್ಯಾಸದಲ್ಲಿ ತೊಡಗಿರುತ್ತಿದ್ದ ಇಲ್ಲಿನ ಸಂಸ್ಕೃತ ಶಾಲೆಗಳ ವಿದ್ಯಾರ್ಥಿಗಳು ಮಂಗಳವಾರ ಕ್ರಿಕೆಟ್‌ ಬ್ಯಾಟ್‌, ಬಾಲ್‌ ಹಿಡಿದು ಮೈದಾನಕ್ಕಿಳಿದಿದ್ದರು. ವಿಶೇಷ ಎಂದರೆ ಆಟಗಾರರು ತಾವು ಶಾಲೆಗೆ ಧರಿಸುವ ಉಡುಪಿನಲ್ಲೇ ಕ್ರಿಕೆಟ್‌ ಅಂಗಳಕ್ಕೂ ಆಗಮಿಸಿದ್ದರು. 

ವಾರಾಣಸಿಯ ಸಂಪೂರ್ಣಾನಂದ ಸಂಸ್ಕೃತ ವಿದ್ಯಾಲಯ ತನ್ನ 75ನೇ ವಾರ್ಷಿಕೋತ್ಸವದ ಅಂಗವಾಗಿ ಇಲ್ಲಿನ ಎಲ್ಲಾ ಸಂಸ್ಕೃತ ಶಾಲೆಗಳ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಕ್ರಿಕೆಟ್‌ ಪಂದ್ಯಾವಳಿಯೊಂದನ್ನು ಆಯೋಜಿಸಿತ್ತು. ಹಣೆಗೆ ವಿಭೂತಿಯಿಟ್ಟಿದ್ದ ಆಟಗಾರರು ಪಂಚೆ, ಜುಬ್ಬಾ ಧರಿಸಿ ಬರಿಗಾಲಲ್ಲೇ ಆಟವಾಡಿದ್ದು ವಿಶೇಷ. ಈ ಟೂರ್ನಿಗೆ ಸಂಸ್ಕೃತ ಕ್ರಿಕೆಟ್‌ ಲೀಗ್‌ ಎಂದು ಹೆಸರಿಡಲಾಗಿದೆ. ದೇಶದಲ್ಲಿ ಈ ರೀತಿಯ ಕ್ರಿಕೆಟ್‌ ಲೀಗ್‌ ನಡೆದಿದ್ದು ಇದೇ ಮೊದಲ ಬಾರಿಗೆ ಎನ್ನಲಾಗಿದೆ.

ಟೂರ್ನಿಯಲ್ಲಿ ಒಟ್ಟು 5 ತಂಡಗಳಿದ್ದವು. ತಲಾ 10 ಓವರ್‌ ಪಂದ್ಯಕ್ಕೆ ಟೆನಿಸ್‌ ಬಾಲ್‌ ಬಳಕೆ ಮಾಡಲಾಯಿತು. ‘ವಿದ್ಯಾರ್ಥಿಗಳು ಸದಾ ಅಧ್ಯಯನದಲ್ಲಿ ತೊಡಗಿರುತ್ತಾರೆ. ಅವರಿಗೆ ಕ್ರೀಡೆಯ ಮಹತ್ವವನ್ನು ತಿಳಿಸುವ ಸಲುವಾಗಿ ಈ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ’ ಎಂದು ಇಲ್ಲಿನ ಸಂಸ್ಕೃತ ಶಾಲೆಯ ಅಧ್ಯಾಪಕರಾಗಿರುವ ಗಣೇಶ್‌ ದತ್ತ ಶಾಸ್ತ್ರಿ ಎನ್ನುವವರು ಹೇಳಿದ್ದಾರೆ.

ಅಂಪೈರ್‌ಗಳಿಗೂ ದೇಸಿ ಉಡುಪು!: ಈ ಟೂರ್ನಿ ವೀಕ್ಷಿಸಲು ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿದ್ದರು. ಪಂದ್ಯದ ಪ್ರತಿ ಎಸೆತಕ್ಕೂ ವೀಕ್ಷಕ ವಿವರಣೆ ನೀಡಲಾಗುತ್ತಿತ್ತು. ವಿಶೇಷ ಎಂದರೆ ವೀಕ್ಷಕ ವಿವರಣೆ (ಕಾಮೆಂಟ್ರಿ)ಯನ್ನು ಸಂಸ್ಕೃತದಲ್ಲಿ ನೀಡಲಾಗುತ್ತಿತ್ತು. ಸಂಸ್ಕೃತ ಪಂಡಿತರಾದ ನಾರಾಯಣ ಮಿಶ್ರಾ ಹಾಗೂ ಡಾ.ವಿಕಾಸ್‌ ದೀಕ್ಷಿತ್‌ ಕಾಮೆಂಟ್ರಿ ನೀಡಿದರು. ಪಂದ್ಯಗಳಿಗೆ ಧೀರಜ್‌ ಮಿಶ್ರಾ ಹಾಗೂ ಸಂಜೀವ್‌ ತಿವಾರಿ ಎನ್ನುವ ಮಾಜಿ ರಣಜಿ ಆಟಗಾರರು ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಿದರು. ವೀಕ್ಷಕ ವಿವರಣೆಗಾರರು, ಅಂಪೈರ್‌ಗಳು ಸಹ ಪಂಚೆ, ಜುಬ್ಬಾ ಧರಿಸಿದ್ದು ವಿಶೇಷ.