ಟಿ20 ವಿಶ್ವಕಪ್ ಗೆದ್ದ ನಂತರ ಟೀಂ ಇಂಡಿಯಾದ ಆಟಗಾರರೆಲ್ಲರೂ 'ಚಾಂಪಿಯನ್ಸ್' ಜೆರ್ಸಿ ಧರಿಸಿದ್ದರು. ಆದರೆ, ಸರಣಿಶ್ರೇಷ್ಠ ಪ್ರಶಸ್ತಿ ಪಡೆದ ಸಂಜು ಸ್ಯಾಮ್ಸನ್ ಮಾತ್ರ ಹಳೆಯ ಜೆರ್ಸಿಯಲ್ಲೇ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.
ಅಹಮದಾಬಾದ್: ಟಿ20 ವಿಶ್ವಕಪ್ ಗೆದ್ದ ಸಂಭ್ರಮದಲ್ಲಿ ಟೀಂ ಇಂಡಿಯಾದ ಎಲ್ಲಾ ಆಟಗಾರರು 'ಚಾಂಪಿಯನ್ಸ್' ಅಂತ ಬರೆದಿದ್ದ ಸ್ಪೆಷಲ್ ಜೆರ್ಸಿ ಹಾಕಿಕೊಂಡಿದ್ದರು. ಆದ್ರೆ, ಕೇರಳ ಮೂಲದ ಆಟಗಾರ ಸಂಜು ಸ್ಯಾಮ್ಸನ್ ಮಾತ್ರ ಯಾಕೆ ಈ ಜೆರ್ಸಿ ಹಾಕಿಕೊಳ್ಳಲಿಲ್ಲ ಅನ್ನೋ ಚರ್ಚೆ ಈಗ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ.
ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳಿಂದ ಸೋಲಿಸಿ ಭಾರತ ಮೂರನೇ ಬಾರಿಗೆ ಟಿ20 ವಿಶ್ವಕಪ್ ಚಾಂಪಿಯನ್ ಆದ ಬಳಿಕ ಈ ಘಟನೆ ನಡೆದಿದೆ. ತಿಲಕ್ ವರ್ಮಾ ಬೌಲಿಂಗ್‌ನಲ್ಲಿ ಅಭಿಷೇಕ್ ಶರ್ಮಾ ಅವರು ಜೇಕಬ್ ಡಫಿ ಕ್ಯಾಚ್ ಹಿಡಿಯುತ್ತಿದ್ದಂತೆ ಟೀಂ ಇಂಡಿಯಾ ಆಟಗಾರರು ಸಂಭ್ರಮದಲ್ಲಿ ಮುಳುಗಿದ್ರು.
ಟಿ20 ವಿಶ್ವಕಪ್ ಗೆಲ್ಲುತ್ತಿದ್ದಂತೆಯೇ ಮುಗಿಲು ಮುಟ್ಟಿದ ಭಾರತೀಯ ಆಟಗಾರರ ಸಂಭ್ರಮಾಚರಣೆ
ಕೆಲ ಆಟಗಾರರು ರಾಷ್ಟ್ರಧ್ವಜ ಹಿಡಿದು ಓಡಾಡಿದ್ರೆ, ಇನ್ನು ಕೆಲವರು ಮೈಮೇಲೆ ಧ್ವಜ ಹೊದ್ದು ಸಂಭ್ರಮಿಸಿದ್ರು. ಇದೇ ವೇಳೆ, ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿಗಳನ್ನು ಘೋಷಿಸಲಾಯಿತು. ಫೈನಲ್ ಪಂದ್ಯದಲ್ಲಿ ಮಾರಕ ದಾಳಿ ನಡೆಸಿ ಕೇವಲ 15 ರನ್ ನೀಡಿ 4 ವಿಕೆಟ್ ಕಬಳಿಸಿದ ಜಸ್ಪ್ರೀತ್ ಬುಮ್ರಾಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಸಿಕ್ಕರೆ, ಫೈನಲ್‌ನಲ್ಲಿ 89 ರನ್ ಸಿಡಿಸಿದ ಸಂಜು ಸ್ಯಾಮ್ಸನ್‌ರನ್ನು 'ಟೂರ್ನಮೆಂಟ್‌ನ ಆಟಗಾರ' (ಸರಣಿಶ್ರೇಷ್ಠ) ಎಂದು ಘೋಷಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಳಿಕ, ಟ್ರೋಫಿ ಪ್ರದಾನ ಮಾಡಲು ಸ್ವಲ್ಪ ಸಮಯ ಹಿಡಿಯಿತು. ಈ ಗ್ಯಾಪ್‌ನಲ್ಲೇ ಕೋಚ್ ಗೌತಮ್ ಗಂಭೀರ್, ಆಟಗಾರರು ಮತ್ತು ಸಪೋರ್ಟ್ ಸ್ಟಾಫ್ ಎಲ್ಲರೂ 'ಚಾಂಪಿಯನ್ಸ್' ಅಂತ ಬರೆದಿದ್ದ ಹೊಸ ಜೆರ್ಸಿ ಹಾಕಿಕೊಂಡರು.

ಅಚ್ಚರಿಗೆ ಕಾರಣವಾದ ಸಂಜು ಸ್ಯಾಮ್ಸನ್ ನಡೆ
ಆದರೆ, ಸಂಜು ಮಾತ್ರ ಈ ಜೆರ್ಸಿ ಹಾಕಿಕೊಂಡಿರಲಿಲ್ಲ. ಇದನ್ನೇ ಅಭಿಮಾನಿಗಳು ಈಗ ಪ್ರಶ್ನಿಸುತ್ತಿದ್ದಾರೆ. ಟ್ರೋಫಿ ಪಡೆದು ತಂಡದ ಜೊತೆ ಫೋಟೋ ತೆಗೆಸಿಕೊಳ್ಳುವಾಗಲೂ ಸಂಜು ಹಳೆ ಜೆರ್ಸಿಯಲ್ಲೇ ಇದ್ದರು. ಗಡಿಬಿಡಿಯಲ್ಲಿ ಸಂಜು ಜೆರ್ಸಿ ಬದಲಾಯಿಸಲು ಮರೆತು ಹೋದ್ರಾ? ಅಥವಾ ಗಮನಕ್ಕೆ ಬರಲಿಲ್ವಾ? ಅಂತ ಫ್ಯಾನ್ಸ್ ಕೇಳ್ತಿದ್ದಾರೆ. "ಚಾಂಪಿಯನ್ಸ್ ಜೆರ್ಸಿ ಹಾಕಿಕೊಳ್ಳದಿದ್ರೆ ಏನಾಯ್ತು, ನಮ್ಮ ನಿಜವಾದ ಚಾಂಪಿಯನ್ ಸಂಜುನೇ ಅಲ್ವಾ" ಅಂತಾನೂ ಕೆಲವರು ಬೆಂಬಲಕ್ಕೆ ನಿಂತಿದ್ದಾರೆ.

ಟಿ20 ವಿಶ್ವಕಪ್ ಫೈನಲ್, ಸೆಮಿಫೈನಲ್ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಸೂಪರ್ 8 ಹಂತದ ಕೊನೆಯ ಪಂದ್ಯದಲ್ಲಿ (ವರ್ಚುವಲ್ ಕ್ವಾರ್ಟರ್ ಫೈನಲ್) ಸಂಜು ಅವರೇ ಭಾರತದ ಟಾಪ್ ಸ್ಕೋರರ್ ಆಗಿದ್ದರು. ವೆಸ್ಟ್ ಇಂಡೀಸ್ ಎದುರು ಸಂಜು ಸ್ಯಾಮ್ಸನ್ ಅಜೇಯ 97 ರನ್ ಸಿಡಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸಿದ್ದರು. ಇನ್ನು ಇಂಗ್ಲೆಂಡ್ ಎದುರಿನ ಸೆಮಿಫೈನಲ್ ಪಂದ್ಯದಲ್ಲೂ ಸಂಜು ಸ್ಯಾಮ್ಸನ್ 89 ರನ್ ಸಿಡಿಸುವ ಮೂಲಕ ಭಾರತದ ಗೆಲುವಿನ ರೂವಾರಿ ಎನಿಸಿಕೊಂಡಿದ್ದರು. ಈ ವಿಶ್ವಕಪ್‌ನಲ್ಲಿ ಕೇವಲ ಐದು ಪಂದ್ಯಗಳನ್ನು ಆಡಿ 321 ರನ್ ಗಳಿಸಿ, ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು.
ಕೊನೆಯ 4 ಐಸಿಸಿ ಟೂರ್ನಿ: 34ರಲ್ಲಿ 31 ಗೆದ್ದಿದೆ ಭಾರತ
ಭಾರತ ಕಳೆದ 4 ವರ್ಷಗಳಲ್ಲಿ ನಡೆದ 4 ಐಸಿಸಿ ಟೂರ್ನಿಗಳಲ್ಲಿ ಒಟ್ಟು 34 ಪಂದ್ಯಗಳನ್ನಾಡಿದೆ. 2023ರ ಏಕದಿನ ವಿಶ್ವಕಪ್, 2024ರ ಟಿ20 ವಿಶ್ವಕಪ್, 2025ರ ಚಾಂಪಿಯನ್ಸ್ ಟ್ರೋಫಿ, 2026ರ ಟಿ20 ವಿಶ್ವಕಪ್‌ಗಳಲ್ಲಿ ಆಡಿದ ಪಂದ್ಯಗಳ ಪೈಕಿ 31ರಲ್ಲಿ ಗೆದ್ದಿದ್ದು, 1 ಪಂದ್ಯ ಮಳೆಯಿಂದ ರದ್ದುಗೊಂಡಿದೆ. ಕೇವಲ 2 ಪಂದ್ಯಗಳಲ್ಲಿ ಮಾತ್ರ ಸೋತಿದೆ. 2023ರ ಏಕದಿನ ವಿಶ್ವಕಪ್ ಫೈನಲ್, ಈ ಬಾರಿ ಟಿ20 ವಿಶ್ವಕಪ್‌ನ ಸೂಪರ್-8ರಲ್ಲಿ ಭಾರತಕ್ಕೆ ಸೋಲು ಎದುರಾಗಿದೆ.

