ಕೇರಳದ ತ್ರಿಶ್ಯೂರ್ ರೈಲು ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಸುಮಾರು 500 ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿವೆ. ವಿದ್ಯುತ್ ತಂತಿಯಿಂದ ಉಂಟಾದ ಕಿಡಿಯೇ ದುರಂತಕ್ಕೆ ಕಾರಣವೆಂದು ಶಂಕಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ತ್ರಿಶ್ಯೂರ್‌: ಕೇರಳದ ತ್ರಿಶ್ಯೂರ್‌ ರೈಲು ನಿಲ್ದಾಣದ ರೈಲ್ವೆ ಪಾರ್ಕಿಂಗ್ ಪ್ರದೇಶದಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 500 ದ್ವಿಚಕ್ರ ವಾಹನಗಳು ಬೆಂಕಿಗಾಹುತಿಯಾಗಿ ಸುಟ್ಟು ಕರಕಲಾಗಿವೆ. ತ್ರಿಶ್ಯೂರ್‌ನ ರೈಲು ನಿಲ್ದಾಣದಲ್ಲಿ ಇಂದು ಬೆಳಗ್ಗೆ 6.20ರಿಂದ 6.40ರ ನಡುವೆ ಸಂಭವಿಸಿದ ಈ ಬೆಂಕಿ ದುರಂತದಲ್ಲಿ ಅಂದಾಜು 500 ದ್ವಿಚಕ್ರವಾಹನಗಳು ಬೆಂಕಿಗಾಹುತಿಯಾಗಿವೆ ಎಂದು ಅಗ್ನಿ ಶಾಮಕ ಹಾಗೂ ರಕ್ಷಣಾ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸುದ್ದಿಸಂಸ್ಥೆ ಪಿಟಿಐ ವರದಿಯ ಪ್ರಕಾರ ಬೆಳಗ್ಗೆ 6.20ರ ಸುಮಾರಿಗೆ ರೈಲ್ವೆ ನಿಲ್ದಾಣದ ಪಾವತಿ ಮಾಡಿ ವಾಹನ ಪಾರ್ಕಿಂಗ್ ಮಾಡುವ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಳಗ್ಗೆ 6.40ರ ಸುಮಾರಿಗೆ ಅಗ್ನಿಶಾಮಕ ದಳಕ್ಕೆ ಕರೆ ಬಂದಿದೆ. ಬೆಂಕಿ ಅವಘಡಕ್ಕೆ ವಿದ್ಯುತ್ ತಂತಿಯಿಂದ ಬಂದ ಕಿಡಿಯೇ ಕಾರಣ ಎಂದು ಶಂಕಿಸಲಾಗಿದೆ. ವಿದ್ಯುತ್ ತಂತಿಯಿಂದ ಬಂದ ಕಿಡಿಯೊಂದು ಪ್ಲಾಸ್ಟಿಕ್ ಕವರ್‌ನಿಂದ ಮುಚ್ಚಿದ್ದ ದ್ವಿಚಕ್ರ ವಾಹನದ ಮೇಲೆ ಬಿದ್ದಿದೆ. ಪರಿಣಾಮ ಶೆಡ್‌ನಲ್ಲಿ ನಿಲ್ಲಿಸಿದ್ದ ಸುಮಾರು 500 ದ್ವಿಚಕ್ರ ವಾಹನಗಳು ಬೆಂಕಿಗೆ ಆಹುತಿಯಾಗಿವೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಅಂದಾಜಿಸಿದ್ದಾರೆ.

ಬೆಂಕಿಯನ್ನು ನಿಯಂತ್ರಿಸಲು ಐದು ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಆಗಮಿಸಿದ್ದು, ಬೆಳಗ್ಗೆ 7:45 ರ ಹೊತ್ತಿಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಂಕಿ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ಗಳಿಗೆ ಹರಡದಂತೆ ತಡೆಯಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಯ್ತು ಎಂದು ಅವರು ಹೇಳಿದರು.

ಅಗ್ನಿ ಅಪಘಾತ ಸಂಭವಿಸಿದ ಸ್ಥಳದ ಬಳಿ ರೈಲ್ವೆ ಹಳಿಯಲ್ಲಿ ಒಂದು ಲೋಕೋಮೋಟಿವ್ ನಿಂತಿದ್ದರೂ, ಅದಕ್ಕೆ ಯಾವುದೇ ಹಾನಿಯಾದ ಬಗ್ಗೆ ರೈಲ್ವೆ ಇಲಾಖೆ ದೃಢಪಡಿಸಿಲ್ಲ ಎಂದು ಪಿಟಿಐ ಅಧಿಕಾರಿಯನ್ನು ಉಲ್ಲೇಖಿಸಿ ವರದಿ ಮಾಡಿದೆ.

ಇದನ್ನೂ ಓದಿ: ಮಂಗಳೂರು: ಕಾಂಪೌಂಡ್ ಹಾರಿ ಮನೆ ಅಂಗಳಕ್ಕೆ ಬಂದು ಬಿದ್ದ ಕಾರು: ಚಾಲಕ ಪವಾಡದಂತೆ ಪಾರು: ವೀಡಿಯೋ

ವಾಹನಗಳಲ್ಲದೆ, ಟಿನ್ ಶೀಟ್‌ಗಳಿಂದ ಮುಚ್ಚಲ್ಪಟ್ಟಿದ್ದ ಇಡೀ ಶೆಡ್ ಬೆಂಕಿಯಿಂದ ಹಾನಿಗೊಳಗಾಗಿದೆ. ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ತ್ರಿಶೂರ್ ಪಶ್ಚಿಮ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ರೈಲು ನಿಲ್ದಾಣದ ಪಶ್ಚಿಮ ಭಾಗದಲ್ಲಿ ಪಾರ್ಕಿಂಗ್ ಸೌಲಭ್ಯವನ್ನು ನಿರ್ವಹಿಸುವ ಗುತ್ತಿಗೆಯನ್ನು ಹೊಂದಿರುವ ಅಶ್ವಥಿ ಎಂಟರ್‌ಪ್ರೈಸಸ್‌ಗೆ ಸೇರಿದ ಪಾರ್ಕಿಂಗ್ ಶುಲ್ಕ ಮುದ್ರಣ ಯಂತ್ರ ಸೇರಿದಂತೆ ಸುಮಾರು 500 ದ್ವಿಚಕ್ರ ವಾಹನಗಳು ಬೆಂಕಿಗೆ ಆಹುತಿಯಾಗಿವೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಅಶ್ವಥಿ ಎಂಟರ್‌ಪ್ರೈಸಸ್‌ನ ಉದ್ಯೋಗಿಗಳಿಗೆ ಸೇರಿದ ಎರಡು ಮೊಬೈಲ್ ಫೋನ್‌ಗಳು ಮತ್ತು 10,000 ರೂ. ನಗದು ಕೂಡ ಬೆಂಕಿಯಲ್ಲಿ ನಾಶವಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ತಾಜ್ ಮಹಲ್ ಮುಂದೆ ಫೋಟೋ ತೆಗೆಯುವಂತೆ ಕೇಳಿದ ವೃದ್ಧ ದಂಪತಿ: ವೀಡಿಯೋಗೆ ಭಾವುಕರಾದ ನೆಟ್ಟಿಗರು

ಘಟನೆಯ ನಂತರ, ರಾಜ್ಯ ಪೊಲೀಸ್ ಮುಖ್ಯಸ್ಥ ರವಾಡ ಎ. ಚಂದ್ರಶೇಖರ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅಲೋಕಿಸಿದರು. ಪಾರ್ಕಿಂಗ್ ಪ್ರದೇಶದ ನೌಕರರ ಹೇಳಿಕೆಗಳ ಆಧಾರದ ಮೇಲೆ ನಾವು ಪ್ರಾಥಮಿಕ ಮೌಲ್ಯಮಾಪನ ಮಾಡಿದ್ದೇವೆ. ಸಹಾಯಕ ಆಯುಕ್ತರು ಮತ್ತು ವೃತ್ತ ನಿರೀಕ್ಷಕರು ಸೇರಿದಂತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಘಟನೆಯ ಹಿನ್ನೆಲೆ ಕೇರಳದಾದ್ಯಂತ ಪಾವತಿಸಿದ ಪಾರ್ಕಿಂಗ್ ಸ್ಥಳಗಳಲ್ಲಿ ಅಗ್ನಿಶಾಮಕ ಲೆಕ್ಕಪರಿಶೋಧನೆ ನಡೆಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.