IPL 2022: ಮಹಾರಾಷ್ಟ್ರದಲ್ಲಿ ಐಪಿಎಲ್ ಲೀಗ್ ಪಂದ್ಯಗಳಿಗೆ ಆತಿಥ್ಯ..?

* ಐಪಿಎಲ್ ಟೂರ್ನಿಗೆ ಸಿದ್ದತೆ ಆರಂಭಿಸಿದ ಬಿಸಿಸಿಐ

* ಭಾರತದಲ್ಲೇ 15ನೇ ಆವೃತ್ತಿಯ ಐಪಿಎಲ್ ಆಯೋಜಿಸಲು ಬಿಸಿಸಿಐ ಸರ್ವ ಪ್ರಯತ್ನ

* ಲೀಗ್ ಹಂತದ ಪಂದ್ಯಗಳು ಮಹಾರಾಷ್ಟ್ರದಲ್ಲಿ ನಡೆಸಲು ಬಿಸಿಸಿಐ ಪ್ಲಾನ್

IPL 2022 league stage matches likely to be played in Maharashtra says Report kvn

ಮುಂಬೈ(ಜ.30): ಕೊರೋನಾ ಆತಂಕದ ನಡುವೆಯೇ 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League 2022) ಟೂರ್ನಿ ಆಯೋಜಿಸಲು ಬಿಸಿಸಿಐ (BCCI) ಈಗಿನಿಂದಲೇ ಸಿದ್ದತೆಗಳನ್ನು ಆರಂಭಿಸಿದೆ. ಇದೀಗ 15ನೇ ಆವೃತ್ತಿಯ ಐಪಿಎಲ್‌ (IPL) ಟೂರ್ನಿಯನ್ನು ಮಹಾರಾಷ್ಟ್ರ ಹಾಗೂ ಅಹಮದಾಬಾದ್‌ನಲ್ಲಿ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಲೀಗ್‌ ಪಂದ್ಯಗಳನ್ನು ಮಹಾರಾಷ್ಟ್ರದಲ್ಲಿ ಆಯೋಜಿಸಿ, ನಾಕೌಟ್ ಪಂದ್ಯಗಳನ್ನು ಅಹಮದಾಬಾದ್‌ನಲ್ಲಿ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಸಲು ಬಿಸಿಸಿಐ ಯೋಜನೆ ರೂಪಿಸಿದೆ.

ಕೊರೋನ ವೈರಸ್ (Coronavirus) ಭೀತಿಯಿಂದಾಗಿ 2020ನೇ ಸಾಲಿನ ಸಂಪೂರ್ಣ ಐಪಿಎಲ್ ಟೂರ್ನಿಯನ್ನು ಯುಎಇನಲ್ಲಿ ನಡೆಸಲಾಗಿತ್ತು. ಇದಾದ ಬಳಿಕ 2021ರ ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯಗಳು ಭಾರತದಲ್ಲಿಯೇ ನಡೆದಿದ್ದವು. ಆದರೆ ಟೂರ್ನಿಯ ಮಧ್ಯಭಾಗದಲ್ಲಿ ಬಯೋ ಬಬಲ್‌ನೊಳಗಿದ್ದ ಆಟಗಾರರಿಗೆ ಕೋವಿಡ್ ಪತ್ತೆಯಾಗಿದ್ದರಿಂದ ಟೂರ್ನಿಯನ್ನು ಮತ್ತೆ ಯುಎಇಗೆ ಸ್ಥಳಾಂತರಿಸಲಾಗಿತ್ತು. ಈ ಬಾರಿ ಅಂದರೆ 2022ನೇ ಸಾಲಿನ ಐಪಿಎಲ್ ಟೂರ್ನಿಯು ಕಟ್ಟುನಿಟ್ಟಾಗಿ ಭಾರತದಲ್ಲೇ ನಡೆಸಲು ಬಿಸಿಸಿಐ ಎಲ್ಲಾ ಸಿದ್ದತೆಗಳು ಆರಂಭಿಸಿದೆ. ಕೋವಿಡ್ ಭೀತಿಯ ಹಿನ್ನೆಲೆಯಲ್ಲಿ ಈ ಬಾರಿ ಕೂಡಾ ಖಾಲಿ ಸ್ಟೇಡಿಯಂನಲ್ಲಿ ಟೂರ್ನಿ ಆಯೋಜಿಸಲು ಬಿಸಿಸಿಐ ತೀರ್ಮಾನಿಸಿದೆ ಎನ್ನಲಾಗಿದೆ.

15ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಮಾರ್ಚ್‌ ಕೊನೆಯ ವಾರದಲ್ಲಿ ಆರಂಭಿಸಿ, ಮೇ ಅಂತ್ಯದ ವೇಳೆಗೆ ಮುಕ್ತಾಯಗೊಳಿಸಲು ಯೋಚಿಸಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (Jay Shah) ಕಳೆದ ವಾರವಷ್ಟೇ ತಿಳಿಸಿದ್ದರು. ಸದ್ಯದ ಮಟ್ಟಿಗೆ ಲೀಗ್ ಹಂತದ ಪಂದ್ಯಗಳನ್ನು ಮಹಾರಾಷ್ಟ್ರದಲ್ಲಿ ಹಾಗೂ ಪ್ಲೇ ಆಫ್‌ ಪಂದ್ಯಗಳನ್ನು ಅಹಮದಾಬಾದ್‌ನಲ್ಲಿ ನಡೆಸಲು ಬಿಸಿಸಿಐ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

IPL 2022: ನಮ್ಮಲ್ಲೇ ಐಪಿಎಲ್‌ ನಡೆಸಿ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಆಹ್ವಾನ..!

ಹೀಗಾದಲ್ಲಿ ಮಹಾರಾಷ್ಟ್ರದಲ್ಲಿನ ಮುಂಬೈನ ವಾಂಖೆಡೆ ಮೈದಾನ, ಬ್ರಬೋರ್ನ್‌ ಸ್ಟೇಡಿಯಂ, ಡಿ.ವೈ. ಪಾಟೀಲ್ ಸ್ಟೇಡಿಯಂ ಹಾಗೂ ಪುಣೆಯ ಸಮೀಪದಲ್ಲಿರುವ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಸ್ಟೇಡಿಯಂನಲ್ಲಿ ಲೀಗ್ ಹಂತದ ಪಂದ್ಯಗಳು ನಡೆಯುವ ಸಾಧ್ಯತೆಯಿದೆ. ಇನ್ನು ಕೋವಿಡ್ ಪರಿಸ್ಥಿತಿ ತಕ್ಕಮಟ್ಟಿಗೆ ನಿಯಂತ್ರಣದಲ್ಲಿದ್ದರೆ ಮೈದಾನಕ್ಕೆ ಶೇ.25% ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ನೀಡುವ ಕುರಿತಂತೆಯೂ ಚರ್ಚೆ ನಡೆಸಲಾಗಿದೆ.

ಐಪಿಎಲ್ ಆರಂಭವಾಗುವ ಸಮಯದಲ್ಲಿ ಕೋವಿಡ್ 19 ಪ್ರಕರಣಗಳು ಒಂದು ವೇಳೆ ನಿಯಂತ್ರಣದಲ್ಲಿದ್ದರೆ, ರಾಜ್ಯ ಸರ್ಕಾರ ಹಾಗೂ ಸ್ಥಳೀಯಾಡಳಿತದ ಒಪ್ಪಿಗೆ ಪಡೆದು ಕನಿಷ್ಠ 25% ಪ್ರೇಕ್ಷಕರು ಮೈದಾನ ಪ್ರವೇಶಿಸಲು ಅವಕಾಶ ನೀಡುವ ಕುರಿತಂತೆಯೂ ಆಲೋಚಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

IPL Auction 2022: ಈ ಮೂವರು ವಿಂಡೀಸ್ ಸ್ಟಾರ್ ಆಟಗಾರರು ಅನ್‌ಸೋಲ್ಡ್‌ ಆಗಬಹುದು..!

15ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಪಾಲ್ಗೊಳ್ಳುತ್ತಿವೆ. ಹೀಗಾಗಿ 2022ನೇ ಸಾಲಿನ ಐಪಿಎಲ್ ಟೂರ್ನಿಗೂ ಮುನ್ನ ಇದೇ ಫೆಬ್ರವರಿ 12 ಹಾಗೂ 13ರಂದು ಬೆಂಗಳೂರಿನಲ್ಲಿ ಐಪಿಎಲ್‌ ಆಟಗಾರರ ಮೆಗಾ ಹರಾಜು ನಡೆಯಲಿದೆ. ಮೆಗಾ ಹರಾಜಿಗೂ ಮುನ್ನ ಹಾಲಿ 8 ತಂಡಗಳಿಗೆ ಬಿಸಿಸಿಐ ಗರಿಷ್ಠ 4 ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಅವಕಾಶ ನೀಡಿತ್ತು. ಇನ್ನು ಹೊಸ ಎರಡು ಫ್ರಾಂಚೈಸಿಗಳಿಗೆ ಗರಿಷ್ಠ 3 ಆಟಗಾರರನ್ನು ಆಯ್ದುಕೊಳ್ಳಲು ಅವಕಾಶ ನೀಡಿತ್ತು. ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿಯು ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಮೊಹಮ್ಮದ್ ಸಿರಾಜ್ ಅವರನ್ನು ರೀಟೈನ್ ಮಾಡಿಕೊಂಡಿದೆ.

Latest Videos
Follow Us:
Download App:
  • android
  • ios